Janamejaya Umarji Column: ಫ್ರೆಂಚ್ ಕ್ರಾಂತಿಯ ಸಮಸಮಾಜ ಮತ್ತು ಶರಣರ ಸಾಮರಸ್ಯ
ಲಿಂಗಾಯತವನ್ನು ಸಮಾಜವಾದಿ ಮಾಡಬೇಕು ಇಲ್ಲವೇ ರಿಲಿಜನ್ ಮಾಡಬೇಕು, ಅದನ್ನು ಯುರೋಪ್ ಇಲ್ಲವೇ ಮರಳುಗಾಡಿನ ಪರಿಸರಕ್ಕೆ ಹೊಂದಿಸಬೇಕು. ಫ್ರೆಂಚ್ ರಕ್ತಕ್ರಾಂತಿಯ ಸಮಯದಲ್ಲಿ ಹುಟ್ಟಿಕೊಂಡ ‘ಸಮಸಮಾಜ’ ಏನನ್ನು ಹೇಳುತ್ತದೆ? ಒಂದು ‘ವಿತರಣಾ ಸಮಾ ನತೆ’, ಅಂದರೆ ಸಂಪತ್ತಿನ ಸಮಾನ ಹಂಚಿಕೆ; ಇನ್ನೊಂದು ‘ಸಾಪೇಕ್ಷತಾ ಸಮಾನತೆ’, ಅಂದರೆ ಹೊಸ ಸಮಾಜದ ನಿರ್ಮಾಣ.
-
ವಿಶ್ಲೇಷಣೆ
ಜನಮೇಜು ಉಮರ್ಜಿ
ಶರಣರ ದರ್ಶನದಲ್ಲಿ ಸಮತೆ ಎಂದರೆ ಹೊರಗಿನ ಸಾಮಾಜಿಕ ಸಮಾನತೆ ಅಲ್ಲ. ಅದು ಲಿಂಗಾಂಗ ಸಾಮರಸ್ಯದ ಅನುಭವದಿಂದ ಹುಟ್ಟುವ ಅಂತಃಕರಣದ ಸ್ಥಿತಿ, ಅಲ್ಲಿ ಶಿವಭಕ್ತನಿಗೆ ಭೇದಭಾವಗಳೆಲ್ಲ ಕರಗುತ್ತವೆ. ಸಮಾಧಿ ಸ್ಥಿತಿ ಎಂದರೆ ಮನಸ್ಸಿನ ವೃತ್ತಿಗಳು ನಿಶ್ಚಲ ಗೊಂಡು ಆತ್ಮತತ್ತ್ವದಲ್ಲಿ ಲೀನವಾಗುವ ಸ್ಥಿತಿ. ದ್ವೈತ ಭಾವದ ಲಯ ಮತ್ತು ಏಕತ್ವದ ಅನುಭವವಿದೆ. ಭಕ್ತಿ-ಅನುಭಾವದ ಮೂಲಕ ಸಮತೆ ವ್ಯಕ್ತವಾಗುತ್ತದೆ.
ಕಳೆದ ವಾರ ‘ವಿಶ್ವವಾಣಿ’ಯಲ್ಲಿ ‘ಶರಣರ ಬಯಕೆ ಸಮಸಮಾಜವೋ, ಲಿಂಗಾಂಗ ಸಾಮ ರಸ್ಯವೋ?’ ಎಂಬ ಲೇಖನವು ಪ್ರಕಟವಾಗಿತ್ತು. ಶರಣರು ಹೇಳದ ‘ಸಮಸಮಾಜ’ ವನ್ನು ಅವರ ಹೆಸರಿನಲ್ಲಿ ಹೇಗೆ ಪ್ರಚಾರ ಮಾಡಲಾಗುತ್ತಿದೆ ಎಂಬುದನ್ನು ಅದು ಬಿಚ್ಚಿಟ್ಟಿತ್ತು. ಹಲವು ಸಹೃದಯಿಗಳು, ಹಿರಿಯರು ಮೆಚ್ಚಿಕೊಂಡರು, ಜತೆಗೆ ವಚನಗಳ ಉಲ್ಲೇಖ ಲೇಖನ ದಲ್ಲಿ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದರು.
ಅಷ್ಟೇ ಅಲ್ಲದೆ ‘ಸಮಸಮಾಜ’ದ ತಪ್ಪು ತಿಳಿವಳಿಕೆ ಮತ್ತು ಆ ಶಬ್ದ ತರುವ ಅಪಾಯದ ಕಾಳಜಿ ಅವರಲ್ಲಿತ್ತು. ಹೀಗಾಗಿ ಮತ್ತೆ ಬರೆಯಬೇಕಾಗಿದೆ. ‘ಸಮತೆ’ ಎನ್ನುವ ಶಬ್ದ ವಚನ ಗಳಲ್ಲಿ 135 ಕಡೆ ಉಲ್ಲೇಖವಾಗಿದೆ. ಹೆಚ್ಚು ಕಡೆ ಸಮತೆಯು ‘ಇಂದ್ರಿಯಗಳ ಸಮ ಸ್ಥಿತಿ’, ‘ಲೌಕಿಕ ವಿಷಯರಾಹಿತ್ಯ ಸ್ಥಿತಿ’ ಎಂಬರ್ಥದಲ್ಲಿ ಬಳಕೆಯಾಗಿದೆ.
ಇನ್ನು ಹಲವು ಕಡೆ ‘ಲಿಂಗಾಂಗ ಸಾಮರಸ್ಯ’ ಎಂಬರ್ಥದಲ್ಲಿ ಬಳಕೆಯಾಗಿದೆ. ಕನಿಷ್ಠ ಪಕ್ಷ ಒಂದು ಕಡೆಯೂ ‘ಸಮಸಮಾಜ’ ಎಂಬ ಅರ್ಥದಲ್ಲಿ ಬಳಕೆಯಾಗಿಲ್ಲ. ಹಾಗಾದರೆ ‘ಸಮ ಸಮಾಜ’ವನ್ನು ಏಕೆ ಎಳೆದುತರಲಾಯಿತು? ಉದ್ದೇಶ ಸ್ಪಷ್ಟವಿದೆ.
ಲಿಂಗಾಯತವನ್ನು ಸಮಾಜವಾದಿ ಮಾಡಬೇಕು ಇಲ್ಲವೇ ರಿಲಿಜನ್ ಮಾಡಬೇಕು, ಅದನ್ನು ಯುರೋಪ್ ಇಲ್ಲವೇ ಮರಳುಗಾಡಿನ ಪರಿಸರಕ್ಕೆ ಹೊಂದಿಸಬೇಕು. ಫ್ರೆಂಚ್ ರಕ್ತಕ್ರಾಂತಿಯ ಸಮಯದಲ್ಲಿ ಹುಟ್ಟಿಕೊಂಡ ‘ಸಮಸಮಾಜ’ ಏನನ್ನು ಹೇಳುತ್ತದೆ? ಒಂದು ‘ವಿತರಣಾ ಸಮಾನತೆ’, ಅಂದರೆ ಸಂಪತ್ತಿನ ಸಮಾನ ಹಂಚಿಕೆ; ಇನ್ನೊಂದು ‘ಸಾಪೇಕ್ಷತಾ ಸಮಾನತೆ’, ಅಂದರೆ ಹೊಸ ಸಮಾಜದ ನಿರ್ಮಾಣ.
ಅಧಿಕಾರ ಕ್ರಾಂತಿ ಅದರ ಸಾಧನೆಯ ಮಾರ್ಗ. ‘ವಿತರಣಾ ಸಮಾನತೆ’ಯನ್ನು ‘ದಾಸೋಹ’ ಎಂತಲೂ, ‘ಸಾಪೇಕ್ಷತಾ ಸಮಾನತೆ’ಯನ್ನು ‘ಪ್ರತ್ಯೇಕ ಧರ್ಮ’ ಎಂತಲೂ ಅಂದುಕೊಂಡು ಯುರೋಪಿನ ಶಬ್ದಗಳನ್ನು ನೇರವಾಗಿ ಹೇಳದೇ, ಹಿಂದೂ ಧರ್ಮವನ್ನು ಒಡೆಯುವ ‘ಅಧಿಕಾರ ಕ್ರಾಂತಿ’ಯ ಜಪವು ಪ್ರತ್ಯೇಕಿಗಳ ಭಾಷಣಗಳಲ್ಲಿ, ಮುಖವಾಣಿಗಳಲ್ಲಿ ಕಂಡು ಬರುತ್ತದೆ.
ಇದನ್ನೂ ಓದಿ: Janamejaya Umarji Column: ಶರಣರ ಬಯಕೆ ಲಿಂಗಾಂಗ ಸಾಮರಸ್ಯವೋ ? ಸಮಸಮಾಜವೋ ?
ಶಿವಯೋಗಿ ಸಿದ್ಧರಾಮೇಶ್ವರರು ಸಮತೆಯನ್ನು ಬಹಳ ಸ್ಪಷ್ಟವಾಗಿ ವ್ಯಾಖ್ಯಾನ ಮಾಡಿ ದ್ದಾರೆ- “ಆರೇನೆಂದಡೂ ಓರಂತಿಪ್ಪುದೆ ಸಮತೆ. ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ. ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ, ಇಂತು ಗುರುಕಾರುಣ್ಯ, ಮನವಚನಕಾಯದಲ್ಲಿ ಅವಿತಥವಿಲ್ಲ ದಿರ್ದಡೆ, ಕಪಿಲಸಿದ್ಧ ಮಲ್ಲಿಕಾರ್ಜುನಾ, ನಿನ್ನವರ ನೀನೆಂಬುದೆ ಸಮತೆ". ಯಾರು ಏನೇ ಅಂದರೂ, ಏನೇ ನಿಂದಿಸಿದರೂ ಅದನ್ನು ನಿರ್ವಿಕಾರವಾಗಿ ಸ್ವೀಕರಿಸುವುದೇ ಸಮತೆ.
ಬೈದವರು ನನ್ನ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳುವಂತೆ ಮಾಡಿದರು ಎಂದುಕೊಳ್ಳು ವುದೇ ಸಮತೆ. ಹೊಗಳಿಕೆಗಳು ಜನ್ಮಜನ್ಮದ ಹಗೆಗಳು ಅಂದರೆ ಅಹಂಕಾರದ ಸಂಕೋಲೆ ಗಳು ಎಂದು ತಿಳಿಯುವುದು ಸಮತೆ. ಸುಖ-ದುಃಖ, ಲಾಭ-ನಷ್ಟ ಎರಡೂ ನನ್ನವೂ, ಎರಡರಲ್ಲೂ ಕಪಿಲಸಿದ್ಧ ಮಲ್ಲಿಕಾರ್ಜುನ ನೀನು ನನ್ನೊಂದಿಗೆ ಎಂದುಕೊಳ್ಳು ವುದೇ ಸಮತೆ. ಜೀವನು ಶಿವನಂತೆಯೇ ಇರುವುದೇ ನಿಜವಾದ ಸಮತೆ.
ನೋಡಿ ಇಲ್ಲಿ ಎಲ್ಲಿಯೂ ‘ಸಮಸಮಾಜ’ ಬಂದಿಲ್ಲ. ಅಲ್ಲಮಪ್ರಭುಗಳು ಒಂದು ಕಡೆ ‘ಸಮತೆ’ಯನ್ನು ಸೂತಕ ಎಂದು ಹೇಳಿzರೆ. ಶಬ್ದಶಃ ನೋಡಿದರೆ ಸಮಾನತೆಯನ್ನು ಪ್ರಭು ದೇವರು ವಿರೋಧಿಸಿದ್ದಾರೆ ಎಂದಾದೀತು. ಅದು ಹಾಗಲ್ಲ.
“ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ. ಶೀಲವೆಂಬುದು ಸಂಕಲ್ಪ, ಸಮತೆ ಯೆಂಬುದು ಸೂತಕ. ಇಂತೀ ಚತುರ್ವಿಧದೊಳಗಿಲ್ಲ, ಗುಹೇಶ್ವರಾ, ನಿಮ್ಮ ಶರಣ ನಿಸ್ಸೀಮ"! ಈ ವಚನವು ಭವಿ, ಭಕ್ತಿ, ಶೀಲ, ಸಮತೆ ಎಂಬ ನಾಲ್ಕು ಲೌಕಿಕ ಪರಿಕಲ್ಪನೆಗಳನ್ನು ಮೀರಿ ಗುಹೇಶ್ವರನಲ್ಲಿ ಲೀನವಾದ ಶರಣನು ಈ ಮಿತಿಗಳಿಲ್ಲದ, ಪರಿಪೂರ್ಣ ಅಂದರೆ ನಿಸ್ಸೀಮ ಎಂದು ಹೇಳುತ್ತದೆ. ಇಲ್ಲಿ ಸಮತೆಯೆಂಬುದು ಸೂತಕ, ಎಂದರೆ ಸಾಮರಸ್ಯ ಸಾಧಿಸಿದ್ದೇನೆ ಎಂಬ ಅಹಂಕಾರ. ಈ ಅಹಂಕಾರವೇ ಮೈಲಿಗೆ.
ಇಲ್ಲಿಯೂ ‘ಸಮಸಮಾಜ’ ಸುಳಿದಿಲ್ಲ. ಈಗ ಚೆನ್ನಬಸವಣ್ಣನವರ ವಚನ- “ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ ನಾರಿ, ಸಮತೆಯೆಂಬ ತಿರುವ ಮೆಟ್ಟಿ ಜೇವೊಡೆಗೆಯ್ದು, ಶಿಷ್ಯನೆಂಬ ಬಾಣವ ತೊಡಚಿ, ಗುರುವೆಂಬ ವ್ಯಾಧನು ಲಿಂಗವೆಂಬ ಬಯಲ ಗುರಿಯನೆಚ್ಚಡೆ, ಗರಿ ತೋರದಂತೆ ಮುಳುಗಿ ಅಡಗಿತ್ತು. ಆ ಗರಿಯನು ಬಾಣವನು ಅರಸಲುಂಟೆ, ಕೂಡಲಚೆನ್ನ ಸಂಗಾ ನಿಮ್ಮಲ್ಲಿ?". ಅಂದರೆ ಗುರುವೆಂಬ ಬಿಲ್ಲುಗಾರ ವಿಚಾರವೆಂಬ ಹಗ್ಗ ಬಿಗಿದು ಸದಾಚಾರವೆಂಬ ಬಿಲ್ಲು ಹಿಡಿದಿದ್ದಾನೆ.
ಇಲ್ಲಿ ಶಿಷ್ಯನೇ ಬಾಣ, ಲಿಂಗವೆಂಬ ಬಯಲೇ ಗುರಿ. ಆ ಬಿಲ್ಲಿಗೆ ಸಮತೆಯೆಂಬ ತಿರುವು, ಆ ಸಮತೆಯನ್ನು ಗುರುವು ಗಟ್ಟಿ ಹಿಡಿದು ಬಾಣದ ಹೆದೆ ಏರಿಸಿ ನಿಶ್ಚಲ ಗುರಿ ಇಟ್ಟಿದ್ದಾನೆ. ಆದರೆ ಲಿಂಗವು ಗರಿಯನ್ನೂ ತೋರದಂತೆ ನೀರಲ್ಲಿ ಮುಳುಗಿ ಸಿಗದಂತೆ ಅಡಗಿದೆ. ಅಂದರೆ, ಗುರುವಿನಿಂದ ತನುವಿಗೆ ಚಾರವನಳವಡಿಸಿ, ಮನಕ್ಕೆ ಜ್ಞಾನವನಳವಡಿಸಿ, ದುರ್ಬುದ್ಧಿ ಯಿಲ್ಲದಂತೆ ಶಾಂತಿಯನಳವಡಿಸಿ, ಶಿಷ್ಯನೆಂಬ ಆತ್ಮನನು ಲಿಂಗವೆಂಬ ಪರಮಾತ್ಮನಲ್ಲಿ ಪ್ರಯೋಗಿಸಲು ತನು ಕರಣೇಂದ್ರಿಯಂಗಳು ಸಹವಾಗಿ ಆತ್ಮನು ಲಿಂಗಾಂಗ ಸಾಮರಸ್ಯ ಹೊಂದಿ, ಅಂಗ ಲಿಂಗ ಭಾವ ಅಳಿಯುವುದೇ ಇದರ ತಾತ್ಪರ್ಯ.
ಇಲ್ಲಿ ಸಮಾಜವಾದದ ಸೋಂಕೇ ಇಲ್ಲ. ಪ್ರಭುದೇವರ ಇನ್ನೊಂದು ವಚನ- “ಅಂಗ ಲಿಂಗ ದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ, ಮನ ಜ್ಞಾನದಲ್ಲಿ ತರಹರ ವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ, ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ". ಇದಕ್ಕೆ ಹೆಚ್ಚಿನ ವಿವರಣೆ ಬೇಕಾಗಿಲ್ಲ.
ಶಿವಶರಣನ ಅಂಗವೆಲ್ಲ ಲಿಂಗವಾಗಿರುವಾಗ, ಜ್ಞಾನವೇ ಮನ ತುಂಬಿರುವುದು. ಆತ್ಮನನ್ನು ಅರಿತ ಅವಿರಳ ಜ್ಞಾನದಿಂದ ಭಾವವಡಗಿ ನಿರ್ಭಾವವಾಗುವುದು, ಒಟ್ಟಿನಲ್ಲಿ ಲಿಂಗಾಂಗ ಸಾಮರಸ್ಯವೆಂಬ ಸಮತೆಯಿಂದ ನಿಜಶಾಂತಿ ನೆಲೆಸುವುದು. ಇನ್ನು ಬಹುಚರ್ಚಿತ ಕೃಷಿ ವಚನ- “ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ.
ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡ ಮಂಡಲ ವೆಂಬ ಬಾವಿ, ಪವನವೆ ರಾಟಾಳ, ಸುಷುಮ್ನನಾಳದಿಂದ ಉದಕವ ತಿದ್ದಿ. ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ, ಆವಾಗಲೂ ಈ ತೋಂಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ". ‘ತನುವ ತೋಂಟವ ಮಾಡಿ’ ವಚನವು ‘ಆತ್ಮಸಾಕ್ಷಾತ್ಕಾರ’ದ ಅತ್ಯುನ್ನತ ಕೃಷಿಯನ್ನು ವ್ಯಾಖ್ಯಾನಿಸುತ್ತದೆ.
ದೇಹವನ್ನು ತೋಟ, ಮನಸ್ಸನ್ನು ಗುದ್ದಲಿ, ಭ್ರಾಂತಿಯನ್ನು ಕಳೆ ಹಾಗೂ ಸಮತೆ-ಸೈರಣೆ ಯನ್ನು ಬೇಲಿಯನ್ನಾಗಿ ಮಾಡಿ, ಬ್ರಹ್ಮ ಬೀಜ ಬಿತ್ತಿ, ಸತತ ಜಾಗೃತಿಯಿಂದ ಜ್ಞಾನದ ಸಸಿ ಸಲಹುವುದೇ ಈ ವಚನದ ಸಾರ. ನಮ್ಮ ದೇಹವು ಆತ್ಮನು ವಿಹರಿಸುವ, ಅರಿವಿನ ಸಸಿ ಬೆಳೆಸುವ ಪವಿತ್ರ ತೋಟ.
ಸಂಸಾರದ ಮೋಹ, ಭ್ರಾಂತಿ, ಕಾಮ-ಕ್ರೋಧಗಳನ್ನು ತೆಗೆದುಹಾಕಲು ಮನಸ್ಸನ್ನು ಜಾಗ್ರತೆ ಯಿಂದ ಬಳಸಬೇಕು, ಅದುವೇ ಮನಸ್ಸೆಂಬ ಗುದ್ದಲಿ. ಬ್ರಹ್ಮ ಬೀಜ ಎಂದರೆ ಜಾಗೃತಿ, ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿ, ಅರಿವು ಎಂದರೆ ಬ್ರಹ್ಮಜ್ಞಾನ ಎಂಬ ಬೀಜವನ್ನು ಬಿತ್ತಬೇಕು.
ಸಾಧನೆಯ ಬೇಲಿ ಎಂದರೆ ಇಂದ್ರಿಯಗಳ ಸೆಳೆತವನ್ನು ತಡೆಯಲು ಸಮತೆ (ಸಾಮರಸ್ಯ) ಮತ್ತು ಸೈರಣೆ (ಸಹನೆ) ಎಂಬ ಬೇಲಿ ಅವಶ್ಯಕ. ಜಾಗ್ರತಾವಸ್ಥೆ ಎಂದರೆ ಜಾಗರವಿದ್ದು ಜ್ಞಾನದ ಸಸಿ ಒಣಗದಂತೆ ಸದಾ ಎಚ್ಚರದಿಂದ, ಭಕ್ತಿ-ಜ್ಞಾನದ ನೀರೆರೆದು ಸಲಹಬೇಕು.
ಸರಳವಾಗಿ ಹೇಳುವುದಾದರೆ, ಭೌತಿಕ ದೇಹ ಮತ್ತು ಮನಸ್ಸನ್ನು ಬಳಸಿಕೊಂಡು, ಆಂತರಿಕ ಸಂಘರ್ಷಗಳನ್ನು ಹೋಗಲಾಡಿಸಿ, ಪರಿಶುದ್ಧ ಅರಿವನ್ನು ಬೆಳೆಸಿಕೊಳ್ಳುವುದೇ ‘ತನುವ ತೋಂಟವ ಮಾಡಿ’ ವಚನದ ನಿಜವಾದ ಅರ್ಥ. ಇಲ್ಲಿ ಸಮತೆ ಎಂಬುದು ‘ಇಂದ್ರಿಯ ನಿಗ್ರಹ’ ಎಂಬರ್ಥದಲ್ಲಿ ಬಳಕೆಯಾಗಿದೆ.
“ಜಲದ ಚಿತ್ತಾರದ ಕೊರಳಿನಲ್ಲಿ ದಾರವಿಲ್ಲದ ಮುತ್ತಿನ ಸರವು ನೋಡಾ! ಚಿತ್ತಾರವಳಿಯದೆ, ಮುತ್ತು ಉಳಿಯದೆ ನಿಂದ ನಿಲವಿನ ಪರಿಯ ನೋಡಾ! ಗಮನವಿಲ್ಲದ ಗಂಭೀರ, ಶಬುದ ವಿಲ್ಲದ ಸಾರಾಯ ಸಮತೆಯಾಗಿ ನಿಂದ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು"- ಇದು ಮುಕ್ತಾಯಕ್ಕನ ವಚನ. ಈ ವಚನವು ಅಜಗಣ್ಣನ ನಿರಹಂಕಾರದ, ಅವಿರಳ ಜ್ಞಾನದ ಸ್ಥಿತಿಯನ್ನು ಸಾರುತ್ತದೆ.
ಗಮನವಿಲ್ಲದ ಗಂಭೀರತೆ, ಶಬ್ದ ಮೀರಿ ನಿಂತ ನಿಲುವು ಮತ್ತು ಪರಿಪೂರ್ಣ ಅರಿವಿನ ಸ್ಥಿತಿ ಅಥವಾ ಲಿಂಗಾಂಗ ಸಾಮರಸ್ಯ ಸ್ಥಿತಿ ತಲುಪಿದ ಅಜಗಣ್ಣನಿಗೆ ಇನ್ನಾರು ಸರಿ ಎಂದು ಆಕೆ ಹೇಳುತ್ತಾಳೆ, ಇನ್ನೊಂದು ಸಿದ್ಧರಾಮೇಶ್ವರರ ವಚನ- “ಸಕಲ ಶ್ರುತಿಗಳು ನಿನ್ನ ಅನುಮಿಸಿದ ವಾಸನೆಗೆ ಮುಸುಕಲಮ್ಮದೆ ತೊಲಗಿ ಹೊಗಳುತಿರಲು, ನಾನೆ ಅಭೇದ್ಯಯೆಂದು ಹೊಗಳುವ ವೇದ ಸಮತೆ ಸಾಯುಜ್ಯದಲಿ ದೀಕ್ಷೆಯವಕೆ. ದೃಷ್ಟವಪ್ಪವ ನೀನು ಶ್ರುತವೆಂದು ಹೇಳುವೆ, ಅತಿಶಯದ ಶ್ರುತ ದೃಷ್ಟಕೆ ಒಡೆಯನಾದವನೆ ಹದುಳದಿಂದರ್ಚಿಸಾ ಸಮತೆ ಪದವಾ. ಸಮತೆ ಸಜ್ಜನರೊಂದು ನೆನಹಿನಲಿ ಮೂರ್ತಿಯೈ, ಕರುಣ ವಾರುಧಿಗಳದರ ಕೆಲಬಲದಲಿ.
ಕರುಣಾಕರನು ಕಪಿಲಸಿದ್ಧಮಶ್ವರನು ಸಮತೆ ಸಂಯೋಗದಲಿ ಸುಖಿಯಾದನು". ಇಲ್ಲಿ ಸಮತೆ ಸಜ್ಜನರ ನೆನಹಿನ ಕೈಗೊಂಬೆ. ಕಪಿಲಸಿದ್ಧಮಶ್ವರನು ಸಮತೆ ಸಂಯೋಗದಲಿ ಸುಖಿಯಾದ ಲಿಂಗಾಂಗ ಸಾಮರಸ್ಯದ ಪದವ ಹದುಳದಿಂದರ್ಚಿಸಬೇಕು. ಇನ್ನು ಬಸವಣ್ಣ ನವರ ಒಂದು ವಚನ- “ಕಾಯವೆಂಬ ಘಟಕ್ಕೆ ಚೈತನ್ಯವೆ ಸಯಿದಾನ, ಸಮತೆಯೆಂಬ ಜಲ, ಕರಣಾದಿಗಳೆ ಶ್ರವಣ; ಜ್ಞಾನವೆಂಬಗ್ನಿಯನಿಕ್ಕಿ, ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದರೆ ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು".
ಇಲ್ಲಿ ದೇಹವೆಂಬ ಕುಡಿಕೆ, ಚೈತನ್ಯವೆಂಬ ಅಕ್ಕಿ,ಬೇಳೆ, ಬೆಲ್ಲ, ಸಮತೆಯೆಂಬ ಜಲ, eನವೆಂಬ ಅಗ್ನಿಯನಿಕ್ಕಿ, ಬುದ್ಧಿಯಿಂದ ಹುಟ್ಟಿನಿಂದ ಘಟ್ಟಿಸಿ ಪಾಕಕ್ಕೆ ತಂದು ಭಾವದಲ್ಲಿ ಕುಳ್ಳಿರಿಸಿ ಮಾಡಿದ ಪಾಯಸ ಕೂಡಲಸಂಗಮದೇವನಿಗೆ ಅರ್ಪಿತವಾಯ್ತು ಎಂದಿದೆ. ಈ ಎರಡೂ ವಚನಗಳಲ್ಲಿ ‘ಸಮಸಮಾಜ’ ಬಂದಿಲ್ಲ.
ಇನ್ನು ವಚನಗಳಲ್ಲಿ ಹಲವು ಕಡೆ ಶಿವಶರಣರ ಸಮತೆಯು ಯೋಗಸಮಾಧಿ ಸ್ಥಿತಿಯಂತೆ ಕಾಣುತ್ತದೆ. ಶರಣರ ದರ್ಶನದಲ್ಲಿ ಸಮತೆ ಎಂದರೆ ಹೊರಗಿನ ಸಾಮಾಜಿಕ ಸಮಾನತೆ ಅಲ್ಲ. ಅದು ಲಿಂಗಾಂಗ ಸಾಮರಸ್ಯದ ಅನುಭವದಿಂದ ಹುಟ್ಟುವ ಅಂತಃಕರಣದ ಸ್ಥಿತಿ, ಅಲ್ಲಿ ಶಿವಭಕ್ತನಿಗೆ ಭೇದಭಾವಗಳೆಲ್ಲ ಕರಗುತ್ತವೆ.
ಸಮಾಧಿ ಸ್ಥಿತಿ ಎಂದರೆ ಮನಸ್ಸಿನ ವೃತ್ತಿಗಳು ನಿಶ್ಚಲಗೊಂಡು ಆತ್ಮತತ್ತ್ವದಲ್ಲಿ ಲೀನ ವಾಗುವ ಸ್ಥಿತಿ. ದ್ವೈತ ಭಾವದ ಲಯ ಮತ್ತು ಏಕತ್ವದ ಅನುಭವವಿದೆ. ಭಕ್ತಿ-ಅನುಭಾವದ ಮೂಲಕ ಸಮತೆ ವ್ಯಕ್ತವಾಗುತ್ತದೆ. ಶಿವಭಕ್ತರೆಲ್ಲ ಒಂದೇ ಎಂಬಲ್ಲಿ ಮುಕ್ತವಾಗುತ್ತದೆ.
ಕಮ್ಯುನಿಸ್ಟರ ‘ಸಮಸಮಾಜ’ ಕಲ್ಪನೆ ಮತ್ತು ಶರಣರ ದರ್ಶನವನ್ನು ಒಂದೇ ಎನ್ನುವುದು ಆಷಾಢಭೂತಿತನ. ಶರಣರನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರನ್ನು ಸಮಾಜವಾದಿ ಗಳಾಗಿ ಅಲ್ಲ, ಆಧ್ಯಾತ್ಮಿಕ ಸಾಧಕರಾಗಿ ನೋಡುವುದು ಅನಿವಾರ್ಯ.
(ಲೇಖಕರು ಸಂಸ್ಕೃತಿ ಚಿಂತಕರು)