ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅನಂತ ಪದ್ಮನಾಭ ಪೂಜಾಫಲ

ನಿಮ್ಮ ಮನೆಯಲ್ಲಿ ಹದಿನಾಲ್ಕು ವರ್ಷಗಳ ಕಾಲ ಅನಂತ ಚತುರ್ದಶಿ ಪೂಜೆಯನ್ನು ಮಾಡಿರಿ, ನೀವು ಧರಿಸುವ ದಾರವು ಸಕಲ ಐಶ್ವರ್ಯಗಳನ್ನೂ ತಂದು ಅನುಗ್ರಹಿಸಲಿ’ ಎಂದು ಆಶೀರ್ವದಿಸುತ್ತಾನೆ. ಹೀಗೆ ಅಂದಿನಿಂದ ಅನಂತ ಚತುದರ್ಶಿ ಆಚರಣೆ ರೂಢಿಯಲ್ಲಿದೆ ಎಂದು ಕೃಷ್ಣ ಪರಮಾತ್ಮ ಯುಧಿಷ್ಠಿರನಿಗೆ ಕಥೆಯನ್ನು ಹೇಳಿ ಮುಗಿಸುತ್ತಾನೆ.

Roopa Gururaj Column: ಅನಂತ ಪದ್ಮನಾಭ ಪೂಜಾಫಲ

-

ಒಂದೊಳ್ಳೆ ಮಾತು

ಜೂಜಾಟದಲ್ಲಿ ಸೋತು ವನವಾಸದಲ್ಲಿ ಅನೇಕ ಸಂಕಟಗಳನ್ನು ಅನುಭವಿಸಿ ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಪಾಂಡವ ಮಹಾರಾಜನು, ಶ್ರೀಕೃಷ್ಣನನ್ನು ಕುರಿತು ‘ಓ ಜಗದ್ರಕ್ಷಕನೇ, ನಾವು ಅನುಭವಿಸುತ್ತಿರುವ ಈ ಕಷ್ಟಗಳಿಂದ ಪಾರಾಗುವ ಮಾರ್ಗವನ್ನು ತಿಳಿಸು’ ಎಂದು ಪ್ರಾರ್ಥಿಸುತ್ತಾನೆ. ಆಗ ಕೃಷ್ಣನು ಭಾದ್ರಪದ ಶುಕ್ಲ ಚತುರ್ದಶಿಯಂದು ಅನಂತ ಪದ್ಮನಾಭ ವ್ರತವನ್ನು ಮಾಡುವಂತೆ ಸೂಚಿಸುತ್ತಾನೆ.

ಅನಂತ ಪದ್ಮನಾಭ ಯಾರು? ಈ ಪೂಜೆಯ ಮಹತ್ವವೇನು ಎಂದು ಧರ್ಮರಾಜ ವಿನೀತನಾಗಿ ಕೇಳಿದಾಗ, ಕೃಷ್ಣನು ಅನಂತ ಎಂದರೆ ಯಾರೂ ಅಲ್ಲ, ನಾನೇ, ಕಾಲಪುರುಷ, ಕಾಲವೇ ಅನಂತ ಎಂದು ಉತ್ತರಿಸುತ್ತಾನೆ. ನಂತರ ಧರ್ಮರಾಜನಿಗೆ ಅನಂತಪದ್ಮನಾಭನ ಕೃಪೆ ಉಂಟಾದರೆ ಆಗುವ ಒಳಿತಿನ ಕಥೆಯನ್ನೂ ಹೇಳುತ್ತಾನೆ.

ಕೃತಯುಗದಲ್ಲಿ, ಸುಮಂತ ಮತ್ತು ದೀಕ್ಷಾ ಎಂಬ ಬ್ರಾಹ್ಮಣ ದಂಪತಿ ವಿಷ್ಣುವಿನ ಕೃಪೆಯಿಂದ ಹೆಣ್ಣುಮಗುವನ್ನು ಪಡೆದರು. ಅವರು ಅವಳಿಗೆ ಸುಶೀಲ ಎಂದು ಹೆಸರಿಸಿ ಮುದ್ದಾಗಿ ಬೆಳೆಸಿದರು. ಈ ನಡುವೆ ಸುಮಂತನ ಪತ್ನಿ ದೀಕ್ಷಾ ಅನಾರೋಗ್ಯದಿಂದ ಸಾವನ್ನಪ್ಪಿದಾಗ, ಅವನು ಬೇರೊಬ್ಬ ಕರ್ಕಶ ಎಂಬುವ ಹೆಣ್ಣು ಮಗಳನ್ನು ಮದುವೆಯಾಗುತ್ತಾನೆ. ಆಕೆ ಸುಶೀಲೆಯನ್ನು ಮಗಳಂತೆ ಪ್ರೀತಿಯಿಂದ ಕಾಣದೆ ಸಾಕಷ್ಟು ಹಿಂಸೆ ಕೊಡುತ್ತಾಳೆ.

ಇದನ್ನೂ ಓದಿ: Roopa Gururaj Column: ಬದುಕಿನಲ್ಲಿ ಸದಾ ಉಳಿಯುವ ʼರಾಮನಾಮʼ

ಮಗಳಿಗೆ ಆಗುತ್ತಿರುವ ಮಲತಾಯಿಯ ಹಿಂಸೆಯಿಂದ ಅವಳನ್ನು ತಪ್ಪಿಸಲು ತಂದೆ ಅವಳನ್ನು ಕೌಂಡಿನ್ಯ ಎನ್ನುವ ವರನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಇನ್ನು ತಂದೆಯ ಮನೆಯ ಋಣ ತೀರಿತು ಎಂದು ಮಗಳು ತನ್ನ ಪತಿಯನ್ನು ಒಡಗೂಡಿ ತಂದೆಯ ಮನೆಯನ್ನು ಬಿಟ್ಟು ಹೊರಡು ತ್ತಾಳೆ.

ಎತ್ತಿನಬಂಡಿಯಲ್ಲಿ ತೆರಳುತ್ತಿರುವಾಗ ಮಾರ್ಗ ಮಧ್ಯೆ ಮರದ ಕೆಳಗೆ ದಂಪತಿ ವಿಶ್ರಾಂತಿ ಪಡೆಯು ತ್ತಾರೆ. ಆಗ ಸುಶೀಲಾ ಅಲ್ಲೇ ಹತ್ತಿರದ ನದಿ ದಂಡೆಯಲ್ಲಿ ಪೂಜೆ ಮಾಡುತ್ತಿದ್ದ ಮುತ್ತೈದೆ ಯರನ್ನು ನೋಡಿ, ಅವರ ಬಳಿ ಬಂದು ಆ ಪೂಜೆಯ ಬಗ್ಗೆ ಕೇಳುತ್ತಾಳೆ. ಅವರು ಅವಳಿಗೆ ಆಗ ಅನಂತ ಪದ್ಮನಾಭ ವ್ರತದ ಬಗ್ಗೆ ಹೇಳುತ್ತಾರೆ.

ಈ ದಿನ ನಾರಾಯಣನನ್ನು ಭಕ್ತಿಯಿಂದ ಪೂಜಿಸಿ, ಆ ಪೂಜೆಯಲ್ಲಿ ಇರಿಸುವ ಹದಿನಾಲ್ಕು ಎಳೆಯ ರೇಷ್ಮೆದಾರವನ್ನು ಗಂಡನು ಹೆಂಡತಿಯ ಎಡಗೈಗೆ ಮತ್ತು ಹೆಂಡತಿಯು ಗಂಡನ ಬಲಗೈಗೆ ಕಟ್ಟಿದರೆ ಸಂಪತ್ತು ಮತ್ತು ಸಂತೋಷ ಸಿಗಲಿದೆ ಎನ್ನುತ್ತಾರೆ. ಆಗ ಸುಶೀಲೆಯು ಪತಿಯ ಸಹಕಾರದಿಂದ ಶ್ರೀಅನಂತನ ಪೂಜೆಯನ್ನು ಮಾಡುತ್ತಾಳೆ.

ಕಾಲಕ್ರಮೇಣ ಅವರ ಬಡತನ ತೊಲಗಿ ಅಷ್ಟ ಐಶ್ವರ್ಯಗಳಿಂದ ತುಂಬುತ್ತದೆ. ಆದರೆ ಶ್ರೀಮಂತಿಕೆ ಯ ಮದದಿಂದ ಅವಳ ಪತಿ ಕೌಂಡಿನ್ಯನು ಅನಂತ ಪದ್ಮನಾಭನ ಕೃಪೆಯನ್ನು ಮರೆಯುತ್ತಾನೆ. ಅನಂತ ಪದ್ಮನಾಭ ವ್ರತದ ದಿನ ಸುಶೀಲೆಯ ಕೈಯಲ್ಲಿದ್ದ ಅನಂತನ ದಾರವನ್ನು ನೋಡುತ್ತಾನೆ. ಯಾರನ್ನು ವಶ ಮಾಡಿಕೊಳ್ಳಲು ಇದನ್ನು ಕಟ್ಟಿಕೊಂಡಿರುವೆ ಎಂದು ಅಹಂಕಾರದಿಂದ ಕೇಳುತ್ತಾನೆ, ಸಾಲದೆಂಬಂತೆ ಆ ದಾರವನ್ನು ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ ಬಿಡುತ್ತಾನೆ.

ಕೂಡಲೇ ಸುಶೀಲೆಯು ಸುಡುತ್ತಿದ್ದ ದಾರವನ್ನು ಹಾಲಿನಲ್ಲಿ ನೆನೆಸಿ ಇಡುತ್ತಾಳೆ. ಅವನ ಈ ಅಹಂಕಾರದಿಂದ ತನ್ನೆಲ್ಲಾ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಾನೆ. ನಂತರ ಪಶ್ಚಾತ್ತಾಪದಿಂದ ಈಗ ಅನಂತಪದ್ಮನಾಭನನ್ನು ಒಲಿಸುವ ಮಾರ್ಗವೇನು ಎಂದು ಪತ್ನಿ ಸುಶೀಲೆಯನ್ನು ಕೇಳುತ್ತಾನೆ. ಅನಂತನ ಕೃಪೆಯನ್ನು ಪಡೆಯಲು ತಪಸ್ಸು ಮಾಡುತ್ತಾನೆ. ವಿಷ್ಣು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷ ನಾದಾಗ ಭಕ್ತಿಯಿಂದ ಅನಂತನನ್ನು ಸ್ತುತಿಸುತ್ತಾನೆ.

ಅನಂತನು ಅವನನ್ನು ಆಶೀರ್ವದಿಸಿ, ‘ನಿಮ್ಮ ಮನೆಯಲ್ಲಿ ಹದಿನಾಲ್ಕು ವರ್ಷಗಳ ಕಾಲ ಅನಂತ ಚತುರ್ದಶಿ ಪೂಜೆಯನ್ನು ಮಾಡಿರಿ, ನೀವು ಧರಿಸುವ ದಾರವು ಸಕಲ ಐಶ್ವರ್ಯಗಳನ್ನೂ ತಂದು ಅನುಗ್ರಹಿಸಲಿ’ ಎಂದು ಆಶೀರ್ವದಿಸುತ್ತಾನೆ. ಹೀಗೆ ಅಂದಿನಿಂದ ಅನಂತ ಚತುದರ್ಶಿ ಆಚರಣೆ ರೂಢಿಯಲ್ಲಿದೆ ಎಂದು ಕೃಷ್ಣ ಪರಮಾತ್ಮ ಯುಧಿಷ್ಠಿರನಿಗೆ ಕಥೆಯನ್ನು ಹೇಳಿ ಮುಗಿಸುತ್ತಾನೆ.

ವನವಾಸದಲ್ಲಿದ್ದ 14 ವರ್ಷವೂ ಪಾಂಡವರು ಅನಂತನ ವ್ರತವನ್ನು ಮಾಡಿ ನಂತರ ತಮ್ಮ ರಾಜ್ಯವನ್ನು ಮರಳಿ ಪಡೆದರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ನಮ್ಮ ಪ್ರತಿಯೊಂದು ಹಬ್ಬ ಆಚರಣೆಗೂ ಕೂಡ ಒಂದೊಂದು ಐತಿಹ್ಯವಿದೆ. ಅಹಂಕಾರದಿಂದ ಕಳೆದುಕೊಂಡದ್ದನ್ನು ಮತ್ತೆ ಭಕ್ತಿಯಿಂದ, ಭಗವಂತನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದರಿಂದ ಅವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಮತ್ತೆ ಮರಳಿ ಪಡೆಯಬಹುದು ಎನ್ನುವುದಕ್ಕೆ ಅನಂತ ಪದ್ಮನಾಭ ವ್ರತ ಉತ್ತಮ ಉದಾಹರಣೆ.