ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಜಮೇದಾರರು ಕಿಂದರಿ ಊದುವ ಜಾಮ್ದಾರರಾದದ್ದು!

ಪರ್ಷಿಯನ್ ಮೂಲದ ಈ ಪದವು ಇಸ್ಲಾಂ ಬಂಡುಕೋರರ ಮೂಲಕ ಭಾರತವನ್ನು ಪ್ರವೇಶಿಸಿ ಮೊಘಲರ ಆಡಳಿತದಲ್ಲಿ ಇಲ್ಲಿಯೇ ಕಾಯಂ ನೆಲೆಯೂರಿತು. ಮೊಘಲರ ಸೈನ್ಯದಲ್ಲಿ ಒಂದು ಸಣ್ಣ ಉದ್ಯೋಗದ ಹೆಸರಾಗಿದ್ದ ಇದೇ ಪದವನ್ನು ನಂತರ ಭಾರತ ವನ್ನಾಕ್ರಮಿಸಿದ ಬ್ರಿಟಿಷರು, ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಕಾಲಾಳು ಪಡೆಯಲ್ಲಿ ಒಂದು ಉದ್ಯೋಗವಾಗಿ ಯಥಾವತ್ತಾಗಿ ಮುಂದುವರಿಸಿದರು.

‌Ravi Hunj Column: ಜಮೇದಾರರು ಕಿಂದರಿ ಊದುವ ಜಾಮ್ದಾರರಾದದ್ದು!

-

Ashok Nayak
Ashok Nayak Nov 9, 2025 9:43 AM

ಬಸವ ಮಂಟಪ (ಭಾಗ-೧)

ರವಿ ಹಂಜ್

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜಮಾದಾರ ಅಥವಾ ಜಮೇದಾರ ಎಂದರೆ ಊಳಿಗಮಾನ್ಯ ಜಮೀನ್ದಾರನ ‘ಅಂಗರಕ್ಷಕ-ಕಂ-ಸೇವಕ’ ಎಂಬ ಒಂದು ಸಾಮಾನ್ಯ ಅಡಿಯಾಳು ಉದ್ಯೋಗ. ಇಂದಿನ ಊಳಿಗಮಾನ್ಯ ರಾಜಕಾರಣಿಗಳ ಜತೆ ರೌಡಿಗಳಿರುತ್ತಾರಲ್ಲ ಹಾಗೆ!

ಜಮೀನ್ದಾರನಿಗೆ ತನ್ನ ವೈರಿಗಳೊಂದಿಗೆ ಬಡಿದಾಡಲು ಹೆಚ್ಚಿನ ರೌಡಿಪಡೆಯ ಅವಶ್ಯಕತೆ ಇದ್ದಾಗ ಅಂಥವರನ್ನು ಹೊಂದಿಸಿ ಜಮಾವಣೆ ಮಾಡುತ್ತಿದ್ದ ಕಾರಣ, ಇವರನ್ನು ಜಮೇ ದಾರ ಅಥವಾ ಜಮಾದಾರ ಎಂದು ಮೊಘಲ್ ಭಾರತದಲ್ಲಿ ಕರೆಯುತ್ತಿದ್ದರು.

ಪರ್ಷಿಯನ್ ಮೂಲದ ಈ ಪದವು ಇಸ್ಲಾಂ ಬಂಡುಕೋರರ ಮೂಲಕ ಭಾರತವನ್ನು ಪ್ರವೇಶಿಸಿ ಮೊಘಲರ ಆಡಳಿತದಲ್ಲಿ ಇಲ್ಲಿಯೇ ಕಾಯಂ ನೆಲೆಯೂರಿತು. ಮೊಘಲರ ಸೈನ್ಯದಲ್ಲಿ ಒಂದು ಸಣ್ಣ ಉದ್ಯೋಗದ ಹೆಸರಾಗಿದ್ದ ಇದೇ ಪದವನ್ನು ನಂತರ ಭಾರತ ವನ್ನಾಕ್ರಮಿಸಿದ ಬ್ರಿಟಿಷರು, ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಕಾಲಾಳು ಪಡೆಯಲ್ಲಿ ಒಂದು ಉದ್ಯೋಗವಾಗಿ ಯಥಾವತ್ತಾಗಿ ಮುಂದುವರಿಸಿದರು.

ಇದನ್ನೂ ಓದಿ: ‌Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

ಸುಬೇದಾರನಿಗಿಂತ ಕೆಳಗಿನ ಆದರೆ ಹವಾಲ್ದಾರನಿಗಿಂತ ಮೇಲಿನ ಒಂದು ಅಧಿಕಾರ ವರ್ಗವಲ್ಲದ ಸಾಮಾನ್ಯ ಕಾಲಾಳುವಿನ ಹುದ್ದೆ ಇದಾಗಿತ್ತು. ಕೇವಲ ಇಂಥ ಯಃಕಶ್ಚಿತ್ ಉದ್ಯೋಗದ ‘ಅಂಗರಕ್ಷಕ-ಕಂ-ಸೇವಕ’ರನ್ನಿಟ್ಟು ಕೊಳ್ಳುವ ಶಕ್ತಿಯಿದ್ದ ಜಮೀನ್ದಾರರು ತಮ್ಮ ‘ಅಂಗರಕ್ಷಕ-ಕಂ-ಸೇವಕ’ರಿಗೆ ಜಮಾದಾರ ಅಥವಾ ಜಮೇದಾರ ಎನ್ನುತ್ತಿದ್ದರು.

ಈ ಜಮೇದಾರರು ಅಂಗರಕ್ಷಣೆಯ ಕಾರ್ಯವಿರದಿದ್ದಾಗ ತಮ್ಮ ಮಾಲೀಕರ ಮನೆಗಳಲ್ಲಿ ಮನೆಗೆಲಸದ ಚಾಕರಿಯನ್ನೂ ಮಾಡುತ್ತಿದ್ದರು. ಇದೇ ಮಾದರಿಯಾಗಿ ಬ್ರಿಟಿಷರು ತಮ್ಮ ಸೈನ್ಯದಲ್ಲಿದ್ದ ಈ ಶ್ರೇಣಿಯವರನ್ನೇ ತಮ್ಮ ಅಧಿಕಾರಿಗಳ ಮನೆಗಳಲ್ಲಿ ಚಾಕರಿ ಮಾಡಲು ಆರ್ಡರ್ಲಿಯಾಗಿ ನೇಮಿಸಿಕೊಳ್ಳುತ್ತಿದ್ದರು.

2017ರವರೆಗೆ ಕರ್ನಾಟಕ ಪೊಲೀಸ್ ಇಲಾಖೆ ಸಹ ಇದೇ ಆರ್ಡರ್ಲಿ ಪದ್ಧತಿಯಂತೆ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಅಡುಗೆ, ಮಾಲಿ, ಕಸ ಗುಡಿಸುವ ಮತ್ತಿತರೆ ಮನೆ ಗೆಲಸಕ್ಕೆ ಪೇದೆಗಳನ್ನು ನೇಮಿಸುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಹೀಗೆ ಬ್ರಿಟಿಷ್ ಅಧಿಕಾರಿಗಳ ಮನೆಯಲ್ಲಿ ಕಸಮುಸುರೆ ತೊಳೆಯುತ್ತಾ, ತಂದೂರಿ ಕೋಳಿ ಸುಡುತ್ತ, ಮಾಂಸದ ಕರಿ ಬೇಯಿಸುತ್ತ, ಸಂಜೆಯ ಪಾರ್ಟಿಗೆ ಸೋಡಾ-ನೀರು ಸಿದ್ಧಪಡಿಸುತ್ತ ಬ್ರಿಟಿಷರ ಜೀವನಶೈಲಿಗೆ ಈ ನೌಕರರು ಮನಸೋತಿದ್ದರು.

ಹೀಗೆ ಮರುಳಾದ ಜಮೇದಾರರು ತಮ್ಮ ಮಕ್ಕಳನ್ನು ಬ್ರಿಟಿಷರಂತೆ ಜೀವಿಸಲು ಪ್ರೋತ್ಸಾಹಿ ಸುತ್ತ, ತಮ್ಮ ಮಕ್ಕಳು ‘ಲಾಟ್ ಫೂಟ್ ಸಾಹೇಬ’ರಾದಂತೆ ಕನಸು ಕಾಣುತ್ತಿದ್ದರು. ಭಾರತ ದಾದ್ಯಂತ ಇಂಥ ಲಾಟ್ ಫೂಟ್ ಸಾಹೇಬ ವ್ಯಕ್ತಿತ್ವದ ವ್ಯಕ್ತಿಗಳ ಅನೇಕ ರಂಜನೀಯ ಸಾಮಾಜಿಕ ಕತೆಗಳಿವೆ.

ಅವುಗಳಲ್ಲಿ ಕೆಲವು ಸಕಾರಾತ್ಮಕ, ನಕಾರಾತ್ಮಕ, ಮನರಂಜನೀಯ, ದುಷ್ಟ, ದುರಂತದ ಸಾಕಷ್ಟು ಸೃಜನಶೀಲ ಕಲಾಪ್ರಕಾರದ ಪಾತ್ರ-ಕೇಂದ್ರಿತ ಕತೆಗಳೇ ಹೆಚ್ಚು. ಇಂಥ ಪಾತ್ರ ಗಳನ್ನಾಧರಿಸಿದ ಅನೇಕ ಪಾತ್ರಗಳನ್ನು ಬಾಲಿವುಡ್ ಅಲ್ಲದೆ ದಕ್ಷಿಣ ಭಾರತೀಯ ಭಾಷೆ ಗಳಲ್ಲಿ ಸಹ ಕಾಣಬಹುದು.

ಉದಾಹರಣೆಗೆ ಶೋಲೆ ಚಿತ್ರದ “ಹಮ್ ಅಂಗ್ರೆಜೋಂಕೆ ಜಮಾನೇ ಕೆ ಜೈಲರ್ ಹೈ" ಎಂದು ಅಸಡಾ ಬಸಡಾ ಹೆಜ್ಜೆ ಹಾಕುವ ಆಸ್ರಾನಿ ನಿರ್ವಹಿಸಿದ ಜೈಲರ್ ಪಾತ್ರ, ‘ಬೆಟ್ಟದ ಹೂವು’ ಚಿತ್ರದ “ಶರ್ಲಿ ಮೇಡಂ ಟು ಗಿವಿಂಗ್ ಮೌಂಟನ್ ಫ್ಲವರ್ ಬ್ರಿಂಗಿಂಗ್" ಎಂದು ಹಾಡುವ ಬಟ್ಲರ್ ಪಾತ್ರದಂಥ ಬಟ್ಲರ್ ಇಂಗ್ಲಿಷಿನ ಅಡುಗೆಯವರ ಅಸಂಖ್ಯಾತ ಪಾತ್ರಗಳಿವೆ.

ಪ್ರಮುಖವಾಗಿ ಇದಕ್ಕೆಲ್ಲ ಕಾರಣ- ಆರ್ಡರ್ಲಿ ಡ್ಯೂಟಿ ಮಾಡಿ ತಮ್ಮ ಮಕ್ಕಳಾದರೂ ಅವರಂತಾಗಲಿ ಎಂಬ ಊಳಿಗಮಾನ್ಯ ಗುಲಾಮಿತನದ ಬಡ ಜಮಾದಾರ ತಂದೆಯ ಕಳಕಳಿ; ಹೀಗಾಗಿ ಇಂಥ ವ್ಯಕ್ತಿತ್ವದ ಅನೇಕ ವ್ಯಕ್ತಿಗಳು ದೇಶವು ಸ್ವಾತಂತ್ಯ ಗಳಿಸಿದ ಪಲ್ಲಟ ಪರ್ವದಲ್ಲಿ ಇದ್ದರು, ಈಗಲೂ ಅಲ್ಲಲ್ಲಿ ಇದ್ದಾರೆ. ಇದು ನಗೆಪಾಟಿನ ಅಂಶವೆಂದೋ ಏನೋ ಕೆಲವು ಜಮೇದಾರ ಉರ್ಫ್ ಜಮಾದಾರ ಕುಟುಂಬಗಳು ತಮ್ಮ ಕೌಟುಂಬಿಕ ಹೆಸರನ್ನು ಜಾಮ್ದಾರ್ ಅಥವಾ ಜಾಮದಾರ್ ಎಂದು ಮಾಡಿಕೊಂಡಿರುವುದು ಒಂದು ಪದ ವಿಕಾಸವಾದದ ಸೂತ್ರ!

ಇನ್ನು ಜಮೀನ್ದಾರನ ಬಲಗೈ ಬಂಟರಾಗಿರುತ್ತಿದ್ದ ಜಮೇದಾರರು ತಮ್ಮ ಧಣಿಗಳ ಕಿವಿ‌ ಯೂದಿ ಸಮಾಜದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕತೆಗಳಲ್ಲದೆ ಲೈಂಗಿಕ ಕಿರುಕುಳ ದ ಕತೆಗಳೂ ಸಾಕಷ್ಟಿವೆ. ಈ ಬಗ್ಗೆ ಸಹ ಅಸಂಖ್ಯಾತ ಸಿನಿಮಾ, ನಾಟಕ, ಕಾದಂಬರಿ, ಕತೆಗಳ ಪಾತ್ರಗಳು ಇವೆ.

ಹಿಂದಿ ಚಿತ್ರರಂಗದ ಜೀವನ್, ಪ್ರಾಣ್, ರಂಜೀತ್ ಅಲ್ಲದೆ ಕನ್ನಡ ಚಿತ್ರಗಳಲ್ಲಿ ಬಾಲಕೃಷ್ಣ, ನರಸಿಂಹರಾಜು, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್ ಮುಂತಾದ ಅನೇಕ ನಟರು ಇಂಥ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ವಿಖ್ಯಾತ ‘ಗೌಡ್ರ ಗದ್ಲ’ ನಾಟಕದ ಸುಧೀರ್, ಬಿ.ಕೆ. ಶಂಕರ್ ಸಹ ಇಂಥ ಪಾತ್ರಗಳನ್ನು ನಾಡಿನಾದ್ಯಂತ ಮನನ ಮಾಡಿಸಿದ್ದಾರೆ!

ಇಂಥ ಕಾಯಕವಾಹಿ ಅನುವಂಶೀಯತೆಯ ಪಿತ್ರಾರ್ಜಿತವನ್ನೇ ಊರ್ಜಿತ ಮಾಡಿಕೊಂಡಿ ರುವ ಓರ್ವ ಲಾಟ್ ಫೂಟ್ ಸಾಹೇಬರಂತೆಯೇ ಬ್ರಿಟಿಷ್ ಪ್ರಣೀತ ಗೈರತ್ತು, ಊಳಿಗಮಾನ್ಯ ಜಮೀನ್ದಾರಿಕೆಯ ದರ್ಪ, ಜಮೇದಾರನ ಅಧಿಕಾರ ಚಲಾಯಿಸುವ ಸದ್ಯದ ಪ್ರಚಲಿತ ಕೊನೆಯ ಪಳೆಯುಳಿಕೆ ಎಂದರೆ ಲಿಂಗಾಹತ ಮಹಾಸಭಾದ ಜಮೇದಾರ ಉರ್ಫ್‌ ಜಮಾ ದಾರ ಉರ್ಫ್ ಜಾಮ್ದಾರ್!

ಶ್ರೀಯುತರು ಮೂಲತಃ ರಾಮದುರ್ಗ ತಾಲೂಕಿನ ಖಾನ್‌ಪೇಟ್ ಸಮೀಪದ ಕಿ ತೋರಗಲ್ ಜಹಗೀರುದಾರನಲ್ಲಿ ಜಮೇದಾರರಾಗಿದ್ದ ವಂಶವಾಹಿ ಇತಿಹಾಸವನ್ನು ಹೊಂದಿದ್ದಾರೆ. ಈ ಜಹಗೀರುದಾರನು ಬಿಜಾಪುರದ ಬಹಮನಿ ಸುಲ್ತಾನನ ಮಾಂಡಲಿಕನಾಗಿದ್ದನು ಎಂಬುದು ಗಮನಾರ್ಹ ಅಂಶವಾಗಿದೆ.

ಹೀಗೆ ಆರ್ಡರ್ಲಿ ವಂಶಾವಳಿಯ ಆಶಯದಂತೆ ಲಾಟ್ ಫೂಟ್ ಸಾಹೇಬರಂತಿರುವ ಜಾಮ್ದಾರರು, ‘ಕಾಯಕವಾಹಿ ಅನುವಂಶೀಯತೆ’ಯ ಜಮೇದಾರರ ಗುಣದಂತೆ ಕಿವಿ ಯೂದುವ ಅಲ್ಪಮತಿ ಕಾಯಕದಲ್ಲಿ ತೊಡಗುವುದರಲ್ಲಿ ಯಾವ ಹೊಸತನವೂ ಇಲ್ಲ ವೆಂದು ಬಗೆದು ತಮ್ಮ ಫರಂಗಿ ಹೈನೆಸ್ ಸ್ಟೇಟಸ್ಸಿಗೆ ತಕ್ಕಂತೆ ಧರ್ಮ ಭಂಜನೆಗಾಗಿ ಕಿಂದರಿ (ಕಿನ್ನರಿ)ಯನ್ನೇ ಊದುತ್ತಿದ್ದಾರೆ.

ಇಲ್ಲಿ ಜಾಮ್ದಾರ ಎಂಬ ಹೆಸರಿನ ಜಾಡನ್ನು ಏಕೆ ವಿವರಿಸಲಾಯಿತು ಎಂದರೆ ಶ್ರೀ ಜಾಮ್ದಾರರು ತಾವು ಭಾರತೀಯ ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಅಗತ್ಯವಾಗಿ ಗಳಿಸಬೇಕಾದ ಅಂಕಿಗಳಿಗಾಗಿ ಓದಿರಬಹುದಾದ ಇತಿಹಾಸದ ಹಿನ್ನೆಲೆಯಲ್ಲಿ, ಹಿಂದೂ, ಶೈವ, ಶಿವ, ಕಾಳಾಮುಖ, ರೇಣುಕ, ವೀರಶೈವ, ಶರಣರ ಇತಿಹಾಸವನ್ನು ತಮಗೆ ತೋಚಿದಂತೆ ವಿಶ್ಲೇಷಿಸಿದ್ದಾರೆ ಎನ್ನುವುದಕ್ಕಿಂತ ಅವಹೇಳಿಸಿ ಐತಿಹಾಸಿಕ ವಿಷಯಗಳನ್ನು ತುಚ್ಛೀಕರಿಸಿ ಕುಹಕವಾಡಿದ್ದಾರೆ.

ಎಲ್ಲಾ ಬಲ್ಲ ನಾನೇ ಪರಮೇಶ್ವರ, ನಾನೇ ಸರ್ವಾಧಿಕಾರಿ, ನಾನು ಹೇಳಿದ್ದೇ ವೇದ, ನಾನು ಹೇಳಿದ್ದೇ ಶಾಸನ ಎಂದು ಅಧಿಕಾರವಿರದಿದ್ದರೂ ಚಲಾಯಿಸುತ್ತಿರುವ ಇವರಿಗೆ ಇವರದೇ ನಾಮೈತಿಹಾಸವನ್ನು ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯವಲ್ಲದೆ ಇವರ ಕಾಯಕ ವಾಹಿ ಅನುವಂಶೀಯತೆಯ ಕಿಂದರಿಯಲ್ಲಿ ಊದುವ ತುಚ್ಛೀಕರಣವನ್ನು ಒಂದೊಂದಾಗಿ ಛೇದಿಸಿ ನೋಡುವುದು ಇಂದಿನ ಲಿಂಗವಂತರಲ್ಲದೆ ಪ್ರತಿಯೊಬ್ಬ ಭಾರತೀಯರ ಸಾಮಾ ಜಿಕ ಅನಿವಾರ್ಯತೆಯಾಗಿದೆ.

ಏಕೆಂದರೆ ಇಂದಿನ ವಿದ್ಯುನ್ಮಾನ ಯುಗದಲ್ಲಿ ಭಾರತದ ಒಂದು ಅತ್ಯಂತ ಪ್ರಮುಖ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿದ್ದ ವ್ಯಕ್ತಿ ಇಂಥ ಕ್ಷುಲ್ಲಕ ತಿಳಿವಳಿಕೆಯವರಾಗಿದ್ದರು, ಹಾಗಾಗಿ ಇದನ್ನು ಜವಾಬ್ದಾರಿಯುತ ಸಮಾಜವು ಸಾಕ್ಷಿ ಪುರಾವೆ ಸಮೇತ ಅವರನ್ನು ಪ್ರಶ್ನಿಸಿ ಖಂಡಿಸಿತ್ತು ಎಂದು ದಾಖಲಿಸುವುದು ಜವಾಬ್ದಾರಿಯುತ ಪತ್ರಿಕಾ ಧರ್ಮ.

ಹಾಗಾಗಿ ‘ವಿಶ್ವವಾಣಿ’ಯು ತನ್ನ ‘ಬಸವ ಮಂಟಪ’ ಅಂಕಣದ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾಧ್ಯಮ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಶ್ರೀ ಜಾಮ್ದಾರರು ಕನ್ನಡದ ಟಿವಿ ಮಾಧ್ಯಮವೊಂದರಲ್ಲಿ ನಿರೂಪಕರ ಜತೆಗಿನ ಸಂವಾದದಲ್ಲಿ “ನಾನು ಎಂದೂ ಹಿಂದೂ ಧರ್ಮದ ಅವಹೇಳನ ಮಾಡಿಲ್ಲ" ಎಂದರು.

ಹಾಗಾಗಿ ಅವರು ಹಿಂದೆ ಅವಹೇಳಿಸಿದ ಕೆಲವು ವಿಷಯಗಳನ್ನು ಇಲ್ಲಿ ಹೆಕ್ಕಿ ಅವರಿಗೆ ಜ್ಞಾಪಿಸುವುದಲ್ಲದೆ ಅವರ ಜ್ಞಾನ ಭಂಡಾರವನ್ನು ಕೊಂಚ ಉಜ್ವಲಗೊಳಿಸೋಣ. ಮೊದಲಿಗೆ ಶ್ರೀ ಜಾಮ್ದಾರರು ಬಸವ ವಿಸ್ಮೃತಿ ಅಭಿಯಾನದಲ್ಲಿ, “ಕಾಳಾಮುಖ ಎಂದರೆ ಮುಖಕ್ಕೆ ಮಸಿ ಬಳಿದುಕೊಳ್ಳುವವರು. ಅಂಥ ಕಾಳಾಮುಖ ಹಿನ್ನೆಲೆಯ ವೀರಶೈವ ಮಠಾಽಶರು ಮುಖಕ್ಕೆ ಮಸಿ ಬಳಿಸಿಕೊಳ್ಳಲಿ" ಎಂದು ಕರ್ನಾಟಕದ ಸಕಲ ಮಠಗಳ ಇತಿಹಾಸವನ್ನು ಅವಹೇಳಿಸಿ ಫರ್ಮಾನು ಹೊರಡಿಸಿದ್ದಾರೆ.

ಹಾಗಾಗಿ ಈ ಕುರಿತು ಅವರ ತೆಳು ಸಂಶೋಧನೆಯ ತೇಲು ಜ್ಞಾನವನ್ನು ಗಂಭೀರವಾಗಿ ಅವಲೋಕಿಸೋಣ. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಶೋಧನಾ ವಲಯದ ನಿರೂಪಿತ ನಿಜಾರ್ಥದಲ್ಲಿ ಕಾಳಾಮುಖರು ಎಂದರೆ ಯಾರು? ಕರ್ನಾಟಕದ ಸಾಕಷ್ಟು ಮಠಮಾನ್ಯ ಗಳು, ದೇವಸ್ಥಾನಗಳ ಶಿಲಾಶಾಸನ, ದತ್ತಿ ಶಾಸನಗಳಲ್ಲಿ ಕಾಳಾಮುಖರಿಗೆ ಕೊಟ್ಟದ್ದು, ಕಟ್ಟಿಸಿದ್ದು ಎಂಬ ಉಲ್ಲೇಖಗಳಿವೆ.

ಕಾಳಾಮುಖ ಗುರುಗಳನ್ನು ರಾಜಗುರುಗಳು ಎಂದು ಕರೆಯಲಾಗಿದೆ. ವೀರಶೈವ ಪುನರು ತ್ಥಾನಕ್ಕೆ ಸಮಗ್ರ ಬೆಂಬಲ ನೀಡಿದ ಕರ್ನಾಟಕ (ವಿಜಯ ನಗರ) ಸಾಮ್ರಾಜ್ಯದ ಸಂಸ್ಥಾಪನೆಗೆ ಗುರುವಾಗಿ ಅನುಗ್ರಹಿಸಿದವರೇ ಕಾಳಾಮುಖರ ಕ್ರಿಯಾಶಕ್ತಿ ಎಂಬ ರಾಜಗುರು! ಹಾಗಾಗಿಯೇ ಈ ಸಾಮ್ರಾಜ್ಯವು ಗುರುವಿಗೆ ಚಿರಋಣಿಯಾಗಿ ಲಿಂಗವಂತ ಕಾಳಾಮುಖ-ವೀರಶೈವ ಧರ್ಮದ ಪುನರುತ್ಥಾನಕ್ಕಾಗಿ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದುದು.

ಹಾಗಾಗಿಯೇ ಕಳೆದುಹೋಗಿದ್ದ ಕಾಳಾಮುಖ ಜಂಗಮನಾದ ಬಸವಣ್ಣನ ಇತಿಹಾಸ, ಈ ಸಾಮ್ರಾಜ್ಯದ ಆಡಳಿತದ ಕಾಲಾವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದದ್ದು. ಇರಲಿ, ಕಾಳಾಮುಖರು ಹಣೆಯ ಮೇಲೆ ಮತ್ತು ದೇಹದ ಮೇಲೆ ಭಸ್ಮ ಧರಿಸುತ್ತಿದ್ದರೆಂದು ಉಲ್ಲೇಖ ಗಳಿವೆಯೇ ಹೊರತು ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದರು ಎಂದು ಯಾವುದೇ ಶಿಲಾ ಶಾಸನಗಳಲ್ಲಿ ಉಲ್ಲೇಖವಿಲ್ಲ.

ಸಂಶೋಧಕ ರಾದ ಟಿ.ಎ.ಜಿ ರಾವ್ ಅವರ Elements of Hindu Iconography ಕೃತಿಯಲ್ಲಿ ಇವರು ಹಣೆಯ ಮೇಲೆ ಭಸ್ಮದ ಜತೆಗೆ ಕಪ್ಪನೆಯ ತಿಲಕವನ್ನು ಇಟ್ಟುಕೊಳ್ಳುತ್ತಿದ್ದರು ಎಂದಿದೆಯೇ ಹೊರತು ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದರು ಎಂದಿಲ್ಲ. ಅನೇಕ ಶಿವಾಲಯಗಳಲ್ಲಿ ಕಾರ್ತಿಕ ಮಾಸದಲ್ಲಿ ಕೊಬ್ಬರಿ ಸುಟ್ಟು, ತೈಲಾಭಿಷೇಕ ಮಾಡಿ ಜಿಡ್ಡು ಗಟ್ಟಿದ ಕರಟವನ್ನು ಶೇಖರಿಸಿಟ್ಟಿರುತ್ತಾರೆ.

ಮಂಗಳಾರತಿಯ ನಂತರ ಈ ಕರಟವನ್ನೇ ಹಣೆಗೆ ಧರಿಸಿಕೊಳ್ಳಲು ಕೊಡುವ ಪರಿಪಾಠವಿದೆ. ದು ಸಹ ಕಪ್ಪು ಬಣ್ಣದ್ದೇ ಆಗಿರುವ ಕಾರಣ ಇದು ಸಾಮಾನ್ಯ ಪೂಜಾವಿಧಿ ವಿಧಾನದ ಅಂಗವಾಗಿತ್ತೇ ಹೊರತು ಜಾಮದಾರರು ಹೇಳುವಂತೆ ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದ ರೆಂತಲೂ ಅಲ್ಲ, ಕಾಳಾಮುಖರ ಪ್ರಮುಖ ಲಾಂಛನವಾಗಿಯೂ ಅಲ್ಲ!

(ಮುಂದುವರಿಯುವುದು)