ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕುಸಿತದ ಬೆತ್ತಲೆ ಸತ್ಯ

ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನ ತರಗತಿಗಳ ಖಾಲಿ ಬೆಂಚುಗಳನ್ನು ದಿಟ್ಟಿಸಿ ನೋಡಿದರೆ, ಅಲ್ಲಿ ದಡ್ಡತನವಿಲ್ಲ, ಬದಲಾಗಿ ಹಸಿವು, ಅಸಹಾಯಕತೆ ಮತ್ತು ಬದುಕಿನ ಹೋರಾಟ ಎದ್ದು ಕಾಣು ತ್ತದೆ. ಶೈಕ್ಷಣಿಕ ಕುಸಿತದ ಅಸಲಿ ಬೇರುಗಳು ಯಾವುದೇ ಒಂದು ಪ್ರದೇಶದ ಶೈಕ್ಷಣಿಕ ಹಿನ್ನಡೆಯನ್ನು ಕೇವಲ ಪಠ್ಯಪುಸ್ತಕಗಳ ಗುಣಮಟ್ಟದಿಂದಾಗಲಿ ಅಥವಾ ಬೋಧನಾ ವಿಧಾನದಿಂದಾಗಲಿ ಅಳೆಯು ವುದು ಮೇಲ್ನೋಟದ ತೀರ್ಮಾನವಾಗುತ್ತದೆ.

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕುಸಿತದ ಬೆತ್ತಲೆ ಸತ್ಯ

-

Profile
Ashok Nayak Apr 11, 2026 11:33 AM

ಅಭಿಮತ

ಶಿವರಾಜ ಸೂ. ಸಣಮನಿ

ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗಲೂ ಕರಾವಳಿಯ ಜಿಗಳು ಸಂಭ್ರಮದ ಮಳೆಯಲ್ಲಿ ನೆನೆಯುತ್ತಿದ್ದರೆ, ಇತ್ತ ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಫಲಿತಾಂಶದ ಪಟ್ಟಿಯ ತಳದಲ್ಲಿ ನಿಂತು ತಲೆತಗ್ಗಿಸುತ್ತವೆ. ಮಾಧ್ಯಮಗಳು ಇದನ್ನು ಕೇವಲ ಶೈಕ್ಷಣಿಕ ಹಿನ್ನಡೆ ಎಂದು ವ್ಯಾಖ್ಯಾನಿಸಿ, ಒಂದೆರಡು ದಿನ ಚರ್ಚೆ ನಡೆಸಿ ಕೈತೊಳೆದುಕೊಳ್ಳುತ್ತವೆ.

ವಾಸ್ತವದಲ್ಲಿ, ಈ ಕೊನೆಯ ಸ್ಥಾನ ವಿದ್ಯಾರ್ಥಿಗಳ ಬೌದ್ಧಿಕ ದಿವಾಳಿತನವಲ್ಲ. ಇದು ದಶಕಗಳಿಂದ ನಮ್ಮ ನಡುವೆಯೇ ಬೇರೂರಿರುವ ವ್ಯವಸ್ಥಿತ ನಿರ್ಲಕ್ಷ್ಯದ ‘ಸಾಮಾಜಿಕ ಮರಣೋತ್ತರ ಪರೀಕ್ಷೆ’ಯ ವರದಿಯಾಗಿದೆ.

ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನ ತರಗತಿಗಳ ಖಾಲಿ ಬೆಂಚುಗಳನ್ನು ದಿಟ್ಟಿಸಿ ನೋಡಿದರೆ, ಅಲ್ಲಿ ದಡ್ಡತನವಿಲ್ಲ, ಬದಲಾಗಿ ಹಸಿವು, ಅಸಹಾಯಕತೆ ಮತ್ತು ಬದುಕಿನ ಹೋರಾಟ ಎದ್ದು ಕಾಣುತ್ತದೆ. ಶೈಕ್ಷಣಿಕ ಕುಸಿತದ ಅಸಲಿ ಬೇರುಗಳು ಯಾವುದೇ ಒಂದು ಪ್ರದೇಶದ ಶೈಕ್ಷಣಿಕ ಹಿನ್ನಡೆಯನ್ನು ಕೇವಲ ಪಠ್ಯಪುಸ್ತಕಗಳ ಗುಣಮಟ್ಟದಿಂದಾಗಲಿ ಅಥವಾ ಬೋಧನಾ ವಿಧಾನ ದಿಂದಾಗಲಿ ಅಳೆಯುವುದು ಮೇಲ್ನೋಟದ ತೀರ್ಮಾನವಾಗುತ್ತದೆ. ಆದರೆ, ಅದರ ಅಸಲಿ ಕಾರಣಗಳನ್ನು ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಹುಡುಕಬೇಕಾಗುತ್ತದೆ.

ಇದನ್ನೂ ಓದಿ: Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಕಲ್ಯಾಣ ಕರ್ನಾಟಕದ ಪಿಯುಸಿ ಫಲಿತಾಂಶದ ರಕ್ತಹೀನತೆಗೆ ಕಾರಣವಾಗಿರುವ ಪ್ರಮುಖ ಸಾಮಾಜಿಕ ರೋಗಲಕ್ಷಣಗಳು ಎಂದರೆ ಬರಗಾಲ ಮತ್ತು ಗುಳೆ. ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ಈ ಭಾಗದಲ್ಲಿ ಬರಗಾಲವೆಂಬುದು ಕರೆಯದೆ ಬರುವ ಅತಿಥಿ.

ಜಮೀನುಗಳು ಬಿರುಕು ಬಿಟ್ಟಾಗ, ಬದುಕು ಕಟ್ಟಿಕೊಳ್ಳಲು ಇಡೀ ಕುಟುಂಬ ಬೆಂಗಳೂರು, ಮುಂಬೈ, ಪುಣೆ ಗಳತ್ತ ‘ಗುಳೆ’ ಹೊರಡುತ್ತದೆ. ತಂದೆ-ತಾಯಿಯ ಬೆನ್ನೇರಿ ಗುಳೆ ಹೋಗುವ ಮಕ್ಕಳ ಭವಿಷ್ಯವು, ಬಸ್ಸಿನ ಟಾಪ್‌ಲ್ಲಿ ಕಟ್ಟಿದ ಗಂಟುಮೂಟೆಯಂತಾಗುತ್ತದೆ. ತಿಂಗಳುಗಟ್ಟಲೆ ಶಾಲೆಗೆ ಗೈರಾಗುವ, ಊರೂರು ಅಲೆಯುವ ಮಗುವಿನಿಂದ ರ‍್ಯಾಂಕ್ ನಿರೀಕ್ಷಿಸುವುದು ವ್ಯವಸ್ಥೆಯ ಕ್ರೂರ ಹಾಸ್ಯವಲ್ಲದೆ ಮತ್ತೇನು? ಬಡತನ ಮತ್ತು ಸಾಲದ ಶೂಲ: ಆರ್ಥಿಕ ಭದ್ರತೆ ಇಲ್ಲದ ಮನೆಯಲ್ಲಿ, ಶಿಕ್ಷಣವೆಂಬುದು ಇಂದಿಗೂ ಗಗನ ಕುಸುಮವಾಗಿದೆ. ಸಾಲದ ಸುಳಿಗೆ ಸಿಲುಕಿದ ರೈತ ನೇಣಿಗೆ ಶರಣಾದರೆ, ಆ ಮನೆಯ ಮಗನ ಕೈಯಲ್ಲಿ ಪೆನ್ನಿನ ಬದಲು ಗುದ್ದಲಿ, ಸಲಿಕೆ ಬಂದು ಸೇರುತ್ತವೆ.

ಸರಾಯಿ: ಈ ಭಾಗದ ಹಳ್ಳಿಗಳನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗು ಮದ್ಯವ್ಯಸನ. ಅಪ್ಪನ ಕುಡಿತದ ಚಟಕ್ಕೆ, ಮನೆಯ ನೆಮ್ಮದಿ ಮಾತ್ರವಲ್ಲ, ಮಕ್ಕಳ ಅಕ್ಷರಗಳೂ ಬಲಿಯಾಗುತ್ತಿವೆ. ಬಾಲ ಕಾರ್ಮಿಕ ಪದ್ಧತಿ ಮತ್ತು ಅನಕ್ಷರತೆ: ಪೋಷಕರಲ್ಲಿರುವ ಅನಕ್ಷರತೆಯಿಂದಾಗಿ ಶಿಕ್ಷಣದ ಮಹತ್ವ ಮುಂದಿನ ಪೀಳಿಗೆಗೆ ಸರಿಯಾಗಿ ದಾಟುತ್ತಿಲ್ಲ.

ಬಾಲ್ಯ ವಿವಾಹದ ಬೇಡಿ: ಹೆಣ್ಣುಮಕ್ಕಳ ಪಾಲಿಗೆ ಶಿಕ್ಷಣವೆಂಬುದು ಇಂದಿಗೂ ತ್ರಿಶಂಕು ಸ್ಥಿತಿ. ಪ್ರತಿಭಾವಂತ ಹೆಣ್ಣುಮಕ್ಕಳನ್ನು ಪರೀಕ್ಷಾ ಕೊಠಡಿಯಿಂದ ನೇರವಾಗಿ ಹಸೆಮಣೆಗೆ ಎಳೆತರುತ್ತಿದೆ. ಇದು ಅಂಕಗಳ ಕೊರತೆಯಲ್ಲ, ಅನ್ನದ ಕೊರತೆ; ಇದು ಬುದ್ಧಿಯ ಕೊರತೆಯಲ್ಲ, ಬದುಕಿನ ಭದ್ರತೆ ಯ ಕೊರತೆ. ವ್ಯವಸ್ಥೆಯ ಕನ್ನಡಿಯೊಳಗಿನ ಗಂಟು 371(ಜೆ) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ಅದು ಬಹುಪಾಲು ಉದ್ಯೋಗ ಮತ್ತು ನೇಮಕಾತಿಯ ಮೀಸಲಾತಿಗೆ ಸೀಮಿತವಾಗಿ ದೆಯೇ ಹೊರತು, ತಳಮಟ್ಟದ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿಲ್ಲ.

ಶಾಲೆಗಳಿಗೆ ಬಣ್ಣ ಬಳಿದರೆ, ಸ್ಮಾರ್ಟ್ ಕ್ಲಾಸ್ ತಂದರೆ ಶಿಕ್ಷಣ ಸುಧಾರಿಸುವುದಿಲ್ಲ. ಪಾಠ ಕೇಳುವ ಮಗುವಿನ ಹೊಟ್ಟೆಯಲ್ಲಿ ಅನ್ನ, ಕಣ್ಣಿನಲ್ಲಿ ಭರವಸೆ ಇರಬೇಕು. ತರಗತಿಗಳಿಗೆ ಗೈರಾಗುವ ವಿದ್ಯಾರ್ಥಿ ಗಳನ್ನು ಕೇವಲ ಹಾಜರಾತಿ ಪುಸ್ತಕದಲ್ಲಿ ಗೈರು ಎಂದು ಗುರುತಿಸುವ ಬದಲು, ಅವರು ಏಕೆ ಗೈರಾಗಿದ್ದಾರೆ ಎಂಬ ‘ಮೂಲ ಕಾರಣ’ವನ್ನು ಹುಡುಕುವ ಸಾಮಾಜಿಕ ಕಾಳಜಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಬೇಕಿದೆ. ಈ ಕಳಪೆ ಫಲಿತಾಂಶವನ್ನು ಬದಲಾಯಿಸಲು ಕೇವಲ ಪರೀಕ್ಷಾ ಸಮಯದಲ್ಲಿ ‘ವಿಶೇಷ ತರಗತಿ’ಗಳನ್ನು ತೆಗೆದುಕೊಂಡರೆ ಸಾಲದು; ವರ್ಷಪೂರ್ತಿ ‘ವಿಶೇಷ ಕಾಳಜಿ’ಯನ್ನು ತೆಗೆದುಕೊಳ್ಳಬೇಕಿದೆ.

ಕಲ್ಯಾಣ ಕರ್ನಾಟಕದ ನೆಲದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಈ ನೆಲದ ಮಕ್ಕಳಿಗೆ ಬೇಕಾಗಿರುವುದು ಅನುಕಂಪವಲ್ಲ, ಸಮಾನ ಅವಕಾಶ. ಅವರ ಕಾಲಿಗೆ ಕಟ್ಟಿರುವ ಬಡತನ, ಗುಳೆ, ಮತ್ತು ಸಾಲದ ಸರಪಳಿಗಳನ್ನು ತುಂಡರಿಸಿದರೆ, ನಾಳೆ ಅದೇ ಮಕ್ಕಳು ಫಲಿತಾಂಶದ ಪಟ್ಟಿಯಲ್ಲಿ ಶಿಖರವೇರಿ ನಿಲ್ಲಬಲ್ಲರು. ಆ ದಿನವೇ ನಿಜವಾದ ‘ಕಲ್ಯಾಣ’ ಕರ್ನಾಟಕದ ಉದಯ.