Srivathsa Joshi Column: ತಪಸ್ವಿನಿ ವೃದ್ಧಕನ್ಯೆ ಪ್ರಥಮರಾತ್ರಿಗಷ್ಟೇ ತರುಣಿಯಾದಳು !
ಓದಿ ಅರ್ಥ ಮಾಡಿಕೊಂಡು ಅನುಸರಿಸಿದರೆ ಪುಣ್ಯವಿದೆ. ಸಾಹಿತ್ಯಿಕ ಶ್ರೀಮಂತ ಪದಪುಂಜಗಳಿಂದ ಕಥೆಯನ್ನು ಆರಂಭಿಸುವುದಾದರೆ- ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿಗಾರ್ಗ್ಯ ಎಂಬ ಬ್ರಹ್ಮಋಷಿಯಿದ್ದನು. ಕುಣಿ ಎಂದರೆ ಗಿಡ್ಡ ಎಂಬರ್ಥ, ಗರ್ಗ ಋಷಿಯ ವಂಶದವ ನಾದ್ದರಿಂದ ಗಾರ್ಗ್ಯ. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ, ಸುಂದರ ಹುಬ್ಬಿನ ಮಗಳೋರ್ವ ಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.


ತಿಳಿರು ತೋರಣ
srivathsajoshi@yahoo.com
ಅಪ್ಪ ಮಹಾತಪಸ್ವಿಯಾದರೆ ಅವನ ಮಾನಸಪುತ್ರಿಯದು ಅಪ್ಪನನ್ನೂ ಮೀರಿಸಿದ ತಪಃಶಕ್ತಿ. ಇದು ಕುಣಿಗಾರ್ಗ್ಯ ಎಂಬ ಬ್ರಹ್ಮರ್ಷಿ ಮತ್ತವನ ಮಾನಸಪುತ್ರಿ ಸುಲಭಾಮೈತ್ರೇಯಿಯ ಕಥೆ. ಮಹಾಭಾರತದ ಶಲ್ಯಪರ್ವದಲ್ಲಿ ಬರುತ್ತದೆ. ಜೀವನದಲ್ಲಿ ರೀತಿನೀತಿಗಳನ್ನು ಗೌರವಿಸುವುದು ಮತ್ತು ಪಾಲಿಸುವುದರ ಮಹತ್ತ್ವ ಅಷ್ಟೇ ಅಲ್ಲದೆ ನೀತಿನಿಯಮಗಳನ್ನು ಮುರಿಯಲಿಕ್ಕೆ ನಾವೇಕೆ ಹಾತೊರೆಯುತ್ತೇವೆ ಎಂಬುದಕ್ಕೆ ಸಂಬಂಧಿಸಿದಂತೆ ಇದರಲ್ಲಿ ನಮಗೆಲ್ಲರಿಗೂ ದೊಡ್ಡದೊಂದು ಪಾಠವಿದೆ.
ಓದಿ ಅರ್ಥ ಮಾಡಿಕೊಂಡು ಅನುಸರಿಸಿದರೆ ಪುಣ್ಯವಿದೆ. ಸಾಹಿತ್ಯಿಕ ಶ್ರೀಮಂತ ಪದಪುಂಜಗಳಿಂದ ಕಥೆಯನ್ನು ಆರಂಭಿಸುವುದಾದರೆ- ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿಗಾರ್ಗ್ಯ ಎಂಬ ಬ್ರಹ್ಮಋಷಿಯಿದ್ದನು. ಕುಣಿ ಎಂದರೆ ಗಿಡ್ಡ ಎಂಬರ್ಥ, ಗರ್ಗ ಋಷಿಯ ವಂಶದವ ನಾದ್ದರಿಂದ ಗಾರ್ಗ್ಯ. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ, ಸುಂದರ ಹುಬ್ಬಿನ ಮಗಳೋರ್ವಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು. ಅವಳಿಗೆ ಸುಲಭಾಮೈತ್ರೇಯೀ ಎಂದು ಹೆಸರಿಟ್ಟನು.
ಅನುಪಮ ಲಾವಣ್ಯವತಿಯಾದ ಅವಳನ್ನು ನೋಡಿ ಮಹಾಯಶಸ್ವಿ ಕುಣಿಗಾರ್ಗ್ಯನು ರಮಪ್ರೀತ ನಾದನು. ತನ್ನಲ್ಲಿದ್ದ ಸಕಲ ವಿದ್ಯೆಗಳನ್ನೂ ಶಾಸಗಳನ್ನೂ ಮಗಳಿಗೆ ಧಾರೆಯೆರೆದನು. ಯಜ್ಞ ಯಾಗಾದಿ ವಿಧಿವಿಧಾನಗಳನ್ನೂ ಅವಳಿಗೆ ಕಲಿಸಿದನು. ತಂದೆಯನ್ನು ಅನುಸರಿಸುತ್ತ ಅವಳೊಬ್ಬ ತಪಸ್ವಿನಿಯೇ ಆಗಿ ಬೆಳೆದಳು.
ಪ್ರಾಪ್ತವಯಸ್ಕಳಾದ ಮೇಲೆ ಅವಳನ್ನೊಬ್ಬ ತೇಜಸ್ವಿ ಋಷಿಕುಮಾರನಿಗೆ ಕೊಟ್ಟು ಮದುವೆ ಮಾಡಿ ಕೊಡಬೇಕೆಂದು ಕುಣಿಗಾರ್ಗ್ಯ ಋಷಿಯ ಆಕಾಂಕ್ಷೆಯಿದ್ದದ್ದು. ಆದರೆ ಎಷ್ಟು ವರರನ್ನು ತೋರಿಸಿ ದರೂ ಯಾರಲ್ಲಿಯೂ ಅವಳಿಗೆ ಅನುರಾಗ ಉಂಟಾಗಲಿಲ್ಲ. ಕಮಲದ ಎಸಳುಗಳಂಥ ಕಣ್ಣುಗಳಿದ್ದ ಆ ಕಲ್ಯಾಣೀ ಅನಿಂದಿತೆಗೆ ಸಮನೆನಿಸಿದ ಪತಿ ದೊರಕಲೇ ಇಲ್ಲ.
ಇದನ್ನೂ ಓದಿ: Srivathsa Joshi Column: ಮಹಾಭಾರತ ಕಥೆ ಹೆಣೆಯಲಿಕ್ಕೆ ಹಾವುಗಳೇ ಹಗ್ಗವಾದುವೇ ?
ಆದ್ದರಿಂದ ಸುಲಭಾಮೈತ್ರೇಯಿ ಕನ್ಯೆಯಾಗಿಯೇ ಉಳಿದಳು. ಕುಣಿಗಾರ್ಗ್ಯನು ಇನ್ನು ತನ್ನ ಆಯುಷ್ಯ ಮುಗಿಯಿತೆಂದು ದೇಹ ತ್ಯಜಿಸಿ ಸ್ವರ್ಗಕ್ಕೆ ತೆರಳಿದನು. ಸುಲಭಾಮೈತ್ರೇಯಿ ಅದೇ ಆಶ್ರಮ ವನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡು ತಪಸ್ಸಿಗೆ ತೊಡಗಿದಳು. ಮೊದಲು ಪವಾಸಾದಿಗಳಿಂದ ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದಳು. ಬ್ರಹ್ಮಚಾರಿಣಿಯಾಗಿ ಜೀವನ ಸವೆಸಿದಳು.
ನಿರ್ಜನವನದಲ್ಲಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತಳಾಗಿ ತಪಸ್ಸಿನಿಂದ ತನ್ನ ದೇಹವನ್ನು ಪೀಡಿಸಿಕೊಂಡಳು. ಕ್ರಮೇಣ ಅವಳ ತಪಸ್ಸು ಮತ್ತಷ್ಟು ಕಠಿಣವಾಗಿ ದೀರ್ಘಕಾಲದವರೆಗೆ ನಡೆಯಿತು. ತನ್ನನ್ನು ಕೃತಕೃತ್ಯಳೆಂದು ಭಾವಿಸಿದ್ದರೂ ಶ್ರಮಾನ್ವಿತಳಾದ ಸುಲಭಾಮೈತ್ರೇಯಿ ವರ್ಷಗಳು ಕಳೆದಂತೆ ವೃದ್ಧಾಪ್ಯದಿಂದ ಕೃಶಳಾದಳು. ಆಶ್ರಮದಲ್ಲಿ ಸುಲಭವಾಗಿ ಅತ್ತಿಂದಿತ್ತ ಓಡಾಡಲಿಕ್ಕೆ ಅಸಮರ್ಥಳಾಗುವಷ್ಟು ಅವಳಲ್ಲಿ ಮುಪ್ಪಡರಿತು.
ಆದರೂ ತಪಸ್ಸಿನ ಮೇಲಿನ ಅವಳ ನಂಬಿಕೆ ಅಚಲವಾಗಿಯೇ ಉಳಿದಿತ್ತು. ಅವಳ ವೃದ್ಧಾವಸ್ಥೆ ಯನ್ನು ನೋಡಿ ಜನರು ಅವಳನ್ನು ‘ವೃದ್ಧಕನ್ಯೆ’, ‘ವೃದ್ಧ ತಪಸ್ವಿನಿ’ ಎಂದೆಲ್ಲ ಕರೆಯಲಾ ರಂಭಿಸಿದರು. ಆಕೆ ತನ್ನದೇ ದೇಹದಿಂದ ದೂರ ಸರಿಯುತ್ತಿದ್ದಾಳೇನೋ ಎಂದು ಭಾಸವಾಗುತ್ತಿತ್ತು. ಆದರೆ ಆಕೆಯ ಅಂತರಾತ್ಮ ಮಾತ್ರ ಇನ್ನಷ್ಟು ಸಾಧನೆಯತ್ತ ಮುಖ ಮಾಡಿತ್ತು. ಆದ್ದರಿಂದ ತಪಸ್ಸನ್ನು ಮುಂದುವರಿಸಿದ್ದಳು.
ಒಂದು ದಿನ, ತಾನು ಹಾಸಿಗೆಯಿಂದ ಸಹಾಯವಿಲ್ಲದೆ ಎದ್ದು ನಿಲ್ಲಲಾಗದ ಸ್ಥಿತಿಗೆ ಬಂದಿದ್ದುದನ್ನು ಕಂಡು ಅವಳಿಗೆ ಆಘಾತವಾಯ್ತು. ಬ್ರಹ್ಮಮುಹೂರ್ತದಲ್ಲಿ ಎದ್ದು ತನ್ನ ನಿತ್ಯಕ್ರಮಗಳನ್ನು ಪ್ರಾರಂಭಿಸುವುದು ಅವಳಿಂದ ಸಾಧ್ಯವಾಗಲಿಲ್ಲ. ಅಲ್ಲಿಯವರೆಗೆ ಯಾರನ್ನೂ ಅವಲಂಬಿಸ ದಿದ್ದವಳಿಗೆ ಅದೊಂದು ತೀವ್ರ ಸಂಕಟದ ಕ್ಷಣವೇ ಆಗಿತ್ತು. ಎರಡನೆಯ ದಿನದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.
ಹಾಸಿಗೆಯಿಂದೆದ್ದು ಒಂದುಹೆಜ್ಜೆ ಮುಂದಿಡುವುದೂ ಅಸಾಧ್ಯವಾಯಿತು. ತಪಸ್ಸಿಲ್ಲದೆ, ವ್ರತವಿಲ್ಲದೆ, ತಾನು ಬದುಕಿರುವುದೇ ವ್ಯರ್ಥವೆಂದು ತಿಳಿದುಕೊಂಡಳು. ಭೂಮಿಗೆ ಭಾರವಾಗಿ ಇರುವುದಕ್ಕಿಂತ ಈಗಿಂದೀಗಲೇ ದೇಹ ತ್ಯಜಿಸಬೇಕು ಎಂಬ ನಿರ್ಣಯಕ್ಕೆ ಬಂದಳು. ತನ್ನ ತಪಸ್ಸಿನ ಬಲ ಮತ್ತು ಫಲಗಳಿಂದಾಗಿ ಸದ್ಗತಿ ಸಿಗುವುದೆಂದು ಅವಳು ನಂಬಿದ್ದಳು.
ಹಾಗೆ ವೃದ್ಧಕನ್ಯೆ ದೇಹ ತ್ಯಜಿಸಲು ನಿರ್ಧರಿಸಿದ ಕ್ಷಣದಲ್ಲೇ ನಾರದ ಮಹರ್ಷಿ ಆಕೆಯ ಆಶ್ರಮಕ್ಕೆ ಆಗಮಿಸಿದರು. ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಅವರು ಬರುತ್ತಿದ್ದಂತೆ ಆಶ್ರಮ ಒಮ್ಮಿಂದೊಮ್ಮೆಲೇ ಬೆಳಗಿತು. ದೇವಲೋಕದಿಂದ ಸಂದೇಶವಾಹಕನೆಂಬಂತೆ ಬಂದ ನಾರದ ಮಹರ್ಷಿಯನ್ನು ಸ್ವಾಗತಿಸಲು ವೃದ್ಧಕನ್ಯೆ ಕಷ್ಟಪಟ್ಟು ಎದ್ದು ನಿಂತಳು.
ಗೌರವ ಸ್ವೀಕರಿಸಿ ಆಕೆಯ ಮನದಿಂಗಿತವನ್ನು ಅರಿತ ನಾರದ ಮಹರ್ಷಿ ಇಂತೆಂದರು: “ಅಯ್ಯೋ! ಶುದ್ಧಾತ್ಮೆ ಮಹಾತಪಸ್ವಿನಿಯೇ, ನಿನ್ನ ತಪಸ್ಸು ಮಹತ್ತರವಾದದ್ದು ಮತ್ತು ಗೌರವಾರ್ಹವಾದದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಲ್ಯದಿಂದಲೂ ತಪಸ್ಸಿನಲ್ಲೇ ತೊಡಗಿಸಿಕೊಂಡು ಬಾಳಿನುದ್ದಕ್ಕೂ ತಪಸ್ವಿನಿಯಾಗಿಯೇ ಇದ್ದು ಇದೀಗ ವಾರ್ಧಕ್ಯವನ್ನು ಹೊಂದಿರುವೆಯಾದರೂ ಸ್ತ್ರೀಯರಿಗೆ ಮುಖ್ಯವಾದ ವಿವಾಹಸಂಸ್ಕಾರದ ಮಟ್ಟಿಗೆ ನೀನು ಸಂಸ್ಕಾರಹೀನೆ.
ದೇವಲೋಕದ ದೇವತೆಗಳು ಹೇಳುವ ಪ್ರಕಾರ, ವಿವಾಹಸಂಸ್ಕಾರವನ್ನು ಪೂರೈಸದ ಕನ್ಯೆಗೆ ದೇವಲೋಕದ ಪುಣ್ಯದ ಸ್ಥಳಗಳಲ್ಲಿ ಸ್ಥಾನ ಸಿಗುವುದಿಲ್ಲ. ನಾನಿದನ್ನು ದೇವಲೋಕದಲ್ಲಿ ಚರ್ಚೆಯ ವೇಳೆ ಅನೇಕ ಬಾರಿ ಕೇಳಿದ್ದೇನೆ. ಆದ್ದರಿಂದ, ಅವಿವಾಹಿತೆಯಾದ ನಿನಗೆ ದೇವಲೋಕ ಪ್ರವೇಶ ಸಾಧ್ಯವಿಲ್ಲ!". ವೃದ್ಧಕನ್ಯೆಯು ನಾರದ ಮಹರ್ಷಿಯ ಮಾತುಗಳನ್ನೆಲ್ಲ ಶಾಂತ ಚಿತ್ತದಿಂದ ಕೇಳಿದಳು.
ಯಾವುದಕ್ಕೇ ಆದರೂ ವ್ಯಗ್ರವಾಗಿ ಪ್ರತಿಕ್ರಿಯಿಸುವ ಬದಲು ಮೃದುವಾಗಿ ಪ್ರತಿಸ್ಪಂದಿಸುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಮನಸ್ಸಲ್ಲೇ ಯೋಚಿಸಿದಳು: ತಾನು ತಪಸ್ಸನ್ನು ಯಾವುದೇ ಪ್ರತಿಫಲದ ಅಪೇಕ್ಷೆಯಿಂದ ಮಾಡಿದುದಲ್ಲ, ದೇವಲೋಕವನ್ನು ಪಡೆಯಬೇಕೆಂಬ ಆಶಯ ದಿಂದಂತೂ ಅಲ್ಲವೇಅಲ್ಲ. ಆದರೆ ಜೀವನದಲ್ಲಿ ಇನ್ನೂ ಏನಾದರೂ ಉಳಿದಿದ್ದರೆ, ಈ ಸತ್ತ್ವಪರೀಕ್ಷೆ ಯನ್ನು ಸಹ ವಿನಮ್ರತೆಯಿಂದಲೇ ಸ್ವೀಕರಿಸುತ್ತೇನೆ ಎಂದು.
ಅವಳು ತಪಸ್ಸಿನಲ್ಲಿ ಸದಾ ಉನ್ನತ ಚಿಂತನೆಯನ್ನೇ ಪಾಲಿಸುತ್ತಿದ್ದವಳು. ರೀತಿ ನೀತಿಗಳನ್ನು ಅನುಸರಿಸುವುದು ಆಕೆಗೆ ಚೆನ್ನಾಗಿ ಗೊತ್ತು. ಕಠಿಣ ವ್ರತನಿಯಮಗಳನ್ನು ಪಾಲಿಸಲಿಕ್ಕೆ ಅಪಾರ ಆತ್ಮಸ್ಥೈರ್ಯ, ಶಿಸ್ತು, ಸಂಯಮ ಮತ್ತು ಸ್ವನಿಯಂತ್ರಣ ಇರಬೇಕಾಗುತ್ತದೆಂದೂ ಬಲ್ಲಳು. ಆದರೆ ಈಗ, ಈ ಹೊಸ ಲೋಕನಿಯಮ ಪೂರೈಸಬೇಕಾದರೆ ಇತರರ ಸಹಕಾರವೂ ಅಗತ್ಯವಿತ್ತು.
ಅವಳು ಮನಸ್ಸಿನಲ್ಲೇ ಚರ್ಚಿಸಿ, ದೇವಲೋಕದ ಈ ನಿಯಮಗಳು ಬಹುಶಃ ಮನುಷ್ಯರ ಮತ್ತು ದೇವರ ನಡುವಿನ ಆಟಗಳೇ ಇರಬೇಕು, ವಿಧಿಲಿಖಿತ ಅಂದರೆ ಇದೇ ಇರಬೇಕು ಎಂದುಕೊಂಡಳು. ಆಸೆ-ಆಕಾಂಕ್ಷೆಗಳೇ ಎಲ್ಲ ಮಾನವಕರ್ಮಗಳ ಪ್ರೇರಕ. ಆಕೆಯಾದರೋ ತಪಸ್ವಿನಿಯಾಗಿ ಬ್ರಹ್ಮ ಸತ್ಯವನ್ನು ಹುಡುಕಿದವಳು. ಅವಳ ತಪಸ್ಸಿನಲ್ಲಿ ಆಧ್ಯಾತ್ಮಿಕ ಸಾಧನೆಯ ಏಕೈಕ ಧ್ಯೇಯವಿತ್ತೇ ಹೊರತು ಐಹಿಕ ಸುಖಲೋಲುಪತೆಯ, ಭಾಗ್ಯಸಂಚಯದ ಯಾವುದೇ ಬಯಕೆಗಳಿರುತ್ತಿರಲಿಲ್ಲ.
ಆದ್ದರಿಂದ ದೇವಲೋಕದ ನಿಯಮ ಅವಳಿಗೆ ಸ್ವಲ್ಪ ವಿಚಿತ್ರವಾಗಿಯೇ ಕಂಡಿತ್ತು. ಆದರೂ, ಮುಂದಿನ ಪ್ರಯಾಣದ ಗೊಂದಲ ಪರಿಹರಿಸಲು ಅವಳು ಅಲ್ಲಿ ನೆರೆದಿದ್ದ ಇತರ ಋಷಿಗಳೊಡನೆ ಒಮ್ಮೆ ಮಾತನಾಡಲು ನಿರ್ಧರಿಸಿದಳು.
“ಗೌರವಾನ್ವಿತ ಋಷಿಗಳೇ, ನಾನು ಈ ನಿಯಮವನ್ನು ಸ್ವೀಕರಿಸುತ್ತೇನೆ. ನನ್ನ ತಂದೆ ಬ್ರಹ್ಮರ್ಷಿ ಕುಣಿಗಾರ್ಗ್ಯರು ನನಗೆ ಬೋಧಿಸಿದ್ದ ಧರ್ಮದ ಮೂಲತತ್ತ್ವ ‘ಬಹುದ್ವಾರಸ್ಯ ಧರ್ಮಃ’ ಎಂದಿತ್ತು. ಧರ್ಮ ಬಹುರೂಪದ್ದು. ಸತ್ಯ, ದಯೆ, ತಪಸ್ಸು, ಶೌಚ, ತಿತಿಕ್ಷೆ (ಸಹನೆ), ಶಮ, ದಮ, ಅಹಿಂಸೆ, ಬ್ರಹ್ಮಚರ್ಯ, ತ್ಯಾಗ, ಸಂತೋಷ, ಆತ್ಮವಿಮರ್ಶೆ, ಆತ್ಮಸಮರ್ಪಣ... ಎಲ್ಲವೂ ಧರ್ಮವೇ.
ದೇವತೆಗಳ ನಿಯಮವನ್ನು ನಾನೊಂದು ತಪಸ್ಸು ಅಥವಾ ತಿತಿಕ್ಷೆಯೆಂಬಂತೆ ಸ್ವೀಕರಿಸುತ್ತೇನೆ. ಅಲ್ಲದೇ ದೇವಲೋಕದಲ್ಲಿ ಅಂಥ ನಿಯಮಗಳಿರುವುದರ ಹಿಂದೆ ಏನಾದರೂ ಕಾರಣವೂ ಖಂಡಿತ ಇದ್ದೇಇರುತ್ತದೆ. ಭೂಲೋಕದಲ್ಲಿ ಹೇಗೆ ನಾವೆಲ್ಲ ನೀತಿನಿಯಮಗಳನ್ನು ಪಾಲಿಸಿ ಬದುಕಬೇಕೆಂದು ಬಯಸುತ್ತೇವೋ ದೇವಲೋಕದಲ್ಲಿಯ ಆಚರಣೆಗಳು ಮತ್ತು ಅವುಗಳ ಸಂಕೀರ್ಣತೆಯನ್ನೂ ನಾನು ಅಷ್ಟೇ ಪ್ರಮಾಣದಲ್ಲಿ ಗೌರವಿಸುತ್ತೇನೆ..." ಎಂದು ವೃದ್ಧಕನ್ಯೆ ಹೇಳಿದಾಗ, ಸಭೆಯಲ್ಲಿದ್ದ ಒಬ್ಬ ಋಷಿ ಎದ್ದು ಹೇಳಿದರು: “ವೃದ್ಧಕನ್ಯೆ, ನಾವು ಈ ನಿಯಮಗಳನ್ನು ರೂಪಿಸಿದ್ದಲ್ಲ.
ಆದರೆ ಅವುಗಳ ಪಾಲನೆ ಮಾಡಬೇಕೆಂಬ ಹೊಣೆ ನಮ್ಮದು." ವೃದ್ಧಕನ್ಯೆ ಮುಂದುವರಿದು “ನಾನು ಭೂಲೋಕದ ನಿಯಮಗಳಿಗೆ ಬದ್ಧಳಾಗಿದ್ದಂತೆ, ದೇವಲೋಕಕ್ಕೂ ಬದ್ಧಳಾಗುತ್ತೇನೆ. ಆದರೆ ನಿಯಮ ಗಳು ಸತ್ಯ ಮತ್ತು ನೈತಿಕತೆಯೊಂದಿಗೆ ಇರುವುದು ಮುಖ್ಯ. ದೇವತೆಗಳು ಈ ನಿಯಮಗಳನ್ನು ಏಕೆ ರೂಪಿಸಿದರು ಎಂಬ ಪ್ರಶ್ನೆಯನ್ನು ವಿಚಾರಿಸಬೇಕೆಂದು ನಾನು ವಿನಂತಿಸುತ್ತೇನೆ.
ನೀವೆಲ್ಲ ನೋಡುತ್ತಿರುವಂತೆ ನಾನು ವೃದ್ಧಕನ್ಯೆ. ಕುಣಿಗಾರ್ಗ್ಯರ ಮಾನಸಪುತ್ರಿ. ನನ್ನ ಕೈಹಿಡಿಯಲು ಯಾರೂ ಮುಂದೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ, ಯಾರಾದರೂ ನನ್ನೊಂದಿಗೆ ವಿವಾಹವಾಗಲು ಸಿದ್ಧರಿದ್ದರೆ, ನಾನು ನನ್ನ ತಪಃಫಲದ ಅರ್ಧ ಭಾಗವನ್ನು, ಅಂದರೆ ನನ್ನಲ್ಲಿರುವ ಐಶ್ವರ್ಯವನ್ನು ಅವರಿಗೆ ಅರ್ಪಿಸುತ್ತೇನೆ" ಎಂದಳು.
ಆಕೆಯ ಶ್ರೇಷ್ಠ ಪ್ರಸ್ತಾವನೆಯನ್ನು ಸಭೆಯಲ್ಲಿದ್ದ ಋಷಿಗಳು ಅಂಗೀಕರಿಸಿದರು. ಅವರಲ್ಲಿ ಒಬ್ಬ ಯುವ ಋಷಿ ಶೃಂಗವಾನ್. ಆತ ಗಾಲವ ಋಷಿಯ ಸುಪುತ್ರ. ವೃದ್ಧಕನ್ಯೆಯ ಕೈಹಿಡಿಯುವ ಆಸಕ್ತಿ ವ್ಯಕ್ತಪಡಿಸಿದನು, ಆದರೆ ಒಂದು ಷರತ್ತಿನೊಂದಿಗೆ. ಷರತ್ತು ಎಂದಾಕ್ಷಣ ವೃದ್ಧಕನ್ಯೆಗೆ ತುಸು ಆಶ್ಚರ್ಯವೇ ಆಯಿತು. ಆದರೂ ಸಾವರಿಸಿಕೊಂಡು ಏನದು ಷರತ್ತು ಎಂದು ಕೇಳಿದಳು.
“ಈ ವಿವಾಹವು ಕೇವಲ ಉತ್ತಮ ಲೋಕಕ್ಕೆ ಹತ್ತುವ ಉದ್ದೇಶಕ್ಕೆ ನಡೆಯುತ್ತಿದೆ. ಆಮೇಲೆ ನೀವು ದೇಹತ್ಯಾಗ ಮಾಡಲು ಇಚ್ಛಿಸುತ್ತೀರೆಂದು ಗೊತ್ತು. ಆದ್ದರಿಂದ ನನ್ನ ಷರತ್ತು ಇಂತಿದೆ. ಒಂದು ರಾತ್ರಿಗಷ್ಟೇ ಸೀಮಿತವಾಗಿ ನನ್ನ ಪತ್ನಿ ಆಗುವುದಾದರೆ ನಾನು ನಿಮ್ಮನ್ನು ಮದುವೆಯಾಗುತ್ತೇನೆ" ಎಂದನು ಶೃಂಗವಾನ್.
ವೃದ್ಧಕನ್ಯೆ ಆ ಷರತ್ತಿಗೆ ಕೂಡಲೇ ಒಪ್ಪಿದಳು. ಅದೇ ಸಭೆಯಲ್ಲಿ ಋಷಿಗಳ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹ ಸಮಾರಂಭ ನಡೆಯಿತು. ಪಾಣಿಗ್ರಹಣವೂ ಸಂಪೂರ್ಣ ವಾಯಿತು. ಶೃಂಗವಾನ್ ಮತ್ತು ವೃದ್ಧಕನ್ಯೆ ಪತಿ-ಪತ್ನಿಯರೆನಿಸಿದರು. ಗುರುಹಿರಿಯರು ಅವರನ್ನು ಆಶೀರ್ವದಿಸಿದರು. ಅಂದು ಮುಸ್ಸಂಜೆ ಪವಾಡಸದೃಶ್ಯವಾಗಿ ವೃದ್ಧಕನ್ಯೆಯು ಒಬ್ಬಳು ಸುಂದರ ತರುಣಿಯಾಗಿ ರೂಪಾಂತರಗೊಂಡಳು! ಅಲ್ಲಿದ್ದವರೆಲ್ಲರೂ ಆ ಅಪ್ರತಿಮ ಸುಂದರಿಯನ್ನು ವಿಸ್ಮಯದಿಂದ ನೋಡಿದರು.
ಯಾವ ಅಪ್ಸರೆಯಿವಳು ಎಂದು ಚಕಿತರಾದರು. ಯುವವಧು ತನ್ನ ವೈಯಾರದಿಂದ ಶೃಂಗವಾನ್ ನನ್ನು ಮೋಡಿ ಮಾಡಿದಳು. ಸುಗಂಧದ್ರವ್ಯಗಳಿಂದ ಕೂಡಿದ ಅವಳ ದಿವ್ಯ ಆಭರಣಗಳು, ದೈವಿಕ ಮಾಲೆಗಳು ಶೃಂಗವಾನ್‌ನನ್ನು ಇನ್ನಿಲ್ಲದಂತೆ ವಿಚಲಿತಗೊಳಿಸಿದವು. ತನ್ನನ್ನೇ ಬೆಳಗಿಸುವಂತಿದ್ದ ಅವಳನ್ನು ನೋಡಿ ಅವನು ಸಂತೋಷದಿಂದ ಉಬ್ಬಿಹೋದನು. ಸಮಯ, ಸ್ಥಳ, ಸಂದರ್ಭಗಳ ಪರಿವೆಗಳನ್ನೆಲ್ಲ ಕಳೆದುಕೊಂಡು ಶೃಂಗಾರದ ಉನ್ಮಾದಕ್ಕೊಳಗಾದನು. ಅವಳೊಂದಿಗೆ ಏಕಾಂತ ವಾಸ ಸುಖವನ್ನು ಮೈಮನ ತುಂಬ ಅನುಭವಿಸಿದನು.
ಮರುದಿನ ಬ್ರಹ್ಮಮುಹೂರ್ತದಲ್ಲಿ ಎದ್ದ ನವವಧುವು ಶೃಂಗವಾನ್‌ನಿಗೆ ಅವನದೇ ಷರತ್ತನ್ನು ನೆನಪಿಸಿದಳು. “ನೀನೇ ಮಾಡಿಕೊಂಡ ಒಪ್ಪಂದದಂತೆ ನಾನು ನಿನ್ನೊಡನೆ ಒಂದು ರಾತ್ರಿ ವಾಸಿಸಿದ್ದೇನೆ. ನಿನಗೆ ಮಂಗಳವಾಗಲಿ. ನಾನಿನ್ನು ಹೊರಡುತ್ತೇನೆ." ಎಂದಳು. ಅದನ್ನು ಕೇಳಿ ಶೃಂಗವಾನ್‌ನಿಗೆ ಆಘಾತವಾಯಿತು. ಇಷ್ಟು ಲಾವಣ್ಯವತಿಯಾದ ವಧು ಇನ್ನು ಮುಂದೆ ತನ್ನೊಂದಿಗೆ ಇರುವುದಿಲ್ಲವೆಂದು ನೆನೆದು ತುಂಬ ದುಃಖಿತನಾದನು.
ಅವಳೊಡನೆ ಒಂದು ರಾತ್ರಿಯ ಪ್ರಣಯಜೀವನದಿಂದಲೇ ಅವನಿಗೆ ಅವಳಲ್ಲಿ ಅಪರಿಮಿತ ಅನುರಾಗ ಉಂಟಾಗಿತ್ತು. ಆದರೆ ಈಗ ಅವನ ವೈವಾಹಿಕ ಆನಂದದ ಕನಸುಗಳೆಲ್ಲ ನುಚ್ಚು ನೂರಾಗಿದ್ದವು. ನವವಧುವಿನಿಂದ ಬೇರ್ಪಡುವ ಆಲೋಚನೆ ಅವನನ್ನು ತೀವ್ರವಾಗಿ ನೋಯಿಸಿತು.
ತಡೆಯಲು ಪ್ರಯತ್ನಿಸಿದನು ಆದರೆ ವ್ಯರ್ಥವಾಯಿತು. “ನನ್ನ ಪ್ರಿಯತಮೆಯೇ, ನಾನು ಈ ಬೇರ್ಪಡುವಿಕೆಯಿಂದ ಬಳಲುತ್ತಿರುವಾಗ ನೀನು ನನ್ನನ್ನು ಇಷ್ಟು ಸುಲಭವಾಗಿ ಬಿಟ್ಟುಹೋಗಲು ಸಿದ್ಧಳಾಗಿರುವುದು ಹೇಗೆ? ನೀನು ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮೇಲೆ ನನಗೆ ಪ್ರೀತಿಯಿದೆ. ಪ್ರೀತಿಯಲ್ಲಿ ಯಾವಾಗಲೂ ಹೆಣ್ಣೇ ಗಂಡನ್ನು ಹೆಚ್ಚು ಹಚ್ಚಿಕೊಳ್ಳುವುದೆಂದು ತಿಳಿದಿದ್ದೇನೆ.
ಆದರೆ ನೀನೇಕೆ ಇಷ್ಟು ಸುಲಭವಾಗಿ ನುಣುಚಿಕೊಳ್ಳುತ್ತಿರುವೆ? ಓ ಯುವವಧುವೇ, ನಿನ್ನ ವರ್ತನೆ ನಿಜಕ್ಕೂ ನನ್ನಲ್ಲಿ ಗೊಂದಲವನ್ನುಂಟು ಮಾಡಿದೆ. ಪುಟಿದೇಳುವ ತಾರುಣ್ಯ ಮತ್ತು ಸೌಂದರ್ಯ ವಿರುವ ನಿನಗೆ ಹೃದಯದಲ್ಲಿ ಯಾವುದೇ ಉತ್ಸಾಹವಿಲ್ಲದಿರುವುದು ಸಾಧ್ಯವೇ? ಅಥವಾ ನಾನು ನಿನ್ನ ಕನಸಿನ ಪುರುಷನಲ್ಲವೇ?" ಎನ್ನುತ್ತ ಪರಿಪರಿಯಾಗಿ ಅವಳ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು.
ತನ್ನನ್ನು ತ್ಯಜಿಸಬಾರದೆಂದು ಬೇಡಿಕೊಂಡನು. ಮನಸ್ಸು ಬದಲಾಯಿಸುವಂತೆ ಅವಳನ್ನು ಮತ್ತಷ್ಟು ಒತ್ತಾಯಿಸಿದನು. ಷರತ್ತು ಹಾಕಿದ್ದು ತಾನು ಆದ್ದರಿಂದ ಈಗ ಅದನ್ನು ಬದಲಾಯಿಸ ಲಿಕ್ಕೂ ಸಿದ್ಧ ಎಂದು ಅವಳಲ್ಲಿ ವಿಜ್ಞಾಪಿಸಿದನು.
ವೃದ್ಧಕನ್ಯೆ ಮುಗುಳ್ನಗುತ್ತ ಮೃದುವಾಗಿ ಉತ್ತರಿಸಿದಳು: “ಓ ಮುನಿವರನೇ, ಆ ಷರತ್ತನ್ನು ಹಾಕಿದ್ದು ನೀನೇ ಮತ್ತು ಆ ಷರತ್ತಿಗೆ ಒಪ್ಪಿಗೆ ಕೊಟ್ಟಿದ್ದು ನಾನೇ ಎಂದು ನನಗೆ ತಿಳಿದಿದೆ. ನಿಯಮಗಳನ್ನು ಹಾಕುವವನು ಆ ಷರತ್ತಿಗೆ ಬದ್ಧನಾಗಿಲ್ಲದಿದ್ದರೆ ಯಾವುದೇ ಭರವಸೆ ಅಥವಾ ನಿಯಮ ಹೇಗೆ ಕಾರ್ಯನಿರ್ವಹಿಸುತ್ತದೆ? ನೀನೀಗ ನಿಯಮವನ್ನು ಬದಲಾಯಿಸಲು ಬಯಸಿದರೆ ಅದು ಮತ್ತೊಂದು ಆಟ, ಮತ್ತೊಂದು ಕಾನೂನು, ಮತ್ತೊಂದು ಬದ್ಧತೆ ಆಗುತ್ತದೆ.
ಅದು ಒಂದೇ ಆಗಲು ಸಾಧ್ಯವಿಲ್ಲ!" ಎಂದು ಹೇಳಿದಳು. ಶೃಂಗವಾನ್ ನ ಮನಃಸ್ಥಿತಿ ಅವಳಿಗೆ ಅರ್ಥವಾಗಿತ್ತು. ಆ ತೊಳಲಾಟವು ಅವನಿಗೆ ಅವನದೇ ಷರತ್ತನ್ನು ಮರೆತುಬಿಡುವಂತೆ ಮಾಡಿತ್ತು. ಮತ್ತೆ ಅದನ್ನು ನೆನಪಿಸದೆ, ಗೌರವದಿಂದ ಕೈಮುಗಿದು ಶೃಂಗವಾನ್‌ನ ಜೀವನದಿಂದ ವೃದ್ಧಕನ್ಯೆ ಹೊರಬಂದಳು. ತೀವ್ರ ಹತಾಶೆಯಲ್ಲಿದ್ದ ಶೃಂಗವಾನ್‌ನಿಗೆ, ವೃದ್ಧಕನ್ಯೆಯನ್ನು ಸಿಕ್ಕಿಸಲೆಂದು ಷರತ್ತಿನ ಬಲೆ ತಾನು ಹೆಣೆದದ್ದು ಈಗ ತನ್ನನ್ನೇ ಸುತ್ತಿಕೊಂಡಿರುವುದು ಅರಿವಾಯಿತು.
ಶೃಂಗವಾನ್‌ನಿಂದ ಬೀಳ್ಕೊಂಡ ವೃದ್ಧಕನ್ಯೆ ಪುನಃ ಹೇಳಿದಳು: “ಈ ತೀರ್ಥದಲ್ಲಿ ಸಮಾಹಿತರಾಗಿ ದಿವೌಕಸರಿಗೆ ತರ್ಪಣಗಳನ್ನಿತ್ತು ಒಂದು ರಾತ್ರಿ ವಾಸಿಸುವವರಿಗೆ ಐವತ್ತೆಂಟು ವರ್ಷಗಳವರೆಗೆ ಬ್ರಹ್ಮಚರ್ಯವನ್ನು ಪಾಲಿಸಿದ ಪುಣ್ಯಫಲವು ದೊರೆಯುತ್ತದೆ". ಬುದ್ಧಿವಂತ ತಪಸ್ವಿನಿ, ತನ್ನನ್ನು ತಾನು ಪ್ರತಿeಯಿಂದ ಮುಕ್ತಗೊಳಿಸಿಕೊಂಡು, ತನ್ನ ಮುಂದಿನ ಪ್ರಯಾಣವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದಳು.
ಸೂರ್ಯನ ಚಿನ್ನದ ಕಿರಣಗಳು ಹರಿಯುತ್ತಿದ್ದಂತೆ, ಪ್ರಶಾಂತವಾದ ಕಾಂತಿಯಿಂದ ಆವರಿಸ ಲ್ಪಟ್ಟಿದ್ದ ಪವಿತ್ರ ಶಾಂತಿಯುತ ಆಶ್ರಮದ ಸುತ್ತಲೂ ನೋಡಿದಳು. ಮನಸ್ಸಲ್ಲೇ ಯೋಚಿಸಿದಳು, “ಈ ಸ್ಥಳ ಎಷ್ಟು ಅದ್ಭುತ ಮತ್ತು ದೈವಿಕವಾಗಿದೆ. ನನ್ನ ತಂದೆಯ ಈ ಆಶ್ರಮದಲ್ಲಿ ತಮ್ಮ ಪಾದವನ್ನು ಇಡುವವರು, ತೀರ್ಥಯಾತ್ರೆಯನ್ನು ಕೈಗೊಳ್ಳುವವರು ಧನ್ಯರು!" ತನ್ನ ತಪಸ್ಸು ದೇವಲೋಕದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವಳು ಭಾವಿಸಿದಳು.
ಆದ್ದರಿಂದ, ಭೂಲೋಕದ ಜನರು ತನ್ನ ತಪಸ್ಸಿನ ಫಲಗಳಿಂದ ಆಶೀರ್ವದಿಸಲ್ಪಡಬೇಕೆಂದು ಅವಳು ಬಯಸಿದಳು. ತ್ಯಾಗದಲ್ಲಿಯೇ ಶಾಶ್ವತ ಆನಂದವನ್ನು ಅನುಭವಿಸುವಂತಾಗುವುದು. ‘ತ್ಯಾಗೇನ ಅಮೃತತ್ವಂ ಅಸಿ’ ಎಂಬ ಅವಳ ತಂದೆಯ ಮಾತುಗಳು ಅವಳ ಕಿವಿಗಳಲ್ಲಿ ರಿಂಗಣಿಸು ತ್ತಿದ್ದವು. ಕೆಲ ಕ್ಷಣಗಳಲ್ಲಿಯೇ ಆ ಸಾಧ್ವಿಯು ದೇಹವನ್ನು ತ್ಯಜಿಸಿ ಸ್ವರ್ಗಕ್ಕೆ ಹೋದಳು. ಶೃಂಗವಾನ್ ಅವಳ ರೂಪವನ್ನೇ ಸ್ಮರಿಸಿಕೊಳ್ಳುತ್ತಾ ದೀನನಾದನು. ಒಪ್ಪಂದದಂತೆ ಬಹಳ ಕಷ್ಟದಿಂದ ಅವಳ ತಪಸ್ಸಿನ ಅರ್ಧಫಲವನ್ನು ಸ್ವೀಕರಿಸಿದ್ದನು.
ಅವಳ ರೂಪಬಲ ಮತ್ತು ಆಕರ್ಷಣೆಯನ್ನು ಮರೆಯುವುದಕ್ಕೋಸ್ಕರ ತನ್ನನ್ನು ಸಾಧನೆಗೆ ತೊಡಗಿಸಿಕೊಳ್ಳುವುದು ಅವನ ಆಶಯವಾಗಿತ್ತು. ಆದರೆ ಮನಸ್ಸು ತೀವ್ರವಾಗಿ ಜರ್ಜರಿತವಾಗಿತ್ತು. ಯಾವುದೇ ಕರ್ತವ್ಯಗಳನ್ನು ನಿರ್ವಹಿಸಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಭಾವನೆಗಳು ಉಮ್ಮಳಿಸುತ್ತಿದ್ದವು. ಅವಳಿಗಾಗಿ ದುಃಖಿಸುತ್ತಾ, ಅವಳು ತನ್ನ ಸ್ವರ್ಗೀಯ ನಿವಾಸಕ್ಕೆ ಹೋದ ತರುವಾಯ, ಹತಾಶೆಯಿಂದ ಅವನು ಕೂಡ ತನ್ನ ದೇಹವನ್ನು ತ್ಯಜಿಸಿದನು. ಇಂತು, ಶ್ರಾವಣ ಮಾಸದ ಮೂರನೆಯ ಭಾನುವಾರದಲ್ಲೊಂದು ಪುರಾಣಕಥನ/ವಾಚನ/ಶ್ರವಣ ಸಮಾಪ್ತ ವಾದುದು.