ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಬೂನಿನ ಗುಳ್ಳೆಯಂಥ ವೈರಲ್ ಫೇಮ್!

ಸಾಮಾಜಿಕ ಜಾಲತಾಣಗಳಲ್ಲಿನ ‘ವ್ಯೂಸ್’, ‘ಲೈಕ್ಸ್’ ಮತ್ತು ‘ಫಾಲೋವರ್ಸ್’ಗಳ ಸಂಖ್ಯೆಯನ್ನು ತಮ್ಮ ವ್ಯಕ್ತಿತ್ವದ ಅಳತೆಗೋಲು ಎಂದುಕೊಂಡಿರುವ ಇಂದಿನ ಯುವ ಪೀಳಿಗೆಯು, ಅರಿವಿಲ್ಲ ದೆಯೇ ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಅಲ್ಪಸ್ವಲ್ಪ ಪ್ರಚಾರಕ್ಕಾಗಿ ಬಲಿ ನೀಡುತ್ತಿದೆ. ಯೂಟ್ಯೂಬ್ ಚಾನೆಲ್‌ಗಳನ್ನು ತೆರೆದು, ಸಬ್‌ಸ್ಕ್ರೈಬಸ್ʼಗಳನ್ನು ಹೆಚ್ಚಿಸಿಕೊಳ್ಳುವುದೇ ಬದುಕಿನ ಅಂತಿಮ ಗುರಿ ಎನ್ನುವಂತೆ ಬದುಕುತ್ತಿರುವ ಯುವಜನತೆಯ ಈ ಹಾದಿ, ದಿಕ್ಕುತಪ್ಪಿದ ದಾರಿಯಾಗಿದೆ.

ಸಾಬೂನಿನ ಗುಳ್ಳೆಯಂಥ ವೈರಲ್ ಫೇಮ್!

-

Profile
Ashok Nayak Jun 22, 2026 7:50 PM

ಸಕಾಲಿಕ

ಮೊಹಮ್ಮದ್‌ ಅಜರುದ್ದೀನ್‌ ಅಕ್ಕಿಹೆಬ್ಬಾಳು

ಮಾನವ ನಾಗರಿಕತೆಯ ಇತಿಹಾಸವನ್ನು ಅವಲೋಕಿಸಿದರೆ, ಪ್ರತಿ ಕಾಲಘಟ್ಟವೂ ತನ್ನದೇ ಆದ ಸವಾಲುಗಳು ಮತ್ತು ಸಾಧನೆಯ ಮಾನದಂಡಗಳನ್ನು ಹೊಂದಿದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ, ‘ಸಾಧನೆ’ ಎಂಬ ಪದದ ಅರ್ಥವು ಅತ್ಯಂತ ಸಂಕುಚಿತ ಮತ್ತು ಬಾಹ್ಯ ಆಕರ್ಷಣೆಗಳ ಭ್ರಮೆಗೆ ಒಳಗಾಗಿರುವುದು ವಿಷಾದನೀಯ. ಇಂದಿನ ಯುವಜನತೆ ವರ್ಚುವಲ್ ಜಗತ್ತಿನ ಕೃತಕ ಹೊಳಪಿನ ಬೆನ್ನತ್ತಿ, ವಾಸ್ತವಿಕ ಬದುಕಿನ ಘನತೆಯನ್ನು ಮರೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿನ ‘ವ್ಯೂಸ್’, ‘ಲೈಕ್ಸ್’ ಮತ್ತು ‘ಫಾಲೋವರ್ಸ್’ಗಳ ಸಂಖ್ಯೆಯನ್ನು ತಮ್ಮ ವ್ಯಕ್ತಿತ್ವದ ಅಳತೆಗೋಲು ಎಂದುಕೊಂಡಿರುವ ಇಂದಿನ ಯುವ ಪೀಳಿಗೆಯು, ಅರಿವಿಲ್ಲ ದೆಯೇ ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಅಲ್ಪಸ್ವಲ್ಪ ಪ್ರಚಾರಕ್ಕಾಗಿ ಬಲಿ ನೀಡುತ್ತಿದೆ. ಯೂಟ್ಯೂಬ್ ಚಾನೆಲ್‌ಗಳನ್ನು ತೆರೆದು, ಸಬ್‌ಸ್ಕ್ರೈಬಸ್ʼಗಳನ್ನು ಹೆಚ್ಚಿಸಿಕೊಳ್ಳುವುದೇ ಬದುಕಿನ ಅಂತಿಮ ಗುರಿ ಎನ್ನುವಂತೆ ಬದುಕುತ್ತಿರುವ ಯುವಜನತೆಯ ಈ ಹಾದಿ, ದಿಕ್ಕುತಪ್ಪಿದ ದಾರಿಯಾಗಿದೆ.

ಇದನ್ನೂ ಓದಿ: Readers Colony: ಸದ್ಯಶೋಧನೆಯಲ್ಲಿ ಮಜಾ

ನಿಜವಾದ ಸಾಧನೆಯೆಂದರೆ ಅಂತರಂಗದ ವಿಕಸನ, ಜ್ಞಾನದ ಆರ್ಜನೆ ಮತ್ತು ಸಮಾಜಕ್ಕೆ ನೀಡುವ ರಚನಾತ್ಮಕ ಕೊಡುಗೆಯಾಗಿದೆ. ಆದರೆ ಇಂದಿನ ಯುವಕರು ತಾತ್ಕಾಲಿಕ ಖ್ಯಾತಿಯನ್ನು ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು, ವೈಯಕ್ತಿಕ ಬದುಕಿನ ತುಣುಕು ಗಳನ್ನು ಮತ್ತು ಕೆಲವೊಮ್ಮೆ ಸಭ್ಯತೆಯ ಹದ್ದು ಮೀರಿದ ಹುಚ್ಚಾಟಗಳನ್ನು ಪ್ರದರ್ಶಿಸುವುದೇ ಸಾಧನೆ ಎಂಬ ಭ್ರಮೆ ಆವರಿಸಿದೆ. ಈ ವರ್ಚುವಲ್ ಜಗತ್ತಿನ ಅಲ್ಪಾವಧಿಯ ಜನಪ್ರಿಯತೆಯು ಒಬ್ಬ ಯುವಕನಿಗೆ ತಾನು ದೊಡ್ಡ ಮಟ್ಟದ ಸಾಧಕನೆಂಬ ಭ್ರಮೆಯನ್ನು ಮೂಡಿಸುತ್ತದೆ. ಇಂಟರ್ನೆಟ್‌ ನಲ್ಲಿ ವೈರಲ್ ಆಗಿರುವ ವ್ಯಕ್ತಿಗಳನ್ನು, ಅವರ ಹಿನ್ನೆಲೆ ಅಥವಾ ಜ್ಞಾನದ ಆಳವನ್ನು ಗಮನಿಸದೆ ನೇರವಾಗಿ ರಿಯಾಲಿಟಿ ಶೋಗಳು ಅಥವಾ ಮಾಧ್ಯಮಗಳು ವೇದಿಕೆ ಒದಗಿಸುತ್ತಿರುವುದು ಈ ಭ್ರಮೆ ಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಟ್ರೋಲ್ ಆಗುವ ವಿಡಿಯೋಗಳು ಅಥವಾ ಸಮಾಜದ ಹಿತಕ್ಕೆ ವಿರುದ್ಧವಾದ ವಿವಾದಾತ್ಮಕ ಹೇಳಿಕೆ ಗಳೇ ಅತೀ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಇಂದಿನ ಕಾಲಘಟ್ಟದಲ್ಲಿ, ಯುವಕರು ತಾವು ಆಕರ್ಷಕವಾಗಿ ಕಾಣುತ್ತಿದ್ದೇವೆ ಎಂದುಕೊಂಡರೆ ಅದು ಅವರ ದುರದೃಷ್ಟವೇ ಸರಿ. ಮಾಧ್ಯಮಗಳ ಈ ವರ್ತನೆಯು ನಿಜವಾದ ಪ್ರತಿಭೆಗಳನ್ನು ಮರೆಮಾಚಿ, ಕೇವಲ ಸದ್ದು ಮಾಡುವ ವ್ಯಕ್ತಿಗಳನ್ನು ತಲೆಮೇಲೆ ಹೊತ್ತು ಮೆರೆಸುವ ಕೆಲಸ ಮಾಡುತ್ತಿದೆ, ಇದು ಯುವಜನತೆಯ ದಾರಿ ತಪ್ಪಲು ಇನ್ನೊಂದು ಪ್ರಮುಖ ಕಾರಣವಾಗಿದೆ.

ನಿಜವಾದ ಸಾಧನೆ ಎನ್ನುವುದು ನಿಶ್ಯಬ್ದವಾದ ತಪಸ್ಸು. ಅದು ರಸ್ತೆ ಬದಿಯಲ್ಲಿ ಮಾಡುವ ನೃತ್ಯದ ಅಥವಾ ಕ್ಯಾಮೆರಾ ಮುಂದೆ ಮಾಡುವ ಅಸಂಬದ್ಧ ಭಾಷಣದ ಅಡಗಿಲ್ಲ. ಸಾಧನೆ ಎನ್ನುವುದು ಮನುಷ್ಯನ ಜ್ಞಾನದ ಹರವು, ಕೌಶಲ್ಯದ ನಿಖರತೆ ಮತ್ತು ಆತ ಸಮಾಜಕ್ಕೆ ನೀಡುವ ಮೌಲ್ಯಯುತ ಕೊಡುಗೆಯಲ್ಲಿ ಅಡಗಿದೆ. ವಿeನ, ಸಾಹಿತ್ಯ, ಕಲೆ, ಕೃಷಿ ಅಥವಾ ತಂತ್ರಜ್ಞಾನದ ಕ್ಷೇತ್ರದಲ್ಲಿ ಮೌನ ವಾಗಿ ಕೆಲಸ ಮಾಡುತ್ತಿರುವವರ ಮಾಡುವ ಕೆಲಸವೇ ನಿಜವಾದ ಸಾಧನೆ. ಇಂದಿನ ಯುವಕರು ಈ ಭೌತಿಕ ಹೊಳಪಿನಿಂದ ಹೊರಬಂದು, ತಮ್ಮ ಆಳವಾದ ಆಸಕ್ತಿಗಳನ್ನು ಗುರುತಿಸಿಕೊಳ್ಳಬೇಕು.

ಕೇವಲ ಡಿಜಿಟಲ್ ಜಗತ್ತಿನಲ್ಲಿ ಬದುಕುವುದನ್ನು ಬಿಟ್ಟು, ಪುಸ್ತಕಗಳನ್ನು ಓದಬೇಕು, ಲೋಕ ಜ್ಞಾನ ವನ್ನು ಪಡೆಯಬೇಕು, ವಿಮರ್ಶಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಕೇವಲ ಮಾಹಿತಿಯ ವಿನಿಮಯಕ್ಕೆ ಅಥವಾ ಜ್ಞಾನ ಪ್ರಸಾರಕ್ಕೆ ಸೀಮಿತವಾಗಿರ ಬೇಕು, ಅಷ್ಟೇ ಹೊರತು ಅದು ಬದುಕಿನ ಮಾದರಿಯಾಗಬಾರದು. ಸಾಧನೆಗೆ ಸಿದ್ಧಾಂತದ ಅಡಿಪಾಯವಿರಬೇಕು, ತಾತ್ಕಾಲಿಕ ಖ್ಯಾತಿಯ ಹಸಿವು ಇರಬಾರದು.

ಯುವಜನತೆ ಮರೆಯುತ್ತಿರುವ ದೊಡ್ಡ ವಿಷಯವೆಂದರೆ, ಸಮಯದ ಮೌಲ್ಯ. ದಿನದ ಹದಿನಾಲ್ಕು ತಾಸುಗಳನ್ನು ಫೋನ್ ಪರದೆಯ ಮೇಲೆ ಕಳೆಯುವ ಯುವಕ, ತಾನು ಕಲಿಯಬಹುದಾದ ಹೊಸ ವಿಷಯಗಳನ್ನು, ಮಾಡಬಹುದಾದ ಪ್ರಯೋಗಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಸಾಧನೆ ಎಂಬುದು ಒಮ್ಮೆಲೆ ಸಿಗುವಂತದ್ದಲ್ಲ, ಅದಕ್ಕೆ ಶ್ರಮ, ತಾಳ್ಮೆ ಮತ್ತು ನಿರಂತರವಾದ ಅಭ್ಯಾಸದ ಅಗತ್ಯ ವಿರುತ್ತದೆ.

ಇಂದಿನ ಯುವಕರಿಗೆ ದಕ್ಕುತ್ತಿರುವ ‘ವೈರಲ್ ಫೇಮ್’ ಒಂದು ಸಾಬೂನಿನ ಗುಳ್ಳೆಯಿದ್ದಂತೆ, ಅದು ಎಷ್ಟು ಬೇಗ ಮೇಲಕ್ಕೆ ಏರುತ್ತದೆಯೋ ಅಷ್ಟೇ ಬೇಗ ಒಡೆದು ಹೋಗುತ್ತದೆ. ಆದರೆ ಜ್ಞಾನ ಮತ್ತು ಕೌಶಲ್ಯದ ಮೂಲಕ ಗಳಿಸಿದ ಗೌರವ ಅಚಲವಾಗಿರುತ್ತದೆ. ಸಮಾಜದ ಕಣ್ಣಲ್ಲಿ ದೊಡ್ಡವನಾಗುವು ದಕ್ಕಿಂತ, ಸ್ವಂತದ ಆತ್ಮಸಾಕ್ಷಿಯ ಮುಂದೆ ಪ್ರಾಮಾಣಿಕನಾಗಿರುವುದು ಮುಖ್ಯ. ಯುವಜನತೆ ತಾವು ಪ್ರತಿದಿನ ಮಾಡುತ್ತಿರುವ ಕೆಲಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಮಾಡುತ್ತಿರು ವುದು ನನ್ನ ವ್ಯಕ್ತಿತ್ವವನ್ನು ಎತ್ತರಿಸುತ್ತಿದೆಯೇ ಅಥವಾ ಕೇವಲ ಇತರರ ಮೆಚ್ಚುಗೆಗಾಗಿ ಮಾಡು ತ್ತಿರುವ ನಾಟಕವೇ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡಬೇಕು.

ಸಾಧನೆಯೆಂದರೆ ಸಮಾಜದ ಬದಲಾವಣೆಗೆ ನಾವು ನೀಡುವ ಕಾಣಿಕೆ. ಹಸಿವು ನೀಗಿಸುವ ಕೆಲಸವೋ, ಜ್ಞಾನದ ಬೆಳಕನ್ನು ಪಸರಿಸುವ ಕಾಯಕವೋ ಅಥವಾ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿ ಯುವ ಪ್ರಯತ್ನವೋ-ಇವೇ ನಿಜವಾದ ಸಾಧನೆಯ ದಾರಿಗಳು. ಸಾಮಾಜಿಕ ಜಾಲತಾಣಗಳ ಕೃತಕ ಮನ್ನಣೆಗಳನ್ನು ಬಿಟ್ಟು, ಭೂಮಿಯ ಮೇಲೆ ಕಾಲಿಟ್ಟು ವಾಸ್ತವದ ಬದುಕನ್ನು ರೂಪಿಸಿಕೊಳ್ಳುವ ಅವಶ್ಯಕತೆ ಇಂದಿನ ಯುವಕರಿಗೆ ಇದೆ.

ಹೊಸ ದಾರಿ ಎಂದರೆ ತಂತ್ರಜ್ಞಾನವನ್ನು ತ್ಯಜಿಸುವುದಲ್ಲ, ಬದಲಾಗಿ ತಂತ್ರಜ್ಞಾನವನ್ನು ಆಳುವವ ರಾಗುವುದೇ ಹೊರತು, ತಂತ್ರಜ್ಞಾನದ ಗುಲಾಮರಾಗುವುದಲ್ಲ. ಯುವಜನತೆಯು ತಮ್ಮ ಬುದ್ಧಿಶಕ್ತಿ ಯನ್ನು ತೀಕ್ಷ ಗೊಳಿಸಿಕೊಳ್ಳಬೇಕು, ವಿವೇಚನೆಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಅವರು ನಿಜವಾದ ಅರ್ಥದಲ್ಲಿ ಸಾಧಕರಾಗಲು ಸಾಧ್ಯ. ಜಗತ್ತು ನಿಮ್ಮನ್ನು ಅನುಸರಿಸುವಂತೆ ಮಾಡಬೇಕೇ ಹೊರತು, ಜಗತ್ತು ನೀಡುವ ಅಲ್ಪಸ್ವಲ್ಪ ಗಮನಕ್ಕೆ ನೀವು ಜೋತು ಬೀಳಬಾರದು. ಹೊಸ ದಾರಿಯೆಂದರೆ ಜ್ಞಾನದ ದಾರಿ, ಅದು ಎಂದಿಗೂ ಅಳಿಯದ ಕೀರ್ತಿಯನ್ನು ನೀಡುತ್ತದೆ.