ಗ್ರಾಹಕ ಹಿತರಕ್ಷಣಾ ಇಲಾಖೆಗೆ ರಾಜ್ಯದಲ್ಲಿ ಆದ್ಯತೆ ನೀಡಿ
ಹಲವಾರು ವರ್ಷಗಳ ಹಿಂದೆಯೇ ಗ್ರಾಹಕ ರಕ್ಷಣಾ ಇಲಾಖೆಯನ್ನು ತೆರೆದು ಜನರ ಸಂಕಷ್ಟಗಳಿಗೆ ನೆರವಾಗುವಂತೆ ಬಳಕೆದಾರರ ವೇದಿಕೆಗಳು ಆಗ್ರಹಿಸಿದ್ದವು. ಅದು ನೆನೆಗುದಿಗೆ ಬಿದ್ದು ಇಂದಿಗೂ ಗ್ರಾಹಕ ಹಿತರಕ್ಷಣಾ ವಿಭಾಗದ ಹೊಣೆ ಆಹಾರ ಮತ್ತು ನಾಗರಿಕೆ ಪೂರೈಕೆ ಇಲಾಖೆಯ ಅಧೀನದಲ್ಲೇ ಇದೆ. ಇದರಿಂದಾಗಿ ಗ್ರಾಹಕ ರಕ್ಷಣೆಯು ಅವಗಣನೆಗೆ ತುತ್ತಾಗಿದೆ.
-
ಪ್ರಸ್ತುತ
ಎನ್.ರಾಮ ಭಟ್, ಉಡುಪಿ
ಜನರ ಕುಂದುಕೊರತೆ ಆಲಿಸುವ ಸಲುವಾಗಿ ‘ಪ್ರಜಾಸೇವೆ ಇಲಾಖೆ’ಯನ್ನು ತೆರೆಯುವುದಾಗಿ ಮತ್ತು ಇದಕ್ಕಾಗಿ ಪ್ರತ್ಯೇಕ ಸಚಿವರನ್ನು ನೇಮಿಸುವುದಾಗಿ ಮುಖ್ಯಮಂತ್ರಿಗಳ ಹೇಳಿಕೆ ಪ್ರಕಟವಾಗಿದೆ. ಅಲ್ಲದೆ ಸುಪ್ರೀಂ ಕೋರ್ಟಿನಲ್ಲಿರುವ ವ್ಯಾಜ್ಯಗಳ ಇತ್ಯರ್ಥಕ್ಕೆ ದಿಲ್ಲಿಯ ಕಾನೂನು ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಜನರು ಸಲ್ಲಿಸುವ ಮನವಿಗಳ ಶೀಘ್ರ ಇತ್ಯರ್ಥ, ಸಮಸ್ಯೆ ಹೇಳಿಬರುವ ಜನರಿಗೆ ಪರಿಹಾರ ನೀಡುವ ಹೊಣೆ, ವಿಧಾನಸಭಾ ಕ್ಷೇತ್ರದಲ್ಲಿ ವಾರಕ್ಕೊಮ್ಮೆ ಸ್ಥಳೀಯ ಶಾಸಕರೊಂ ದಿಗೆ ಪ್ರಜಾಸೇವೆ ಇಲಾಖೆ ಮೂಲಕ ಜನಸ್ಪಂದನ ಸಭೆ ನಂತರ ಅದನ್ನು ಪರಿಶೀಲಿಸುವ ಕೆಲಸ, ಜನರ ಕಷ್ಟ ಭಾವನೆಗಳನ್ನು ಅರಿತು ಕಾನೂನು ಚೌಕಟ್ಟಿನಲ್ಲಿ ಸ್ಪಂದಿಸುವುದು ನಮ್ಮ ಸರಕಾರದ ಗುರಿ ಎಂಬುದು ಮುಖ್ಯಮಂತ್ರಿಗಳ ಹೇಳಿಕೆ, ಬಹಳ ಸಂತೋಷ.
ಹಲವಾರು ವರ್ಷಗಳ ಹಿಂದೆಯೇ ಗ್ರಾಹಕ ರಕ್ಷಣಾ ಇಲಾಖೆಯನ್ನು ತೆರೆದು ಜನರ ಸಂಕಷ್ಟಗಳಿಗೆ ನೆರವಾಗುವಂತೆ ಬಳಕೆದಾರರ ವೇದಿಕೆಗಳು ಆಗ್ರಹಿಸಿದ್ದವು. ಅದು ನೆನೆಗುದಿಗೆ ಬಿದ್ದು ಇಂದಿಗೂ ಗ್ರಾಹಕ ಹಿತರಕ್ಷಣಾ ವಿಭಾಗದ ಹೊಣೆ ಆಹಾರ ಮತ್ತು ನಾಗರಿಕೆ ಪೂರೈಕೆ ಇಲಾಖೆಯ ಅಧೀನದಲ್ಲೇ ಇದೆ. ಇದರಿಂದಾಗಿ ಗ್ರಾಹಕ ರಕ್ಷಣೆಯು ಅವಗಣನೆಗೆ ತುತ್ತಾಗಿದೆ.
ಇದನ್ನೂ ಓದಿ: Readers Colony: ಸದ್ಯಶೋಧನೆಯಲ್ಲಿ ಮಜಾ
ರಾಜ್ಯದ ಅನೇಕ ಕಡೆಗಳಲ್ಲಿ ಸ್ಥಳೀಯವಾಗಿ ಬಳಕೆದಾರರ ವೇದಿಕೆ ಎಂಬ ಪ್ರಜಾಹಿತ ಸಂಸ್ಥೆ ಕೆಲಸ ಮಾಡುತ್ತಿದ್ದರೂ ಅದಕ್ಕೆ ಅನುದಾನವಿಲ್ಲದೆ ಸೊರಗಿ ಹೋಗಿದೆ. ಕೆಲವೆಡೆ ಬಾಗಿಲು ಮುಚ್ಚಿವೆ. ಅಳಿದುಳಿದ ಕೆಲವು ವೇದಿಕೆಗಳು ಹಿರಿಯ ನಾಗರಿಕರ ಮಾರ್ಗದರ್ಶನದಲ್ಲಿ ಕೆಲವು ಉದಾರಿಗಳ ಆರ್ಥಿಕ ನೆರವಿನಲ್ಲಿ ನೊಂದ ಗ್ರಾಹಕರಿಗೆ ನೆರವಾಗುವಲ್ಲಿ ಕುಂಟುತ್ತಾ ಸಾಗಿದೆ.
ರಾಜ್ಯ ಸರಕಾರದ 27199 ಪ್ರಕರಣಗಳು ಹೈಕೋರ್ಟ್'ನಲ್ಲಿ ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹಿಂದಿನ ಮುಖ್ಯಮಂತ್ರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ನುಡಿದಿದ್ದರು.
ದೇಶದ ಹಲವು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು ಹಲವು ಲಕ್ಷಗಳು! ಇಂದು ಬಹುತೇಕ ಕೋರ್ಟ್ʼಗಳಲ್ಲಿ ಸಿಬ್ಬಂದಿ ಕೊರತೆ ಸರ್ವೇಸಾಮಾನ್ಯ. ಅಲ್ಲದೆ ಕೆಲವೊಂದು ಕೋರ್ಟ್‌ಗಳಲ್ಲಿ ಅವಶ್ಯಕವಾಗಿ ಇರಬೇಕಾದ ಸೌಲಭ್ಯಗಳ ಕೊರತೆ. ಎಷ್ಟೋ ಪ್ರಕರಣಗಳಲ್ಲಿ ಕೋರ್ಟ್ʼಗಳಲ್ಲಿ ದಾವೆ ಹೂಡಿರುವ ವ್ಯಕ್ತಿಯು ಜೀವಂತವಾಗಿರುವಾಗ ಅದರ ಫಲ ಪ್ರಕಟವಾಗು ವುದೇ ಇಲ್ಲ!
ಆದ್ದರಿಂದ ಇನ್ನಾದರೂ ‘ಪ್ರಜಾಸೇವೆ ಇಲಾಖೆ’ಯನ್ನು ತೆರೆಯುವ ಜೊತೆಗೆ ಗ್ರಾಹಕ ಹಿತರಕ್ಷಣಾ ಕಾಯಿದೆಯ ಅಧೀನದಲ್ಲಿ ಕೆಲಸ ಮಾಡುವ ಗ್ರಾಹಕ ಸ್ನೇಹಿ ಸಂಘ-ಸಂಸ್ಥೆಗಳನ್ನು ಈ ಇಲಾಖೆಯ ಅಧೀನದಲ್ಲಿ ತಂದು ಅವುಗಳಿಗೂ ಒಂದಷ್ಟು ಅನುದಾನ, ಅಧಿಕಾರ ನೀಡಿದಲ್ಲಿ ಜನಸಾಮಾನ್ಯರಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನಹರಿಸಲಿ ಎಂದು ಹಾರೈಕೆ.