ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Hunj Column: ರೇಣುಕಾಚಾರ್ಯರು ಯಾನೆ ರೇವಣ್ಣಸಿದ್ಧರು ಕುರುಬರೇ !?

ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಯು ಅಡಗಿಸಿ ಕೊಂಡಿದೆ. ಹಾಲುಮತದ ಶ್ರೀ ರೇವಣಸಿದ್ಧೇಶ್ವರರ ಮೂಲ ಗುರುಪೀಠದ ಅಸ್ಮಿತೆಗಳನ್ನು ವೀರ ಶೈವರು ಹೇಗೆ ಹಾಳು ಮಾಡಿದ್ದಾರೆಂಬುದು ಸ್ವತಃ ಹಾಲುಮತ ಕುರುಬರಿಗೆ ಅರಿವಿಗಿಲ್ಲ ದಂತಾಗಿದೆ.

ರೇಣುಕಾಚಾರ್ಯರು ಯಾನೆ ರೇವಣ್ಣಸಿದ್ಧರು ಕುರುಬರೇ !?

-

Profile
Ashok Nayak May 11, 2026 9:37 AM

ವಚನಾಮೃತ

ರವಿ ಹಂಜ್

ಮನುಕುಲ ಔದ್ಯೋಗಿಕವಾಗಿ ವಿಕಾಸದ ಹಾದಿಯಲ್ಲಿ ಇಟ್ಟ ಮೊದಲ ಹೆಜ್ಜೆ, ಬೇಟೆ! ನಂತರ ಪಶುಪಾಲನೆ, ತದನಂತರ ಬಂದದ್ದು ಕೃಷಿ. ಇದನ್ನು ಇಡೀ ಮನುಕುಲ ಖಂಡಾತೀತವಾಗಿ ವರ್ಣಾತೀತವಾಗಿ, ಜಾತ್ಯತೀತವಾಗಿ ಮಾಡಿದೆ. ಹೀಗೆ ಮಾನವನ ಆದಿ ಉದ್ಯೋಗಗಳಾದ ಬೇಟೆ (ಅರಣ್ಯಕ) ಮತ್ತು ಪಶು ಸಾಕಾಣಿಕೆ (ಪಶುಪಾಲಕ)ಗಳಲ್ಲಿ ಮಾನವ ಜನಾಂಗವು ತೊಡಗಿಕೊಂಡು ಮುಂದೆ ನಾಗರಿಕತೆಯನ್ನು ವಿಕಾಸಗೊಳಿಸಿತು ಎಂಬುದು ಜಗಜ್ಜಾಹೀರಾದ ಸಿದ್ಧಾಂತ!

ಇಂತಹ ಜಾಗತಿಕ ಮಾನವ ವಿಕಾಸವನ್ನು ಆಧುನಿಕ ಭಾರತದ ಜಾತಿ ಪದ್ಧತಿಯ ಮೋಹದ ಅಂಧಾಭಿಮಾನದ ಜಾತಿವಿಷದ ಹಿನ್ನೆಲೆಯಲ್ಲಿ ಇತಿಹಾಸವನ್ನು ತಿರುಚಿ ಸತ್ಯವನ್ನು ಮರೆಮಾಚಿ ಹೆಸರಾಂತ ಮಹಾಮಹಿಮರನ್ನು ವರ್ತಮಾನದ ಒಂದು ಜಾತಿಗೆ ಅಂಟಿಸು ವುದು ಮಾನವ ವಿಕಾಸದ ಇತಿಹಾಸದ ಅಪಮಾನವಾಗಿದೆ.

ಇಂದು ಇಂತಹುದೇ ತಿರುಚುವಿಕೆ, ಮರೆಮಾಚುವಿಕೆ, ಗೋಬೆಲ್ಸ್ ತಂತ್ರದಲ್ಲಿ ಮುಳುಗಿ ಸಮಾಜವನ್ನೂ ಮುಳುಗಿಸಲಿದ್ದ ಲಿಂಗಾಹತ ಪ್ರತ್ಯೇಕವಾದಿಗಳು ವಿಶ್ವವಾಣಿ ಅಂಕಣ‌ ದಿಂದ ಇಂದು ಕಂಗಾಲಾಗಿದ್ದಾರೆ. ಇವರ ಪ್ರಮುಖ ಮುಖಂಡರು ನನ್ನೊಟ್ಟಿಗೆ ಸವಾಲಿನಲ್ಲಿ ಸೋತು ಒಂದು ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಏಕೆಂದರೆ ಇವರೆಲ್ಲರೂ ಕೂಪ ಮಂಡೂಕ ಭಂಡರು!

ಇದನ್ನೂ ಓದಿ: Ravi Hunj Column: ಭಗವದ್ಗೀತೆ ಮತ್ತು ವಚನಗಳು: ಒಂದು ತೌಲನಿಕ ಅಧ್ಯಯನ

ತಾತ್ಕಾಲಿಕವಾಗಿ ತಟಸ್ಥರಾಗಿದ್ದ ಇವರು ಈಗ ಭಕ್ತ ಭಂಡಾರವನ್ನು ಬಡಿದು ಕೆಲವು ಜಾತ್ಯಂಧರನ್ನು ಮಂಡೂಕ ಭಂಡ ರಾಗಿಸುವತ್ತ ಒತ್ತು ಕೊಟ್ಟು ಕ್ರಿಯಾಶೀಲರಾಗಿದ್ದಾರೆ. ಈ ಧರ್ಮ ಭಂಜಕರು ತಮ್ಮ ಪ್ರಾಯೋಜಕ ರಾಜಕಾರಣಿಯ ಜಾತ್ಯಂಧ ಅಭಿಮಾನಿ ಗಳನ್ನು ಬಳಸಿಕೊಂಡು ಈಗ ವೀರಶೈವರು ರೇಣುಕರು ಯಾನೆ ರೇವಣಸಿದ್ಧರು ಕುರುಬರು ಎಂಬ ಸಂಕಥನಕ್ಕೆ ಸಾಕ್ಷ ಎನ್ನುವ ಸ್ಟೆರಾಯ್ಡ್ ಕೊಟ್ಟು ಬಡಿದೇಳಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸ್ವಘೋಷಿತ ಚಿಕಿತ್ಸಕ ಸಂಶೋಧಕರು ಗಳು ಸ್ಟೆರಾಯ್ಡ್ ಚುಚ್ಚುಮದ್ದುಗಳನ್ನು ಧಾರಾಳವಾಗಿ ಕೊಡುತ್ತಿದ್ದಾರೆ.

ಅವರ ವಾದ ಸರಿಯೇ? ಸ್ವಲ್ಪ ವಿಶ್ಲೇಷಿಸಿ ನೋಡೋಣ‌

ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ಧೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರ ಪಟ್ಟಿಕೆ ಇದು ಎನ್ನುತ್ತಾ ತಾಮ್ರದ ಬಿಲ್ಲೆಯೊಂದನ್ನು ಸಾಕ್ಷಿಯಾಗಿಸಿ, ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟು ಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರದ ಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ರೇವಣಸಿದ್ಧರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ.

ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರ ಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆ ಯು ಅಡಗಿಸಿಕೊಂಡಿದೆ. ಹಾಲುಮತದ ಶ್ರೀ ರೇವಣಸಿದ್ಧೇಶ್ವರರ ಮೂಲ ಗುರುಪೀಠದ ಅಸ್ಮಿತೆಗಳನ್ನು ವೀರಶೈವರು ಹೇಗೆ ಹಾಳು ಮಾಡಿದ್ದಾರೆಂಬುದು ಸ್ವತಃ ಹಾಲುಮತ ಕುರುಬರಿಗೆ ಅರಿವಿಗಿಲ್ಲದಂತಾಗಿದೆ.

Screenshot_8

ಕುರುಬರ ಇತಿಹಾಸವನ್ನು ನಾಡಿನಾದ್ಯಂತ ಪ್ರಚುರಪಡಿಸಬೇಕಾದವರು ತಮ್ಮದಲ್ಲದ ವೀರಶೈವ ಪಂಚಾಚಾರ್ಯರ ಇತಿಹಾಸವನ್ನು ಸಾರುವ ಸಾಂಸ್ಕೃತಿಕ ಹೇರಿಕೆಗೆ ಕುರುಬರು ಒಳಗಾಗಿzರೆ. ಹಾಲುಮತ ಕುರುಬ ಸಮುದಾಯದ ಲಿಂಗದಬೀರರ ಕುಣಿತವು ವೀರಶೈವರ ಕೈವಶವಾಗಿ ಬಿನ್ನಾಯ ಮಾಡುವ ಜಂಗಮರ ಪುರವಂತಿಕೆಯಾಯಿತು.

ಕುರುಬರ ಬೀರಲಿಂಗನು ವೀರಭದ್ರನಾಗಿ ಹಾಗೂ ಲಿಂಗದಬೀರರ ಕುಣಿತವು ವೀರಗಾಸೆ ಯಾಗಿ ವೀರಶೈವರಿಂದ ಉನ್ನಯನಗೊಂಡಿತು. ಹೀಗಾಗಿ ವೀರಗಾಸೆಯ ವಚನ ಪಲುಕು ಗಳು ಲಿಂಗಿಬ್ರಾಹ್ಮಣರ ಶ್ಲೋಕಗಳೇ ಆಗಿರುತ್ತವೆ. ಕನ್ನಡ ಜಾಯಮಾನಕ್ಕೆ ಎರವಾಗಿ ಸಂಸ್ಕೃತದ ಸಿದ್ಧಾಂತ ಶಿಖಾಮಣಿಯ ಪ್ರಭಾವಲಯದಲ್ಲಿ ಶರಣರ ವಚನಗಳನ್ನು ಕೂಡಾ ಪ್ರಕ್ಷಿಪ್ತಗೊಳಿಸಿದ ಬ್ರಾಹ್ಮಣ್ಯವನ್ನು ನಾವಿಲ್ಲಿ ನೋಡಬಹುದು.

ಹೆಸರುಗಳೇ ಸೂಚಿಸುವಂತೆ ರೇವಣಸಿದ್ಧ ಮತ್ತು ಮರುಳಸಿದ್ಧರು ಸಿದ್ಧ ಪರಂಪರೆಗೆ ಸೇರಿ ದವರು. ಸಿದ್ಧ ಪರಂಪರೆಯ ಸಿದ್ಧರನ್ನು, ವೀರಶೈವರು ಆಚಾರ್ಯ ಪರಂಪರೆಗೆ ಪಲ್ಲಟಿಸಿ ಕೊಂಡಿದ್ದರಿಂದಾಗಿ ಕುರುಬರ ಕುಲಗುರು ರೇವಣಸಿದ್ಧನು ವೀರಶೈವರ ರೇಣುಕಾಚಾರ್ಯ ನಾಗಿದ್ದಾನೆ. ಶ್ರೀ ರೇಣುಕಾಚಾರ್ಯ ಎಂಬುವವನು ಆಂಧ್ರಪ್ರದೇಶದಿಂದ ಬಂದ ತೆಲುಗು ಬಾಳು ಆರಾಧ್ಯ ಜಂಗಮರ ಸುಳ್ಳು ಸೃಷ್ಟಿಯ ಕಾಲ್ಪನಿಕ ನಾಯಕ. ಕುರುಬ ಜಾತಿ ಮೂಲದ ಘನಶರಣ ರೇವಣಸಿದ್ಧನನ್ನು ವೀರಶೈವರು ರೇಣುಕಾಚಾರ್ಯನನ್ನಾಗಿ ಹೈಜಾಕ್ ಮಾಡಿದ್ದಾರೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಈ ತಾಮ್ರಬಿಯು, ‘ಶ್ರೀಮತ್ಕುರುಬ ಮತಸ್ಥಾಪಕ ಶ್ರೀ ರೇಣುಕಾಚಾರ್ಯ ವಂಶೀಯ ಶ್ರೀ ಸರವೂರ ಮಹಾಸಂಸ್ಥಾನ ಶಾಖಾ, ಶ್ರೀ ಅಣತಿ ಮಠ ಸಿಂಹಾಸನ, ಮೈಸೂರು ದೇಶ- 109’ ಎಂದು ಹೇಳುತ್ತದೆ. ಇಲ್ಲಿ ಕುರುಬ ಕುಲದ ಸ್ಥಾಪಕ ಶ್ರೀ ರೇಣುಕಾಚಾರ್ಯ ಎಂದು ಹೇಳಲಾ ಗಿದೆಯೇ ಹೊರತು ಅಸಲಿ ಕುರುಬರ ಕುಲಗುರು ರೇವಣಸಿದ್ಧನ ಹೆಸರು ಇರುವುದಿಲ್ಲ.

ಮೈಸೂರು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕವನ್ನು ಮೈಸೂರು ದೇಶ ಎಂದು ಕರೆಯಲಾಗಿದೆ. ಆ ಕಾಲದ ಮೈಸೂರು ಒಡೆಯರು ಅಣತಿ ಮಠಕ್ಕೆ ನೀಡಿದ್ದ 109ನೇ ಸಂಖ್ಯೆಯ ತಾಮ್ರದ ಸರ್ಕೀಟು ಬಿ ಇದು. ಇಂತಹ ಬಿಗಳನ್ನು ಯಾವ ಯಾವ ಮಠಗಳಿಗೆ ಒದಗಿಸಲಾಗಿತ್ತೋ ಅಂತಹ ಮಠಗಳಿಗೆ ರಾಜಮರ್ಯಾದೆಯೂ ಇರುತ್ತಿತ್ತು.

ಹಾಲುಮತ ಕುಲಗುರು ಶ್ರೀ ರೇವಣಸಿದ್ಧೇಶ್ವರನ ಅಣತಿ ಮಠ ಮೈಸೂರು ಒಡೆಯರ ಕಾಲ ದಲ್ಲಿ ರಾಜಮರ್ಯಾದೆಗೆ ಪಾತ್ರವಾಗಿತ್ತು. ಈಗ ಕುರುಬರ ಕುಲಗುರು ಶ್ರೀ ರೇವಣಸಿದ್ಧನೇ ಹೊರತು ವೀರಶೈವ ಪಂಚಾಚಾರ್ಯರ ಶ್ರೀ ರೇಣುಕಾಚಾರ್ಯನಲ್ಲ ಎಂಬುದನ್ನು ಮನಗಾಣುವಂತಾಗಲಿ ಎಂದು ವಡ್ಡಗೆರೆ ನಾಗರಾಜಯ್ಯ ಎನ್ನುವವರು ಉಗ್ರವಾಗಿ ಕ್ರಾಂತಿಗೆ ಕರೆ ನೀಡಿದ್ದಾರೆ.

ಇನ್ನೋರ್ವ ಸ್ವಘೋಷಿತ ಸಂಶೋಧಕ, ಜ್ಯೋತಿಷಿ, ಸಮ್ಮೋಹನಾ ಚತುರ, ಗುರೂಜಿ ಎಂಬೆ ವಿಶೇಷಣಗಳ ಚಂದ್ರಕಾಂತ ಬಿಜ್ಜರಗಿಯವರು, ಹಾಲುಮತದ ಉಗಮ ಹನ್ನೊಂದನೇ ಶತಮಾನದ ಪದ್ಮಗೊಂಡನಿಂದ ಆಯಿತು. ಅವನುಗಳೆ ಹೊಡೆಯುವಾಗ ಹುತ್ತವೊಂದು ಒಡೆದು ಅದರಿಂದ ಕುರಿಗಳು ಬಂದವು ಎಂಬ ಜನಪದ ಕತೆ ಹೇಳುತ್ತಾ ಕುರುಬ ರೇವಣ ಸಿದ್ಧರು ನಾಥಪಂಥಕ್ಕೆ ಹೋಗಿ ನಂತರ ನವನಾಥ ಪಂಥಕ್ಕೆ ಹೋಗಿ ಕೊಲ್ಲಿ ಪಾಕಿಗೆ ಬಂದರು ಎನ್ನುತ್ತ ಇದೆಲ್ಲವೂ ಕಲ್ಪಿತ ಎನ್ನುತ್ತಲೇ ಇದಕ್ಕೆ ಇತಿಹಾಸವಿದೆ ಎನ್ನುತ್ತಾ ಸಿರಿವಾಳ ಶಾಸನವನ್ನು ಉಲ್ಲೇಖಿಸುತ್ತಾರೆ. ಈ ಶಾಸನದ ಪ್ರಕಾರ ರೇವಣಸಿದ್ಧರು ತಮ್ಮ ತಂದೆಯ ಹೆಸರಿಗೆ ದೇವಸ್ಥಾನ ಕಟ್ಟಿಸಿದ್ದರು ಎನ್ನುತ್ತಾರೆ.

ಅದೇ ರೀತಿ ಇನ್ನೋರ್ವ ಉದಯೋನ್ಮುಖ ಸಂಶೋಧಕರು, ವೇದಗಳಲ್ಲಿ, ವ್ಯಾಸನ ಪುರಾಣ ಗಳಲ್ಲಿ ವೀರಶೈವ, ರೇಣುಕಾಚಾರ್ಯ ಅಥವಾ ಪಂಚಪೀಠ ಎಂಬ ಶಬ್ದಗಳು ಸಿಗುವದಿಲ್ಲ ಎನ್ನುತ್ತಾ, ಕ್ರಿ.ಶ. 11ನೇ -12ನೇ ಶತಮಾನದಲ್ಲಿ ಕುರುಬರ ಕುಲಗುರು ರೇವಣಸಿದ್ದರು ಬದುಕಿದ್ದ ಕಾಲ. ಇವರು ವೈದಿಕ ಧರ್ಮದ ಜಾತಿ ವ್ಯವಸ್ಥೆ, ಮೂಢ ನಂಬಿಕೆಗಳನ್ನು ಕಂಡು ವೈದಿಕ ಧರ್ಮವನ್ನು ತ್ಯಜಿಸಿದವರು. ರೇವಣಸಿದ್ದರು ಹನ್ನೆರಡನೇ ಶತಮಾನದಲ್ಲಿ ಇಂದಿನ ಶಹಾಪೂರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಬರುವ ಶಾಸನದ ಪ್ರಕಾರ ಲಿಂಗ ದೀಕ್ಷೆಯನ್ನು ಪಡೆದರು.

ಗುರು ರೇವಣಸಿದ್ದರ ಮಗ ರುದ್ರಮುನಿಯು ಸಹ ಹನ್ನೆರಡನೇ ಶತಮಾನದ ಕಲ್ಯಾಣದಲ್ಲಿ ಮಹಾನ ಶರಣನಾಗಿ ಬದುಕಿದವನು. ಈ ರೇವಣಸಿದ್ದರನ್ನು ಹಾಗೂ ಅವರ ಮಗ ರುದ್ರ ಮುನಿಯನ್ನು ಹೈಜಾಕ್ ಮಾಡಿಕೊಂಡು ಹಾಲುಮತದ ರೇವಣಸಿದ್ದರೇ ರೇಣುಕಾಚಾರ್ಯ ಎಂಬ ಕಾಲ್ಪನಿಕ ಹೆಸರು ಕೊಟ್ಟು ಜನರನ್ನು ಕತ್ತಲೆಯಲ್ಲಿ ಇಟ್ಟಿದ್ದರು.

ಇಂದು ಅನೇಕ ಸಂಶೋಧನೆಗಳು ನಡೆದು ವಿಶ್ವವಿದ್ಯಾಲಯ ಸಂಶೋಧನಕಾರರು ಸಹ ಗುರು ರೇವಣಸಿದ್ದರು ಹಾಲುಮತದ ಕುರುಬರ ಕುಲಗುರು ಎಂದು ಸಾಬೀತಾಗಿದೆ. ಇಂದಿನ ಬಾಳೆಹೊನ್ನೂರು ರೇವಣಸಿದ್ದ ಪರಂಪರೆಯ ಮಠವಾಗಿದ್ದು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಹಿರಿಯ ಸಹೋದರಿ ಅಕ್ಕನಾಗಮ್ಮ ಕೆಲಕಾಲ ಇಲ್ಲಿ ತಂಗಿದ್ದರೆಂಬ ಐತಿಹಾಸಿಕ ಸತ್ಯ ಹೊರಬಂದಿದೆ ಎಂದಿದ್ದಾರೆ.

ಈ ಮೂವರ ಅಭಿಪ್ರಾಯವನ್ನೇ ಬಹುಪಾಲು ಪುಟಾಣಿ ಪೀಠಾಧಿಪತಿಗಳು/ಸಂಶೋಧಕರು/ಜಾತ್ಯಭಿಮಾನಿಗಳು ಭಜಿಸುತ್ತಿದ್ದಾರೆ. ಹಾಗಾಗಿ ಈ ಹಿನ್ನೆಲೆಯಲ್ಲಿ ರೇವಣಸಿದ್ಧರ ಇತಿಹಾಸ, ಪುರಾಣ, ಶಾಸನಗಳನ್ನು ವಿಶ್ಲೇಷಿಸಿ ಇದರ ಸತ್ಯಾಸತ್ಯತೆಯನ್ನು ಕಂಡುಕೊಳ್ಳೋಣ.

ಅಂದ ಹಾಗೆ ಬಸವಣ್ಣನೇ ಇಷ್ಟಲಿಂಗ ಜನಕ, ಲಿಂಗಾಯತ ಮತಸ್ಥಾಪಕ ಎಂದೇ ಪ್ರತಿಪಾದಿ ಸುವ ತೋಂಟದ ಶ್ರೀಗಳು ಬಸವಣ್ಣನಿಗೂ ಮುಂಚೆ ಇಷ್ಟಲಿಂಗ ಧರಿಸಿದ್ದ ರೇವಣಸಿದ್ಧ ಎಂದು ಪುಸ್ತಕ ಬರೆದ ಶ್ರೀಮಾನ್ ಚಂದ್ರಕಾಂತ ಬಿಜ್ಜರಗಿಯವರಿಗೆ, ಡಾ.ಫ.ಗು.ಹಳಕಟ್ಟಿ ಯವರ ನಂತರ ಸಂಶೋಧನೆಯಲ್ಲಿ ನಿಮ್ಮ ಹೆಸರು ಎದ್ದು ಕಾಣುವಂತಹುದು ಎಂದು ಪ್ರಶಂಸನಾ ಪತ್ರ ಕೊಟ್ಟಿದ್ದಾರೆ!

ಏಕೆ...?ಐತಿಹಾಸಿಕ ಗ್ರಾಂಥಿಕ ದಾಖಲೆಗಳ ಪ್ರಕಾರ ರೇವಣಸಿದ್ಧ ಎನ್ನುವ ನಾಲ್ಕು ವೀರಶೈವ ಯತಿಗಳು ಹನ್ನೆರಡನೇ ಶತಮಾನಕ್ಕೂ ಮುಂಚೆಯೇ ಆಗಿಹೋಗಿದ್ದಾರೆ. ಒಂದನೇ ಶತಮಾನದ ಸ್ವಯಂಭೂವ ಆಗಮ ಮತ್ತು ಐದನೇ ಶತಮಾನದ ಸುಪ್ರಭೇಧಾ ಗಮದಲ್ಲಿರುವಂತೆ ರೇವಣಸಿದ್ಧರೇ ರೇಣುಕರ ಅವತಾರ ಎಂದಾಗುತ್ತದೆ.

ಇದು ಮೊದಲನೇ ರೇವಣಸಿದ್ಧರು ಉರ್ಫ್‌ ರೇಣುಕಾಚಾರ್ಯರು ಎನ್ನಬಹುದು. ಇನ್ನು ಏಳನೇ ಶತಮಾನದ ಗುರುವಂಶಕಾವ್ಯ ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಶಂಕರಾಚಾರ್ಯ ರಿಗೆ ಚಂದ್ರಮೌಳೀಶ್ವರ ಲಿಂಗ ಕೊಟ್ಟವರು ಸಹ ರೇವಣಸಿದ್ಧರು. ಶೃಂಗೇರಿ ಪೀಠದ ಆಸ್ಥಾನ ವಿದ್ವಾನರಾಗಿದ್ದ ಕಾಶಿ ಲಕ್ಷ್ಮಣ ಶಾಸ್ತ್ರಿಗಳು ಕ್ರಿಸ್ತ ಶಕ 1735ರಲ್ಲಿ ಸಂಸ್ಕೃತದಲ್ಲಿ ಪುನರ್ರಚಿಸಿದ್ದ ಮತ್ತು ವಿದ್ಯಾ ವಿಶಾರದ, ವಿದ್ವತ್ ಶಿರೋಭೂಷಣ ಮೈಸೂರು ರಾಜ್ಯದ ಧರ್ಮಾಧಿಕಾರಿ ಎನ್ನಲಾಗಿರುವ ಕುಣಿಗಲ್ ರಾಮಶಾಸ್ತ್ರಿಗಳು ಎರಡು ಶತಮಾನಗಳ ನಂತರ ಸಂಪಾದಿಸಿ ಪ್ರಕಟಿಸಿರುವ ಗುರುವಂಶ ಕಾವ್ಯ ಸಂಪುಟ 1, ಭಾಗ 1-7, ತೃತೀಯ ಸರ್ಗ ಪುಟ 109 ಮತ್ತು 110ರಲ್ಲಿ, ...ಶ್ರೀತಿ | ಸ ಆಚಾರ್ಯಃ ಅಸ್ಮೈ ವಿಶ್ವರೂಪಾ ಚಾರ್ಯಾಯ ಸುಸಿದ್ಧದತ್ತೇ ಸುಭಿದೇನ ರೇವಣಾಸಿದ್ಧಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಂ ಸದ್ರತ್ನ ಗರ್ಭೇ ಸತ್ವರಾಭಿ ಸತ್ವರಂ ಮಾಣಿಕ್ಯಂ ಗರ್ಭೇ ಯಸ್ಯ ಸ ತಥೋಕ್ತಸ್ತಂ ಗಣನಾಯಕಂ ವಿಶ್ವೇಶ್ವರಂ ಚ ದತ್ವಾ ಚಿರಂ ಬಹುಕಾಲಂ ಅಚಿಂತ್ಯ ಪೂಜ್ಯ ಇತಿ ನ್ಯಯಾದೀತ್ | ಅಬೋಚತ್ || ಎಂದಿದೆ.

ಇಲ್ಲಿ ಸ್ಪಷ್ಟವಾಗಿ ಶಂಕರಾಚಾರ್ಯರಿಗೆ ರೇವಣಸಿದ್ಧರು ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟರು ಎಂದು ತಿಳಿದುಬರುತ್ತದೆ. ಶಂಕರರು ಕಾಲವಾದದ್ದು ಕ್ರಿಸ್ತಶಕ 820ರಲ್ಲಿ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಆನಂದಗಿರಿ ರಚಿಸಿರುವ ’ಆನಂದಗಿರೀಯ ಶಂಕರ ವಿಜಯ’ ಕೃತಿಯಲ್ಲಿ ಶಿರಸ್ಯೆ ಪಾಷಾಣಲಿಂಗಂಚ ಧಾರಿಣಃ ಜಂಗಮಾಃ ಅಂದರೆ ಶಂಕರಾ ಚಾರ್ಯರು ಶಿರಸ್ಸಿನಲ್ಲಿ ಲಿಂಗ ಕಟ್ಟಿಕೊಂಡವರ ಜೊತೆ ವಾದಿಸಿದ್ದರು ಎಂದಾಗುತ್ತದೆ. ಈ ಕೃತಿಯ ಕರ್ತೃ ಆನಂದಗಿರಿಯು ಶಂಕರಾಚಾರ್ಯರ ಸಮಕಾಲೀನನು ಮತ್ತು ಅವರ ಶಿಷ್ಯನೂ ಆಗಿದ್ದನು. ಅಂದರೆ ಸ್ಪಷ್ಟವಾಗಿ ಅಂದು ಕೊರಳಲ್ಲಿ ಲಿಂಗಧಾರಣೆಯ ಆಚರಣೆ ಯಿತ್ತು ಮತ್ತು ಶಂಕರರೊಂದಿಗೆ ರೇವಣಸಿದ್ಧರು ಸಂವಾದದಲ್ಲಿ ತೊಡಗಿದ್ದರು ಎಂಬುದು ಸಾಬೀತಾಗುತ್ತದೆ. ಇನ್ನು ಮೂರನೇ ಮತ್ತು ನಾಲ್ಕನೇ ರೇವಣಸಿದ್ಧರ ಕುರಿತು ಕ್ರಿಸ್ತಶಕ ಕಲ್ಯಾಣ ಚಾಲುಕ್ಯರ ಆಡಳಿತದ ಕ್ರಿ.ಶ.1026ರಿಂದ ಕ್ರಿ.ಶ.1208ರವರೆಗೆ ಹಲವಾರು ಶಾಸನಗಳಿವೆ.

ಕ್ರಿ.ಶ.1170ರ ಸಿರಿವಾಳ ಶಾಸನದಲ್ಲಿ ಶಾಂತಿಮಯ್ಯದೇವರ ಪುತ್ರ ರೇವಣಸಿದ್ಧಯ್ಯ/ಸಿದ್ಧರೇವಯ್ಯ ಎಂದಿದೆ. ಸಿರಿವಾಳದ ಕ್ರಿ.ಶ.1175 ಇನ್ನೊಂದು ಶಾಸನದಲ್ಲಿ ಸಹ ರೇವಣಯ್ಯ ಎಂದಿದೆ. ಕ್ರಿ.ಶ.1120ರ ಕುಕ್ಕೇರಿ ಶಾಸನದಲ್ಲಿ, ಕ್ರಿಯಾಪರ್ಷೆ ಕಾಳಾಮುಖಾ ಚಾರ್ಯನಾದ ಬ್ರಹ್ಮರಾಶಿ ಪಂಡಿತನು ರೇವಣಸಿದ್ಧರ ಶಿಷ್ಯನೆಂದು ಉಲ್ಲೇಖವಿದೆ.

ಕುಕ್ಕೇರಿಯ ಕ್ರಿ.ಶ.1172ರ ಇನ್ನೊಂದು ಶಾಸನದಲ್ಲಿಯೂ ರೇವಣಸಿದ್ಧ ಎಂಬ ಹೆಸರಿದೆ. ಕ್ರಿ.ಶ.1175 ಹೋತಗಲ್ಲ ಶಾಸನದಲ್ಲಿ, ಶಾಂತಿಮಯ್ಯ ಮತ್ತು ಸಿದ್ದರೇವಣಯ್ಯ ಎಂಬ ಉಲ್ಲೇಖವಿದೆ. ಕ್ರಿ.ಶ. 1208ರ ಇನ್ನೊಂದು ಹೋತಗಲ್ಲ ಶಾಸನದಲ್ಲಿ ರೇವಣೇಶ್ವರರು ಗದ್ದುಗೆ ಪೂಜೆಯನ್ನು ಕಾಳಾಮುಖಾಚಾರ್ಯನಾದ ನಾಗರಾಶಿ ಎಂಬವನಿಗೆ ವಹಿಸಿಕೊಟ್ಟ ಪ್ರಸ್ತಾಪ ವಿದೆ.

ಹೀಗೆ ಶಾಸನಗಳ ಪ್ರಕಾರ ಕಲ್ಯಾಣ ಚಾಳುಕ್ಯರ ಕ್ರಿ.ಶ.1026ರಲ್ಲಿ ವಯಸ್ಕ (ಇಪ್ಪತ್ತರ ಹರೆಯ ಎಂದು ಊಹಿಸಿ) ರೇವಣಸಿದ್ಧರು ಕ್ರಿ.ಶ.1208ರಲ್ಲಿ ಲಿಂಗೈಕ್ಯನಾಗಿ ಸಮಾಧಿ ಗದ್ದುಗೆ ಕಟ್ಟಿಸಿಕೊಂಡ ಶಾಸನದವರೆಗೆ ಸುಮಾರು 202 ವರ್ಷ ಕಾಲ ಜೀವಿಸಿದ್ದರು ಎಂದಾಗುತ್ತದೆ!!

ಡಾ.ಎಂ.ಎಂ.ಕಲಬುರ್ಗಿಯವರು, ರೇವಣಸಿದ್ಧನು ಕಲ್ಯಾಣ ಚಾಳುಕ್ಯ ವಿಕ್ರಮಾದಿತ್ಯ, ಮೂರನೆಯ ಸೋಮೇಶ್ವರ, ಕಲಚೂರಿ ತೈಲಪ ಬಿಜ್ಜಳನ ಕಾಲದವರೆಗೆ ಬಾಳಿದ್ದರು ಎಂದು ಶಾಸನ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ಹೇಳುತ್ತಾರೆ. ಅಂದರೆ ವಿಕ್ರಮಾದಿತ್ಯನ ಕ್ರಿ.ಶ.1008ರಿಂದ ಬಿಜ್ಜಳನ ಕ್ರಿ.ಶ.1167ರವರೆಗೆ ಎಂದುಕೊಂಡರೂ 159 ವರ್ಷ ಬದುಕಿದ್ದರು ಎಂದಾಗುತ್ತದೆ!!

ಅಂದರೆ ನಿಸ್ಸಂಶಯವಾಗಿ ವಿಕ್ರಮಾದಿತ್ಯನ ಕಾಲದ ರೇವಣರೇ ಬೇರೆ, ಬಿಜ್ಜಳನ ಕಾಲದ ರೇವಣರೇ ಬೇರೆ! ಹಾಗಾಗಿಯೇ ನಾನು ನಾಲ್ಕು ರೇವಣಸಿದ್ಧರಿದ್ದಾರೆ ಎಂದದ್ದು. ಇದಕ್ಕೆ ಜಾನಪದದಲ್ಲಿ ಸಾಕ್ಷಿ ಇದೆ. ಅಲ್ಲದೆ ರೇವಣಸಿದ್ಧರು ಕುರುಬರು ಎನ್ನುವವರ ವಾದದಲ್ಲಿ ಯೇ ಸಾಕ್ಷ ಇದೆ. ಆದರೆ ಅದೆಲ್ಲವೂ ರೇವಣಸಿದ್ಧರು ಕುರುಬರು ಎಂಬ ವಾದವನ್ನು ಲವಲೇಶದಷ್ಟೂ ಸಾಬೀತು ಮಾಡುವುದಿಲ್ಲ. ಮುಂದಿನ ಭಾಗದಲ್ಲಿ ಸಿರಿವಾಳ ಶಾಸನದ ಬಗ್ಗೆ ನೋಡೋಣ.