Lokesh Kaayarga Column: ನಮ್ಮ ಮೆಟ್ರೋ, ನಿಮ್ಮದೂ ಆಗುವುದು ಯಾವಾಗ ?
ಸಾಲ ಕಂತು ತುಂಬಬೇಕಾದರೆ ಆದಾಯ ಹೆಚ್ಚಳ ಆಗಲೇಬೇಕು. ಆಮೆಗತಿಯಲ್ಲಿ ಸಾಗುತ್ತಿರುವ ಬೆಂಗಳೂರು ಮೆಟ್ರೋ ಮಾರ್ಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದರೆ ಇನ್ನಷ್ಟು ಹಣ ಬೇಕು. ಹೀಗಾಗಿ ದರ ಹೆಚ್ಚಳ ಎರಡೂ ಸರಕಾರಗಳ ಜಂಟಿ ನಿರ್ಧಾರ. ಆದರೆ ದರ ಹೆಚ್ಚಳ ದಿಂದಾಗುವ ಜನಾಕ್ರೋಶವನ್ನು ಎದುರಿಸಲು ಎರಡೂ ಸರಕಾರಗಳು ಸಿದ್ಧವಿಲ್ಲ. ಹೀಗಾಗಿ ಬೆಂಗಳೂರಿನ ವಾಹನ ದಟ್ಟಣೆಗೆ ಮುಕ್ತಿ ನೀಡಬೇಕಿದ್ದ ‘ನಮ್ಮ ಮೆಟ್ರೋ’ ರಾಜಕೀಯದ ಕೆಸರಿನಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.
-
ಲೋಕಮತ
ಸೀನ್ ನಂಬರ್ 1: ಮೆಟ್ರೋ ನಮ್ಮ ಅಧೀನದಲ್ಲಿ ಇಲ್ಲ. ದರ ಏರಿಕೆ ನಿರ್ಧಾರ ಏನಿದ್ದರೂ ಕೇಂದ್ರ ಸರಕಾರದ ನಿರ್ಧಾರ.
ಸೀನ್ ನಂಬರ್ 2: ಮೆಟ್ರೋ ಮಾರ್ಗ ಮಾತ್ರ ನಮ್ಮ ಯೋಜನೆ. ದರ ಏರಿಕೆ ವಿಚಾರದಲ್ಲಿ ರಾಜ್ಯ ಸರಕಾರದ್ದೇ ಅಂತಿಮ ಮಾತು.
ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದ ಬಿಜೆಪಿ ಸರಕಾರ ಕಳೆದ ಎರಡು ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಮಹಾ ನಾಟಕದ ದೃಶ್ಯಗಳಿವು. ಇದೀಗ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಈ ಸಂಬಂಧ ಇಬ್ಬರದ್ದೂ ಒಂದೇ ಡೈಲಾಗ್- ‘ಈ ನಿರ್ಧಾರ ನಮ್ಮದು’.
ಒಳಿತೆಲ್ಲವೂ ನಮ್ಮದು, ಕೆಡುಕೆಲ್ಲವೂ ಅವರದ್ದು ಎನ್ನುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಣ ಈ ಕಿತ್ತಾಟದ ಪ್ರಹಸನವನ್ನು ಮೂಕ ಪ್ರೇಕ್ಷಕರಾಗಿ ವೀಕ್ಷಿಸುವುದು, ಎಷ್ಟೇ ದರ ಹೆಚ್ಚಳ ವಾದರೂ ತಲೆ ಬಗ್ಗಿಸಿ ಪಾವತಿಸುವುದಷ್ಟೇ ನಮ್ಮ ಪಾತ್ರ.
ಇವುಗಳ ಒಟ್ಟು ತಾತ್ಪರ್ಯ ಎಂದರೆ ನಾವು ‘ನಮ್ಮ’ ಮೆಟ್ರೊ ಎಂದು ಹೆಮ್ಮೆಯಿಂದ ಕರೆಯುವ ಮೆಟ್ರೋ ಮಾರ್ಗ ನಮ್ಮದಲ್ಲ. ಖಾಸಗಿ ಬಸ್ಸು, ವಿಮಾನಗಳಂತೆ ನಮ್ಮ ಟಿಕೆಟ್ ಹಣದಲ್ಲಿ ಓಡುವ ರೈಲಷ್ಟೇ. ಇಲ್ಲಿ ಕೇಂದ್ರದ ಮಾತೂ ನಡೆಯುವುದಿಲ್ಲ. ರಾಜ್ಯದ ಮಾತೂ ನಡೆಯುವುದಿಲ್ಲ. ಬಂಡವಾಳ ಹೂಡಿಕೆದಾರರದ್ದೇ ಅಂತಿಮ ಮಾತು. ಹೆಚ್ಚೆಂದರೆ ‘ನಮ್ಮ ಆರ್‌ಸಿಬಿ’ ಎಂದು ಅಭಿಮಾನಪಟ್ಟುಕೊಳ್ಳುವಂತೆ ಇಲ್ಲೂ ನಮ್ಮದೇ ದುಡ್ಡಿನಲ್ಲಿ ಅಭಿಮಾನ ಇಟ್ಟುಕೊಳ್ಳಬಹುದು.
ತುಂಬಾ ಸರಳವಾಗಿ ಹೇಳಬೇಕೆಂದರೆ ನಮ್ಮ ಮೆಟ್ರೋ ಬ್ರ್ಯಾಂಡ್ ನೇಮ್ ಹೊಂದಿರುವ ಬಿಎಂಆರ್ ಸಿಎಲ್ ಒಂದು ಕಾರ್ಪೋರೇಟ್ ಸಂಸ್ಥೆ. ವ್ಯತ್ಯಾಸ ಎಂದರೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಷೇರು ಬಂಡವಾಳ ಹೊಂದಿವೆ. ಈ ಜಂಟಿ ಉದ್ಯಮವನ್ನು ನಡೆಸಲು ಬಾಹ್ಯ ಸಾಲ ಪಡೆಯಲಾಗಿದೆ. ಈ ಸಾಲದ ಮರುಪಾವತಿ ಜವಾಬ್ದಾರಿಯನ್ನು ಎರಡೂ ಸರಕಾರಗಳು ಹಂಚಿಕೊಂಡಿವೆ.
ಇದನ್ನೂ ಓದಿ: Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?
ಸಾಲ ಕಂತು ತುಂಬಬೇಕಾದರೆ ಆದಾಯ ಹೆಚ್ಚಳ ಆಗಲೇಬೇಕು. ಆಮೆಗತಿಯಲ್ಲಿ ಸಾಗುತ್ತಿರುವ ಬೆಂಗಳೂರು ಮೆಟ್ರೋ ಮಾರ್ಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದರೆ ಇನ್ನಷ್ಟು ಹಣ ಬೇಕು. ಹೀಗಾಗಿ ದರ ಹೆಚ್ಚಳ ಎರಡೂ ಸರಕಾರಗಳ ಜಂಟಿ ನಿರ್ಧಾರ. ಆದರೆ ದರ ಹೆಚ್ಚಳ ದಿಂದಾಗುವ ಜನಾಕ್ರೋಶವನ್ನು ಎದುರಿಸಲು ಎರಡೂ ಸರಕಾರಗಳು ಸಿದ್ಧವಿಲ್ಲ. ಹೀಗಾಗಿ ಬೆಂಗಳೂರಿನ ವಾಹನದಟ್ಟಣೆಗೆ ಮುಕ್ತಿ ನೀಡಬೇಕಿದ್ದ ‘ನಮ್ಮ ಮೆಟ್ರೋ’ ರಾಜಕೀಯದ ಕೆಸರಿನಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದರ ಏರಿಕೆ ಮಾಡಿದ್ದು ನಾವಲ್ಲ, ಕೇಂದ್ರ ಸರಕಾರ ರಚಿಸಿದ ದರ ನಿಗದಿ ಸಮಿತಿ ಏರಿಕೆಗೆ ಶಿಫಾರಸು ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಬಿಜೆಪಿ ನಾಯಕರು, ರಾಜ್ಯ ಸರಕಾರವು ತನ್ನ ಹಣಕಾಸಿನ ಮುಗ್ಗಟ್ಟಿನಿಂದಾಗಿ ಮತ್ತು ಮೆಟ್ರೋಗೆ ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದರಿಂದಲೇ ದರ ಏರಿಕೆ ಅನಿವಾರ್ಯವಾಯಿತು ಎಂದು ಆರೋಪಿಸಿದ್ದಾರೆ.
ದರ ಏರಿಕೆಯ ತಾಂತ್ರಿಕ ನಿರ್ಧಾರ ಕೇಂದ್ರ ಸರಕಾರದ ಅಧೀನದಲ್ಲಿರುವ ವಿಶೇಷ ಸಮಿತಿಯದ್ದು. ಕೇಂದ್ರ ಸರಕಾರದ ನಗರ ಸಾರಿಗೆ ಮತ್ತು ವಸತಿ ಸಚಿವಾಲಯದಿಂದ ರಚನೆಯಾಗುವ ಸ್ವತಂತ್ರ ಸಮಿತಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವವಿರುತ್ತದೆ. ಇಲ್ಲಿ ರಾಜ್ಯ ಸರಕಾರದ ಪರವಾಗಿ ಒಬ್ಬರು ಮತ್ತು ಕೇಂದ್ರ ಸರಕಾರದ ಪರ ಒಬ್ಬ ಪ್ರತಿನಿಧಿ ಇರುತ್ತಾರೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅನ್ವಯ ಈ ಸಮಿತಿಯು ದರ ಏರಿಕೆ ಅಥವಾ ಇಳಿಕೆಯ ಶಿಫಾರಸು ಮಾಡುತ್ತದೆ. ಆದರೆ, ಬಿಎಂಆರ್‌ಸಿಎಲ್ ಒದಗಿಸುವ ಹಣಕಾಸು ಪರಿಸ್ಥಿತಿ ಮತ್ತು ವಸ್ತು ಸ್ಥಿತಿಯ ಆಧಾರದ ಮೇಲೆ ವಿಶೇಷ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಅಂದರೆ ದರ ಏರಿಕೆಯಲ್ಲಿ ಇಬ್ಬರೂ ಸಮಾನ ಪಾಲುದಾರರು.
ಮೆಟ್ರೋ ನಿರ್ಮಾಣಕ್ಕೆ ಬೇಕಾದ ಹಣವನ್ನು ಕೇವಲ ಪಾಲು ಬಂಡವಾಳದ ಮೂಲಕವಲ್ಲದೆ, ಸಬ್ಸಿಡಿ ಸಾಲ ಮತ್ತು ಬಾಹ್ಯ ಸಾಲಗಳ ಮೂಲಕ ಸಂಗ್ರಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಶೇ. 15ರಷ್ಟು ಪಾಲು ಬಂಡವಾಳ ತೊಡಗಿಸಿವೆ. ಇದಲ್ಲದೆ ಜಿಐಸಿಎ ಮತ್ತು ಎಡಿಬಿಯಂತಹ ಸಂಸ್ಥೆ ಗಳಿಂದ ಸಾಲ ಪಡೆದಿವೆ. ಹೆಚ್ಚುವರಿಯಾಗಿ ರಾಜ್ಯ ಸರಕಾರ ಭೂಸ್ವಾಧೀನ ವೆಚ್ಚವನ್ನು ಭರಿಸಿದೆ. ಈ ವೆಚ್ಚ ವನ್ನು ಭರಿಸಬೇಕಾದರೆ ಮೆಟ್ರೋ ಲಾಭದ ಹಳಿಗೆ ಬರಲೇಬೇಕು. ಹೀಗಾಗಿ ದರ ಏರಿಕೆ ಉಭಯ ಸರಕಾರಗಳ ಆಶಯವೂ ಹೌದು.
ದೇಶದ ಉಳಿದ ನಾಲ್ಕು ಮೆಟ್ರೋ ನಗರಗಳ ಜನತೆಗೆ ಹೋಲಿಸಿದರೆ ಕನ್ನಡಿಗರ ನಸೀಬು ಯಾವಾ ಗಲೂ ಖೊಟ್ಟಿ. ಮುಂಬಯಿ ಚೆನ್ನೈ ಮತ್ತು ಕೋಲ್ಕತ್ತಾ ನಗರಗಳಿಗೆ ಬ್ರಿಟಿಷರ ಕಾಲದಲ್ಲಿಯೇ ಸಬ್ ಅರ್ಬನ್ ರೈಲಿನ ಸೇವೆ ಲಭ್ಯವಾಯಿತು. ಮುಂಬಯಿನ ಚರ್ಚ್ ಗೇಟ್ ಮತ್ತು ವಿರಾರ್ ನಡುವೆ 1867ರಷ್ಟು ಹಿಂದೆಯೇ ರೈಲು ಸೇವೆ ಆರಂಭವಾಗಿತ್ತು. ಬ್ರಿಟಿಷರ ನೇರ ಅಧೀನದಲ್ಲಿದ್ದ ಈ ನಗರ ಗಳಲ್ಲಿ ಬ್ರಿಟಿಷರು ಆರಂಭಿಸಿದ್ದ ರೈಲು ಸೇವೆಯು ಸ್ವಾತಂತ್ರ್ಯಾ ನಂತರದಲ್ಲಿ ಮತ್ತಷ್ಟು ವಿಸ್ತರಣೆ ಯಾಯಿತು. ಇವೆಲ್ಲವೂ ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ನೇರ ಸುಪರ್ದಿಯಲ್ಲಿಯೇ ನಡೆಯಿ ತೆನ್ನುವುದು ಗಮನಾರ್ಹ.
ಇಂದು ಲೋಕಲ್ ಟ್ರೈನ್ ಮೆಟ್ರೋ ನಗರಗಳ ಜೀವನಾಡಿ. ಒಂದೇ ಒಂದು ಒಂದು ದಿನ ಸಬ್ ಅರ್ಬನ್ ರೈಲು ಸ್ಥಗಿತಗೊಂಡರೆ ಇಡೀ ಮುಂಬಯಿಯ ಜನಜೀವನ ಸ್ಥಗಿತಗೊಳ್ಳುತ್ತದೆ. ಇಲ್ಲಿನ ಮುಕ್ಕಾಲು ಭಾಗದಷ್ಟು ಸಾರಿಗೆ ಅವಶ್ಯಕತೆಯನ್ನು ಈ ರೈಲುಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಭರಿಸುತ್ತಿವೆ. ಕೇವಲ 300 ರು. ಕೊಟ್ಟು ಪಾಸ್ ಪಡೆದರೆ ಸುಮಾರು 30 ಕಿಮಿ. ಅಂತರ ಇರುವ ನವಿಮುಂಬೈ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ನಡುವೆ ತಿಂಗಳಿಡೀ ಸಂಚರಿಸಬಹುದು.
ಇನ್ನು ವಿಸ್ತೃತ ಸಬ್ ಅರ್ಬನ್ ರೈಲು ಸೇವೆಯಿಂದ ವಂಚಿತವಾಗಿದ್ದ ರಾಜಧಾನಿ ದೆಹಲಿಯಲ್ಲಿ 25 ವರ್ಷಗಳ ಹಿಂದೆಯೇ (2002) ಮೆಟ್ರೋ ರೈಲು ಸೇವೆ ಆರಂಭಿಸಲಾಯಿತು. ದೆಹಲಿ ಸರಕಾರ ಮತ್ತು ಕೇಂದ್ರ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಈ ರೈಲು ಯೋಜನೆ ಆರಂಭವಾದರೂ ಇಲ್ಲಿ ಕೇಂದ್ರ ಸರಕಾರವೇ ಹೆಚ್ಚಿನ ಹಣ ವ್ಯಯಿಸಿದೆ. ಈಗಲೂ ಇಲ್ಲಿನ ಮೆಟ್ರೋ ರೈಲಿನ ಭ ದ್ರತೆ ಹೊಣೆಯನ್ನು ಕೇಂದ್ರಸರಕಾರವೇ ನಿರ್ವಹಿಸುತ್ತಿದೆ. ಆದರೆ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದ ಭೂ ಸ್ವಾಧೀನದಿಂದ ಹಿಡಿದು ಭದ್ರತೆ ತನಕ ಎಲ್ಲ ವೆಚ್ಚವನ್ನು ರಾಜ್ಯ ಸರಕಾರ ಅರ್ಥಾತ್ ಕನ್ನಡಿಗರಾದ ನಾವೇ ಭರಿಸಬೇಕಾಗಿದೆ.
ಕೋಲ್ಕತ್ತಾ ಮೆಟ್ರೋದಲ್ಲಿ ಗರಿಷ್ಠ ಪ್ರಯಾಣ ದರ ಇನ್ನೂ 50 ರು. ದಾಟಿಲ್ಲ. ದೆಹಲಿ ಮೆಟ್ರೋ ಗರಿಷ್ಠ ದರ 60-65ರ ಆಸುಪಾಸಿನಲ್ಲಿದೆ. ಮುಂಬೈನಲ್ಲಿ ಗರಿಷ್ಠ ದರ ಇನ್ನೂ 80 ರು.ಗಳ ಮಿತಿ ಯಲ್ಲಿದೆ. ಆದರೆ ನಮ್ಮ ಮೆಟ್ರೋ ಪ್ರಯಾಣ ದರ 95ರ ಗಡಿ ದಾಟಿ ಶತಕ ಬರೆಯಲು ಸಜ್ಜಾಗಿದೆ. ಇದು ಕನ್ನಡಿಗರ ದುರದೃಷ್ಟ. ದೇಶದ ಅಭಿವೃದ್ಧಿ ಯೋಜನೆಗಳ ವಿಚಾರ ಬಂದಾಗ ನಮ್ಮ ಪಾಲಿನ ಕೊಡುಗೆ ನೀಡಲು ನಾವೆಂದೂ ಹಿಂಜರಿಯುವುದಿಲ್ಲ. ಸದ್ಯ ಮಹಾರಾಷ್ಟ್ರ ಬಿಟ್ಟರೆ ದೇಶದ ಜಿಡಿಪಿಗೆ ಮತ್ತು ಜಿಎಸ್‌ಟಿ ಜೋಳಿಗೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯ ಕರ್ನಾಟಕ. ಸ್ವತ: ಪ್ರಧಾನಿ ನರೇಂದ್ರ ಮೋದಿಯವರೇ ಬೆಂಗಳೂರು ದೇಶದ ಅಭಿವೃದ್ಧಿ ಎಂಜಿನ್ ಎಂದು ಹಲವು ಸಲ ಹೇಳಿದ್ದಾರೆ. ಆದರೆ ಬೆಂಗಳೂರಿನ ಅಭಿವೃದ್ಧಿ ವಿಚಾರ ಬಂದಾಗ ನಮ್ಮದು, ನಿಮ್ಮದು ಎಂಬ ಚರ್ಚೆ, ತರ್ಕ ಶುರುವಾಗುತ್ತದೆ.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ ರೈಲ್ವೆ ಅನುದಾನದ ವಿಚಾರವನ್ನೇ ತೆಗೆದು ಕೊಳ್ಳಿ. ಅತಿ ಹೆಚ್ಚು ಅನುದಾನ ಪಡೆದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರ 10ರ ಪಟ್ಟಿಯಲ್ಲೂ ಇಲ್ಲ. ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ 23,926 ಕೋಟಿ ರು. ಅನುದಾನ ದೊರೆತಿದೆ. 11ನೇ ಸ್ಥಾನ ದಲ್ಲಿರುವ ಕರ್ನಾಟಕಕ್ಕೆ ಸಿಕ್ಕಿರುವುದು 7,748 ಕೋಟಿ ರು. ಮಾತ್ರ. ಮೊದಲ 10 ಸ್ಥಾನದಲ್ಲಿರುವ ರಾಜ್ಯಗಳ ಪೈಕಿ ಪಶ್ಚಿ ಮಬಂಗಾಳವೊಂದೇ ಬಿಜೆಪಿಯೇತರ ರಾಜ್ಯ. ಚುನಾವಣೆ ಸಮೀಪದಲ್ಲಿರುವ ಕಾರಣ ಮತ್ತು ಪೂರ್ವಾಂಚಲದ ಅಭಿವೃದ್ಧಿ ಯೋಜನೆಯ ಭಾಗವಾಗಿ ಬಂಗಾಳಕ್ಕೆ 14,205 ಕೋಟಿ ರು. ದೊರೆತಿದೆ. ಮೋದಿ ಅವರ ತವರು ರಾಜ್ಯಕ್ಕೆ 17,366 ಕೋಟಿ ರು. ಅನುದಾನ ದೊರೆತಿದೆ.
ಭೂಸ್ವಾಧೀನ, ಸಬ್ಸಿಡಿ ಮತ್ತು ಇತರ ವೆಚ್ಚಗಳನ್ನು ಒಳಗೊಂಡಂತೆ ಈವರೆಗೆ ಮೆಟ್ರೋದ ಸುಮಾರು ಶೇ.87 ರಷ್ಟು ವೆಚ್ಚವನ್ನು ರಾಜ್ಯಸರಕಾರವೇ ಭರಿಸಿದೆ. ನೇರ ಅನುದಾನ ಮತ್ತು ಷೇರುಗಳ ರೂಪ ದಲ್ಲಿ ಕೇಂದ್ರದ ಪಾಲು ಸುಮಾರು ಶೇ. 13 ರಷ್ಟು ಮಾತ್ರ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾದ. ಈ ಅಂಕಿ ಅಂಶ ಪೂರ್ತಿ ಸರಿ ಎಂದಲ್ಲ. ಆದರೆ ಅಂದರೆ ಮೆಟ್ರೋ ರೈಲು ಆಗಲಿ, ವರ್ತುಲ ರೈಲು ಮಾರ್ಗವಾಗಲಿ ಕೇಂದ್ರ ಮತ್ತು ರಾಜ್ಯದ ಶೇ 50:50 ಅನುದಾನದಡಿ ಯಲ್ಲಿಯೇ ನಡೆಯಬೇಕು. ಇದರಲ್ಲಿ ಅತಿ ಹೆಚ್ಚು ಖರ್ಚಿನ ಬಾಬ್ತು ಭೂ ಸ್ವಾಧೀನದ್ದು. ಈ ಖರ್ಚ ನ್ನು ರಾಜ್ಯ ಸರಕಾರವೇ ಭರಿಸಬೇಕು. ಅಲ್ಲಿಗೆ ಮುಕ್ಕಾಲು ಪಾಲಿಗಿಂತ ಹೆಚ್ಚಿನ ಖರ್ಚು ಕರ್ನಾಟಕ ಸರಕಾರದ್ದು ಎನ್ನುವುದು ಸ್ಪಷ್ಟ.
ವಿಶೇಷ ಎಂದರೆ ರಾಜ್ಯದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲೂ ರಾಜ್ಯ ಸರಕಾರ 50:50 ಅನುಪಾತದಡಿ ಸಹಯೋಗ ನೀಡುತ್ತಾ ಬಂದಿದೆ. ಎಸ್.ಎಂ ಕೃಷ್ಣ ಅವರ ಕಾಲ ದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕೆ-ರೈಡ್ ಯೋಜನೆಗೆ ಅಂಕಿತ ಹಾಕಿದ್ದು ಕರ್ನಾಟಕ ಸರಕಾರ. ಬೇರೆ ಎಲ್ಲ ರಾಜ್ಯಗಳಲ್ಲಿ ರೈಲ್ವೆ ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರಕಾರವೇ ಹಣ ವ್ಯಯಿಸಿದರೆ ಕರ್ನಾಟಕ ಸರಕಾರ ತಾನೇ ಅರ್ಧದಷ್ಟು ಹಣ ವ್ಯಯಿಸಿ ಸಾರಿಗೆ ಸೌಕರ‌್ಯ ಅಭಿವೃದ್ಧಿಪಡಿಸಲು ಮುಂದಾಗಿತ್ತು. ರಾಜ್ಯದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಹೆದ್ದಾರಿ ಅಭಿವೃದ್ಧಿ ತ್ವರಿತಗತಿಯಲ್ಲಿ ನಡೆಯಲು ರಾಜ್ಯಸರಕಾರದ ಸಹಭಾಗಿತ್ವವೂ ಪ್ರಮುಖ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
ಮುಂಬಯಿನಿಂದ ತಿರುವನಂತಪುರ ತನಕ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೆಯ ಸಾಕಾರಕ್ಕೆ ರೈಲ್ವೆ ಇಲಾಖೆಯಲ್ಲಿ ಹಣದ ಅಡಚಣೆಯಾದಾಗ ಇಂದಿನ ಮೆಟ್ರೋ ಮಾದರಿಯಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹೆಸರಿನಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸಲಾಗಿತ್ತು. ಕೇಂದ್ರ ಸರಕಾರ ಶೇ. 51ರಷ್ಟು ಷೇರು ಬಂಡವಾಳ ತೊಡಗಿಸಿದರೆ ಶೇ. 15ರಷ್ಟು ಷೇರು ಬಂಡವಾಳದೊಂದಿಗೆ ಅತಿ ಹೆಚ್ಚು ಭೂಮಿ ಬಿಟ್ಟು ಕೊಟ್ಟಿದ್ದು ಕರ್ನಾಟಕ. ಈಗ ಈ ಮಾರ್ಗದ ಗರಿಷ್ಠ ಪ್ರಯೋಜನ ಪಡೆಯು ತ್ತಿರುವ ಕೇರಳ ಮತ್ತು ಗೋವಾ ಕೇವಲ ಶೇ. 6ರಷ್ಟು ಷೇರು ಬಂಡವಾಳ ಹೂಡಿವೆ. ಈ ಯೋಜನೆಯ ಮಾದರಿಯಲ್ಲಿ ಕೇಂದ್ರ ಸರಕಾರದ ಅದೆಷ್ಟೋ ಮೂಲ ಸೌಕರ್ಯ ಯೋಜನೆ ಗಳಲ್ಲಿ ಕರ್ನಾಟಕ ತನ್ನ ಪಾಲಿನ ಅನುದಾನ ನೀಡಿದೆ.
ಉತ್ತರ ಭಾರತದ ಯಾವುದೇ ರಾಜ್ಯಗಳು ಈ ರೀತಿ ಕೇಂದ್ರದ ಮೂಲ ಸೌಕರ್ಯ ಯೋಜನೆಗಳಿಗೆ ಸತತವಾಗಿ ಸಾಥ್ ನೀಡಿದ ಉದಾಹರಣೆಗಳಿಲ್ಲ. ಕರ್ನಾಟಕದಲ್ಲಿ ಯಾವುದೇ ಯೋಜನೆ ಕೈಗೆತ್ತಿ ಕೊಂಡರೂ ಅದರಲ್ಲಿ ರಾಜ್ಯ ಸರಕಾರದ ಪಾಲು ಇರಬೇಕೆಂದು ಕೇಂದ್ರ ನಿರೀಕ್ಷಿಸುತ್ತಿದೆ. ಇದೇ ವೇಳೆ ಉಳಿದ ರಾಜ್ಯಗಳ ಯೋಜನೆಗಳಿಗೆ ಉದಾರವಾಗಿ ಧನಸಹಾಯ ಮಾಡುತ್ತಿದೆ. ತೀರಾ ಇತ್ತೀಚಿನ ಉದಾಹರಣೆ ತೆಗೆದುಕೊಳ್ಳುವುದಾದರೆ ನೆರೆಯ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ಯ ಮೊದಲ ಹಂತದ ಅಭಿವೃದ್ಧಿಗೆ ಕೇಂದ್ರ ಸರಕಾರ 15 ಸಾವಿರ ಕೋಟಿ ರು. ನೆರವು ಘೋಷಿಸಿದೆ. ನಿರ್ಮಲಾ ಸೀತಾರಾಮನ್ ಅವರು ಮೊನ್ನೆ ಮಂಡಿಸಿದ ಬಜೆಟ್‌ನಲ್ಲಿ ಅಮರಾವತಿ ಮತ್ತು ಪೋಲವರಂ ಯೋಜನೆಗಳಿಗೆ 3,752 ಕೋಟಿ ರು. ಅನುದಾನ ಘೋಷಿಸಿದ್ದಾರೆ.
ಉಳಿದ ರಾಜ್ಯಗಳನ್ನು ಮಮತೆಯಿಂದ ಪೊರೆಯುವ ಕೇಂದ್ರ ಸರಕಾರ, ದೇಶವಾಸಿಗಳೆಲ್ಲರನ್ನೂ ಆದರಿಸಿ, ಸಲಹುವ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುವುದನ್ನು ಪ್ರಶ್ನಿಸಬೇಕಾಗಿರುವುದು ನಮ್ಮ ಸಂಸದರ ಕರ್ತವ್ಯ. ಈ ಹಿಂದಿನ ರೈಲ್ವೆ ಅನುದಾನಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಅನುದಾನ ದೊರೆತಿದೆ ಎಂದು ಆಡಳಿತ ಪಕ್ಷದ ಸಂಸದರು ವಾದಿಸಬಹುದು. ಆದರೆ ಬಜೆಟ್ ಗಾತ್ರ ಹೆಚ್ಚಿದಂತೆ ಎಲ್ಲ ರಾಜ್ಯಗಳಿಗೂ ಹೆಚ್ಚಿನ ಅನುದಾನ ದೊರೆತಿದೆ. ರಾಜ್ಯಕ್ಕೂ ಹೆಚ್ಚಿನ ಹಣ ಹಂಚಿಕೆಯಾಗಿರುವುದು ಬಿಟ್ಟರೆ, ದೇಶದ ಪ್ರಗತಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಅನುದಾನ ದೊರೆತಿಲ್ಲ.
ಮುಂಬಯಿ, ಮದ್ರಾಸ್, ಕೋಲ್ಕತ್ತಾ, ದೆಹಲಿಯಂತಹ ಮಹಾನಗರಗಳ ಸಾರ್ವಜನಿಕ ಸಾರಿಗೆ ಸುಧಾರಣೆಗೆ ಮತ್ತು ಆ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ನೇರವಾಗಿ ಸಹಾಯ ಮಾಡಿದ ಕೇಂದ್ರ ಸರಕಾರ, ಈಗ ಮಹಾನಗರದ ಸ್ಥಾನದಲ್ಲಿರುವ ಬೆಂಗಳೂರಿಗೂ ವಿಶೇಷ ಅನುದಾನ ಮತ್ತು ಯೋಜನೆಗಳ ಮೂಲಕ ಸಹಾಯ ಮಾಡಬೇಕಾಗಿದೆ. ಈ ಬೇಡಿಕೆಯನ್ನು ನಮ್ಮ ಸಂಸದರು ಮತ್ತು ರಾಜ್ಯ ಸರಕಾರ ಪ್ರಬಲವಾಗಿ ಮಂಡಿಸಬೇಕು. ವಿಶೇಷ ಸಹಾಯ ದೊರೆಯದೇ ಹೋದರೆ ನಗರದ ಮೆಟ್ರೊದಂತಹ ಸವಲತ್ತಿನ ಭಾರವನ್ನು ನಾವೇ ಹೊರುವುದು ಅನಿವಾರ್ಯ. ನಮ್ಮ ಬೆಂಗಳೂರು ಮತ್ತು ನಮ್ಮ ಮೆಟ್ರೋ ನಮ್ಮದು ಮಾತ್ರವಲ್ಲ, ಇಡೀ ದೇಶದ್ದು ಕೂಡ. ಅಗಾಧವಾಗಿ ಬೆಳೆಯು ತ್ತಿರುವ ಈ ನಗರದ ಮೂಲ ಸೌಕರ್ಯದ ಬೆಳವಣಿಗೆಗೆ ಕೇಂದ್ರ ಸರಕಾರದ ಹೆಚ್ಚುವರಿ ಅನುದಾನ ಸಿಗಲೇಬೇಕು. ಈ ನಿಟ್ಟಿನಲ್ಲಿ ಪಕ್ಷಭೇದ ಮರೆತು ಹೋರಾಟ ನಡೆಸಬೇಕಾಗಿದೆ.