ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ಯುದ್ಧ: ಜಗತ್ತು ಮನೆಯೊಂದು ಮೂರು ಬಾಗಿಲು !

ಜಗತ್ತಿನ ಭಾರಿ ಶ್ರೀಮಂತರೆಲ್ಲಾ ನಿರಾಳವಾಗಿ ಹೂಡಿಕೆ ಮಾಡುತ್ತಿದ್ದ ದುಬೈ ಮೇಲೆ ಇರಾನಿನ ಕ್ಷಿಪಣಿ ಬಿದ್ದ ಪರಿಣಾಮ ಅಲ್ಲಿ ವ್ಯವಹಾರ ಸಾಮ್ರಾಜ್ಯಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸುರಕ್ಷತೆಯ ದೃಷ್ಟಿ ಯಿಂದ ಬಂದ್ ಮಾಡಲಾಗಿದೆ, ಗಣನೀಯ ಸಂಖ್ಯೆಯ ವಿಮಾನಗಳು ರದ್ದಾಗಿವೆ. ಒಟ್ಟಾರೆ ಹೇಳುವುದಾದರೆ, ಜಗತ್ತಿನ ಸಂಪರ್ಕಕೊಂಡಿಯಂತಿದ್ದ ದುಬೈ ವಿಮಾನ ನಿಲ್ದಾಣದಲ್ಲೀಗ ಸ್ಮಶಾನಮೌನ.

ಯುದ್ಧ: ಜಗತ್ತು ಮನೆಯೊಂದು ಮೂರು ಬಾಗಿಲು !

-

Ashok Nayak
Ashok Nayak Mar 4, 2026 7:27 AM

ಯುದ್ದಕಾಂಡ

ರವೀ ಸಜಂಗದ್ದೆ

ಮಧ್ಯಪ್ರಾಚ್ಯ ವಲಯವು ಅಕ್ಷರಶಃ ರಣರಂಗವಾಗಿದೆ, ಮರುಭೂಮಿಯು ರುದ್ರಭೂಮಿ ಯಾಗಿ ಬಿಟ್ಟಿದೆ. ಜಗದ ತೈಲಭಂಡಾರ ಮತ್ತು ಖನಿಜ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಅಮೆರಿಕದ ದುರಾಸೆಗೆ ಹೆಣಗಳು ಬೀಳುತ್ತಿವೆ. ಆಸ್ತಿ-ಪಾಸ್ತಿ, ಸಂಪನ್ಮೂಲಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿವೆ.

ಕೇವಲ 2-3 ರಾಷ್ಟ್ರಗಳ ನಡುವಿನ ಕಿತ್ತಾಟದಲ್ಲಿ ಇಡೀ ಜಗತ್ತೇ ಬಡವಾಗುತ್ತಿದೆ. ಅಮೆರಿಕ ಸೇರಿದಂತೆ ಚೀನಾ, ರಷ್ಯಾ ಮುಂತಾದ ಬಲಿಷ್ಠ ರಾಷ್ಟ್ರಗಳು ತಂತಮ್ಮ ವ್ಯಾವಹಾರಿಕ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಅನುಕೂಲಕ್ಕೆ ಆಗುವವರ ಪರ ವಹಿಸಿ, ಉರಿಯುವ ಬೆಂಕಿಗೆ ಮತ್ತಷ್ಟು ‘ತೈಲ’ ಸುರಿಯುವ ಕೆಲಸದಲ್ಲಿ ತೆರೆಮರೆಯಲ್ಲೇ ತೊಡಗಿಸಿ ಕೊಂಡಿವೆ.

ಒಟ್ಟಾರೆ ಇವರಿಗೆಲ್ಲ ಬೇಕಿರುವುದು ವ್ಯವಹಾರ-ಆರ್ಥಿಕ ನಿಯಂತ್ರಣ ಹಾಗೂ ಇತರರ ಮನೆಗೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ತುಚ್ಛ ಹಪಾಹಪಿ! ಅಮೆರಿಕ ಬೆಂಬಲಿತ ಇಸ್ರೇಲ್ ಮತ್ತು ಚೀನಾ-ರಷ್ಯಾ ಬೆಂಬಲಿತ ಇರಾನ್ ನಡುವಿನ ಈ ಕದನವು ಜಗದಗಲ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ.

ಮೊನ್ನೆ ಶನಿವಾರ ಹಾಡಹಗಲೇ ನಡೆಸಿದ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಮತ್ತು ಇರಾನ್ ಸರಕಾರದ ಅಗ್ರಗಣ್ಯ 40 ನಾಯಕರನ್ನು ಅಮೆರಿಕ-ಇಸ್ರೇಲ್ ಹೊಡೆದುರುಳಿಸಿವೆ. ಇರಾನ್ ಒಳಗಿನವರು ಕೈಜೋಡಿಸದೆ ಈ ರೀತಿಯ ನಿಖರ ದಾಳಿ ಅಸಾಧ್ಯ.

‘ಇಂಥ ದಿನ-ಸಮಯ-ಜಾಗದಲ್ಲಿ ಇಂತಿಂಥವರು ಸೇರುತ್ತಾರೆ’ ಎಂಬ ಕರಾರುವಾಕ್ಕಾದ ಮಾಹಿತಿಯನ್ನು ಇಸ್ರೇಲ್‌ನ ‘ಮೊಸಾದ್’ ಮತ್ತು ಅಮೆರಿಕದ ‘ಸಿಐಎ’ ಗುಪ್ತಚರ ಸಂಸ್ಥೆಗಳಿಗೆ ಇರಾನ್‌ನ ಒಳಗಿನವರು ನೀಡಿದ್ದಾರೆ. ಹೀಗೆ ಸಿಕ್ಕಿದ ಗೌಪ್ಯ ಮಾಹಿತಿ ಮತ್ತು ಅದನ್ನು ಆಧರಿಸಿ ಅಮೆರಿಕ-ಇಸ್ರೇಲ್ ಮಾಡಿದ ದಾಳಿ ಅದೆಷ್ಟು ನಿಖರವಾಗಿತ್ತೆಂದರೆ, ಒಂದೇ ಏಟಿಗೆ ಇರಾನ್'ನ ಅಗ್ರಗಣ್ಯ ನಾಯಕರೆಲ್ಲರೂ ಹತರಾಗಿದ್ದಾರೆ, ಇರಾನಿನ ಇಡೀ ಮಂತ್ರಿಮಂಡಲ ಖಾಲಿಯಾಗಿದೆ.

ಇದನ್ನೂ ಓದಿ: Ravi Sajangadde Column: ಎಐ ಎಂಬ ಸುನಾಮಿ ಬರುತ್ತಿದೆ, ದಾರಿ ಬಿಡಿ!

ದೇಶವೊಂದರ ನಾಯಕರು ಹಾಗೂ ಅಧಿಕಾರದಲ್ಲಿರುವವರ ಚಲನವಲನ ಮತ್ತಿತರ ವಿವರಗಳು ಸಾಮಾನ್ಯರಿಗೆ ಗೊತ್ತಾಗುವುದು ಸಾಧ್ಯವೇ ಇಲ್ಲ; ಅದೇನಿದ್ದರೂ ಆ ಮುಖಂಡ ರಿಗೆ ನಿಕಟವಾಗಿದ್ದವರಿಗೆ ಮತ್ತು ಸುರಕ್ಷತಾ ಸಿಬ್ಬಂದಿಗಳಿಗಷ್ಟೇ ಗೊತ್ತಿರುತ್ತದೆ; ಅಂಥವರದೇ ಕರಾಮತ್ತು ಇದು ಎನ್ನುತ್ತಾರೆ ಬಲ್ಲವರು. ಈ ಭದ್ರತಾ ವೈಫಲ್ಯದ ಕುರಿತು ಇರಾನ್ ಮಾತನಾಡಿಲ್ಲ, ಬಹುಶಃ ಆಡುವುದೂ ಇಲ್ಲ!

ತನ್ನ ಪರಮೋಚ್ಚ ನಾಯಕರ ದಂಡನ್ನು ರಕ್ಷಿಸುವಲ್ಲಿ ಇರಾನ್ ಸಂಪೂರ್ಣ ವಿಫಲ ವಾಗಿದ್ದು ಜಗಜ್ಜಾಹೀರಾಗಿದೆ. ‘ಮೊಸಾದ್’ ತಂಡದ ಸಾಮರ್ಥ್ಯದ ಬಗ್ಗೆ ಅಚ್ಚರಿ ಪಡುವವರು, ಇರಾನ್ ದೇಶದೊಳಗೆ ನಡೆದ ದೇಶದ್ರೋಹಿ ಸಂಚಿನ ಕುರಿತೂ ವಿಷಾದಿಸ ಬೇಕು.

ಮನೆಯೊಳಗಿದ್ದವರೇ ಹೊರಗಿನ ಆಮಿಷಕ್ಕೆ ಕೈಚಾಚಿ ಶತ್ರುಗಳಿಗೆ ‘ಮಾಹಿತಿದಾರ’ರಾದ ಕಥೆಯಿದು. ಯುದ್ಧವೆಂಬುದು ಅದರಲ್ಲಿ ನೇರವಾಗಿ ಭಾಗಿಯಾದ ದೇಶಗಳ ಮೇಲೆ ಪರಿಣಾಮವನ್ನು ಬೀರುವುದರ ಜತೆಗೆ, ಇಡೀ ಪ್ರಪಂಚವನ್ನೂ ಮಾರಕವಾಗಿ ಬಾಧಿಸುತ್ತದೆ. ‘ವಿಶ್ವದ ಎರಡನೇ ಅತಿ ಸುರಕ್ಷಿತ ನಗರ’ ಎಂದು ಕರೆಸಿಕೊಂಡಿರುವ ದುಬೈ ಕೂಡ ಈ ಯುದ್ಧದ ಪರಿಣಾಮವಾಗಿ ದಾಳಿಗೊಳಗಾಗಿ ಹಲವರ ನಿದ್ರೆಗೆಡಿಸಿದೆ.

ಜಗತ್ತಿನ ಭಾರಿ ಶ್ರೀಮಂತರೆಲ್ಲಾ ನಿರಾಳವಾಗಿ ಹೂಡಿಕೆ ಮಾಡುತ್ತಿದ್ದ ದುಬೈ ಮೇಲೆ ಇರಾನಿನ ಕ್ಷಿಪಣಿ ಬಿದ್ದ ಪರಿಣಾಮ ಅಲ್ಲಿ ವ್ಯವಹಾರ ಸಾಮ್ರಾಜ್ಯಕ್ಕೆ ಮತ್ತು ಪ್ರವಾಸೋ ದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸುರಕ್ಷತೆಯ ದೃಷ್ಟಿಯಿಂದ ಬಂದ್ ಮಾಡಲಾಗಿದೆ, ಗಣನೀಯ ಸಂಖ್ಯೆಯ ವಿಮಾನಗಳು ರದ್ದಾಗಿವೆ. ಒಟ್ಟಾರೆ ಹೇಳುವುದಾದರೆ, ಜಗತ್ತಿನ ಸಂಪರ್ಕಕೊಂಡಿಯಂತಿದ್ದ ದುಬೈ ವಿಮಾನ ನಿಲ್ದಾಣದಲ್ಲೀಗ ಸ್ಮಶಾನಮೌನ.

ದುಬೈ ಸೇರಿದಂತೆ ದೋಹಾ, ರಿಯಾಧ್, ಅಬುದಾಭಿ ನಗರಗಳನ್ನು ಗುರಿಯಾಗಿಸಿ ಇರಾನಿನ ಡ್ರೋಣ್‌ಗಳು ಮಾಡಿದ ದಾಳಿಯಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಭಯಾನಕತೆ ಮೂಡಿದೆ, ಅನಿಶ್ಚಿತತೆ-ಅಸ್ಥಿರತೆಗಳು ಸ್ಥಾಯಿಯಾಗಿವೆ. ಈ ಅಸ್ಥಿರತೆಯು ಕೇವಲ ಮಧ್ಯಪ್ರಾಚ್ಯ ದೇಶಗಳ ನಡುವಿನ ಸಂಘರ್ಷವಾಗಿ ಉಳಿದಿಲ್ಲ; ಅದು ಜಾಗತಿಕ ರಾಜತಾಂತ್ರಿಕತೆ ಮತ್ತು ಒಂದಿಷ್ಟು ಪಲ್ಲಟಗಳನ್ನು ಒಳಗೊಂಡ ಹೊಸ ಆಯಾಮಗಳ ಮುನ್ನುಡಿಯಂತೆ ಭಾಸ ವಾಗುತ್ತಿದೆ.

Screenshot_2

ಅಫ್ಘಾನಿಸ್ತಾನದಿಂದ ಮೊದಲ್ಗೊಂಡು ಲಿಬಿಯಾದವರೆಗೆ ಮತ್ತು ಇತ್ತೀಚಿನ ವೆನಿಜುವೆಲಾ ಪ್ರಹಸನದವರೆಗೆ ‘ಆಡಳಿತದ ಬದಲಾವಣೆ’ ಹೆಸರಿನಲ್ಲಿ ಅಮೆರಿಕ ನಡೆಸಿದ ಎಲ್ಲಾ ಪ್ರಯೋಗಗಳು ವಿಫಲವಾಗಿರುವ ಇತಿಹಾಸಕ್ಕೆ ಜಗತ್ತು ಸಾಕ್ಷಿಯಾಗಿದೆ.

ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪಾಶ್ಚಾತ್ಯ ದೇಶಗಳು ನಡೆಸಿದ ಹಸ್ತಕ್ಷೇಪಗಳು, ಆಕ್ರಮಣಗಳು ಅಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಬದಲಿಗೆ ಅಂಥ ದೇಶಗಳನ್ನು ‘ವಿಫಲ ಮತ್ತು ಅರಾಜಕತೆಯ ರಾಷ್ಟ್ರಗಳಾಗಿ’ ಮಾಡಿರುವ ದಾಖಲೆಗಳಿವೆ. ಲಿಬಿಯಾ, ಸಿರಿಯಾ ಮತ್ತು ಅಫ್ಘಾನಿಸ್ತಾನಗಳ ಇಂದಿನ ದುಸ್ಥಿತಿಯೇ ಇದಕ್ಕೆ ಜ್ವಲಂತ ಸಾಕ್ಷಿ.

ಇರಾನಿನಲ್ಲಿ ತನ್ನಿಷ್ಟದ, ತನ್ನಾಜ್ಞೆಯನ್ನು ಪಾಲಿಸುವ ಸರಕಾರ ಅಧಿಕಾರಕ್ಕೆ ಬರಬೇಕು ಎಂಬುದು ಅಮೆರಿಕದ ಮಹದಾಸೆ. ಆದರೆ ಈ ವಿಚಾರದಲ್ಲಿ ಕಾಲಾನುಕಾಲಕ್ಕೆ ನಡೆಯುವ ತಿಕ್ಕಾಟಗಳು ಇಡೀ ಏಷ್ಯಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿವೆ.

ಭಾರತದ ದೃಷ್ಟಿಯಿಂದ ಈ ಯುದ್ಧವನ್ನು ನೋಡುವುದಾದರೆ, ದೇಶದ ಇಂಧನ ಭದ್ರತೆಗೆ ಮತ್ತು ನಮ್ಮ ಆಯಕಟ್ಟಿನ ಅಂತಾರಾಷ್ಟ್ರೀಯ ‘ಸಮರ-ಸನ್ನದ್ಧ’ ಪ್ರದೇಶಗಳಲ್ಲಿ ಒಂದಾದ ಚಾಬಹಾರ್ ಬಂದರು ಪ್ರದೇಶದ ಭವಿಷ್ಯದ ಯೋಜನೆಗಳಿಗೆ ಒಂದಷ್ಟು ಹೊಡೆತ ಬೀಳಲಿರುವುದು ದಿಟ.

ಹೀಗಾಗಿ, ಈಗಿನ ಯುದ್ಧೋನ್ಮಾದದ ಸಂದರ್ಭವನ್ನು ಭಾರತವು ತನ್ನ ಸುರಕ್ಷತೆ, ಸಾರ್ವ ಭೌಮತೆ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಅಳೆದು ತೂಗಿ, ಸಮರ್ಪಕವಾದ ಮತ್ತು ದೃಢವಾದ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಈ ಸಂಕೀರ್ಣ ಪರಿಸ್ಥಿತಿಯಲ್ಲಿ ಭಾರತವು ತನ್ನ ಪಾರಂಪರಿಕ ‘ತಟಸ್ಥ ನೀತಿ’ಯನ್ನು ಮುಂದು ವರಿಸಿಕೊಂಡು ಹೋಗುವು ದರ ಜತೆಗೆ, ‘ಸಮರೋನ್ಮಾದಿ’ ರಾಷ್ಟ್ರಗಳನ್ನು ವಿಶ್ವಶಾಂತಿಗಾಗಿ ಆಗ್ರಹಿಸಬೇಕಾದ ಹೊಣೆಗಾರಿಕೆ ಯನ್ನೂ ಮೆರೆಯಬೇಕಿದೆ.

ಈ ಯುದ್ಧದಿಂದಾಗಿ ಭಾರತದ ಮೇಲಾಗಬಹುದಾದ ಪರಿಣಾಮಗಳಿವು: ಭಾರತವು ತನ್ನ ಕಚ್ಚಾತೈಲದ ಅಗತ್ಯದ ಶೇ.80ಕ್ಕಿಂತ ಹೆಚ್ಚು ಪಾಲನ್ನು ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧವು ದೀರ್ಘಾವಧಿವರೆಗೆ ಮುಂದು ವರಿದರೆ, ತೈಲ ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಬೆಲೆಯೇರಿಕೆ ನಿಶ್ಚಿತ.

ಇರಾನ್ ಸಂಘರ್ಷದಿಂದಾಗಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 100 ಡಾಲರ್ ಆಗುವ ಅಪಾಯವಿದ್ದು, ಇದು ದೇಶಕ್ಕೆ ಆರ್ಥಿಕ ಹೊಡೆತ ನೀಡಲಿದೆ. ಇರಾನ್ ಸಮುದ್ರದ ಗಡಿಯಲ್ಲಿ ಮತ್ತು ಸಮುದ್ರದ ಮೂಲಕ ತೈಲ ಹಾಗೂ ವಾಣಿಜ್ಯೋತ್ಪನ್ನಗಳ ಸಾಗಣೆಗೆ ಅಡ್ಡಿಯಾದರೆ, ಭಾರತದ ರಫ್ತು ವಲಯವು ಕುಸಿತವನ್ನು ಕಾಣಬಹುದು.

ಇರಾನ್ ದೇಶವು ‘ಹಾರ್ಮನ್’ ಜಲಸಂಧಿಯನ್ನು ಮುಚ್ಚಿದರೆ ಭಾರತಕ್ಕೆ ತೊಂದರೆ ಯಾಗಲಿದೆ. ಇಸ್ರೇಲ್ ಮತ್ತು ಇರಾನ್ ಜತೆಗಿನ ಭಾರತದ ವ್ಯವಹಾರಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗಬಹುದು. ಇಸ್ರೇಲ್ ಜತೆಗಿನ ರಕ್ಷಣಾ ಸಾಮಗ್ರಿಗಳ ವ್ಯವಹಾರ ಒಪ್ಪಂದ ಮತ್ತು ಇರಾನ್ ಜತೆಗಿನ ಐತಿಹಾಸಿಕ ವ್ಯಾಪಾರ ಒಪ್ಪಂದ, ತೈಲ ಖರೀದಿ ಇತ್ಯಾದಿಗಳನ್ನು ಅತ್ಯಂತ ಜಾಣತನದಿಂದ ನಡೆಸಿಕೊಂಡು ಹೋಗಬೇಕಿದೆ.

‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬ ತಂತ್ರವನ್ನು ಅಳವಡಿಸಿ ಕೊಂಡು ಹೆಜ್ಜೆಯಿಡಬೇಕಾದ ಅನಿವಾರ್ಯತೆಯಿದೆ. ಭಾರತದ ಅಂದಾಜು ಒಂದು ಕೋಟಿ ಜನರು ವಿವಿಧ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದು, ಅವರ ಸುರಕ್ಷತೆಯ ನೆಲೆಯಲ್ಲಿ ಈ ಸಂಘರ್ಷವು ಆತಂಕವನ್ನು ಸೃಷ್ಟಿಸಿದೆ.

ಸಂಘರ್ಷವು ದೀರ್ಘಾವಧಿವರೆಗೆ ಮುಂದುವರಿದರೆ, ಅವರನ್ನು ಭಾರತಕ್ಕೆ ಕರೆ ತರುವ ಜವಾಬ್ದಾರಿಯ ಜತೆಗೆ ಅವರಿಗೆ ಸೂಕ್ತ ಉದ್ಯೋಗ/ಸೂರು ಕಲ್ಪಿಸುವ ಸವಾಲೂ ದೇಶದ ಮುಂದಿದೆ. ಅಲ್ಲಿಂದ ಭಾರತಕ್ಕೆ ಮರಳುವವರ ಆದಾಯ ಮತ್ತು ಹೂಡಿಕೆಯ ಮೇಲೂ ಈ ಸಂಘರ್ಷವು ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

ಬಂಗಾರ ಮತ್ತು ಬೆಳ್ಳಿ ಇನ್ನೂ ದುಬಾರಿಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಜತೆಗೆ, ದೇಶದ ಷೇರುಮಾರುಕಟ್ಟೆಯಲ್ಲಿನ ಹೂಡಿಕೆ ಮತ್ತು ವಿದೇಶಿ ಬಂಡವಾಳದ ಒಳಹರಿವು ಕಡಿಮೆಯಾಗಲಿದೆ. ಈ ಒತ್ತಡದಿಂದಾಗಿ ಷೇರುಮಾರುಕಟ್ಟೆ ಕುಸಿದು ದೇಶೀಯ ಹೂಡಿಕೆ ದಾರರು ನಷ್ಟವನ್ನು ಅನುಭವಿಸಬಹುದು. ಈ ಬೆಳವಣಿಗೆಯಿಂದಾಗಿ ಜಿಡಿಪಿ ಮೇಲೂ ನಕಾರಾತ್ಮಕ ಪರಿಣಾಮವಾಗಬಹುದು.

ಕಚ್ಚಾತೈಲ ಮತ್ತಿತರ ಆಮದು ಸರಕುಗಳ ಬೆಲೆಹೆಚ್ಚಾದರೆ, ಭಾರತವು ಈ ಬಾಬತ್ತಿಗೆ ಹೆಚ್ಚಿನ ಮೊತ್ತವನ್ನು ಡಾಲರ್ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹಾಗಾದಾಗ ನಮ್ಮ ‘ವಿದೇಶಿ ವಿನಿಮಯ ಮೀಸಲು’ ಕರಗಿ ಡಾಲರ್ ಎದುರು ಭಾರತೀಯ ರುಪಾಯಿಯ ಮೌಲ್ಯ ಕುಸಿಯುತ್ತದೆ. ಹಾಗೆ ರುಪಾಯಿ ಅಪಮೌಲ್ಯಗೊಂಡರೆ, ಆಮದಾಗುವ ಪ್ರತಿಯೊಂದು ವಸ್ತುವೂ ದುಬಾರಿಯಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ಈ ಸಂಘರ್ಷವು ತಣ್ಣಗಾಗದಿದ್ದರೆ ಅದರ ಬಿಸಿ ಭಾರತದ ಆರ್ಥಿಕತೆಯನ್ನು ಬಹುವಾಗಿ ಕಾಡಲಿದೆ, ಜಾಗತಿಕ ಆರ್ಥಿಕ ವ್ಯವಸ್ಥೆಯೂ ಧಕ್ಕೆಗೊಳ್ಳಲಿದೆ. ಜಗತ್ತಿನ ಯಾವುದೇ ರಾಷ್ಟ್ರದ ಮೇಲೂ ಎರಗಲು ತನಗೆ ಹಕ್ಕಿದೆ ಎಂಬಂತೆ ವರ್ತಿಸುವ ಯಾವುದೇ ರಾಷ್ಟ್ರವು ಜಾಗತಿಕ ಸಮುದಾಯದ ಪಾಲಿಗೆ ಅಪಾಯಕಾರಿ ಮತ್ತು ಜಗತ್ತಿನ ವಿನಾಶಕ್ಕೆ ಮುನ್ನುಡಿಯಾಗುತ್ತದೆ.

‘ಯುದ್ಧದಲ್ಲಿ ಗೆದ್ದವನು ಸೋತಂತೆ, ಸೋತವನು ಸತ್ತಂತೆ’ ಎಂಬ ಮಾತಿದೆ. ಮಧ್ಯ ಪ್ರಾಚ್ಯದಲ್ಲಿ ಪ್ರಸ್ತುತ ಭುಗಿಲೆದ್ದಿರುವ ಈ ಯುದ್ಧೋನ್ಮಾದವು ಪ್ರಪಂಚಕ್ಕೆ ತಂದೊಡ್ಡುವ ಲುಕ್ಸಾನು ಕಲ್ಪನೆಗೂ ಮೀರಿದ್ದು. ಸದ್ಯಕ್ಕೆ ಭಾರತ ಸುರಕ್ಷಿತವಾಗಿದ್ದರೂ, ಈ ಸಂಘರ್ಷದ ಅಡ್ಡಪರಿಣಾಮಗಳು ನಮ್ಮ ಮೇಲೂ ಆಗಲಿವೆ; ಹಾಗಾಗಿ ಈ ಸಮರೋನ್ಮಾದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತವೂ ಯತ್ನಿಸಲಿ.

ಮಧ್ಯಪ್ರಾಚ್ಯದ ಬೆಂಕಿಯ ಕೆನ್ನಾಲಿಗೆ ನಮ್ಮ ಮನೆಯ ಬಾಗಿಲು ಸೋಕದಂತೆ ನೋಡಿ ಕೊಳ್ಳಬೇಕಾಗಿದೆ. ಮುಂದಿನ ಕಠಿಣ ದಿನಗಳನ್ನು ಎದುರಿಸಲು, ದೇಶದ ಹಿತ ಕಾಯಲು ಎಲ್ಲಾ ರೀತಿಯ ತ್ಯಾಗಕ್ಕೆ ಸಿದ್ಧರಾಗೋಣ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)