ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mohan Vishwa Column: ಮಹಿಳಾ ಮೀಸಲು: ವಾಗ್ದಾನದಿಂದ ಇತಿಹಾಸದತ್ತ

ಭಾರತದಲ್ಲಿ ಮಹಿಳೆಯರು ದೇಶದ ಜನಸಂಖ್ಯೆಯ ಅರ್ಧ ಭಾಗವಾಗಿದ್ದರೂ, ಅವರ ರಾಜಕೀಯ ಪ್ರತಿನಿಧಿತ್ವ ಕಡಿಮೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು, ಈ ಕಾಯ್ದೆ ಆ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಹಿಳಾ ಮೀಸಲಾತಿ ಮಸೂದೆ ಮೊದಲ ಬಾರಿಗೆ 1996ರಲ್ಲಿ ಪರಿಚಯಿಸಲಾಯಿತು, ನಂತರ ಹಲವು ಬಾರಿ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತಾ‌ ದರೂ, ಅದು ಕಾನೂನಾಗಲಿಲ್ಲ.

Mohan Vishwa Column: ಮಹಿಳಾ ಮೀಸಲು: ವಾಗ್ದಾನದಿಂದ ಇತಿಹಾಸದತ್ತ

-

ವೀಕೆಂಡ್‌ ವಿತ್‌ ಮೋಹನ್

ಬೇಟಿ ಬಚಾವೋ ಬೇಟಿ ಪಡಾವೋ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದೆ. ಉಜ್ವಲ ಯೋಜನೆ ಮೂಲಕ 10 ಕೋಟಿಗೂ ಅಧಿಕ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ದಿಂದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಜೀವನ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ.

ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಹಿಳೆಯರ ಸಮಾನ ಪ್ರತಿನಿಧಿತ್ವ ಎಂಬುದು ಹಲವು ದಶಕಗಳ ಕನಸಾಗಿತ್ತು. ಈ ಕನಸಿಗೆ ವಾಸ್ತವ ರೂಪ ನೀಡಿದ ಮಹತ್ವದ ಹೆಜ್ಜೆ ‘ನಾರಿ ಶಕ್ತಿ ವಂದನ ಅಧಿನಿಯಮ, 2023’. ಸುಮಾರು 27 ವರ್ಷಗಳ ಕಾಲ ರಾಜಕೀಯ ಚರ್ಚೆ, ವಿಳಂಬ ಮತ್ತು ವೈಫಲ್ಯ ಗಳ ನಡುವೆ ಸಿಲುಕಿದ್ದ ಮಹಿಳಾ ಮೀಸಲಾತಿ ಪ್ರಶ್ನೆಗೆ ಕೊನೆಗೂ ಪರಿಹಾರ ದೊರೆತಿದೆ. ಅನೇಕ ಸರಕಾರಗಳು ಬಂದು ಹೋಗಿದ್ದರೂ, ಈ ಮಹತ್ವದ ಮಸೂದೆ ಕಾನೂನಾಗಿ ರೂಪುಗೊಳ್ಳಲಿಲ್ಲ.

ಆದರೆ, 2023ರಲ್ಲಿ ಅದು ಸಾಧ್ಯವಾಯಿತು. ಇದು ಕೇವಲ ಒಂದು ಕಾನೂನು ಬದಲಾವಣೆ ಮಾತ್ರ ವಲ್ಲ, ಭಾರತೀಯ ಪ್ರಜಾಪ್ರಭುತ್ವದ ದಿಕ್ಕನ್ನು ಬದಲಿಸುವ ಐತಿಹಾಸಿಕ ತಿರುವಾಗಿದೆ. ಈ ಅಧಿ ನಿಯಮದ ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಖಚಿತಪಡಿಸಲಾಗಿದೆ. ಇದರಲ್ಲೂ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಮೀಸಲಾದ ಸ್ಥಾನಗಳಲ್ಲಿ ಕೂಡ ಮಹಿಳೆಯರಿಗೆ ಮೀಸಲಾಗುತ್ತದೆ. ಇದರಿಂದ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಹೆಚ್ಚುವುದಷ್ಟೇ ಅಲ್ಲದೇ, ಸಾಮಾಜಿಕ ನ್ಯಾಯಕ್ಕೂ ಬಲ ಸಿಗುತ್ತದೆ.

ಭಾರತದಲ್ಲಿ ಮಹಿಳೆಯರು ದೇಶದ ಜನಸಂಖ್ಯೆಯ ಅರ್ಧ ಭಾಗವಾಗಿದ್ದರೂ, ಅವರ ರಾಜಕೀಯ ಪ್ರತಿನಿಧಿತ್ವ ಕಡಿಮೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು, ಈ ಕಾಯ್ದೆ ಆ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಹಿಳಾ ಮೀಸಲಾತಿ ಮಸೂದೆ ಮೊದಲ ಬಾರಿಗೆ 1996ರಲ್ಲಿ ಪರಿಚಯಿಸಲಾಯಿತು, ನಂತರ ಹಲವು ಬಾರಿ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಯಿ ತಾದರೂ, ಅದು ಕಾನೂನಾಗಲಿಲ್ಲ.

ಈ ವಿಳಂಬಕ್ಕೆ ಮುಖ್ಯ ಕಾರಣಗಳು ರಾಜಕೀಯ ಇಚ್ಛಾಶಕ್ತಿ ಕೊರತೆ, ಪಕ್ಷಗಳ ಒಳಗಿನ ಭಿನ್ನಾಭಿ ಪ್ರಾಯಗಳು, ಮತಗಟ್ಟೆ ರಾಜಕೀಯದ ಲೆಕ್ಕಾಚಾರ ಮತ್ತು ಸಮನ್ವಯದ ಕೊರತೆಯಾಗಿತ್ತು. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಈ ವಿಷಯವನ್ನು ರಾಷ್ಟ್ರದ ಅಗತ್ಯವೆಂದು ಪರಿಗಣಿಸುವುದಕ್ಕಿಂತ, ರಾಜಕೀಯವಾಗಿ ಅಸೌಕರ್ಯಕರ ವಿಷಯವೆಂದು ನೋಡಿದವು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Mohan Vishwa Column: ಭಾರತಕ್ಕೆ ತನ್ನನ್ನೇ ಅರ್ಪಿಸಿದ ಸಿಸ್ಟರ್‌ ನಿವೇದಿತಾ

ಈ ಪರಿಸ್ಥಿತಿಯನ್ನು ಬದಲಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ. 2023ರ ಸೆಪ್ಟೆಂಬರ್ ನಲ್ಲಿ ಹೊಸ ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಮೂಲಕ ಸರಕಾರ ತನ್ನ ಸ್ಪಷ್ಟ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿತು. ಹೊಸ ಸಂಸತ್ ಭವನದಲ್ಲಿ ಮೊದಲ ಪ್ರಮುಖ ಕಾನೂನಾಗಿ ಈ ಮಸೂದೆಯನ್ನು ಪರಿಚಯಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಆಡಳಿತದ ಕೇಂದ್ರ ಬಿಂದುವಾಗಿ ರೂಪಿಸಿತು.

ಇದು ಕೇವಲ ಪ್ರತಿಕಾತ್ಮಕ ಹೆಜ್ಜೆಯಲ್ಲ, ಬಲವಾದ ರಾಜಕೀಯ ಸಂದೇಶವೂ ಆಗಿತ್ತು. ಮೋದಿ ಸರಕಾರ ಈ ಮಸೂದೆಯನ್ನು ಕೇವಲ ಮೀಸಲಾತಿ ನೀತಿಯಾಗಿ ನೋಡದೆ, ‘ನಾರಿ ಶಕ್ತಿ’ ಎಂಬ ವಿಶಾಲ ದೃಷ್ಟಿಕೋನದ ಭಾಗವಾಗಿ ಮಂಡಿಸಿದೆ. ಮಹಿಳೆಯರ ಅಭಿವೃದ್ಧಿಯನ್ನು ಕೇಂದ್ರ ವಾಗಿಟ್ಟುಕೊಂಡು, ಕಳೆದ ಹನ್ನೆರಡು ವರ್ಷಗಳಲ್ಲಿ ಹಲವು ಯೋಜನೆಗಳನ್ನು ಮೋದಿ ನೇತೃತ್ವದ ಸರಕಾರ ಜಾರಿಗೊಳಿಸಲಾಗಿದೆ.

ಬೇಟಿ ಬಚಾವೋ ಬೇಟಿ ಪಡಾವೋ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದೆ. ಉಜ್ವಲ ಯೋಜನೆ ಮೂಲಕ 10 ಕೋಟಿಗೂ ಅಧಿಕ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಮೂಲಕ ಹೆಣ್ಣುಮಕ್ಕಳ ಆರೋಗ್ಯ ಮತ್ತು ಜೀವನ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ, ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಹೆಣ್ಣುಮಕ್ಕಳ ಭವಿಷ್ಯದ ಖರ್ಚಿಗೆ ಅನುಕೂಲ ಮಾಡಿಕೊಟ್ಟಿದೆ, ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ ಮುಸ್ಲಿಂ ಧರ್ಮದ ಹೆಣ್ಣುಮಕ್ಕಳ ಜೀವನವನ್ನು ರಕ್ಷಿಸುವ ಕೆಲಸ ಮಾಡಿದೆ.

ಕಾರ್ಪೊರೇಟ್ ಜಗತ್ತಿನಲ್ಲಿ ಹೆಣ್ಣುಮಕ್ಕಳು ಸಂಸ್ಥೆಯ ನಿರ್ದೇಶಕರಾಗಿದ್ದರೆ ಆ ಸಂಸ್ಥೆಗೆ ಸರಕಾರ ದಿಂದ ಅನೇಕ ರೀತಿಯ ಸವಲತ್ತುಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ‘ಸ್ವಚ್ಛ ಭಾರತ್’ ಅಭಿಯಾನ ದಡಿಯಲ್ಲಿ ದೇಶದಾದ್ಯಂತ 10 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಮುಕ್ತ ಶೌಚ ಮಾಡಿದೆ.

women in assembly

ದೇಶದಾದ್ಯಂತ 55 ಕೋಟಿಗೂ ಅಧಿಕ ಜನರಿಗೆ ‘ಜನ್ ಧನ್’ ಯೋಜನೆ ಮೂಲಕ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಇವೆಲ್ಲವೂ ಸಹ ದೇಶದ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಬಲ ನೀಡಿವೆ, ಇವುಗಳ ಜತೆಗೆ ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರ ನಾರಿ ಶಕ್ತಿ ವಂಧನಾ ಅಧಿನಿಯಮ, 2023.

ಈ ಹಿನ್ನೆಲೆಯಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣ, ನರೇಂದ್ರ ಮೋದಿಯವರ ಮುಂದು ವರಿದ ಹೆಜ್ಜೆಯಾಗಿದೆ. ಮುಖ್ಯವಾಗಿ, ಈ ಮಸೂದೆಯನ್ನು ಕೇವಲ ಪ್ರಸ್ತಾಪವಾಗಿ ಬಿಡದೆ, ಕಾಯ್ದೆ ಯಾಗಿ ರೂಪಿಸಲಾಗಿದೆ. ರಾಜಕೀಯ ಚರ್ಚೆಯಿಂದ ಸಂವಿಧಾನಿಕ ಭದ್ರತೆಗೆ ಈ ಬದಲಾವಣೆ ಬಹುಮುಖ್ಯವಾಗಿದ್ದು, ಇದು ಮಹಿಳೆಯರ ರಾಜಕೀಯ ಹಕ್ಕುಗಳನ್ನು ಸ್ಥಿರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ನಮ್ಮ ದೇಶದ ವಿಪರ್ಯಾಸವೆಂದರೆ ಇಂದಿರಾಗಾಂಧಿ ಮಹಿಳಾ ಪ್ರಧಾನಮಂತ್ರಿಯಾದರೂ ಸಹ ತಮ್ಮ ಅವಧಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾಂಗ್ರೆಸ್ಸಿನ ನಾಯಕಿ ಸೋನಿಯಾ ಗಾಂಧಿ ಹಿಡಿತದಲ್ಲಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಕೂಡ ಈ ಮಸೂದೆಯನ್ನು ಜಾರಿಗೆ ತರುವಲ್ಲಿ ವಿಫಲವಾಯಿತು.

ಕಾಂಗ್ರೆಸ್ಸಿನ ಮತಬ್ಯಾಂಕ್ ಓಲೈಕೆ ರಾಜಕಾರಣ ಯಾವ ಮಟ್ಟಕ್ಕಿತ್ತೆಂದರೆ, ಮುಸ್ಲಿಂ ಮಹಿಳೆಯರ ಹಕ್ಕುಗಳ ವಿಷಯದಲ್ಲಿ ‘ಶಾ ಬಾನು’ ಪ್ರಕರಣದಲ್ಲಿ ನ್ಯಾಯಾಲಯ ಮಹಿಳೆಯರ ಪರವಾಗಿ ನೀಡಿದ ತೀರ್ಪನ್ನು ಶೂನ್ಯಗೊಳಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿಯನ್ನು ತಂದು ಅವರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡಿದ್ದು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದನ್ನು ಸದಾ ವಿರೋಧಿಸಿಕೊಂಡು ಬಂದಿರುವುದು ಕಾಂಗ್ರೆಸ್ಸಿನ ದಶಕಗಳ ಚಾಳಿ, ಆ ಪಕ್ಷದ ಪಾಲಿಗೆ ಹೆಣ್ಣುಮಕ್ಕಳ ರಾಜಕೀಯ ಮೀಸಲು ಕೇವಲ ನೆಹರು ಕುಟುಂಬಕ್ಕೆ ಮಾತ್ರ ಮೀಸಲಾಗಿದೆ.

ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಬಹಳ ದೊಡ್ಡದು, ಕಷ್ಟ ಬಂದಾಗ ಕುಟುಂಬವನ್ನು ಸಂಬಾಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವವರು ಮಹಿಳೆಯರು. ಅದೇ ರೀತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಸ್ತಬ್ದವಾಗಿತ್ತು, ಭಾರತದ ಆರ್ಥಿಕತೆ ಸುಮಾರು ಎರಡು ವರ್ಷಗಳ ಕಾಲ ಸ್ತಬ್ದವಾಗಿತ್ತು. ಅಂತಹ ಸಂದಿಗ್ಧ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು ಮುಂದುವರೆಸಿದ ಕೀರ್ತಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಬೇಕು.

ಸಂಕಷ್ಟದ ಸಂದರ್ಭದಲ್ಲಿ ಹೆಣ್ಣು ಕುಟುಂಬ ನಿರ್ವಹಿಸಿದ ರೀತಿಯಲ್ಲಿ ನಿರ್ಮಲಾ ಅವರು ದೇಶದ ಆರ್ಥಿಕತೆಯನ್ನು ನಿರ್ವಹಿಸಿದ್ದರು, ಆರ್ಥಿಕತೆ ಸ್ತಬ್ದವಾದ ಪರಿಣಾಮ ಸರಕಾರಕ್ಕೆ ತೆರಿಗೆ ಹಣ ಬರುತ್ತಿರಲಿಲ್ಲ, ಮತ್ತೊಂದೆಡೆ ಜನರ ಆರೋಗ್ಯವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ, ಎರಡನ್ನೂ ಒಬ್ಬ ಮಹಿಳೆಯಾಗಿ ಅವರು ನಿರ್ವಹಿಸಿದ ರೀತಿಯನ್ನು ಇಡೀ ಜಗತ್ತು ನೋಡಿದೆ.

ಭಾರತವನ್ನು ತಾಯಿಗೆ ಹೋಲಿಸಿ ಭಾರತಮಾತೆಯಾಗಿ ಸಾವಿರಾರು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದೇವೆ, ಇಂತಹ ನೆಲದಲ್ಲಿ ಅನೇಕ ಬಾರಿ ಸಂಕಷ್ಟದ ಸಮಯದಲ್ಲಿ ನಾರಿಯ ಶಕ್ತಿ ಪ್ರದರ್ಶನ ವಾಗಿದೆ. ಇಂತಹ ದೇಶದಲ್ಲಿ ಮಹಿಳೆಯ ರಾಜಕೀಯ ಪ್ರತಿನಿಧಿತ್ವಕ್ಕಾಗಿ ಏಳು ದಶಕಗಳ ಸಮಯ ಈಗಾಗಲೇ ವ್ಯರ್ಥವಾಗಿದೆ.

ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ಸಹ, ಪುರುಷ ಪ್ರಧಾನ ಸಮಾಜದಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಈ ಮೀಸಲಾತಿ ವಿಳಂಬವಾಗಿತ್ತು. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ನರೇಂದ್ರ ಮೋದಿಯವರ ‘ನಾರಿ ಶಕ್ತಿ ವಂದನಾ ಅಧಿನಿಯಮ’ ಜಾರಿಗೆ ಬರುವ ಮೂಲಕ ಏಳು ದಶಕಗಳ ಕನಸು ನನಸಾಗುತ್ತಿದೆ.

ಒಟ್ಟಿನಲ್ಲಿ, ನಾರಿ ಶಕ್ತಿ ವಂದನ ಅಧಿನಿಯಮ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹತ್ವದ ತಿರುವಾಗಿದೆ. ಹಲವು ವರ್ಷಗಳಿಂದ ವಿಳಂಬವಾಗಿದ್ದ ಸುಧಾರಣೆಯನ್ನು ಕಾನೂನಾಗಿ ರೂಪಿಸುವತ್ತ ದಿಟ್ಟಹೆಜ್ಜೆ ಇಟ್ಟಿರುವ ಮೋದಿ ಸರಕಾರ ನಿರ್ಣಾಯಕ ಪಾತ್ರ ವಹಿಸಿದೆ.

ರಾಜಕೀಯ ಇಚ್ಛಾಶಕ್ತಿ, ಸಮನ್ವಯ ಮತ್ತು ದೀರ್ಘಕಾಲೀನ ದೃಷ್ಟಿಕೋನದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಇದು ಕೇವಲ ಮಹಿಳೆಯರಿಗೆ ಸ್ಥಾನ ಮೀಸಲಿಡುವ ಕಾನೂನು ಮಾತ್ರವಲ್ಲ, ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರಿಗೆ ನಾಯಕತ್ವ ನೀಡುವ ಮಹತ್ವದ ಹೆಜ್ಜೆಯಾಗಿದೆ.