ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‘ಭಾರತ’ಕ್ಕೆ ಮತ್ತೊಂದು ‘ವಿಶ್ವಕಪ್’ ಗೆಲ್ಲುವ ತವಕ

ಇಂಗ್ಲೆಂಡ್ ದೇಶವು ಕ್ರಿಕಟ್‌ನ ತವರೂರು. ಮೊತ್ತಮೊದಲ ಬಾರಿಗೆ ಕ್ರಿಕೆಟ್ ಆರಂಭವಾಗಿರುವುದ ಕೂಡಾ ಅಲ್ಲೇನೆ. ನಮ್ಮ ಭಾರತದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಗೆಯೋ ಹಾಗೆಯೇ ಅಲ್ಲಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ). ಜಗತ್ತಿನ ವಿವಿಧ ಕ್ರಿಕೆಟ್ ಮೈದಾನಗಳಲ್ಲಿ ಇಳಿಮುಖವಾಗುತ್ತಿದ್ದ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು, ಬಹು ಮುಖ್ಯವಾಗಿ ಯುವಕರನ್ನು ಆಕರ್ಷಿಸಲು 2001ರಲ್ಲಿ ಇಸಿಬಿಯ ಇಂತಹದ್ದೊಂದು ಚುಟುಕು ಕ್ರಿಕೆಟ್‌ನ ಕುರಿತು ಯೋಚನೆ ಮಾಡಿ ಅದಕ್ಕೆ ನಿಯಮಾವಳಿಯನ್ನೂ ರೂಪಿಸಿತು.

‘ಭಾರತ’ಕ್ಕೆ ಮತ್ತೊಂದು ‘ವಿಶ್ವಕಪ್’ ಗೆಲ್ಲುವ ತವಕ

-

Ashok Nayak
Ashok Nayak Feb 7, 2026 3:13 PM

-ನರೇಂದ್ರ ಪಾರೆಕಟ್

ಮತ್ತೆ ಚುಟುಕು ವಿಶ್ವಕಪ್ ಕ್ರಿಕೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಆರಂಭ ವಾಗಲಿರುವ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದ ಈ ರೋಚಕ ಹಣಾಹಣಿಗೆ ಆರು ಮೈದಾನಗಳು ಸಜ್ಜಾಗಿ ನಿಂತಿವೆ. ಈ ಸಲ ನಡೆಯುತ್ತಿರುವುದು ಹತ್ತನೇ ಆವೃತ್ತಿಯ ಟಿ29 ವಿಶ್ವಕಪ್ ಕದನ.

ಕ್ರಿಕೆಟ್‌ನಲ್ಲಿ ಮೊದಲು ಆರಂಭವಾಗಿದ್ದೇ ಟೆಸ್ಟ್ ಹಣಾಹಣಿ, ಆ ಬಳಿಕ ಏಕದಿನ ಟೂರ್ನಿಗಳು ಕ್ರಿಕೆಟ್‌ ಪ್ರೇಮಿಗಳ ಮನಸೂರೆಗೊಂಡವು. ಅವುಗಳೆರಡನ್ನೂ ಮೀರಿ ಈಗ ಜನಪ್ರಿಯವಾಗಿರುವುದು ಟಿ20 ಕದನ.

ಇಂಗ್ಲೆಂಡ್ ದೇಶವು ಕ್ರಿಕಟ್‌ನ ತವರೂರು. ಮೊತ್ತಮೊದಲ ಬಾರಿಗೆ ಕ್ರಿಕೆಟ್ ಆರಂಭವಾಗಿರುವುದ ಕೂಡಾ ಅಲ್ಲೇನೆ. ನಮ್ಮ ಭಾರತದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಗೆಯೋ ಹಾಗೆಯೇ ಅಲ್ಲಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ). ಜಗತ್ತಿನ ವಿವಿಧ ಕ್ರಿಕೆಟ್ ಮೈದಾನಗಳಲ್ಲಿ ಇಳಿಮುಖವಾಗುತ್ತಿದ್ದ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು, ಬಹು ಮುಖ್ಯವಾಗಿ ಯುವಕರನ್ನು ಆಕರ್ಷಿಸಲು 2001ರಲ್ಲಿ ಇಸಿಬಿಯ ಇಂತಹದ್ದೊಂದು ಚುಟುಕು ಕ್ರಿಕೆಟ್‌ನ ಕುರಿತು ಯೋಚನೆ ಮಾಡಿ ಅದಕ್ಕೆ ನಿಯಮಾವಳಿಯನ್ನೂ ರೂಪಿಸಿತು. ಆ ಕಾರ್ಯ ರೂಪದ ಫಲವಾಗಿಯೇ ,2003ರಲ್ಲಿ ಇಂಗ್ಲೆಂಡ್‌ನಲ್ಲಿ ಟಿ20 ಲೀಗ್ ಕ್ರಿಕೆಟ್ ಆರಂಭವಾಯಿತು. ಅಲ್ಲಿಂದ ಟಿ20 ಕ್ರಿಕೆಟ್‌ನ ಜನಪ್ರಿಯತೆ ರೋಚಕ ಎನಿಸಿತು.

ಅಂದಿನಿಂದ ಆರಂಭವಾದ ಟಿ20 ಕ್ರಿಕೆಟ್ ಜಗತ್ತಿನಾದ್ಯಂತ ಭಾರೀ ಜನಮನ್ನಣೆಗೆ ಪಾತ್ರವಾಯಿತು. ಈ ಚುಟುಕು ಪಂದ್ಯ ಪಂದ್ಯ ಕಡಿಮೆ ಅವಧಿಯದ್ದಾಗಿದ್ದರೂ ಭರಪೂರ ರಂಜನೆ, ಹೊಡಿಬಡಿದಾಟ ಕಾಣಸಿಗುತ್ತಿದ್ದುದರಿಂದ ಟಿ20 ಕ್ರಿಕೆಟ್‌ನತ್ತ ಅಭಿಮಾನಿಗಳು ಹೆಚ್ಚು ಆಕರ್ಷಿತರಾಗಿದ್ದನ್ನು ಇಸಿಬಿ ಗಮನಿಸಿತು. 2005ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ ಮಧ್ಯೆ ಐಸಿಸಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ನಡೆಸಿತು. ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಗೆದ್ದು ಚುಟುಕು ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ತನ್ನ ಸಂಭ್ರಮಾಚರಣೆ ನಡೆಸಿತು.

1975ರಲ್ಲಿ ಆರಂಭವಾದ ಏಕದಿನ ವಿಶ್ವಕಪ್ ಪಂದ್ಯಾವಳಿ 4 ವರ್ಷಗಳಿಗೊಮ್ಮೆ ನಡೆಯುತ್ತಿತ್ತು. ಈ ಮಧ್ಯೆ ಪ್ರಮುಖ ಟೂರ್ನಿಗಳಿಲ್ಲದೆ ದಿನಕಳೆಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವ ಉದ್ದೇಶದಿಂದ ಈ ಚುಟುಕು ಕ್ರಿಕೆಟ್ ಮಾದರಿ ವಿಶ್ವಕಪ್‌ನ ರೂಪ ಪಡೆಯಿತೆನ್ನಬಹುದು.

ಇದನ್ನೂ ಓದಿ: T20 World Cup: ಭಾರತ ತಂಡದಲ್ಲಿ ಗಾಯಾಳು ಹರ್ಷಿತ್‌ ರಾಣಾ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್!

ಎರಡು ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ಆಯೋಜಿಸಬೇಕೆಂಬ ಬೇಡಿಕೆಯೂ ಹೆಚ್ಚಾಯಿತು. ಹಾಗಾಗಿ 2007ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್ ಚೊಚ್ಚಲ ಆವೃತ್ತಿಯನ್ನು ಆಯೋಜಿಸಲಾಯಿತು. ಆ ಬಳಿಕ 2ನೇ ವಿಶ್ವಕಪ್ 2009ರಲ್ಲಿ ನಡೆಯಿತು. ಬಳಿಕ ಸಮವರ್ಷಗಳಾ 2010, 2012, 2014, 2016ರಲ್ಲಿ ಟೂರ್ನಿಗಳು ನಡೆದವು. 2018ರಲ್ಲಿ ವಿಪರೀತ ದ್ವಿಪಕ್ಷೀಯ ಸರಣಿಗಳಿದ್ದ ಕಾರಣ ಮತ್ತು ಟೂರ್ನಿಯ ಅತಿಥ್ಯ ವಹಿಸಲಿದ್ದ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಆತಿಥ್ಯದಿಂದ ಹಿಂದೆ ಸರಿದ ಕಾರಣ ಟೂರ್ನಿ ನಡೆದಿರಲಿಲ್ಲ, ಈ ಟೂರ್ನಿಯನ್ನು 2019ರಲ್ಲಿ ನಡೆಸಲು ತೀರ್ಮಾನಿಸಲಾಯಿತಾದರೂ ಕೋವಿಡ್ ಕಾರಣದಿಂದಾಗಿ ಆ ವರ್ಷವೂ ಪಂದ್ಯಾವಳಿ ನಡೆಯಲಿಲ್ಲ. ಹೀಗಾಗಿ ಈ ಆವೃತ್ತಿಯನ್ನು ಕೈಬಿಡಲಾಯಿತು. ಅದನ್ನು 2021ರಲ್ಲಿ ನಡೆಸಲಾಯಿತು. ಬಳಿಕ 2022, 2024ರಲ್ಲಿ ಟೂರ್ನಿಗಳು ಯಶಸ್ವಿಯಾಗಿ ನಡೆದವು.

ಈ ವರೆಗೆ 9 ಟಿ20ವಿಶ್ವಕಪ್ ಆವೃತ್ತಿಗಳು ನಡೆದಿವೆ. ಇವುಗಳಲ್ಲಿ ಭಾರತ (2007, 2024) ಇಂಗ್ಲೆಂಡ್ (2010, 2022) ಮತ್ತು ವೆಸ್ಟ್ ಇಂಡೀಸ್ (2012, 2016) ತಲಾ 2 ಬಾರಿ ಗೆದ್ದು, ಟೂರ್ನಿಯ ಯಶಸ್ವಿ ತಂಡಗಳೆನಿಸಿವೆ. ಪಾಕಿಸ್ಥಾನ (2009), ಶ್ರೀಲಂಕಾ (2014), ಆಸ್ಟ್ರೇಲಿಯಾ (2021) ತಲಾ ಒಂದು ಬಾರಿ ಗೆದ್ದಿವೆ.

2007ರ ಚೊಚ್ಚಲ ಆವೃತ್ತಿ: ಟಿ20 ವಿಶ್ವಕಪ್ ಚೊಚ್ಚಲ ಆವೃತ್ತಿ ದ. ಆಫ್ರಿಕಾದಲ್ಲಿ ನಡೆಯಿತು. ಆ ವೇಳೆ 12 ತಂಡಗಳ ಮಧ್ಯೆ 27 ಪಂದ್ಯಗಳು ನಡೆದವು. ಭಾರತ-ಪಾಕಿಸ್ತಾನ ನಡುವಿನ ಫೈನಲ್‌ನಲ್ಲಿ ಟೀಮ್ ಇಂಡಿಯಾ 5 ರನ್‌ಗಳ ರೋಚಕ ಜಯ ಗಳಿಸಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಯುವರಾಜ್ ಸಿಂಗ್ ಸಿಡಿಸಿದ ಸಿಕ್ಸರ್‌ಗಳ ಸುರಿಮಳೆ ಆ ಟೂರ್ನಿಯನ್ನು ಅವಿಸ್ಮರಣೀಯವನ್ನಾಗಿಸಿತು.

2009ರ ವಿಶ್ವಕಪ್: 2009ರಲ್ಲಿ 2ನೇ ಆವೃತ್ತಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು ಈ ವೇಳೆ ಕೂಡ ಹಿಂದಿನ ಆವೃತ್ತಿಯಷ್ಟೇ ತಂಡಗಳು ಆಡಿದ್ದವು, ಅಷ್ಟೇ ಪಂದ್ಯಗಳು ನಡೆದಿದ್ದವು ಪಾಕಿಸ್ಥಾನ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯದಲ್ಲಿ ಪಾಕ್ ಗೆದ್ದಿತ್ತು. ಶಾಹಿದ್ ಆಫ್ರಿದಿಯ ಆಲ್‌ರೌಂಡರ್ ಪ್ರದರ್ಶನ ಪಾಕ್‌ಗೆ ಚೊಚ್ಚಲ ವಿಶ್ವಕಪ್ ಗೆಲ್ಲಲು ನೆರವಾಗಿತ್ತು.

2010ರ ವಿಶ್ವಕಪ್: 2010ರ ಟಿ20 ವಿಶ್ವಕಪ್ ಪಂದ್ಯಾವಳಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿತ್ತು ಇಲ್ಲೂ ತಂಡಗಳ, ಪಂದ್ಯಗಳಲ್ಲಿ ಬದಲಾವಣೆ ಇರಲಿಲ್ಲ, ಫೈನಲ್‌ನಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯ ಸೆಣಸಾಡಿ ದ್ದವು. ಇಂಗ್ಲೆಂಡ್ ಚೊಚ್ಚಲ ಕಪ್ ತನ್ನದಾಗಿಸಿಕೊಂಡಿತ್ತು. ಈ ವೇಳೆ ಅದ್ಭುತ ಪ್ರದರ್ಶನ ನೀಡಿದ್ದ ಕೆವಿನ್ ಪೀಟರ್ಸನ್ ಸರಣಿಶ್ರೇಷ್ಠರೆವಿಸಿದ್ದರು.

2012ರ ವಿಶ್ವಕಪ್: ಶ್ರೀಲಂಕಾ 2012ರ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು ಫೈನಲ್‌ನಲ್ಲಿ ಅತಿಥೇಯ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದವು. ಆ ಬಾರಿ ವಿಂಡೀಸ್ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಮಲಾನ್ ಸ್ಯಾಮ್ಯುಯೆಲ್ಸ್ ಅವರ 78ರನ್ ಕೊಡುಗೆಯಿಂದ ಕೆರಿಬಿಯನ್ ತಂಡ ಸೋಲಿನಂಚಿನಿಂದ ಪಾರಾಗಿ ಟ್ರೋಫಿಗೆ ಮುತ್ತಿಕ್ಕಿತ್ತು.

2014ರ ವಿಶ್ವಕಪ್: ಟಿ20 ವಿಶ್ವಕಪ್ 5ನೇ ಆವೃತ್ತಿ ಬಾಂಗ್ಲಾ ದಲ್ಲಿ 2014ರಲ್ಲಿ ನಡೆದಿತ್ತು ಟೂರ್ನಿಯ ಜನಪ್ರಿಯತೆ ಹೆಚ್ಚಾಗಿದ್ದರಿಂದ ತಂಡಗಳನ್ನು 15ಕ್ಕೆ ಮತ್ತು ಪಂದ್ಯಗಳನ್ನು 35ಕ್ಕೆ ಏರಿಸಲಾಯಿತು. ಆ ಆವೃತ್ತಿಯ ಫೈನಲ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಪ್ರಶಸ್ತಿ ಗೆದ್ದು ಬೀಗಿತ್ತು. ಆ ಗೆಲುವಿನ ಬೆನ್ನಲ್ಲೇ ಲಂಕಾದ ದಿಗ್ಗಜ ಕ್ರಿಕೆಟಿಗರಾಗಿದ್ದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

2016ರ ವಿಶ್ವಕಪ್: 2016ರ ಆವೃತ್ತಿ ಭಾರತದಲ್ಲಿ ನಡೆದಿತ್ತು. ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಪಂದ್ಯದ ಕೊನೇ ಓವರ್‌ನಲ್ಲಿ ಕಾರ್ಲೋಸ್ ಬ್ರಾತ್ ವೇಟ್ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ವಿಂಡೀಸ್‌ಗೆ ಗೆಲುವಿನ ಸಂಭ್ರಮ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಮೂಲಕ ಎರಡು ಬಾರಿ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಕೆರಿಬೀಯನ್ನರು ಪಾತ್ರರಾದರು.

2021ರ ವಿಶ್ವಕಪ್: 2021ರಲ್ಲಿ ನಡೆದ 7ನೇ ಆವೃತ್ತಿಗೆ ಯುಎಇ ಮತ್ತು ಒಮಾನ್ ಜಂಟಿ ಆತಿಥ್ಯ ವಹಿಸಿದ್ದವು. ಪಂದ್ಯಗಳ ಸಂಖ್ಯೆಯನ್ನು 45ಕ್ಕೆ ಏರಿಸಲಾಗಿತ್ತು ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ಆಸೀಸ್ ತನ್ನ ಚೊಚ್ಚಲ ಟ್ರೋಫಿ ಎತ್ತಿತು. ಆಸೀಸ್ ಪರ ಮಿಚೆಲ್ ಮಾರ್ಷ್ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು.

2032ರ ವಿಶ್ವಕಪ್: ಆಸ್ಟ್ರೇಲಿಯಾ 2022ರ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್-ಪಾಕಿಸ್ಥಾನ ತಂಡಗಳು ಸಾಕ್ಷಿಯಾಗಿದ್ದವು. ಇಲ್ಲಿ ಗೆದ್ದಿದ್ದ ಇಂಗ್ಲೆಂಡ್ ಏಕದಿನ ಮತ್ತು ಟಿ20 ವಿಶ್ವಕಪ್ ಚಾಂಪಿಯನ್ಸ್ ಎನಿಸಿದ ಮೊದಲ ತಂಡವೆನಿಸಿತ್ತು. ಆ ಮೂಲಕ 2ನೇ ಟ್ರೋಪಿ ಗೆಲ್ಲುವ ಪಾಕ್‌ನ ಕನಸು ನುಚ್ಚುನೂರಾಗಿತ್ತು.

2024ರ ವಿಶ್ವಕಪ್: 2024ರ ಆವೃತ್ತಿಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಅತಿಥ್ಯ ವಹಿಸಿದ್ದವು. ಅಲ್ಲೂ 20 ತಂಡಗಳು, 55 ಪಂದ್ಯಗಳು ನಡೆದವು. ದ.ಆಫ್ರಿಕಾ ಮತ್ತು ಭಾರತ ನಡುವಿನ ಫೈನಲ್‌ ನಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು. 11 ವರ್ಷಗಳ ಬಳಿಕ ಭಾರತಕ್ಕೆ ಸಿಕ್ಕ ಈ ಟಿ20 ಟ್ರೋಪಿ ಬೆನ್ನಲ್ಲೇ ವಿರಾಟ್ ಕೊಹ್ಲಿ ರೋಹಿತ್, ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳಿದ್ದರು.

ಭಾರತಕ್ಕಿದೆ ಈ ಸಲ ಅವಕಾಶ: ಈ ಸಲದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಯುವ ಆಟಗಾರರನ್ನೇ ಹೊಂದಿರುವ ಭಾರತವು ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಪೈಕಿ ಫೇವರಿಟ್ ಎನಿಸಿದೆ. ಹಾಗಾಗಿ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವತ್ತ ಭಾರತ ತಂಡ ಚಿತ್ತ ಹರಿಸಿದೆ. ಎ-ಗುಂಪಿನಲ್ಲಿರುವ ಭಾರತವು ಇಂದು ಅಮೆರಿಕವನ್ನು ಎದುರಿಸುವುದರೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ತನ್ನ ತವರಿನ ಲಾಭ ಪಡೆದು ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ಅವಕಾಶ ಟೀಮ್ ಇಂಡಿಯಾಕ್ಕಿದೆ.--------++-+---------

ಎ-ಗ್ರೂಪ್ ತಂಡಗಳು:

ಭಾರತ

ನಮೀಬಿಯಾ

ನೆದರ್ಲೆಂಡ್ಸ್

ಪಾಕಿಸ್ತಾನ

ಅಮೆರಿಕ

ಬಿ-ಗ್ರೂಪ್ ತಂಡಗಳು:

ಆಸ್ಟ್ರೇಲಿಯಾ

ಐರ್ಲೆಂಡ್

ಒಮಾನ್

ಶ್ರೀಲಂಕಾ

ಜಿಂಬಾಬ್ವೆ

ಸಿ ಗ್ರೂಪ್ ತಂಡಗಳು:

ಇಂಗ್ಲೆಂಡ್

ಇಟೆಲಿ

ನೇಪಾಳ

ಸ್ಕಾಟ್ಲೆಂಡ್

ವೆಸ್ಟ್ ಇಂಡೀಸ್

ಡಿ ಗ್ರೂಪ್ ತಂಡಗಳು:

ಅಫಘಾನಿಸ್ತಾನ

ಕೆನಡಾ

ನ್ಯೂಜಿಲೆಂಡ್

ದಕ್ಷಿಣ ಆಫ್ರಿಕಾ

ಯುಎಇ

20 ತಂಡಗಳ ಸೆಣಸಾಟ: ಫೆ.20ರ ವರೆಗೆ ಈ ಸಲ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಪ್ರತಿಯೊಂದು ಗುಂಪಿನಲ್ಲಿರುವ ತಂಡ ಆ ಗುಂಪಿನ ಎಲ್ಲಾ ತಂಡಗಳ ವಿರುದ್ಧ ಆಡಲಿದೆ. ಸೂಪರ್ ಹಂತ ಪಂದ್ಯ ಆ ಬಳಿಕ ನಡೆಯಲಿದ್ದು, ಅದರಲ್ಲಿ ಅರ್ಹತೆ ಗಿಟ್ಟಿಸುವ ತಂಡ ಸೆಮಿಫೈನಲ್ ಪ್ರವೇಶಿಸಿ, ಫೈನಲ್‌ಗೆ ರಹದಾರಿ ಪಡೆಯಲಿದೆ.-

ಭಾರತ ತಂಡ:

ಸೂರ್ಯಕುಮಾರ್ ಯಾದವ್ (ನಾಯಕ)

ಅರ್ಷದೀಪ್ ಸಿಂಗ್

ಅಭಿಷೇಕ್ ಶರ್ಮಾ

ವಾಷಿಂಗ್ಟನ್ ಸುಂದರ್

ಸಂಜು ಸ್ಯಾಮ್ಸನ್

ಅಕ್ಷರ್ ಪಟೇಲ್

ಹರ್ಷಿತ್ ರಾಣಾ

ಕುಲ್ದೀಪ್ ಯಾದವ್

ಶಿವಂ ದುಬೆ

ವರುಣ್ ಚಕ್ರವರ್ತಿ

ಇಶಾನ್ ಕಿಶಾನ್

ಹಾರ್ದಿಕ್ ಪಾಂಡ್ಯ

ರಿಂಕು ಸಿಂಗ್

ತಿಲಕ್ ವರ್ಮಾ

ಜಸ್ಪ್ರೀತ್ ಬುಮ್ರಾ

ಒಟ್ಟು 113 ಕೋಟಿ ಬಹುಮಾನ:

ಈ ಟಿ20 ವಿಶ್ವಕಪ್‌ನ ಬಹುಮಾನದ ಮೊತ್ತ ಅಧಿಕೃತವಾಗಿ ಬಹಿರಂಗವಾಗದಿದ್ದರೂ ಒಟ್ಟು ಬಹುಮಾನ 113 ಕೋಟಿ ರು. ಎಂದು ಅಂದಾಜಿಸಲಾಗಿದೆ. ವಿಜೇತ ತಂಡವು 25 ಕೋಟಿ ರು. ಹಾಗೂ ರನ್ನರ್ ಅಪ್ ತಂಡವು 13 ರು. ಕೋಟಿ ಪಡೆಯಲಿದೆ.