ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Election in Kerala: 'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು

ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯೇರಲು ಬೇಕಿರುವ ಒಟ್ಟು ಸ್ಥಾನಗಳ ಸಂಖ್ಯೆ 71. ಕಳೆದ ನಾಲ್ಕು ದಶಕಗಳಲ್ಲಿ ಎರಡೂ ಒಕ್ಕೂಟಗಳು ಪಯಾರ್ಯವಾಗಿ ಅಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದುದೇ ವಿಶೇಷ ವಾಗಿತ್ತು. ಒಂದು ಸಲ ಒಂದು ಒಕ್ಕೂಟ ಅಧಿಕಾರಕ್ಕೇರಿದರೆ, ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷ ಬಹುಮತ ಪಡೆಯುತ್ತಿತ್ತು.

'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು

-

Ashok Nayak
Ashok Nayak Mar 25, 2026 9:23 AM

-ನರೇಂದ್ರ ಪಾರೆಕಟ್

ನಮ್ಮ ನೆರೆರಾಜ್ಯವಾದ ಕೇರಳಂ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಏ.9ರಂದು ಅಲ್ಲಿನ 140 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯ ನಾಮ ಪತ್ರಿಕೆ ಸಲ್ಲಿಕೆ ಕಾರ್ಯ ಸೋಮವಾರ ಮುಗಿದಿದೆ. ಯು.ಡಿ.ಎಫ್, ಎಲ್.ಡಿ.ಎಫ್ ಮತ್ತು ಎನ್.ಡಿ.ಎ ಒಕ್ಕೂಟಗಳ ಪ್ರಬಲ ಸ್ಪರ್ಧೆಯಿಂದಾಗಿ ಚುನಾವಣಾ ಕಣ ರಂಗೇರಿದೆ. ಕಾಸರಗೋಡಿನಿಂದ ತಿರುವನಂತಪುರಂವರೆಗೂ ಈಗ ಎಲ್ಲೆಂದರಲ್ಲಿ ಚುನಾವಣಾ ಪ್ರಚಾರದ ಅಬ್ಬರ ರಂಗೇರಿದೆ.

ಇದೀಗ ನಡೆಯುತ್ತಿರುವುದು ಕೇರಳಂ ರಾಜ್ಯದ 16ನೇ ವಿಧಾನಸಭಾ ಚುನಾವಣೆ. ಭಾಷಾ ವಾರು ಪ್ರಾಂತ್ಯ ವಿಭಜನೆ ಆಗಿ ವಿಧಾನಸಭೆ ಅಸ್ತಿತ್ವಕ್ಕೆ ಬಂದಂದಿನಿಂದಂಲೂ ಅಲ್ಲಿ ಏಕಪಕ್ಷದ ಆಡಳಿತದ ಸರಕಾರ ಅಸ್ತಿತ್ವಕ್ಕೇ ಬಂದಿಲ್ಲ ಎಂಬುದು ಒಂದು ಗಮನಾರ್ಹ ಸಂಗತಿ. ಕೇರಳ ರಾಜ್ಯದಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿರುವ ಎರಡು ಒಕ್ಕೂಟಗಳೆಂದರೆ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್ (ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್) ಮತ್ತು ಕಮ್ಯೂ ನಿಸ್ಟ್ ಪಕ್ಷಗಳ ಒಕ್ಕೂಟವಾದ ಎಲ್.ಡಿ.ಎಫ್ (ಲೆಫ್ಟ್ ಡೆಮೊಕ್ರೆಟಿಕ್ ಫ್ರಂಟ್). ಹಾಗಾಗಿ ಈ ಎರಡೂ ಒಕ್ಕೂಟಗಳ ಮಧ್ಯೆಯೇ ಪ್ರತೀ ವಿಧಾನಸಭಾ ಚುನಾವಣೆಯಲ್ಲಿ ನೇರ ಹಣಾಹಣಿ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಮೂರನೇ ಹೊಸ ರಾಜಕೀಯ ಶಕ್ತಿಯಾಗಿ ಬಿಜೆಪಿ ಅಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಿ ನೆಲೆ ಕಂಡುಕೊಳ್ಳಲು ಹವಣಿಸು ತ್ತಿರುವುದು ಮತದಾರರ ಪರ್ಯಾಯ ಯೋಚನೆಗೂ ಅವಕಾಶ ದೊರೆತಂತಾಗಿದೆ.

ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯೇರಲು ಬೇಕಿರುವ ಒಟ್ಟು ಸ್ಥಾನಗಳ ಸಂಖ್ಯೆ 71. ಕಳೆದ ನಾಲ್ಕು ದಶಕಗಳಲ್ಲಿ ಎರಡೂ ಒಕ್ಕೂಟಗಳು ಪಯಾರ್ಯವಾಗಿ ಅಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದುದೇ ವಿಶೇಷ ವಾಗಿತ್ತು. ಒಂದು ಸಲ ಒಂದು ಒಕ್ಕೂಟ ಅಧಿಕಾರಕ್ಕೇರಿದರೆ, ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷ ಬಹುಮತ ಪಡೆಯುತ್ತಿತ್ತು. ಆದರೆ ಅದಕ್ಕೆ ಅಪವಾದವೆಂಬಂತೆ 2016ರಲ್ಲಿ ಅಧಿಕಾರಕ್ಕೆ ಬಂದ ಪಿಣರಾಯ್ ವಿಜಯನ್ ಅವರ ನೇತೃತ್ವದ ಎಲ್.ಡಿ.ಎಫ್ ಒಕ್ಕೂಟ ಮತ್ತೆ ಅನಿರೀಕ್ಷಿತವಾಗಿ 2021ರ ವಿಧಾನಸಭಾ ಚುನಾವಣೆಯಲ್ಲಿ 95 ಸ್ಥಾನಗಳನ್ನು ಗೆದ್ದು, ಭಾರೀ ಬಹುಮತದೊಂದಿಗೆ ಎರಡನೇ ಬಾರಿ ಕೇರಳಂ ರಾಜ್ಯದಲ್ಲಿ ಅಧಿಕಾರಕಾರದ ಚುಕ್ಕಾಣಿ ಹಿಡಿದು ಯುಡಿಎಫ್‌ನ ಕನಸಿಗೆ ತಣ್ಣೀರೆರಚಿತು.

ಎಲ್.ಡಿ.ಎಫ್ ಬಲಾಬಲ: ಎಲ್‌ಡಿಎಫ್ ನೇತೃತ್ವದ ಎಡರಂಗ ಸರಕಾರದಲ್ಲಿ 12 ಪಕ್ಷಗಳ ವಿಧಾನಸಭಾ ಸದಸ್ಯರಿದ್ದಾರೆ. ಆ ಒಕ್ಕೂಟದ ಪ್ರಮುಖ ಪಕ್ಷವಾದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ) 61 ಸದಸ್ಯರನ್ನು ಹೊಂದಿದ್ದರೆ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 16 ವಿಧಾನಸಭಾ ಸದಸ್ಯರನ್ನು ಹೊಂದಿದೆ. ಉಳಿದಂತೆ ಕೇರಳ ಕಾಂಗ್ರೆಸ್ (ಮಾಣಿ) 5 ಸದಸ್ಯರು, ಇಂಡಿಯನ್ ಸೋಶಲಿಸ್ಟ್ ಜನತಾ ದಳದ 2 ಸದಸ್ಯರು, ಎನ್‌ಸಿಪಿ (ಶರದ್ ಪವಾರ್)-2 ಕಾಂಗ್ರೆಸ್ ಸೆಕ್ಯುಲರ್-1, ಇಂಡಿಯನ್ ನ್ಯಾಷನಲ್ ಲೀಗ್-1, ಕೇರಳ ಕಾಂಗ್ರೆಸ್ (ಬಿ)-1, ನ್ಯಾಷನಲ್ ಸೆಕ್ಯುಲರ್ ಕಾನ್ಫರೆನ್ಸ್-1, ಆರ್‌ಜೆಡಿ-1, ರೆವೊಲ್ಯು ಷನರಿ ಸೋಷ್ಯಲಿಸ್ಟ್ ಪಾರ್ಟಿ-1 ಮತ್ತು ಸ್ವತಂತ್ರ ಅಭ್ಯರ್ಥಿಗಳನ್ನು ಹೊಂದಿದೆ.

ಇದನ್ನೂ ಓದಿ: Kerala High Court: ದುಲ್ಖರ್‌ ಸಲ್ಮಾನ್‌ಗೆ ಕೇರಳ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌; ಸೀಝ್‌ ಆಗಿದ್ದ ಕಾರು ಮರಳಿಸಲು ಸೂಚನೆ

ಯುಡಿಎಫ್ ಬಲಾಬಲ: 2022ರಲ್ಲಿ ಯುಡಿಎಫ್ ಕೇವಲ 42 ಸ್ಥಾನಗಳಿಗಷ್ಟೇ ತೃಪ್ತಿಪಡ ಬೇಕಾಯಿತು. ಆ ಒಕ್ಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷ 21, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 15, ಕೇರಳ ಕಾಂಗ್ರೆಸ್ (ಕೆಇಸಿ)-2, ಕೇರಳ ಕಾಂಗ್ರೆಸ್ (ಜೇಕಬ್)-1, ಕೇರಳ ಡೆಮೊಕ್ರೇಟಿಕ್ ಪಕ್ಷ-1, ರೆವೊಲ್ಯುಷನರಿ ಮಾರ್ಕಿಸ್ಟ್ ಪಾರ್ಟಿ ಆಫ್ ಇಂಡಿಯಾ-1 ಮತ್ತು ಒಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಒಳಗೊಂಡಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಗಳಿಕೆಯಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆ. 2016ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನೇತಾರ ಒ.ರಾಜಗೋಪಾಲ್ ಅವರು ತಿರುವನಂತಪುರದ ನೇಮಮ್ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಕೇರಳ ಬಿಜೆಪಿಯ ಪ್ರಪ್ರಥಮ ವಿಧಾನಸಭಾ ಸದಸ್ಯರಾಗಿದ್ದರು. ಆದರೆ 2022ರಲ್ಲಿ ಅದೇ ಕ್ಷೇತ್ರದಲ್ಲಿ ಅವರು ಸೋಲುವ ಮೂಲಕ ಆ ಚುನಾವಣೆಯಲ್ಲಿ ನಾಲ್ಕೈದು ಕ್ಷೇತ್ರ ಗೆಲ್ಲುವ ಎನ್‌ಡಿಎ ನಿರೀಕ್ಷೆ ಹುಸಿಯಾಗಿ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಕಳೆದುಕೊಂಡ ಪರಿಸ್ಥಿತಿ ಎದುರಿಸಿತು.

ಈ ಸಲ ಬಿಜೆಪಿ ನೇತೃತ್ವದ ಭಾರತ್ ಧರ್ಮ ಜನ ಸೇನಾ (ಬಿಡಿಜೆಎಸ್), ಕೇರಳ ಕಾಂಗ್ರೆಸ್ (ಥಾಮಸ್), ಜನಾಧಿಪತ್ಯ ರಾಷ್ಟ್ರೀಯ ಸಭಾ (ಜೆಆರ್‌ಎಸ್) ಮತ್ತು ಜನಾಧಿಪತ್ಯ ಸಂರಕ್ಷಣಾ ಸಮಿತಿ (ರಾಜನ್ ಬಾಬು ಗುಂಪು) ಜತೆಗೂಡಿ ಸ್ಪರ್ಧಿಸುತ್ತಿದೆ.

ಕಳೆದ ಸಲದಂತೆ ಈ ಬಾರಿ ಕೇರಳದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಖಚಿತವಾಗಿದೆ. 1957ರಿಂದ ನಡೆದ ಚುನಾವಣೆಯಲ್ಲಿ 9 ಬಾರಿ ಕೇರಳದಲ್ಲಿ ಎಲ್‌ಡಿಎಫ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, 7 ಬಾರಿ ಯುಡಿಎಫ್ ಸರಕಾರ ಆಡಳಿತ ನಡೆಸಿದೆ.

Kerala CMs ok

ಕೇರಳದ ವಿಧಾಸಸಭಾ ಚುನಾವಣೆಗಳು: ಕೇರಳ ರಾಜ್ಯದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಸರಕಾರ ಅಸ್ತಿತ್ವಕ್ಕೆ ಬಂದು ಇಎಂಎಸ್ ನಂಬೂದಿರಿಪ್ಪಾಡ್ ಮುಖ್ಯಮಂತ್ರಿಗಾದಿಗೇರಿದವರು. ಆ ವೇಳೆ ಕಾಂಗ್ರೆಸ್‌ನ ಪಿ.ಟಿ. ಚಾಕೋ ವಿರೋಧಪಕ್ಷದ ನಾಯಕರಾಗಿದ್ದರು. 1960ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಪ್ರಜಾ ಸೋಷಲಿಸ್ಟ್ ಪಕ್ಷದ ಪಟ್ಟಂ.ಎ.ಥಾನು ಪಿಳ್ಳೈ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡರೂ, 1962ರಲ್ಲಿ ಅವರು ಸಿಎಂ ಸ್ಥಾನದಿಂದ ಇಳಿಯ ಬೇಕಾಯಿತು. ಬಳಿಕ ಕಾಂಗ್ರೆಸ್‌ನ ಆರ್.ಶಂಕರ್ ಮುಖ್ಯಮಂತ್ರಿಗಾದಿಗೇರಿ ಆಡಳಿತ ಮುಂದುವರಿಸಿದರು. ಆ 5 ವರ್ಷಗಳ ಅವಧಿಯಲ್ಲಿ ಎಲ್‌ಡಿಎಫ್‌ನ ಇ.ಎಂ.ಎಸ್ ನಂಬೂದಿರಿಪ್ಪಾಡ್ ಪ್ರತಿಪಕ್ಷ ನಾಯಕರಾಗಿದ್ದರು. 1967ರಲ್ಲಿ ನಡೆದ 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬಂದು ಸಿಪಿಐಎಂ‌ ಪಕ್ಷದ ಇಎಂಎಸ್ ನಂಬೂದಿರಿಪ್ಪಾಡ್ ಅಧಿಕಾರದ ಚುಕ್ಕಾಣಿ ಹಿಡಿದರು. ಆ ವೇಳೆ ಯುಡಿಎಫ್‌ನ ಹಿರಿಯ ಕಾಂಗ್ರೆಸ್ ನಾಯಕ ಕೆ.ಕರುಣಾಕರನ್ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದರು.

1970ರ ಚುನಾವಣೆಯಲ್ಲಿ ಯುಡಿಎಫ್‌ ಪಾಳಯಕ್ಕೆ ಜಿಗಿದ ಸಿಪಿಐ ಪಕ್ಷದ ಸಿ.ಅಚ್ಯುತ ಮೆನನ್ ಮುಖ್ಯಮಂತ್ರಿಯಾದರು. ಸಿಪಿಐಎಂನ ಇಎಂಎಸ್ ನಂಬೂದಿರಿಪ್ಪಾಡ್ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದರು. 1977-80ರ 3 ವರ್ಷಗಳ ಅವಧಿಯಲ್ಲಿ ಕೇರಳವು 4 ಮುಖ್ಯಮಂತ್ರಿಗಳನ್ನು ನೋಡ ಬೇಕಾಯಿತು. ಯುಡಿಎಫ್‌ನಿಂದ ಕಾಂಗ್ರೆಸ್ ನಾಯಕರಾದ ಕೆ.ಕರುಣಾಕರನ್, ಎ.ಕೆ.ಆ್ಯಂಟನಿ, ಮತ್ತು ಸಿಪಿಐನ ಪಿ.ಕೆ.ವಾಸುದೇವನ್ ನಾಯರ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಸಿ.ಎಚ್.ಮೊಹಮ್ಮದ್ ಕೋಯ ಮುಖ್ಯ ಮಂತ್ರಿಗಳಾದರು. ಆ ಮೂರು ವರ್ಷಗಳ ಕಾಲ ಸಿಪಿಐಎಂನ ಇಎಂಎಸ್ ನಂಬೂದಿರಿ ಪ್ಪಾಡ್ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆಗಿದ್ದರು.

1980ರಲ್ಲಿ ನಡೆದ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಬಹುಮತ ದೊರೆತು ಸಿಪಿಐಎಂ ಪಕ್ಷದ ಇ.ಕೆ. ನಾಯನಾರ್ ಮುಖ್ಯಮಂತ್ರಿ ಗಾದಿಗೇರಿದರು. ಕಾಂಗ್ರೆಸ್‌ನ ಕೆ.ಕರುಣಾಕರನ್ ಆ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 1982ರ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದು ಕಾಂಗ್ರೆಸ್‌ನ ಕೆ.ಕರುಣಾಕರನ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವಧಿಯಲ್ಲಿ ಎಲ್‌ಡಿಎಫ್‌ನ ಇ.ಕೆ. ನಾಯನಾರ್ ಪ್ರತಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದರು.

1987ರಲ್ಲಿ ಸಿಪಿಐಎಂನ ಇ.ಕೆ.ನಾಯನಾರ್ ಮುಖ್ಯಮಂತ್ರಿಯಾದರೆ, ಕಾಂಗ್ರೆಸ್‌ನ ಕೆ.ಕರುಣಾಕರನ್ ವಿಪಕ್ಷ ನಾಯಕರಾದರು. 1992-1996ರ ಅವಧಿಯ ನಡುವೆ ಯುಡಿಎಫ್‌ ನ ಕೆ.ಕರುಣಾಕರನ್ ಅಧಿಕಾರದಿಂದ ಕೆಳಗಿಳಿದಾಗ ಎ.ಕೆ ಆ್ಯಂಟನಿ ಮುಖ್ಯಮಂತ್ರಿ ಯಾದರು. 1996ರಲ್ಲಿ ಇ.ಕೆ.ನಾಯನಾರ್ ಮುಖ್ಯಮಂತ್ರಿಯಾದರೆ, 2001-2006ರ ಅವಧಿಯಲ್ಲಿ ಯು.ಡಿಎಫ್‌ನ ಎ.ಕೆ ಆ್ಯಂಟನಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾದರು. 2006ರಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬಂದು ವಿಎಸ್ ಅಚ್ಯುತಾನಂದನ್ ಮುಖ್ಯಮಂತ್ರಿಯಾದರು. 2011ರಲ್ಲಿ ಚುನಾವಣೆ ನಡೆದು ಯುಡಿಎಫ್ ಬಹುಮತ ಪಡೆದು 5 ವರ್ಷ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದರು. ಆದರೆ 2016ರಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬಂದು ಪಿಣರಾಯಿ ಮುಖ್ಯಮಂತ್ರಿಯಾಗಿ, 2021ರಲ್ಲೂ ಅವರ ಒಕ್ಕೂಟವೇ ಮರುಆಯ್ಕೆಯಾಗಿದ್ದರಿಂದ ಮತ್ತೆ ಸಿಎಂ ಸ್ಥಾನದಲ್ಲಿ ಮುಂದುವರಿದರು.

ಇದೀಗ ಮತ್ತೆ 3ನೇ ಬಾರಿಯೂ ಎಲ್‌ಡಿಎಫ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, 10 ವರ್ಷಗಳ ಬಳಿಕ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುವುದು ಯುಡಿಎಫ್ ನಿರೀಕ್ಷೆ. ಈ ಸಲ ಪಕ್ಷದ ನಾಲ್ಕೈದು ಶಾಸಕರು ವಿಧಾನಸಭೆ ಯಲ್ಲಿ ಇರಲಿದ್ದಾರೆ ಎಂಬುವುದು ಬಿಜೆಪಿಯ ಆತ್ಮವಿಶ್ವಾಸ.

ಕೇರಳದಲ್ಲಿ ಒಟ್ಟು14 ಜಿಲ್ಲೆ: 140 ಕ್ಷೇತ್ರಗಳು

ಕೇರಳದಲ್ಲಿ ಒಟ್ಟು ಇರುವ ಜಿಲ್ಲೆಗಳ ಸಂಖ್ಯೆ 14, ವಿಧಾನಸಭಾ ಕ್ಷೇತ್ರಗಳ ಒಟ್ಟು ಸಂಖ್ಯೆ 140. ವಯನಾಡು ಜಿಲ್ಲೆಯಲ್ಲಿ ಕೇವಲ 3 ವಿಧಾನಸಭಾ ಕ್ಷೇತ್ರಗಳಿದ್ದರೆ, ಮಲಪ್ಪುರಂ ಜಿಲ್ಲೆ 16 ಸ್ಥಾನಗಳನ್ನು ಹೊಂದಿದೆ. ಎರ್ನಾಕುಳಂ ಮತ್ತು ತಿರುವನಂತಪುರಂ ಜಿಲ್ಲೆ ತಲಾ 14 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ.

ಕೇರಳದಲ್ಲಿ ಮುಖ್ಯಮಂತ್ರಿಗಳಾಗಿದ್ದವರು

ಕೆ.ಕರುಣಾಕರನ್-3 ಬಾರಿ

ಇ.ಕೆ ನಾಯನಾರ್-3 ಸಲ

ಎ.ಕೆ ಆ್ಯಂಟನಿ-3 ಬಾರಿ

ಇಎಂಎಸ್ ನಂಬೂದಿರಿಪ್ಪಾಡ್-2 ಸಲ

ಪಿಣರಾಯಿ ವಿಜಯನ್-2 ಬಾರಿ

ಉಮ್ಮನ್ ಚಾಂಡಿ-2 ಸಲ

ಪಟ್ಟಂತಾನು ಪಿಳ್ಳೈ-ಒಮ್ಮೆ

ಆರ್.ಶಂಕರ್-1 ಸಲ

ಸಿ.ಅಚ್ಯುತ ಮೆನನ್-1 ಬಾರಿ

ಪಿ.ಕೆ.ವಾಸುದೇವನ್ ನಾಯರ್-1 ಸಲ

ಸಿಎಚ್ ಮೊಹಮ್ಮದ್ ಕೋಯ-1 ಬಾರಿ

ವಿಎಸ್ ಅಚ್ಯುತಾನಂದನ್-1 ಸಲ

ಎನ್‌ಡಿಎ: 3ನೇ ಶಕ್ತಿ: ಕೇರಳದಲ್ಲಿ ಎನ್‌ಡಿಎ 3ನೇ ಶಕ್ತಿಯಾಗಿ ನಿಧಾನವಾಗಿ ರಾಜ್ಯಾದ್ಯಂತ ಬೆಳೆಯಲಾರಂಭಿಸಿದೆ. ಕಳೆದ 10 ವರ್ಷದ ಹಿಂದೆ ಕೇವಲ 5% ಮತ ಗಳಿಕೆಯಲ್ಲಿದ್ದ ಎನ್‌ಡಿಎ ಕಳೆದ ಲೋಕಸಭಾ ಚುನಾವಣೆಯ ವೇಳೆ ಒಂದು ಲೋಕಸಭಾ ಸ್ಥಾನವನ್ನೂ ಗೆಲ್ಲುವ ಮೂಲಕ 17% ತಲುಪಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 20% ತಲುಪುವ ನಿರೀಕ್ಷೆಯಲ್ಲಿದ್ದು ಇನ್ನು ಹತ್ತು ವರ್ಷದಲ್ಲಿ ಕೇರಳದಲ್ಲಿ 3ನೇ ಪಯಾರ್ಯ ಶಕ್ತಿ ಯಾಗಿ ಅಧಿಕಾರ ಹಿಡಿಯುವ ಆತ್ಮವಿಶ್ವಾಸಲ್ಲಿದೆ.