Kantara: Chapter 1 Movie: 'ಕಾಂತಾರ ಚಾಪ್ಟರ್ 1' ಸಿನಿಮಾಕ್ಕಾಗಿ ಹಾಡಲಿದ್ದಾರೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್
Diljit Dosanjh: ಗಾಯಕ, ನಟ ದಿಲ್ಜಿತ್ ದೋಸಾಂಜ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರ: ಚಾಪ್ಟರ್ 1' ಚಿತ್ರದ ಹಾಡಿಗೆ ಧ್ವನಿ ನೀಡಲು ಸ್ಯಾಂಡಲ್‌ವುಡ್ ಆಗಮಿಸುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಹಾಡಿನ ರೆಕಾರ್ಡಿಂಗ್ ನಡೆಯುತ್ತಿದೆ ಎನ್ನಲಾಗಿದೆ.

Kantara – Chapter 1 -

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತದ ಮೂಲಕ ಸಂಚಲನ ಸೃಷ್ಟಿಸಿದ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಲಿವುಡ್ ಮತ್ತು ಸೌತ್ ಇಂಡಿಯಾ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಗಾಯನ ಮಾತ್ರವಲ್ಲದೆ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ. ಬಾಲಿವುಡ್ ಹಾಗೂ ಪಂಜಾಬಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ʼಕಾಂತಾರ: ಚಾಪ್ಟರ್ 1'ಗೆ ಧ್ವನಿ ನೀಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್ 1ʼ ಅಕ್ಟೋಬರ್ 2ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಸಿನಿಮಾದ ಟ್ರೈಲರ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಗುಟ್ಟನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ ದಿಲ್ಜಿತ್ ಹಾಡಲಿದ್ದಾರೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ. ದಿಲ್ಜಿತ್ ಅವರ ಧ್ವನಿಯಲ್ಲಿ ಹಾಡು ಯಾವ ರೀತಿ ಮೂಡಿಬರಲಿದೆ ಎನ್ನುವ ಕುತೂಹಲ ಮೂಡಿದೆ.
ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಹಾಡಿನ ರೆಕಾರ್ಡಿಂಗ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ಸಂಪ್ರದಾಯ, ಆಚಾರ ವಿಚಾರಗಳನ್ನು ಸಾರುವಂತಹ ಜಾನಪದ ಹಾಡುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇದನ್ನು ಓದಿ:Rishab shetty: ಐತಿಹಾಸಿಕ ಸಿನಿಮಾಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಾಯಕ
ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಸಂಗೀತ ಸಂಯೋಜನೆ ಮಾಡಿರುವ ದಿಲ್ಜಿತ್ ದೋಸಾಂಜ್ ತೆಲುಗಿನ 'ಕಲ್ಕಿ 2898 AD'ನ ಸಿನಿಮಾದ ಹಾಡನ್ನು ಕಂಪೋಸ್ ಮಾಡಿದ್ದರು. ಪ್ರಭಾಸ್ ಅವರ 'ಭೈರವ ಆಂಥೆಮ್' ಹಾಡು ಅಭಿಮಾನಿಗಳ ಗಮನ ಸೆಳೆದಿತ್ತು. ಈಗ ಅವರು ʼಕಾಂತಾರ: ಚಾಪ್ಟರ್ 1' ಚಿತ್ರತಂಡದ ಜತೆ ಕೈಜೋಡಿಸಿದ್ದು ಹಾಡಿನ ವಿಚಾರ ದೊಡ್ಡ ಸುದ್ದಿ ಮಾಡುತ್ತಿದೆ.
ʼಕಾಂತಾರ: ಚಾಪ್ಟರ್ 1ʼ ಜಾನಪದ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ಭವ್ಯ ಸಂಸ್ಕ್ರತಿಯನ್ನು ಸಾರುವ ಸಿನಿಮಾ ಎನಿಸಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವು ಕನ್ನಡ ಜತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ.