Tender Coconut Price Fall: ತೀವ್ರ ಕುಸಿತ ಕಂಡ ಎಳನೀರು ಬೆಲೆ
ಬೆಂಗಳೂರಿನಲ್ಲಿ ಎಳನೀರಿನ ಬೆಲೆ ಎರಡು ತಿಂಗಳ ಹಿಂದಿನ ವರೆಗೂ 50-60 ರು. ಇತ್ತು, ಆದರೆ ಈಗ 30-40 ರು.ಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಗೆ ಪೂರೈಕೆ ಕುಸಿದಿದ್ದರಿಂದ ಸ್ಥಳೀಯ ವಾಗಿ ಮಾತ್ರ ಎಳನೀರಿನ ವ್ಯಾಪಾರ-ವಹಿವಾಟು ನಡೆಯುತ್ತಿರುವುದರಿಂದ ರೈತರಿಗೆ ನಷ್ಟವಾಗು ತ್ತಿದ್ದು, ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ.
-
ಹೂವಪ್ಪ ಐ.ಹೆಚ್ ಬೆಂಗಳೂರು
ಎಳನೀರಿನ ಬೆಲೆ 50-60ರಿಂದ 30-40 ರುಪಾಯಿಗೆ ಇಳಿಕೆ
ತೀವ್ರ ಚಳಿಯಿಂದಾಗಿ ಉತ್ತರ ಭಾರತದ ರಾಜ್ಯಗಳತ್ತ ಕಡಿಮೆಯಾದ ಪೂರೈಕೆ
ಈ ಸಲ ರಾಜ್ಯದಲ್ಲಿ ಕಾಣಿಸಿಕೊಂಡಿರುವ ತೀವ್ರ ಚಳಿ ಮತ್ತು ಉತ್ತರಭಾರತದಲ್ಲಿ ಬೇಡಿಕೆ ಕುಸಿತಗೊಂಡ ಪರಿಣಾಮವಾಗಿ ಎಳನೀರಿನ ಬೆಲೆ ದಿಢೀರನೆ ಕಡಿಮೆ ಯಾಗಿದೆ. ಇಪ್ಪತ್ತು ದಿನಗಳ ಹಿಂದಿನವರೆಗೂ 50-60 ರು. ಇದ್ದ ಎಳನೀರಿನ ಬೆಲೆಯ ಇದೀಗ 30-40 ರು.ಗೆ ಇಳಿದಿದ್ದು, ಕೆಲವೆಡೆ ಸಣ್ಣ ಗಾತ್ರದ ಎಳನೀರನ್ನು 25 ರು.ಗೂ ಮಾರಾಟ ಮಾಡಲಾಗುತ್ತಿದೆ.
ರಾಜ್ಯದ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಯಲ್ಲಿ ಬೆಳೆಯುವ ಎಳನೀರು ಸಾಮಾನ್ಯ ವಾಗಿ ದೆಹಲಿ, ಪುಣೆ, ಗೋವಾ, ಅಲಹಾಬಾದ್, ಗುಜರಾತ್, ಹೈದರಾಬಾದ್ ಸೇರಿದಂತೆ ದೇಶದ ಹಲವು ಸ್ಥಳಗಳಿಗೆ ಪೂರೈಕೆಯಾಗುತ್ತಿತ್ತು. ಉತ್ತರ ಭಾರತದಲ್ಲಿ ಮಂಡ್ಯದ ಎಳನೀರಿಗೆ ಹೆಚ್ಚು ಬೇಡಿಕೆಯಿತ್ತು, ಆದರೆ ಪ್ರಸ್ತುತ ಹವಾಮಾನ ವೈಪರೀತ್ಯ ಮತ್ತು ಚಂಡಮಾರುತದ ಪ್ರಭಾವದಿಂದಾಗಿ ಇಡೀ ದೇಶದಲ್ಲಿ ಗಾಢ ಚಳಿ ಆವರಿಸಿದೆ, ಹಾಗಾಗಿ ಬೆಲೆ ಇಳಿಕೆಗೆ ಅದೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಎಳನೀರಿನ ಬೆಲೆ ಎರಡು ತಿಂಗಳ ಹಿಂದಿನ ವರೆಗೂ 50-60 ರು. ಇತ್ತು, ಆದರೆ ಈಗ 30-40 ರು.ಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಗೆ ಪೂರೈಕೆ ಕುಸಿದಿದ್ದರಿಂದ ಸ್ಥಳೀಯವಾಗಿ ಮಾತ್ರ ಎಳನೀರಿನ ವ್ಯಾಪಾರ-ವಹಿವಾಟು ನಡೆಯುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ.
ಇದನ್ನೂ ಓದಿ: Coconut Price Rise: ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ
ಚಳಿಯ ಕಾರಣದಿಂದ ಎಲ್ಲೆಡೆ ಎಳನೀರಿನ ಬೆಲೆ ತೀವ್ರ ಕುಸಿತವಾಗಿದೆ ಎನ್ನುತ್ತಾರೆ ಮಂಡ್ಯ ಎಳನೀರು ವ್ಯಾಪಾರಿ ಪುಟ್ಟರಾಜು. ಹೊರ ರಾಜ್ಯಗಳಿಗೆ ನಿತ್ಯ ಸರಬರಾಜಾಗುತ್ತಿದ್ದ 100-150 ಲೋಡ್ ಎಳನೀರಿನ ಪ್ರಮಾಣ ಇದೀಗ 60-60 ಲೋಡ್‌ಗಳಿಗೆ ಕುಸಿದಿದೆ, ಇದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಎಳನೀರಿನ ಮಾರಾಟ ಸ್ಥಳೀಯವಾಗಿ ಕುಸಿದು ಹೋಗಿದೆ.
ಈ ಮಧ್ಯೆ ವಾತಾವರಣದ ಉಷ್ಣಾಂಶ ಕನಿಷ್ಠ 13-24 ಡಿಗ್ರಿ ಸೆಲ್ಸಿಯಸ್, ಗರಿಷ್ಠ 28-29 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದು, ಜನರನ್ನು ತೀವ್ರತರ ಚಳಿ ಕಾಡುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಇದ್ದರೂ ಬೆಚ್ಚನೆಯ ಅನುಭೂತಿ ಇಲ್ಲದ ಕಾರಣ ಜನರು ಎಳನೀರು ಕುಡಿಯುವುದು ಕಡಿಮೆಯಾಗಿದ್ದು, ಅದರಿಂದಾಗಿ ಬೇಡಿಕೆಯೂ ಕುಸಿದಿದೆ.
ಬೆಲೆ ಕುಸಿತದ ಪರಿಣಾಮವಾಗಿ ಎಳನೀರು ವ್ಯಾಪಾರಿಗಳು, ದಲ್ಲಾಳಿಗಳು ಎಪಿಎಂಸಿ ಮಾರುಕಟ್ಟೆಗೆ ಎಳನೀರು ಖರೀದಿಸುವ ಪ್ರಮಾಣ ಕಡಿಮೆಯಾಗಿದ್ದು, ಸದ್ಯ ಗೂಡ್ಸ್ ಆಟೋಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಸಣ್ಣ ಎಳನೀರಿಗೆ 20-25 ರು., ದಪ್ಪ ಎಳನೀರಿಗೆ 30 ರು.ನಿಂದ 35 ರು.ಗೆ ಮಾರುವ ಮೂಲಕ ಸ್ಥಳೀಯವಾಗಿಯೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಇತ್ತೀಚೆಗೆ ಕಬ್ಬು ಮತ್ತು ಭತ್ತದ ಬೆಳೆಯ ನಷ್ಟದಿಂದಾಗಿ ನಿರಂತರ ಆದಾಯ ನೀಡುವ ತೆಂಗು ಬೆಳೆಯತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ತೆಂಗು ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿದೆ, ಹೀಗಾಗಿ ಎಳನೀರಿನ ಆವಕವೂ ಹೆಚ್ಚಾಗಿದೆ.
ಬೆಲೆ-ವಹಿವಾಟು ಇಳಿಕೆ
ಎಳನೀರಿನ ಧಾರಣೆ ಇದೀಗ ತೀವ್ರ ಕುಸಿತ ಕಂಡಿದ್ದು, ಒಂದು ಸಾವಿರ ಎಳನೀರಿಗೆ ಕನಿಷ್ಠ 15000 ರು, ಗರಿಷ್ಠ 45000 ರು. ಧಾರಣೆ ಕಂಡುಬಂದಿದೆ. ವಾರದ ಹಿಂದೆಯಷ್ಟೇ ಗಾತ್ರದಲ್ಲಿ ದಪ್ಪವಾಗಿರುವ ಗುಣಮಟ್ಟದ 1000 ಎಳನೀರಿಗೆ 52000 ರು. ಬೆಲೆ ಇತ್ತು. ಆದರೀಗ 30000 ರು.ಗೆ ಇಳಿಕೆಯಾಗಿದೆ.
*
ಎಳನೀರಿನ ಬೆಲೆ ಕಡಿಮೆಯಾಗಿದ್ದರಿಂದ ಅದನ್ನು ಕುಡಿಯುವ ಜನರಿಗೆ ಹೆಚ್ಚು ಅನುಕೂಲ ವಾಗಿದೆ, ಆದರೆ ರೈತರಿಗೆ ನಷ್ಟವಾಗಿದೆ. ಎಳನೀರಿನ ಬೆಲೆ ಕಡಿಮೆಯಾದರೆ ರೈತರಿಗೆ ಸಿಗುವ ಆದಾಯ ಕಡಿಮೆಯಾಗುತ್ತದೆ. ಬೆಲೆ ಹೆಚ್ಚಾದರೂ ರೈತರಿಗೆ ಹೆಚ್ಚು ಬೆಲೆ ಸಿಗುವುದಿಲ್ಲ, ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ.
-ಸುಬ್ಬಣ್ಣ ಎಳನೀರು ರೈತ
ಒಂದು ಎಳನೀರಿಗೆ 60 ರು. ಇತ್ತು, ಹಾಗಾಗಿ ಎಳನೀರು ಕುಡಿಯುವುದನ್ನೇ ಬಿಟ್ಟಿದ್ದೆವು, ಈಗ ತೀವ್ರ ಚಳಿಯ ಕಾರಣಕ್ಕೆ 30 ರು.ಗೆ ಬೆಲೆ ಇಳಿಕೆಯಾಗಿದೆ ಎಂದು ಎಳನೀರು ವ್ಯಾಪಾರಿಗಳು ಹೇಳುತ್ತಾರೆ, ಆದರೆ ಬೇಸಿಗೆಗೆ ಮತ್ತೆ ಬೆಲೆ ಏರಿಕೆಯಾದರೆ ಎಂಬ ಭಾರೀ ಆತಂಕವಿದೆ.
-ಮುನಿರಾಜು ಗ್ರಾಹಕ, ಬೆಂಗಳೂರು