ಅಹಮದಾಬಾದ್ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 8 ಮಂದಿ ಸಾವು; ಪ್ರಧಾನಿ ನರೇಂದ್ರ ಮೋದಿ ಸಂತಾಪ
Ahmedabad Firecracker Factory Blast: ಗುಜರಾತ್‌ನ ಅಹಮದಾಬಾದ್‌ನ ವಸ್ತ್ರಾಲ್ ಪ್ರದೇಶದಲ್ಲಿದ್ದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರವಾನಗಿ ರದ್ದಾಗಿದ್ದರೂ ಅಕ್ರಮವಾಗಿ ಕಾರ್ಖಾನೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪರಿಹಾರ ಘೋಷಿಸಿದ್ದಾರೆ.
ಗುಜರಾತ್‌ನ ಪಟಾಕಿ ಕಾರ್ಖಾನೆಯಲ್ಲಿ ನಡೆದ ಸ್ಫೋಟ -
ಗಾಂಧಿನಗರ, ಜು. 18: ಗುಜರಾತ್‌ನ ಅಹಮದಾಬಾದ್‌ನಲ್ಲಿ ಶನಿವಾರ (ಜುಲೈ 18) ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದು, 9 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ನಗರದ ವಸ್ತ್ರಾಲ್ ಪ್ರದೇಶದಲ್ಲಿ ಇರುವ 'ಟ್ಯಾಲೆಂಟ್ ಫೈರ್‌ವರ್ಕ್ಸ್' ಎಂಬ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಈ ಕಾರ್ಖಾನೆಯ ಪರವಾನಗಿಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು. ಆದಾಗ್ಯೂ, ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿಯೊಂದರಲ್ಲಿ ಅಕ್ರಮವಾಗಿ ಈ ಪಟಾಕಿ ತಯಾರಿಕಾ ಘಟಕವನ್ನು ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಇಡೀ ಪ್ರದೇಶ ತಲ್ಲಣಗೊಂಡಿದ್ದು, ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಸಿವಿಲ್ ಆಸ್ಪತ್ರೆ ಮತ್ತು ಮಣಿನಗರದ ಎಲ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಗುಜರಾತ್‌ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ:
#Gujarat
— Dilip Kshatriya (@Kshatriyadilip) July 18, 2026
A massive blast at an illegally operated firecracker factory killed 8 people and injured 15 others.The explosion was heard up to 5 km away, Police said factory continued operating illegally even after its licence had expired. Investigation is underway@NewIndianXpress pic.twitter.com/YRKysWoERU
ಅಪರಾಹ್ನ ಸುಮಾರು 3.30ರ ವೇಳೆಗೆ ಸ್ಫೋಟದ ಕುರಿತು ತಮಗೆ ಕರೆ ಬಂತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕ್ಷಿಪ್ರ ಕಾರ್ಯ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಜಂಟಿಯಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದವು. ಶೀಘ್ರ ಕಾರ್ಯಾಚರಣೆಯ ಹೊರತಾಗಿಯೂ ಸ್ಫೋಟದ ತೀವ್ರತೆಯಿಂದಾಗಿ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ.
ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು
ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಈ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಧನವನ್ನು ಘೋಷಿಸಿದ್ದಾರೆ.
"ಗುಜರಾತ್‌ನ ಅಹಮದಾಬಾದ್‌ನ ಪಟಾಕಿ ಕಾರ್ಖಾನೆಯಲ್ಲಿ ನಡೆದ ಅಪಘಾತದಿಂದಾಗಿ ಜೀವಹಾನಿಯಾಗಿರುವುದು ತೀವ್ರ ಬೇಸರ ತಂದಿದೆ. ಈ ದುಃಖದ ಸಮಯದಲ್ಲಿ ನಾನು ಮೃತರ ಕುಟುಂಬಗಳ ಜತೆ ನಿಲ್ಲುತ್ತೇ ನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸ್ಥಳೀಯ ಆಡಳಿತವು ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಮೃತರ ವಾರಸುದಾರರಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ 2 ಲಕ್ಷ ರುಪಾಯಿ ಹಾಗೂ ಗಾಯಗೊಂಡವರಿಗೆ 50,000 ರುಪಾಯಿ ಪರಿಹಾರ ನೀಡಲಾಗುವುದು" ಎಂದು ಪ್ರಧಾನ ಮಂತ್ರಿ ಕಾರ್ಯಾಲಯವು (ಪಿಎಂಒ) ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಧಾನಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬರೆದಿದೆ.