ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜಸ್ಥಾನದಲ್ಲಿ ಹೈಟೆಕ್ ಇಂಧನ ದರೋಡೆ: 20 ಟನ್ ಕಚ್ಚಾ ತೈಲಕ್ಕೆ ಕನ್ನ ಹಾಕಿದ ಖದೀಮರು; ಸಿಕ್ಕಿಬಿದ್ದಿದ್ದು ಹೇಗೆ?

Oil heist in Rajasthan: ರಾಜಸ್ಥಾನದ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅತ್ಯಂತ ಚಾಣಾಕ್ಷತನದಿಂದ ದೊಡ್ಡ ಮಟ್ಟದ ತೈಲ ದರೋಡೆ ನಡೆಸಿ ಸಿಕ್ಕಿಬಿದ್ದಿದೆ. 8 ಜನರ ಗ್ಯಾಂಗ್ ಬರೋಬ್ಬರಿ 20 ಟನ್ ಕಚ್ಚಾ ತೈಲವನ್ನು ಎಗರಿಸಿದೆ. ಸುಮಾರು 10 ಲಕ್ಷ ರುಪಾಯಿ ಮೌಲ್ಯದ ಕಚ್ಚಾ ತೈಲಕ್ಕೆ ಕನ್ನ ಹಾಕಿದ್ದು ಹೇಗೆ, ಬಳಿಕ ಸಿಕ್ಕಿ ಬಿದ್ದಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.

ವಿಚಿತ್ರ ಕಳವು: 20 ಟನ್ ಕಚ್ಚಾ ತೈಲಕ್ಕೆ ಕನ್ನ ಹಾಕಿದ ಖದೀಮರು

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Aug 15, 2026 4:00 PM

ಜೈಪುರ, ಆ. 15: ಚಲನಚಿತ್ರ ಕಥೆಯನ್ನು ನೆನಪಿಸುವಂತೆ ರಾಜಸ್ಥಾನದ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅತ್ಯಂತ ಚಾಣಾಕ್ಷತನದಿಂದ ದೊಡ್ಡ ಮಟ್ಟದ ತೈಲ ದರೋಡೆ ನಡೆಸಿದೆ. 8 ಜನರ ಗ್ಯಾಂಗ್ ಬರೋಬ್ಬರಿ 20 ಟನ್ ಕಚ್ಚಾ ತೈಲವನ್ನು ಎಗರಿಸಿದೆ. ಸುಮಾರು 10 ಲಕ್ಷ ರುಪಾಯಿ ಮೌಲ್ಯದ ಕಚ್ಚಾ ತೈಲಕ್ಕೆ ಕನ್ನ ಹಾಕಿದ ರೋಚಕ ಕಥೆ ಇಲ್ಲಿದೆ. ರಾಜಸ್ಥಾನದ ಬಾಲೋತ್ರಾ ಜಿಲ್ಲೆಯಲ್ಲಿ ಹಾದುಹೋಗುವ ಎಚ್‌ಪಿಸಿಎಲ್ ಪೈಪ್‌ಲೈನ್‌ನಿಂದ 20 ಟನ್ ಕಚ್ಚಾ ತೈಲವನ್ನು ಕದ್ದ ಆರೋಪದ ಮೇಲೆ 8 ಜನರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆ ತಿಳಿಸಿದೆ. ಆ ಮೂಲಕ ಹೈಟೆಕ್‌ ಕಳವಿನ ರಹಸ್ಯ ಬಹಿರಂಗಗೊಂಡಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಶುದ್ಧೀಕರಣ ಘಟಕದ ಭೂಗತ ಪೈಪ್‌ಲೈನ್‌ಗೆ ರಂಧ್ರ ಕೊರೆಯುವ ಮೂಲಕ 20 ಟನ್ ಕಚ್ಚಾ ತೈಲವನ್ನು ಕದ್ದು 8 ಅಂತಾರಾಜ್ಯ ಕಳ್ಳರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಈ ಗುಂಪುನ್ನು ಗುಜರಾತ್ ಎಟಿಎಸ್ ಮತ್ತು ರಾಜಸ್ಥಾನ ಪೊಲೀಸರ ಜಂಟಿ ಪಡೆ ಕಳೆದ ವಾರ ಬಂಧಿಸಿತ್ತು. ಅಹಮದಾಬಾದ್- ರಾಜಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವರು ಅಕ್ರಮವಾಗಿ ಕಚ್ಚಾ ತೈಲ ಮಾರಾಟ ಮಾಡಲು ಯತ್ನಿಸುತ್ತದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ರಾಜಕೋಟ್ ಜಿಲ್ಲೆಯ ಸೊಖೆಡಾ ಗ್ರಾಮದ ಬಳಿ ಮೊದಲ ಆರೋಪಿಯನ್ನು ವಶಕ್ಕೆ ಪಡೆದರು.

ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ದೊಡ್ಡ ತೈಲ ದರೋಡೆ ಜಾಲದ ಬಣ್ಣ ಬಯಲಾಗಿದೆ. ಆತ ನೀಡಿದ ಸುಳಿವು ಆಧರಿಸಿ ರಾಜಸ್ಥಾನದ ಬಾಲೋತ್ರಾ ಜಿಲ್ಲೆ ತಾಪ್ರಾ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು, ಪ್ರಕರಣದಲ್ಲಿ ಉಳಿದ 7 ಆರೋಪಿಗಳನ್ನು ಹಡೆಮುರಿ ಕಟ್ಟಿದ್ದಾರೆ.

ತೈಲ ದರೋಡೆ ನಡೆದಿದ್ದು ಹೇಗೆ?

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ತೈಲ ಪೈಪ್‌ಲೈನ್‌ನ ನಿಖರ ಸ್ಥಳವನ್ನು ಗುರುತಿಸಲು ಸತತ 6 ತಿಂಗಳ ಕಾಲ ಪರಿಶೀಲನೆ ನಡೆಸಿದ್ದರು ಎಂದು ತಿಳಿದು ಬಂದಿದೆ. ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಕಲುಡಿ ಗ್ರಾಮದ ಗಡಿಯಲ್ಲಿ ಪಾಳುಬಿದ್ದ ಜಾಗದಲ್ಲಿ 3-4 ಅಡಿ ಆಳದ ಗುಂಡಿ ತೋಡಿ, ಎಚ್‌ಪಿಸಿಎಲ್ ಕಚ್ಚಾ ತೈಲ ಪೈಪ್‌ಲೈನ್‌ಗೆ ಅಕ್ರಮವಾಗಿ ರಂಧ್ರ ಕೊರೆದು ವಾಲ್ಟ್ ಅಳವಡಿಸಿದ್ದು ಬೆಳಕಿಗೆ ಬಂದಿದೆ.

ಆರೋಪಿಗಳು ಜೈಲಿನಲ್ಲಿದ್ದ ತಮ್ಮ ಸಂಪರ್ಕಗಳನ್ನು ಬಳಸಿಕೊಂಡು 20 ಕಿಲೋ ಮೀಟರ್ ಉದ್ದದ ಎಚ್‌ಪಿಸಿಎಲ್ ರಿಫೈನರಿ ಜಾಲದ ನಿಖರ ಮಾಹಿತಿ ಪಡೆದುಕೊಂಡು ಭೂಗತದಲ್ಲಿ ಹಾದುಹೋಗುವ ಪೈಪ್‌ಲೈನ್ ನಿಖರ ಮಾರ್ಗವನ್ನು ಗುರುತಿಸಿದ್ದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಈ ಮಾಹಿತಿ ಹಾಗೂ ನಕ್ಷೆಯ ನೆರವಿನಿಂದ ಕಳ್ಳರ ಗುಂಪು ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪರ್ಪದಾರ್ ಪ್ರದೇಶದಲ್ಲಿ ಮೂರು ಅಡಿ ಆಳದ ಗುಂಡಿಯನ್ನು ತೋಡಿದೆ ಎಂದು ವರದಿ ತಿಳಿಸಿದೆ. ನಂತರ ಖದೀಮರು ಅಧಿಕ ಒತ್ತಡದ ಎಚ್‌ಪಿಸಿಎಲ್ ಪೈಪಿಗೆ ರಂಧ್ರ ಮಾಡಿ ತೈಲ ಕದಿಯಲು ವಾಲ್ಟ್ ಅಳವಡಿಸಿದ್ದಾರೆ. ಎರಡು ವಾಹನಗಳಲ್ಲಿ 20 ಟನ್ ಕಚ್ಚಾ ತೈಲದೊಂದಿಗೆ ಪರಾರಿಯಾಗಿದ್ದಾರೆ. ಕದ್ದ ತೈಲವನ್ನು ರಾಜಸ್ಥಾನದ ಬ್ಯಾವರ್ ಮೂಲದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡುತ್ತಿದ್ದಾಗ ತನಿಖಾ ದಳಕ್ಕೆ ಖಚಿತ ಮಾಹಿತಿ ದೊರೆತಿದೆ.

ತೈಲ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಜಸೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಅಪರಾಧದಲ್ಲಿ ಬೇರೆ ವ್ಯಕ್ತಿಗಳು ಭಾಗಿಯಾಗಿದ್ದಾರಯೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.. ಬಂಧಿತ ಆರೋಪಿಗಳನ್ನ ಘನಶ್ಯಾಮ್ ಸೋನಿ, ಜಯರಾಜ್‌ಸಿಂಹ ಚುಡಾಸಮಾ, ಮುಕೇಶ ಮೇಘವಾಲ್, ರಂಜಿತ್ ಠಾಕೋರ್, ಸುರೇಜಿ ಠಾಕೋರ್, ಮಹೇಶ ಠಾಕೋರ್ ಮತ್ತು ದಿಲೀಪ್ ಯಾದವ್ ಎಂದು ಗುರುತಿಸಲಾಗಿದೆ.