ಸಣ್ಣ ತಪ್ಪು ಮಾಡಿದರೂ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿರಲಿದೆ: ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ
Iran warns America: ಇರಾನ್ ರಾಜತಾಂತ್ರಿಕ ಮಾತುಕತೆಗಳಿಗೆ ಸಿದ್ಧ ಎಂದು ಹೇಳಿದರೂ ತನ್ನ ಸೇನೆಯನ್ನು ಸನ್ನದ್ಧ ರೀತಿಯಲ್ಲಿ ಸಜ್ಜುಗೊಳಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಯಾವುದೇ ರೀತಿಯ ಸಣ್ಣ ತಪ್ಪಾದರೂ ತೀಕ್ಷ್ಣ ಪ್ರತಿಕ್ರಿಯೆ ನೀಡುವುದಾಗಿ ಖಡಕ್ ಸಂದೇಶ ರವಾನಿಸಿದರು.
ಮೊಹಮ್ಮದ್ ಬಘರ್ ಗಾಲಿಬಾಫ್ ಮತ್ತು ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಟೆಹರಾನ್, ಏ. 19: ಅಮೆರಿಕದೊಂದಿಗೆ (America) ನಡೆಯುತ್ತಿರುವ ಉದ್ವಿಗ್ನತೆ ಕುರಿತು ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿರುವುದಾಗಿ ಇರಾನ್ (Iran) ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ (Mohammad Bagher Ghalibaf) ಹೇಳಿದ್ದಾರೆ. ಅವರು ನೀಡಿದ ದೂರದರ್ಶನ ಭಾಷಣದಲ್ಲಿ, ಇರಾನ್ ರಾಜತಾಂತ್ರಿಕ ಮಾತುಕತೆಗಳಿಗೆ ಸಿದ್ಧವಿದೆ ಎಂದು ತಿಳಿಸಿದರೂ ತನ್ನ ಸೇನೆಯನ್ನು ಸನ್ನದ್ಧ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಗಾಲಿಬಾಫ್ ಪ್ರಕಾರ, ಯುದ್ಧಭೂಮಿಯಲ್ಲಿ ಇರಾನ್ ಮೇಲುಗೈ ಸಾಧಿಸಿದೆ. ಈಗ ಶಕ್ತಿಶಾಲಿ ಸ್ಥಾನದಿಂದ ಮಾತುಕತೆಗಳನ್ನು ಮುಂದುವರಿಸಲು ಸಿದ್ಧ ಎಂದು ಹೇಳಿದರು.
ಅದೇ ಸಮಯದಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ತೀಕ್ಷ್ಣ ಎಚ್ಚರಿಕೆ ನೀಡುವುದಾಗಿ ಖಡಕ್ ಸಂದೇಶ ರವಾನಿಸಿದರು. ಯಾವುದೇ ಪ್ರಚೋದನೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು. ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಅವರು ಸಣ್ಣದೊಂದು ತಪ್ಪು ಮಾಡಿದರೆ, ನಾವು ಪೂರ್ಣ ಬಲದಿಂದ ಪ್ರತಿಕ್ರಿಯಿಸುತ್ತೇವೆ ಎಂದು ಗಾಲಿಬಾಫ್ ಹೇಳಿದರು. ಕದನ ವಿರಾಮ ಪ್ರಯತ್ನಗಳು ದುರ್ಬಲವಾಗಿದ್ದರೂ ಸಹ ಕಠಿಣ ನಿಲುವನ್ನು ಹೊಂದಿರುವುದಾಗಿ ಸೂಚಿಸಿದರು.
ಹಿಂದಿನ ಸಂಘರ್ಷಗಳಿಗೆ ಹೋಲಿಸಿದರೆ ಇರಾನ್‌ನ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು. ಅಮೆರಿಕವು ಸಂಪನ್ಮೂಲಗಳು ಮತ್ತು ಅನುಭವದ ವಿಷಯದಲ್ಲಿ ಮುಂದಿದೆ ಎಂಬುದನ್ನು ಗಾಲಿಬಾಫ್ ಒಪ್ಪಿಕೊಂಡರು. ಆದರೆ ಇರಾನ್‌ನ ಯೋಜನೆಯು ತನ್ನ ವಿರೋಧಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ ವಿಧಿಸಿದ ಇರಾನ್: ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ ಆರೋಪ
“ನಾವು ಅಮೆರಿಕಕ್ಕಿಂತ ಮಿಲಿಟರಿ ದೃಷ್ಟಿಯಿಂದ ಬಲಶಾಲಿಗಳಲ್ಲ. ಅವರ ಬಳಿ ಹೆಚ್ಚು ಹಣ, ಉಪಕರಣಗಳು ಮತ್ತು ಸಂಪನ್ಮೂಲಗಳಿವೆ. ಅವರು ಪ್ರಪಂಚದಾದ್ಯಂತ ಹಲವುರು ಆಕ್ರಮಣಗಳನ್ನು ನಡೆಸಿರುವುದರಿಂದ, ಅವರಿಗೆ ನಮಗಿಂತ ಹೆಚ್ಚಿನ ಅನುಭವವೂ ಇದೆ” ಎಂದು ಅವರು ಹೇಳಿದರು. ಇರಾನ್ ತನ್ನ ಸ್ವಂತ ಯೋಜನೆ ಮತ್ತು ಸನ್ನದ್ಧತೆಯನ್ನು ಅವಲಂಬಿಸಿದೆ. ಹೆಚ್ಚಿನ ಸಂಪನ್ಮೂಲಗಳೊಂದಿಗೆ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತದೆ ಎಂದು ಹೇಳಿದರು.
ಇಸ್ರೇಲ್ ಅನ್ನು ಅಮೆರಿಕದ ಸೇವಕ ಮತ್ತು ಏಜೆಂಟ್ ಎಂದು ಅವರು ಉಲ್ಲೇಖಿಸಿದರು. “ಅಮೆರಿಕ ಮೊದಲು ತನಗೆ ಮುಖ್ಯ ಎಂದು ಅಮೆರಿಕ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಪ್ರಾಯೋಗಿಕವಾಗಿ, ಇಸ್ರೇಲ್‌ನಿಂದ ಬರುವ ಸುಳ್ಳು ಮಾಹಿತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇಸ್ರೇಲ್ ಅದಕ್ಕೆ ಮೊದಲು ಎಂಬುದನ್ನು ತೋರಿಸಿದೆ” ಎಂದು ಅವರು ಹೇಳಿದರು.
ಇರಾನ್‌ನ ವಿರೋಧಿಗಳು ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ಅವರು ಈ ಉದ್ದೇಶ ಸಾಧಿಸುವಲ್ಲಿ ವಿಫಲರಾದರು ಎಂದು ಗಾಲಿಬಾಫ್ ಅಭಿಪ್ರಾಯಪಟ್ಟರು. ನಮ್ಮ ತೈಲವನ್ನು ಹರಾಜು ಹಾಕಲು ಪ್ರಯತ್ನಿಸಿದರು. ಆದರೆ, ಶತ್ರುಗಳು ಅದನ್ನು ಮಾಡುವಲ್ಲಿ ಸಫಲವಾಗಲಿಲ್ಲ ಎಂದು ತಿಳಿಸಿದರು.