ಪಾಕಿಸ್ತಾನದ ಮತ್ತೊಂದು ಕಳ್ಳಾಟ ಬಯಲು; ದೆಹಲಿಯ ಬ್ರಿಕ್ಸ್ ಶೃಂಗಸಭೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಚಳಿ ಬಿಡಿಸಿದ ಕೇಂದ್ರ ಸರ್ಕಾರ
ಬ್ರಿಕ್ಸ್ ಶೃಂಗಸಭೆಯ ವೇಳೆ ನವದೆಹಲಿಯಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವೈರಲ್ ವಿಡಿಯೋ 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಹಳೆಯ ದೃಶ್ಯವಾಗಿದ್ದು, ಅದನ್ನು ಬ್ರಿಕ್ಸ್ ಶೃಂಗಸಭೆಯ ಸಂದರ್ಭದ ಘಟನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ.
ಬ್ರಿಕ್ಸ್ ಶೃಂಗಸಭೆ ಕುರಿತು ಸುಳ್ಳು ಪ್ರಚಾರ -
ನವದೆಹಲಿ, ಸೆ. 14: ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ (BRICS Summit) ಸಂದರ್ಭದಲ್ಲಿ ಭೀಕರ ಸ್ಫೋಟ (Blast) ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಈ ಸುದ್ದಿಯನ್ನು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ (Press Information Bureau – PIB) ವಾಸ್ತವ ಪರಿಶೀಲನಾ ವಿಭಾಗ ಸ್ಪಷ್ಟವಾಗಿ ತಳ್ಳಿಹಾಕಿದೆ. ಪಾಕಿಸ್ತಾನ ಮೂಲದ ಕೆಲವು ಪ್ರಚಾರ ಖಾತೆಗಳು, ಬ್ರಿಕ್ಸ್ ಶೃಂಗಸಭೆ ಮುಕ್ತಾಯಗೊಳ್ಳುವ ಕೆಲವೇ ನಿಮಿಷಗಳ ಮೊದಲು ನವದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿಕೊಂಡಿದ್ದವು. ಸ್ಫೋಟದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದನ್ನೂ ಹಂಚಿಕೊಳ್ಳಲಾಗಿತ್ತು.
ಆದರೆ ವಾಸ್ತವ ಪರಿಶೀಲನೆಯಲ್ಲಿ, ವೈರಲ್ ಆಗಿರುವ ವಿಡಿಯೊ ಹಳೆಯದಾಗಿದ್ದು, 2026ರ ಬ್ರಿಕ್ಸ್ ಶೃಂಗಸಭೆಗೆ ಯಾವುದೇ ಸಂಬಂಧವಿಲ್ಲ ಎಂದು ಪಿಐಬಿ ತಿಳಿಸಿದೆ. ಈ ವಿಡಿಯೊ ವಾಸ್ತವವಾಗಿ 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ದೃಶ್ಯವಾಗಿದೆ.
ಫ್ಯಾಕ್ಟ್ ಚೆಕ್ ವರದಿ ಇಲ್ಲಿದೆ:
Pakistani propaganda accounts claim that an explosion rocked New Delhi, killing eight people, just minutes before the #BRICSSummit 2026 was set to conclude.#PIBFactCheck:
— PIB Fact Check (@PIBFactCheck) September 14, 2026
❌ This claim is #Fake.
✅The video being circulated is OLD and unrelated to the ongoing #BRICS Summit:… pic.twitter.com/mSqPaJ30SS
ಕಳೆದ ವರ್ಷ ನವೆಂಬರ್ 10ರಂದು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪ ವಾಹನದಲ್ಲಿ ಸ್ಫೋಟ ಸಂಭವಿಸಿ, ಹಲವರು ಮೃತಪಟ್ಟಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಆ ಘಟನೆಯ ದೃಶ್ಯಗಳನ್ನು ಇದೀಗ ಬ್ರಿಕ್ಸ್ ಶೃಂಗಸಭೆಯ ಸಂದರ್ಭದ ಘಟನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ
ಇದೇ ವೇಳೆ, ಭಾರತವು ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಶಾಂತಿಯುತವಾಗಿ ಆಯೋಜಿಸಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಸೇರಿ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಸಂದರ್ಭದಲ್ಲಿ ಇಂತಹ ಯಾವುದೇ ಸ್ಫೋಟದ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವಿಡಿಯೊಗಳು ಮತ್ತು ಸುದ್ದಿಗಳನ್ನು ಪರಿಶೀಲಿಸದೆ ನಂಬಬಾರದು ಅಥವಾ ಹಂಚಿಕೊಳ್ಳಬಾರದು. ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಖಚಿತಪಡಿಸಿಕೊಂಡ ಬಳಿಕವೇ ಹಂಚಿಕೊಳ್ಳುವಂತೆ ಪಿಐಬಿ ಸಾರ್ವಜನಿಕರಿಗೆ ಸಲಹೆ ನೀಡಿದೆ. ಒಟ್ಟಾರೆ ಬ್ರಿಕ್ಸ್ ಶೃಂಗಸಭೆ ವೇಳೆ ದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ ಎಂಬ ವೈರಲ್ ಸುದ್ದಿ ಸುಳ್ಳು. ಹಳೆಯ ಕೆಂಪುಕೋಟೆ ಸ್ಫೋಟದ ವಿಡಿಯೋವನ್ನು ಹೊಸ ಘಟನೆಯಂತೆ ಬಿಂಬಿಸಿ ತಪ್ಪು ಮಾಹಿತಿ ಹರಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.