Women's Asia Cup: ಭಾರತ ತಂಡದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ! ಏಕೆ ಗೊತ್ತೆ?
ಶ್ರೀಲಂಕಾ ವಿರುದ್ಧದ 2026 ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊದಲನೇ ಹಂತದ ನಿಯಮ ಉಲ್ಲಂಘನೆ ಮಾಡಿರುವ ಭಾರತ ತಂಡದ ವೇಗಿ ಕ್ರಾಂತಿ ಗೌಡ್ ಅವರಿಗೆ ಪಂದ್ಯದ ಶುಲ್ಕದ 10% ದಂಡ ವಿಧಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಶ್ರೀಲಂಕಾ ವಿರುದ್ಧ ಭಾರತ ತಂಡ 72 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ನಿಯಮ ಉಲ್ಲಂಘಿಸಿದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ. -
ದುಬೈ: ಶ್ರೀಲಂಕಾ ವಿರುದ್ಧ ಭಾನುವಾರ ನಡೆದಿದ್ದ ಮಹಿಳಾ ಏಷ್ಯಾಕಪ್ ಫೈನಲ್ (Women's Asia Cup 2026) ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತ ತಂಡದ ವೇಗಿ ಕ್ರಾಂತಿ ಗೌಡ್ (Kranti Gaud) ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪಂದ್ಯದ ಶುಲ್ಕದ 10 ದಂಡ ವಿಧಿಸಿದೆ. ಇದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, 72 ರನ್‌ಗಳ ಗೆಲುವು ಪಡೆದ ಬಳಿಕ, ಎಂಟನೇ ಬಾರಿ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿತು.
ಲೆವೆಲ್-1 ಉಲ್ಲಂಘನೆಗೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅಡಿಯಲ್ಲಿ ಕ್ರಾಂತಿ ಗೌಡ್ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಅವರು ವಿಧಿಸಲಾದ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಈ ನಿಯಮವು ಅಂತಾರಾಷ್ಟ್ರೀಯ ಪಂದ್ಯದ ವೇಳೆ ಬ್ಯಾಟರ್ ಔಟಾದ ಬಳಿಕ, ಅವರ ವಿರುದ್ಧ ಅವಹೇಳನಕಾರಿ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆ ಹುಟ್ಟುಹಾಕಬಹುದಾದ ಭಾಷೆ, ಕ್ರಿಯೆ ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದೆ.
Women's Asia cup: ಮತ್ತೊಮ್ಮೆ ಪಾಕಿಸ್ತಾನದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!
ಪೆವಿಲಿಯನ್ ಕಡೆಗೆ ಕೈ ತೋರಿಸಿದ್ದ ಕ್ರಾಂತಿ ಗೌಡ್
ಶ್ರೀಲಂಕಾ ತಂಡದ ಚೇಸಿಂಗ್ ವೇಳೆ ಕ್ರಾಂತಿ ಗೌಡ್ ಆರಂಭಿಕ ಆಟಗಾರ್ತಿ ಇಮೇಶಾ ದುಲಾನಿ ಅವರನ್ನು ಔಟ್ ಮಾಡಿದರು. ವಿಕೆಟ್ ಪಡೆದ ಸಂಭ್ರಮಾಚರಣೆಯ ವೇಳೆ ಕ್ರಾಂತಿ ಅವರು ಪೆವಿಲಿಯನ್‌ನತ್ತ ಕೈ ತೋರಿಸಿದ್ದರು. ಈ ಸನ್ನೆ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪಂದ್ಯದ ಅಧಿಕಾರಿಗಳು ನಿರ್ಧರಿಸಿದರು.
ಲೆವೆಲ್-1 ಉಲ್ಲಂಘನೆಗಳಿಗೆ ಕನಿಷ್ಠ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಆಟಗಾರ್ತಿಯ ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತದವರೆಗೆ ದಂಡ ಹಾಗೂ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಬಹುದಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಕ್ರಾಂತಿ ಗೌಡ್ ಪಡೆದಿರುವ ಮೊದಲ ಡಿಮೆರಿಟ್ ಪಾಯಿಂಟ್ ಇದಾಗಿದೆ.
A beaut of a delivery 👌
— Sony LIV (@SonyLIV) September 13, 2026
Watch #INDvSL in #DPWorldAsiaCup FINAL, LIVE on #SonyLIV & #SonySportsNetwork 📺📲 pic.twitter.com/zPxXZ0RZEp
ಭಾರತಕ್ಕೆ ದಾಖಲೆ 8ನೇ ಏಷ್ಯಾಕಪ್ ಪ್ರಶಸ್ತಿ
ಕ್ರಾಂತಿ ಗೌಡ್ ವಿರುದ್ಧದ ಶಿಸ್ತು ಕ್ರಮದ ಹೊರತಾಗಿಯೂ ಫೈನಲ್‌ನಲ್ಲಿ ಭಾರತ ತಂಡ, ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿ ದಾಖಲೆ 8ನೇ ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 183/5 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನಾ ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ಬಲಿಷ್ಠ ಆರಂಭ ಒದಗಿಸಿದರು.
ಬೌಲಿಂಗ್‌ನಲ್ಲೂ ಕ್ರಾಂತಿ ಗೌಡ್ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಶ್ರೀಲಂಕಾ ಚೇಸಿಂಗ್ ವೇಳೆ ದುಲಾನಿ ಅವರ ವಿಕೆಟ್ ಪಡೆದರು. ಆದರೆ ಬಳಿಕ ಭಾರತದ ಸ್ಪಿನ್ ದಾಳಿ ಶ್ರೀಲಂಕಾ ಬ್ಯಾಟಿಂಗ್ ಪಡೆಯನ್ನು ಸಂಪೂರ್ಣವಾಗಿ ಕುಸಿತಗೊಳಿಸಿತು. ಶ್ರೀ ಚರಣಿ 4/20 ಹಾಗೂ ದೀಪ್ತಿ ಶರ್ಮಾ 3/19 ಬೌಲಿಂಗ್‌ನಲ್ಲಿ ಮಿಂಚಿದ ಪರಿಣಾಮ ಶ್ರೀಲಂಕಾ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು.
ಮೊಹ್ಸಿನ್ ನಖ್ವಿಯಿಂದ ಮಹಿಳಾ ಏಷ್ಯಾ ಕಪ್ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಕೋಚ್ ಅಮೋಲ್ ಮಝುಮ್ದಾರ್!
ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ
ಫೈನಲ್ ಪಂದ್ಯದ ಬಳಿಕ ಮೈದಾನದ ಹೊರಗೂ ವಿವಾದ ಸೃಷ್ಟಿಯಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ಮುಂದಾಗಲಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಖ್ವಿ ಅವರಿಂದ ತಂಡ ಟ್ರೋಫಿ ಸ್ವೀಕರಿಸಬಾರದು ಎಂದು ಬಿಸಿಸಿಐ ನಿರ್ಧರಿಸಿತ್ತು ಎನ್ನಲಾಗಿದೆ.