ಹೊರ್ಮುಜ್ ನಿರ್ಬಂಧ: ಅಮೆರಿಕ ಜತೆ ನೇರ ಸಂಘರ್ಷಕ್ಕೆ ಇಳಿಯುತ್ತದೆಯೇ ಚೀನಾ? ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್ ನಡೆ
ಯುಎಸ್ ವಿರುದ್ಧ ಚೀನಾ ಈಗ ನೇರ ಸಂಘರ್ಷಕ್ಕೆ ಇಳಿಯಲಿದೆಯೇ ? ಈ ಕುತೂಹಲ ಈಗ ವಿಶ್ವವನ್ನೇ ಕಾಡುತ್ತಿದೆ. ಒಂದು ವೇಳೆ ಚೀನಾವು ಇರಾನ್ ಜೊತೆಯಾಗಿ ಕದನ ಕ್ಷೇತ್ರಕ್ಕೆ ಇಳಿದರೆ ಪಶ್ಚಿಮ ಸಂಘರ್ಷ ಮತ್ತಷ್ಟು ತೀವ್ರ ಗೊಳ್ಳುವ ಸಾಧ್ಯತೆ ಇದೆ. ಚೀನಾ ಯುದ್ಧ ರಂಗಕ್ಕೆ ಇಳಿಯಲು ಕಾರಣವಾಗುವ ಅಂಶವೇನು, ಯಾಕೆ ಅದು ಯುಎಸ್ ವಿರುದ್ಧ ನಿಲ್ಲಲಿದೆ, ಇದರ ಪರಿಣಾಮ ಏನಾಗಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ಟೆಹರಾನ್: ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇಸ್ರೇಲ್ (Israel), ಯುಎಸ್ (US) ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ (Iran) ಹೊರ್ಮುಜ್ (Strait of Hormuz) ಜಲ ಮಾರ್ಗವನ್ನು ನಿರ್ಬಂಧಿಸಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು (oil crisis) ಪ್ರಾರಂಭವಾಗಿತ್ತು. ಸಂಘರ್ಷ ಪ್ರಾರಂಭವಾಗಿ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಎರಡು ಪಕ್ಷಗಳು ಕದನ ವಿರಾಮ ಮಾತುಕತೆಗೆ ಪಾಕಿಸ್ತಾನದ (Pakistan) ಇಸ್ಲಾಮಾಬಾದ್ ನಲ್ಲಿ ಸೇರಿಕೊಂಡರೂ ಕೂಡ ಮಾತುಕತೆ ಒಪ್ಪಂದ ಹಂತವನ್ನು ತಲುಪಲಿಲ್ಲ. ಹೀಗಾಗಿ ಪಶ್ಚಿಮ ಏಷ್ಯಾ ಭಾಗದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ನಡುವೆ ಚೀನಾವು (China) ಇರಾನ್ ಗೆ ಶಸ್ತ್ರಾಸ್ತ್ರ ಪೂರೈಕೆಗೆ ಸಜ್ಜಾಗುತ್ತಿರುವುದು ಚೀನಾ ಮತ್ತು ಯುರೋಪ್ ನಡುವೆ ನೇರ ಸಂಘರ್ಷದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ಇತ್ತೀಚೆಗೆ ನಡೆದ ಕದನ ವಿರಾಮ ಮಾತುಕತೆಯು ವಿಫಲವಾದ ಬಳಿಕ ಪಶ್ಚಿಮ ಏಷ್ಯಾ ಭಾಗದ ಸಂಘರ್ಷ ಮತ್ತಷ್ಟು ಅಪಾಯಕಾರಿ ರೂಪವನ್ನು ತಾಳುವ ಮುನ್ಸೂಚನೆಯನ್ನು ನೀಡಿದೆ. ಇರಾನ್ ನೊಂದಿಗಿನ ಮಾತುಕತೆ ವಿಫಲವಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮಾರ್ಗದಲ್ಲಿ ನೌಕಾ ದಿಗ್ಬಂಧನವನ್ನು ಘೋಷಿಸಿದರು.
ಅಮೆರಿಕದ ದಿಗ್ಬಂಧನದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ 15 ಭಾರತೀಯ ಹಡಗುಗಳು
ಇಲ್ಲಿ ಸಾಗುವ ವಿಶ್ವದ ಎಲ್ಲಾ ರಾಷ್ಟ್ರಗಳ ಹಡಗುಗಳ ಮೇಲೆ ಅವರು ನಿರ್ಬಂಧ ವಿಧಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದು, ಇದರಿಂದ ಈ ಪ್ರದೇಶದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಇದು ಚೀನಾ ಮತ್ತು ಯುರೋಪ್ ರಾಷ್ಟ್ರಗಳ ಮುಖಾಮುಖಿಗೆ ಕಾರಣವಾಗುವ ಮುನ್ಸೂಚನೆಯನ್ನು ನೀಡಿದೆ.
ಪರ್ಷಿಯನ್ ಕೊಲ್ಲಿಯ ಕಿರಿದಾದ ಜಲ ಮಾರ್ಗದಲ್ಲಿ ಇರಾನ್ ತನ್ನ ಮಿತ್ರ ರಾಷ್ಟ್ರಗಳ ಹಡಗು ಸಾಗಲು ಅನುಮತಿ ನೀಡುತ್ತಿದೆ. ಆದರೆ ಇಸ್ರೇಲ್ ಮತ್ತು ಯುಎಸ್ ಇದನ್ನು ನಿರ್ಬಂಧಿಸುವ ಪ್ರಯತ್ನ ಮಾಡುತ್ತಿದೆ. ಅಮೆರಿಕದ ಈ ಪ್ರಯತ್ನವು ಪ್ರಾದೇಶಿಕ ಬಿಕ್ಕಟ್ಟನ್ನುಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಇರಾನ್ ನ ಪ್ರಮುಖ ಪಾಲುದಾರ ರಾಷ್ಟ್ರವಾಗಿರುವ ಚೀನಾ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಯುದ್ಧ ಆರಂಭವಾದ ಬಳಿಕ ಚೀನಾ ಹಡಗುಗಳು ಮಾತ್ರ ಇಲ್ಲಿ ಯಾವುದೇ ನಿರ್ಬಂಧವಿಲ್ಲದೆ ಚಲಿಸುತ್ತಿತ್ತು. ಆದರೆ ಈಗ ಯುಎಸ್ ಇದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದರಿಂದ ಚೀನಾವು ಯುಎಸ್ ವಿರುದ್ಧ ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಯುಎಸ್ ನ ಕ್ರಮವು ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಚೀನಾ ನೇರವಾಗಿ ಯುದ್ಧರಂಗಕ್ಕೆ ಇಳಿಯುವ ಸಾಧ್ಯತೆ ಇದೆ. ಚೀನಾವು ಇರಾನ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡದಂತೆ ಈಗಾಗಲೇ ಟ್ರಂಪ್ ಆಡಳಿತವು ಚೀನಾಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ಆದರೂ ಬೀಜಿಂಗ್ ನಿಂದ ಇರಾನ್ ಗೆ ಸುಧಾರಿತ ಕ್ಷಿಪಣಿ, ವಾಯು ರಕ್ಷಣಾ ಸಾಧನಗಳನ್ನು ಕಳುಹಿಸುವ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚೀನಾದ ನಡೆ ಏನಾಗಬಹುದು?
ಚೀನಾ ಒಂದು ವೇಳೆ ಇರಾನ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾ ನೇರವಾಗಿ ಸಂಘರ್ಷದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ. ಆದರೆ ಅದು ವ್ಯಾಪಕ ಶಸ್ತ್ರಾಸ್ತ್ರವನ್ನು ಪೂರೈಸಬಹುದು ಅಲ್ಲದೇ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಕೆಲವು ನಿರ್ಣಯಗಳನ್ನು ಕೈಗೊಳ್ಳಬಹುದು. ಈಗಾಗಲೇ ಯುಎಸ್ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.
ಚೀನಾವು ಈ ಜಲ ಮಾರ್ಗದ ಮೂಲಕ ಇರಾನ್ ನಿಂದ ಶೇಕಡಾ 80 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರತಿ ದಿನ ಚೀನಾ ಈ ಜಲ ಮಾರ್ಗದ ಮೂಲಕ ಸುಮಾರು 1.5 ರಿಂದ 1.6 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಇದು ಚೀನಾದ ಒಟ್ಟು ಕಚ್ಚಾ ತೈಲ ಆಮದಿನ ಸರಿಸುಮಾರು ಶೇಕಡಾ 15-16 ರಷ್ಟಾಗಿದೆ. ಚೀನಾ ಕೇವಲ ಇರಾನ್ ನಿಂದ ಮಾತ್ರವಲ್ಲ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್ ನಿಂದಲೂ ಕಚ್ಚಾ ತೈಲವನ್ನು ಇದೇ ಜಲ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತಿದೆ.
ಸಂಘರ್ಷ ತೀವ್ರಗೊಂಡರೆ ಹೊರ್ಮುಜ್ ಮಾತ್ರವಲ್ಲದೆ ಕೆಂಪು ಸಮುದ್ರವನ್ನು ಅರೇಬಿಯನ್ ಸಮುದ್ರ ಮತ್ತು ಸೂಯೆಜ್ ಕಾಲುವೆಗೆ ಸಂಪರ್ಕಿಸುವ ಬಾಬ್ ಎಲ್-ಮಂಡೆಬ್ ಜಲಸಂಧಿ ಕೂಡ ಮುಚ್ಚಲಿದೆ. ಯೆಮೆನ್ ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಲ್ಲಿ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ಸಾಕಷ್ಟು ಬಾರಿ ನೀಡಿದ್ದಾರೆ.
ಈ ಜಲ ಮಾರ್ಗವು ಯುರೋಪ್, ಏಷ್ಯಾ ಮತ್ತು ಮಧ್ಯಪ್ರಾಚ್ಯದ ನಡುವಿನ ಪ್ರಮುಖ ದಾರಿಯಾಗಿದೆ. ಇದರ ಮೂಲಕ ವಾರ್ಷಿಕವಾಗಿ ಅಂದಾಜು 1 ಟ್ರಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕು ಹಾದುಹೋಗುತ್ತದೆ. ಇಲ್ಲಿ ಯಾವುದೇ ಅಡಚಣೆಯಾದರೆ ಜಾಗತಿಕ ಇಂಧನ ಮಾರುಕಟ್ಟೆಗೆ ಬಹುದೊಡ್ಡ ಆಘಾತ ಉಂಟಾಗಲಿದೆ. ಬಾಬ್ ಎಲ್-ಮಂಡೆಬ್ ಮೇಲಿನ ಯಾವುದೇ ನಿರ್ಬಂಧವು ಯುರೋಪಿಯನ್ ರಾಷ್ಟ್ರಗಳಲ್ಲಿ ತೀವ್ರ ಬಿಕ್ಕಟ್ಟನ್ನು ಉಂಟು ಮಾಡಲಿದೆ.
"ಸಾಮಾನ್ಯ ಜ್ಞಾನ ಬಳಸಿ, ರಾಜಕಾರಣಿಯಾಗುವತ್ತ ಗಮನಹರಿಸಬೇಡಿ"; ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ
ಹೀಗಾಗಿ ಪಶ್ಚಿಮ ಏಷ್ಯಾ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷ ತೀವ್ರಗೊಳ್ಳುವುದನ್ನು ತಡೆಯಲೇಬೇಕಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿತ್ರ ರಾಷ್ಟ್ರಗಳಿಗೆ ಜಲಸಂಧಿ ಮಾರ್ಗದಲ್ಲಿ ನೌಕೆಯನ್ನು ನಿಯೋಜಿಸಲು ಕರೆ ನೀಡಿರುವುದು ಮಿಲಿಟರಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.