ʼʼಇರಾನ್ ವಿರುದ್ಧ ಕ್ರಮ ಕೈಗೊಳ್ಳಿʼʼ: ವಿಶ್ವ ನಾಯಕರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ; ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆ
Benjamin Netanyahu: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ 3ನೇ ವಾರಕ್ಕೆ ಕಾಲಿಟ್ಟಿದ್ದು, ಸದ್ಯ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ತಮ್ಮ ದೇಶದ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗೆ ಕೆಂಡಾಮಂಡಲರಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.
ಹಾನಿಗೊಳಗಾದ ಸ್ಥಳ ಪರಿಶೀಲಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು -
ಜೆರುಸಲೇಂ, ಮಾ. 22: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಸಮರ 3ನೇ ವಾರಕ್ಕೆ ಕಾಲಿಟ್ಟಿದ್ದು, ಸದ್ಯ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ದಿನ ಕಳೆದಂತೆ ದಾಳಿ ಪ್ರತಿದಾಳಿ ತೀವ್ರವಾಗುತ್ತಿದ್ದು, ತೈಲಾಗಾರ, ಮೂಲ ಸೌಕರ್ಯಗಳ ಬಳಿಕ ಇದೀಗ ಅಣು ಸ್ಥಾವರಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಇರಾನ್ ಕೂಡ ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿ ಮೂಲಕ ತಿರುಗೇಟು ನೀಡುತ್ತಿದೆ. ಇದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಕೆರಳಿದ್ದು, ಇರಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ನಾಯಕರಿಗೆ ಕರೆ ನೀಡಿದ್ದಾರೆ.
ನಡೆಯುತ್ತಿರುವ ಸಂಘರ್ಷವು ಮಧ್ಯಪ್ರಾಚ್ಯವನ್ನು ಮೀರಿ ಜಗತ್ತಿನ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಘಟ್ಟವನ್ನು ತಲುಪಿದೆ ಎಂದು ಅವರು ಎಚ್ಚರಿಸಿದ್ದಾರೆ. ಆ ಮೂಲಕ ಈ ಸಂಘರ್ಷ 3ನೇ ವಿಶ್ವ ಮಹಾಯುದ್ಧವಾಗಿ ಬದಲಾಗುತ್ತ ಎನ್ನುವ ಆತಂಕ ಮನೆ ಮೂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳು ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಯನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸಿವೆʼʼ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ, ವಿಶೇಷವಾಗಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಮಧ್ಯ ಪ್ರವೇಶಿಸಿ ಇರಾನ್ ಮೇಲೆ ಒತ್ತಡ ತೀವ್ರಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆ:
מהזירה בערד: מסר חשוב מאוד ממני אליכם >> pic.twitter.com/lA3ZXd70On
— Benjamin Netanyahu - בנימין נתניהו (@netanyahu) March 22, 2026
ಇಸ್ರೇಲ್ ಮೇಲೆ ಇರಾನ್ ದಾಳಿ
ಇರಾನ್ ಶನಿವಾರ (ಮಾರ್ಚ್ 21) ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇರಾನಿನ 2 ಕ್ಷಿಪಣಿಗಳು ರಾತ್ರಿಯಿಡೀ ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಬಂದು ವ್ಯಾಪಕ ಹಾನಿಯನ್ನುಂಟು ಮಾಡಿದವು. ಹೀಗಾಗಿ ಬೆಂಜಮಿನ್ ನೆತನ್ಯಾಹು ವ್ಯಾಪಕ ಹಾನಿಗೊಳಗಾದ ಆರಾದ್‌ಗೆ ಭೇಟಿ ನೀಡಿ ಇರಾನ್ ವಿರುದ್ಧ ಗುಡುಗಿದ್ದಾರೆ. ʼʼನಾನು ಆರಾದ್‌ನಲ್ಲಿದ್ದೇನೆ. ದಾಳಿಯಲ್ಲಿ ಯಾರೂ ಮೃತಪಟ್ಟಿಲ್ಲʼʼ ಎಂದು ಅವರು ತಿಳಿಸಿದ್ದಾರೆ. ಸೈರನ್‌ಗಳು ಮೊಳಗಿದ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ಹಾನಿಗೊಳಗಾದ ಪ್ರದೇಶ ವೀಕ್ಷಿಸಿದ ಬೆಂಜಮಿನ್ ನೆತನ್ಯಾಹು:
Iran has proven again in the last 48 hours that it is the enemy of civilization and a danger to the free world: targeting children, families, and the elderly with terror missiles, threatening Jerusalem’s holy sites, launching long-range missiles, and trying to blackmail the world… pic.twitter.com/pQaUW1oYgx
— Benjamin Netanyahu - בנימין נתניהו (@netanyahu) March 22, 2026
ಇರಾನ್ ವಿರುದ್ಧ ಗುಡುಗು
"ಇರಾನ್ ನಾಗರಿಕತೆಯ ಶತ್ರು ಮತ್ತು ಜಗತ್ತಿಗೆ ಅಪಾಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅದು ನಾಗರಿಕರನ್ನು ಗುರಿಯಾಗಿಸಿಕೊಂಡು ಜಾಗತಿಕ ಶಕ್ತಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಇಸ್ರೇಲ್ ತನಗಾಗಿ ಮಾತ್ರವಲ್ಲ, ನಿಮ್ಮೆಲ್ಲರಿಗಾಗಿಯೂ ಹೋರಾಡುತ್ತಿದೆ" ಎಂದು ಹೇಳಿದ್ದಾರೆ. ಹೀಗಾಗಿ ಇರಾನ್ ವಿರುದ್ಧ ಹೋರಾಡಲು ಇತರ ದೇಶಗಳೂ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದಾರೆ.
ಕೆಫೆಯಲ್ಲಿನ ವಿಡಿಯೊ ಫೇಕ್ ಎಂದವರಿಗೆ ಬೆಂಜಮಿನ್ ನೆತನ್ಯಾಹು ತಿರುಗೇಟು
ಇರಾನ್‌ನ ಬೆದರಿಕೆಯ ಸ್ವರೂಪವನ್ನು ವಿವರಿಸಿದ ನೆತನ್ಯಾಹು ಪರಮಾಣು ಶಸ್ತ್ರಾಸ್ತ್ರ, ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮರ್ಥ್ಯಗಳ ವಿಸ್ತರಣೆಯನ್ನು ಉಲ್ಲೇಖಿಸಿದ್ದಾರೆ. ಇದು ಇಸ್ರೇಲ್‌ಗೆ ಮಾತ್ರವಲ್ಲದೆ ಜಾಗತಿಕ ಸ್ಥಿರತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ವೇಗಗೊಳಿಸುತ್ತಿದೆ ಮತ್ತು ಇದನ್ನು ನಿಯಂತ್ರಿಸದಿದ್ದರೆ ಅಲ್ಪಾವಧಿಯಲ್ಲಿಯೇ ಶಸ್ತ್ರಾಸ್ತ್ರ ತಯಾರಿಸಬಹುದು ಎಂದು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳು ಇರಾನ್‌ನ ಮಿಲಿಟರಿ ಮೂಲಸೌಕರ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿವೆ ಎಂದು ನೆತನ್ಯಾಹು ತಿಳಿಸಿದ್ದಾರೆ. ಅವರ ಪ್ರಕಾರ, ಕ್ಷಿಪಣಿ ಉತ್ಪಾದನೆ ಮತ್ತು ರಕ್ಷಣಾ ವ್ಯವಸ್ಥೆಗಳಿಗೆ ಸಂಬಂಧಿಸಿದ ಪ್ರಮುಖ ಸೌಲಭ್ಯಗಳನ್ನು ಧ್ವಂಸ ಮಾಡಲಾಗಿದ್ದು, ಇರಾನ್‌ನ ಮೇಲೆ ಪರಿಣಾಮ ಬೀರಿದೆ.
ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ
ಇರಾನ್‌ನ ಪ್ರವೃತ್ತಿ ಮಿಲಿಟರಿ ಕಾರ್ಯಾಚರಣೆಯ ಜತೆಗೆ ಜಾಗತಿಕ ಇಂಧನ ಪೂರೈಕೆ ಸರಪಳಿ ಮೇಲೆ ಬೀರುವ ಪರಿಣಾಮ ಸೇರಿದಂತೆ ಹಲವು ಬಿಕ್ಕಟ್ಟಿನತ್ತ ನೆತನ್ಯಾಹು ಬೆಳಕು ಚೆಲ್ಲಿದ್ದಾರೆ. ಹೊರ್ಮುಜ್ ಜಲಸಂಧಿಯಂತಹ ನಿರ್ಣಾಯಕ ಪ್ರದೇಶಗಳ ಸುತ್ತ ಉದ್ವಿಗ್ನತೆ ಕೇಂದ್ರೀಕೃತವಾಗಿರುವುದರಿಂದ ಇಲ್ಲಿ ಉಂಟಾಗುವ ಯಾವುದೇ ಅಡಚಣೆಯು ತೈಲ ಹರಿವಿನ ಮೇಲೆ ಪರಿಣಾಮ ಬೀರಬಹುದು ಮತ್ತು ವಿಶ್ವಾದ್ಯಂತ ಆರ್ಥಿಕ ಅಸ್ಥಿರತೆಯನ್ನು ಹುಟ್ಟುಹಾಕಬಹುದು ಎಂದು ಎಚ್ಚರಿಸಿದ್ದಾರೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.