‘ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗʼ ಎಂದ ಅಮೆರಿಕದ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್!
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಜಮ್ಮು ಮತ್ತು ಕಾಶ್ಮೀರವನ್ನು ಅವಿಭಾಜ್ಯ ಅಂಗ ಎಂದು ಬಣ್ಣಿಸಿರುವುದು ಪಾಕಿಸ್ತಾನಕ್ಕೆ ಕಳವಳವನ್ನು ಉಂಟು ಮಾಡಿದೆ. ಈ ಹೇಳಿಕೆಗೆ ಪಾಕಿಸ್ತಾನ (Pakistan) ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ (Sergio Gor's ) ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ಅವಿಭಾಜ್ಯ ಅಂಗ ಎಂದು ಬಣ್ಣಿಸಿರುವುದು ಪಾಕಿಸ್ತಾನಕ್ಕೆ ಕಳವಳವನ್ನು ಉಂಟು ಮಾಡಿದೆ. ಈ ಹೇಳಿಕೆಗೆ ಪಾಕಿಸ್ತಾನ (Pakistan) ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿಯೂ ಆಗಿರುವ ಗೋರ್, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ಎರಡು ದಿನಗಳ ಭೇಟಿಗಾಗಿ ಬುಧವಾರ ಶ್ರೀನಗರಕ್ಕೆ ಆಗಮಿಸಿದ್ದರು.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗೋರ್, ಭದ್ರತೆಯನ್ನು ಸುಧಾರಿಸಲು ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತವು ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದರು. ಅಷ್ಟೇ ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಭಾರತದ ಅತ್ಯಂತ ಪ್ರಮುಖ ಭಾಗವಾಗಿದೆ. ನಾನು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಈ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದೆ” ಎಂದು ಹೇಳಿದ್ದರು. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವಾತಾವರಣ ಸುಧಾರಿಸಿರುವುದನ್ನು ಶ್ಲಾಘಿಸಿದ್ದ ಅವರು, ಪ್ರಸ್ತುತ ಜಾರಿಯಲ್ಲಿರುವ ಅಮೆರಿಕದ ಪ್ರಯಾಣ ಸಲಹೆಗಳನ್ನು ಸಡಿಲಗೊಳಿಸುವ ಸುಳಿವು ನೀಡಿದ್ದರು.
ಗೋರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಇಸ್ಲಮಾಬಾದ್‌ನಲ್ಲಿರುವ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ಆಕ್ಷೇಪ ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯಗಳಿಗೆ ಬದ್ಧವಾಗಿ ಇತ್ಯರ್ಥವಾಗಬೇಕಿದೆ ಎಂದು ಹೇಳಿದೆ.
ಪಾಕಿಸ್ತಾನದ ಐಎಸ್‌ಐ ಉಗ್ರ ಜಾಲಕ್ಕೆ ಭಾರಿ ಆಘಾತ: 14 ರಾಜ್ಯಗಳಲ್ಲಿ ಭರ್ಜರಿ ಬೇಟೆ, 253 ಮಂದಿ ವಶಕ್ಕೆ
ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಗೆ ಸಂಬಂಧಿಸಿದಂತೆ ಭಾರತಕ್ಕೆ ಅಮೆರಿಕದ ರಾಯಭಾರಿ ನೀಡಿದ ತಪ್ಪು ಹೇಳಿಕೆಗಳನ್ನು ಪಾಕಿಸ್ತಾನ ಖಂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ವಿವಾದಿತ ಪ್ರದೇಶವಾಗಿದ್ದು, ಸಂಬಂಧಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಅಂತಿಮ ಇತ್ಯರ್ಥಕ್ಕಾಗಿ ಕಾಯುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.