ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೈಲಟ್, ಪ್ಲಂಬರ್, ಬ್ಯಾಂಕರ್, ಉದ್ಯಮಿ, ದಂತವೈದ್ಯ; 180 ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಹೀರೋಗಳಿವರು

FlyDubai: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಿ 9/11 ಮಾದರಿಯ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಕೋ-ಪೈಲಟ್‌ನ ಸಂಚನ್ನು ವಿಫಲಗೊಳಿಸಿ ಹೀರೋ ಎನಿಸಿಕೊಂಡವರಲ್ಲಿ ಭಾರತೀಯ ಮೂಲದ ಪೈಲಟ್‌ ಕ್ಯಾಪ್ಟನ್ ಸ್ಮಿತ್‌ ಮಚ್ಚಾರ್‌ ಮಾತ್ರವಲ್ಲ ಪ್ಲಂಬರ್, ಬ್ಯಾಂಕರ್, ಉದ್ಯಮಿ, ದಂತವೈದ್ಯರು ಕೂಡ ಸೇರಿದ್ದಾರೆ. ಇವರ ಭಯಾನಕ ಅನುಭವ ಹೇಗಿತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.

ಫ್ಲೈದುಬೈ ವಿಮಾನದಲ್ಲಿದ್ದ ಐವರು  ಹೀರೋಗಳು ಯಾರು ?

ಸಂಗ್ರಹ ಚಿತ್ರ -

ನವದೆಹಲಿ: ಪೈಲಟ್, ಪ್ಲಂಬರ್, ಬ್ಯಾಂಕರ್, ಉದ್ಯಮಿ, ದಂತವೈದ್ಯರು ಸೇರಿ ಫ್ಲೈದುಬೈ ವಿಮಾನದ ಮೇಲಾದ ಭಯೋತ್ಪಾದನಾ ದಾಳಿಯನ್ನು ತಡೆದು 27 ಮಕ್ಕಳು, ಆರು ಸಿಬ್ಬಂದಿ ಸೇರಿದಂತೆ ಒಟ್ಟು 174 ಪ್ರಯಾಣಿಕರ ಜೀವ ಉಳಿಸಿದ್ದಾರೆ. ಈ ಮೂಲಕ ಇಸ್ರೇಲ್‌ ಪ್ರಯಾಣಿಕರಿದ್ದ ವಿಮಾನವನ್ನು ಅಪಹರಿಸಿ 9/11 ಮಾದರಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಭಯೋತ್ಪಾದಕರ ಸಂಚನ್ನು ಈ ಐದು ಮಂದಿ ಶೂರರು ವಿಫಲಗೊಳಿಸಿದ್ದಾರೆ. ಕೋ-ಪೈಲಟ್‌ ನಡೆಸಿದ ದಾಳಿಯಿಂದ ಭಾರತೀಯ ಮೂಲದ ಪೈಲಟ್‌ ಕ್ಯಾಪ್ಟನ್ ಸ್ಮಿತ್‌ ಮಚ್ಚಾರ್‌ ಗಾಯಗೊಂಡಾಗ ತುರ್ತು ರಕ್ಷಣೆಗೆ ಧಾವಿಸಿದವರಲ್ಲಿ ನಾಲ್ವರು ಇಸ್ರೇಲ್ ನಾಗರಿಕರು ಸೇರಿದ್ದಾರೆ.

ಪೈಲಟ್‌ ಕ್ಯಾಪ್ಟನ್ ಸ್ಮಿತ್‌ ಮಚ್ಚಾರ್‌ ಅವರು ಒಮಾನ್ ಮೂಲದ ಕೋ ಪೈಲೆಟ್ ದಾಳಿಯಿಂದ ತೀವ್ರ ಗಾಯಗೊಂಡರೂ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಭಯಾನಕ ಪ್ರಯತ್ನದ ಬಗ್ಗೆ ಸಿಬ್ಬಂದಿಗೆ ಸೂಚಿಸಿದರು.

9/11 ಮಾದರಿ ದಾಳಿ ಸಂಚು ವಿಫಲಗೊಳಿಸಿ 180 ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್‌; ಯಾರು ಈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್?

ಇದರಿಂದಾಗಿ ತಕ್ಷಣ ನಾಲ್ವರು ಇಸ್ರೇಲ್ ನಾಗರಿಕರು ವಿಮಾನ ಮತ್ತು ಅದರಲ್ಲಿದ್ದ ಎಲ್ಲಾ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಜೊತೆಗೆ ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ತುರ್ತು ಸಂದೇಶ ಕಳುಹಿಸಿ ಅಲ್ಲಿ ವಿಮಾನವನ್ನು ಇಳಿಸಲಾಯಿತು.

ಈ ಬಗ್ಗೆ ಸ್ಮಿತ್ ಮಚ್ಚಾರ್ ಅವರು ನೀಡಿರುವ ಮಾಹಿತಿ ಪ್ರಕಾರ ನಾಲ್ವರು ಇಸ್ರೇಲ್ ನಾಗರಿಕರು ಕಾಕ್‌ಪಿಟ್‌ನತ್ತ ಧಾವಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಿಬ್ಬಂದಿಗೆ ಸಹಾಯ ಮಾಡಿದರು. ಬಳಿಕ ಕರ್ತವ್ಯದಲ್ಲಿಲ್ಲದ ಆಫ್-ರೋಸ್ಟರ್ ಇಬ್ಬರು ಪೈಲಟ್‌ಗಳು ವಿಮಾನದ ನಿಯಂತ್ರಣ ಪಡೆದು ಸೌದಿ ಅರೇಬಿಯಾದ ಸಣ್ಣ ವಿಮಾನ ನಿಲ್ದಾಣವೊಂದರಲ್ಲಿ ವಿಮಾನವನ್ನು ಇಳಿಸಿದರು.

ಪ್ಲಂಬರ್ ಆಗಿದ್ದ ಯನಿವ್ ಹಯೂನ್ ಈ ಸಂದರ್ಭದಲ್ಲಿ ಶಂಕಿತ ಸಹ-ಪೈಲಟ್‌ನ ಕುತ್ತಿಗೆಯನ್ನು ಬಿಗಿದು ಹಿಡಿದು ಬಳಿಕ ವಿಮಾನದ ನಿಯಂತ್ರಣ ಸಾಧನಗಳನ್ನು ಹಿಂದಕ್ಕೆ ಎಳೆದು ವಿಮಾನವನ್ನು ಸ್ಥಿರಗೊಳಿಸಲು ಸಹಾಯ ಮಾಡಿದರು ಎನ್ನಲಾಗಿದೆ.

ಯನಿವ್ ಹಯೂನ್ ಅವರೊಂದಿಗೆ ಉದ್ಯಮಿ ಅಸಾಫ್ ರಾಜುವಾನ್, ಬ್ಯಾಂಕರ್ ಜ್ವಿಕಾ ಮಾನೆಸ್ ಎಂಬವರು ಕೂಡ ದಾಳಿಕೋರನನ್ನು ನಿಯಂತ್ರಣಕ್ಕೆ ಪಡೆಯಲು ಸಿಬ್ಬಂದಿಗೆ ಸಹಕರಿಸಿದರು. ಜೊತೆಗೆ ದಂತವೈದ್ಯ ಶೋಟಾ ಮುಸೇವ್ ಅವರು ತೀವ್ರವಾಗಿ ಗಾಯಗೊಂಡಿದ್ದ ಸ್ಮಿತ್ ಮಚ್ಚಾರ್ ಅವರಿಗೆ ತುರ್ತು ಚಿಕಿತ್ಸೆ ನೀಡಿದರು.

ಯಾನಿವ್ ಹಯೂನ್

ಘಟನೆಯ ಬಳಿಕದ ವಿಡಿಯೊವೊಂದನ್ನು ಇಸ್ರೇಲ್ ಪ್ರಧಾನ ಮಂತ್ರಿಯ ಕಚೇರಿ ಹಂಚಿಕೊಂಡಿದೆ. ಇದರಲ್ಲಿ ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಹಯೂನ್ ಟೆಲ್ ಅವಿವ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನೆತನ್ಯಾಹು ಅವರನ್ನು ಭೇಟಿಯಾಗುವುದನ್ನು ಕಾಣಬಹುದು. ಆಗ ಅವರ ಶರ್ಟ್ ರಕ್ತಸಿಕ್ತವಾಗಿತ್ತಾದ್ದರೂ ತಮಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಪೈಲಟ್ ಪ್ರಜ್ಞೆ ಕಳೆದುಕೊಳ್ಳುವ ಮೊದಲು ಅವರು ಕಾಕ್ ಪಿಟ್ ಬಾಗಿಲನ್ನು ತೆರೆದರು. ನಾವು ಒಳಗೆ ಹೋದಾಗ ವಿಮಾನದ ನಿಯಂತ್ರಣ ವ್ಯವಸ್ಥೆಯ ಬಳಿ ಎರಡು ಆಸನಗಳ ನಡುವೆ ಭಯೋತ್ಪಾದಕನಿದ್ದ. ಆದರೆ ಆಸನಗಳಲ್ಲಿ ಯಾವುದೇ ಪೈಲಟ್‌ಗಳಿರಲಿಲ್ಲ. ತಕ್ಷಣ ಆತನನ್ನು ಹಿಡಿದು ಹೊರಗೆ ಎಳೆದುಕೊಂಡು ಬಂದು ಆತನ ಕೃತ್ಯದ ಬಗ್ಗೆ ಪ್ರಶ್ನಿಸಿದಾಗ ಆತ ವಿಮಾನವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿಯಿತು. ದೂರದರ್ಶನ ಕಾರ್ಯಕ್ರಮಗಳಿಂದ ಕಲಿತ ಕೌಶಲಗಳನ್ನು ಬಳಸಿಕೊಂಡು ವಿಮಾನವನ್ನು ಸಮಸ್ಥಿತಿಗೆ ತರಲು ಪ್ರಯತ್ನಿಸಿದೆ ಎಂದು ಅವರು ತಿಳಿಸಿದ್ದಾರೆ.

ಶೋಟಾ ಮುಸೇವ್

ದಂತವೈದ್ಯರಾದ ಇವರು ದಾಳಿಕೋರನ ವಿರುದ್ಧ ಹೋರಾಡಿ ಗಾಯಗೊಂಡಿದ್ದ ಕ್ಯಾಪ್ಟನ್ ನನ್ನು ಉಪಚರಿಸಿದರು. ವಿಮಾನದಲ್ಲಿದ್ದ ಏಕೈಕ ವೈದ್ಯರಾಗಿದ್ದ ಇವರು, ತಾವು ನೋಡಿದಾಗ ಪೈಲೆಟ್ ಅವರ ತಲೆ ಮತ್ತು ಕೈಗಳು ಬಹುತೇಕ ಸೀಳಿದಂತಿದ್ದವು. ಗಂಭೀರ ಗಾಯವಾಗಿತ್ತು. ಪ್ರಾಣಾಪಾಯದ ಸ್ಥಿತಿ ಅಲ್ಲದಿದ್ದರೂ ಹೆಚ್ಚಿನ ರಕ್ತಸ್ರಾವವಾಗುವ ಅಪಾಯವಿತ್ತು. ಅವರು ರಕ್ತದ ಮಡುವಿನದ್ದರೂ ನಮ್ಮೊಂದಿಗೆ ಸಂವಹನ ನಡೆಸುತ್ತಿದ್ದರು ಎಂದು ಹೇಳಿದರು.

ಜ್ವಿಕಾ ಮಾನೆಸ್

ಬ್ಯಾಂಕ್ ಲ್ಯೂಮಿಯ ಅಂಡರ್‌ರೈಟಿಂಗ್ ಕಂಪನಿಯ ಸಿಇಒ ಆಗಿರುವ ಜ್ವಿಕಾ ಮಾನೆಸ್ ವಿಮಾನದಲ್ಲಿ ವಿತರಿಸಲಾದ ಮಲ್ಟಿಮೀಡಿಯಾ ಹೆಡ್‌ಫೋನ್‌ಗಳ ಕೇಬಲ್‌ಗಳನ್ನು ಬಳಸಿ ದಾಳಿಕೋರನನ್ನು ನಿಯಂತ್ರಿಸಲು ತಾವು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.

ಅದು ಭಯಾನಕವಾಗಿತ್ತು. ವಿಮಾನವು ವೇಗವಾಗಿ ಕೆಳಮುಖವಾಗಿ ಧುಮುಕುತ್ತಿತ್ತು. ಎಲ್ಲರೂ ಕಿರುಚುತ್ತಿದ್ದರು. ಪೈಲಟ್ ವಿಮಾನವನ್ನು ಹತೋಟಿಗೆ ತರುವವರೆಗೂ ಅದು ಅತ್ಯಂತ ಕಠಿಣ ಪರಿಸ್ಥಿತಿಯಾಗಿತ್ತು. ನಾವು ದಾಳಿಕೋರನನ್ನು ಕಟ್ಟಿಹಾಕಿದೆವು. ಅವನು ಸಾಕಷ್ಟು ಬಲಿಷ್ಠ ವ್ಯಕ್ತಿಯಾಗಿದ್ದ. ಅವನನ್ನು ನಿಯಂತ್ರಿಸಲು ಹೆಚ್ಚಿನ ಜನರ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಫ್ಲೈದುಬೈ ವಿಮಾನದಲ್ಲಿ ಹೈಡ್ರಾಮಾ: ಚೂರಿ ಇರಿತಕ್ಕೊಳಗಾದರೂ 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌

ಅಸಾಫ್ ರಾಜುವಾನ್

ವಿಮಾ ಸಂಸ್ಥೆಯ ಮಾಲೀಕ ಅಸಾಫ್ ರಾಜುವಾನ್ ಅವರು ಥೈಲ್ಯಾಂಡ್‌ನಲ್ಲಿ ರಜೆ ಕಳೆದು ತವರಿಗೆ ಮರಳುತ್ತಿದ್ದರು. ಘಟನೆ ನಡೆದಾಗ ಶೌಚಾಲಯದ ಬಳಿಯಿಂದ ಕೂಗಾಟದ ಶಬ್ದ ಕೇಳಿತು. ಮಹಿಳೆಯೊಬ್ಬರು ಕಿರುಚುತ್ತಾ ಬಂದರು. ಆಗ ವಿಮಾನ ನಿಯಂತ್ರಣ ಕಳೆದುಕೊಂಡು 90 ಡಿಗ್ರಿ ಕೋನದಲ್ಲಿ ಕೆಳಮುಖವಾಗಿ ಚಲಿಸತೊಡಗಿತು. ವಿಮಾನದ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ಅರಿತು ಕಾಕ್ ಪಿಟ್ ಬಳಿ ಓಡಿ ದಾಳಿಕೋರನನ್ನು ನಿಯಂತ್ರಿಸಲು ಅಲ್ಲಿದ್ದವರಿಗೆ ಸಹಾಯ ಮಾಡಿರುವುದಾಗಿ ಹೇಳಿದರು.

ತಾವು ಹೋಗುವಾಗ ಕಾಕ್‌ಪಿಟ್ ರಕ್ತದಿಂದ ತುಂಬಿತ್ತು. ಜ್ವಿಕಾ ಮಾನೆಸ್ ಅವರು ಅಲ್ಲಿದ್ದರು. ಸುಮಾರು 50 ನಿಮಿಷಗಳ ಕಾಲ ದಾಳಿಕೋರನನ್ನು ನಿಯಂತ್ರಿಸಿ ಬಳಿಕ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಇಳಿಸುವಲ್ಲಿ ಯಶಸ್ವಿಯಾದೆವು ಎಂದರು.