ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Tips: ಚಳಿಗಾಲವೆಂದರೆ ಸ್ವಪೋಷಣೆಯ ಕಾಲ! ಹೇಗೆ?

ಚಳಿಗಾಲ ಎನ್ನುವುದು ನಮ್ಮನ್ನು ನಾವು ಪೋಷಿಸಿಕೊಳ್ಳುವ ಕಾಲ ಎನ್ನುವುದನ್ನು ಪ್ರಕೃತಿ ನಮಗೆ ಸೂಚಿಸುತ್ತಿದೆ. ಯಾವುದೇ ಅತಿರೇಕದ ಕೆಲಸಗಳಿಗೆ ಕೈಯಿಕ್ಕದೆ, ನಮ್ಮ ಚಟುವಟಿಕೆಗಳನ್ನು ಒಂದು ಹದಕ್ಕೆ ಇಳಿಸಿಕೊಂಡು, ಬೆಚ್ಚಗೆ ನೆಮ್ಮದಿಯಿಂದ ಇರೋಣ ಎನ್ನುವ ಸಂದೇಶವನ್ನು ನಾವೂ ರೂಢಿಸಿಕೊಂಡರೆ ಹೇಗೆ? ಇದಕ್ಕೇನು ಮಾಡಬೇಕು?

ಚಳಿಗಾಲದಲ್ಲಿ ನಿಮ್ಮ ಸ್ವ ಆರೈಕೆ ಹೀಗಿರಲಿ

ಸಾಂದರ್ಭಿಕ ಚಿತ್ರ. -

Profile
Pushpa Kumari Jan 9, 2026 7:00 AM

ನವದೆಹಲಿ, ಡಿ. 9: ಚಳಿಗಾಲವೆಂದರೆ (Winter Tips) ದೂರು ದುಮ್ಮಾನಗಳ ಪಟ್ಟಿಯನ್ನೇ ಮುಂದಿಡುವವರು ಹಲವರಿದ್ದಾರೆ. ಇರಲಿ ಎಲೆಗಳೆಲ್ಲ ಉದುರಿ ಬೋಳಾಗಿ, ಪ್ರಾಣಿಗಳೆಲ್ಲ ಗೂಡು, ಬಿಲ, ಮರೆಗಳನ್ನು ಸೇರಿ ಇಡೀ ವಾತಾವರಣದಲ್ಲಿ ಹೆಪ್ಪುಗಟ್ಟಿದಂಥ ಮೌನವೊಂದು ಕಾಣುತ್ತದೆ. ಆದರೆ ಚಳಿಗಾಲ ಮುಗಿಯುತ್ತಿದ್ದಂತೆ ಬರುವ ವಸಂತದಲ್ಲಿ ಎಲ್ಲೆಡೆ ಚಿಗುರು, ಹೂವು, ಚಿಲಿಪಿಲಿ, ಝೇಂಕಾರದ ಹಿತವಾದ ಗದ್ದಲ ತುಂಬಿಹೋಗುತ್ತದೆ. ಅಂದರೆ ಚಳಿಗಾಲ ಎನ್ನುವುದು ನಮ್ಮನ್ನು ನಾವು ಪೋಷಿಸಿಕೊಳ್ಳುವ ಕಾಲ ಎನ್ನುವುದನ್ನು ಪ್ರಕೃತಿ ನಮಗೆ ಸೂಚಿಸುತ್ತಿದೆ. ಯಾವುದೇ ಅತಿರೇಕದ ಕೆಲಸಗಳಿಗೆ ಕೈಯಿಕ್ಕದೆ, ನಮ್ಮ ಚಟುವಟಿಕೆಗಳನ್ನು ಒಂದು ಹದಕ್ಕೆ ಇಳಿಸಿಕೊಂಡು, ಬೆಚ್ಚಗೆ ನೆಮ್ಮದಿಯಿಂದ ಇರೋಣ ಎನ್ನುವ ಸಂದೇಶವನ್ನು ನಾವೂ ರೂಢಿಸಿಕೊಂಡರೆ ಹೇಗೆ? ಇದಕ್ಕೇನು ಮಾಡಬೇಕು?

ಜೀರ್ಣ ಕ್ರಿಯೆ: ಈ ದಿನಗಳಲ್ಲಿ ಕ್ರಿಸ್‌ಮಸ್‌, ಹೊಸವರ್ಷ ಎನ್ನತ್ತ ಪಾರ್ಟಿಗಳ ಭರಾಟೆ ಹೆಚ್ಚು. ಅದಕ್ಕಾಗಿ ಸಿಕ್ಕಿದ್ದೆಲ್ಲಾ ತಿನ್ನುವುದೂ ಅಧಿಕ. ಪಾರ್ಟಿ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಆಹಾರಗಳತ್ತ ಗಮನ ನೀಡಿ. ರುಚಿಯಾದ ಖಿಚಡಿ, ಖಾರ ಪೊಂಗಲ್‌, ತರಹೇವಾರಿ ತರಕಾರಿ-ಬೇಳೆ-ಕಾಳುಗಳ ಸೂಪ್‌ಗಳು, ಬಿಸಿಯಾದ ಕಷಾಯಗಳು, ಘಮಘಮಿಸುವ ಗ್ರೀನ್‌ ಟೀಗಳು, ಶುಂಠಿ, ಜೀರಿಗೆ, ದಾಲ್ಚಿನ್ನಿ, ಕಾಳುಮೆಣಸು, ಹಸಿ ಅರಿಶಿನ ಮುಂತಾದ ಪರಿಮಳಯುಕ್ತ ಮಸಾಲೆಗಳು- ಇವೆಲ್ಲ ಚಳಿಗಾಲದಲ್ಲಿ ಜಠರಾಗ್ನಿಯನ್ನು ತೀಕ್ಷ್ಣಗೊಳಿಸುವಂಥವು. ಆಹಾರವನ್ನು ಆದಷ್ಟು ಬಿಸಿ ಮತ್ತು ತಾಜಾ ಇದ್ದಾಗಲೇ ಸೇವಿಸಿ. ತಂಗಳಾದ ಆಹಾರಗಳು ಈ ಕಾಲಕ್ಕೆ ಸೂಕ್ತವಲ್ಲ.

ಪೇಯಗಳು: ಚಳಿಗಾಲದಲ್ಲಿ ಬೆಚ್ಚಗಿನ ಅಥವಾ ಬಿಸಿ ಪೇಯಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಸುಮ್ಮನೆ ಬಿಸಿನೀರು ಕುಡಿಯಲಾಗದು, ರೋಗ ಬಂದಂತೆ ಎನಿಸುತ್ತದೆ ಎಂದು ಗೊಣಗುವವರಿದ್ದಾರೆ. ಬಿಸಿಯಾದ ಹರ್ಬಲ್‌ ಚಹಾಗಳು, ಗ್ರೀನ್‌ ಟೀ, ಸೂಪ್‌ಗಳು, ಕಷಾಯಗಳು- ಇಂಥ ಎಲ್ಲವನ್ನೂ ಹೆಚ್ಚು ಸಮಯ ಮತ್ತು ಖರ್ಚಿಲ್ಲದೆ ಮನೆಯಲ್ಲೇ ಬೇಕಾದಂತೆ ತಯಾರಿಸಿಕೊಳ್ಳಬಹುದು. ಇಂಥ ಪೇಯಗಳು ಶರೀರವನ್ನು ಬೆಚ್ಚಗಿರಿಸುವುದರ ಜತೆಗೆ ನರಗಳನ್ನು ಶಾಂತಗೊಳಿಸಿ, ಸೊಂಪಾಗಿ ನಿದ್ದೆ ತರಿಸುತ್ತವೆ. ದೇಹವನ್ನು ಪೋಷಿಸುವುದಕ್ಕೆ ಇಂಥವು ಅತ್ಯಂತ ಆವಶ್ಯಕ.

ಅಭ್ಯಂಗ: ಇದು ಭಾರತೀಯ ಸಾಂಸ್ಕೃತಿ ಬದುಕಿನ ಬೇರ್ಪಡಿಸಲಾಗದ ಭಾಗ. ಚಳಿಗಾಲದಲ್ಲಿ ಕಾಡುವ ಯಾವುದೇ ಬಗೆಯ ಚರ್ಮದ ತೊಂದರೆಗಳನ್ನು ಸಾದ್ಯಂತವಾಗಿ ನಿವಾರಿಸಿಕೊಡುವ ಶಕ್ತಿಯನ್ನು ಅಭ್ಯಂಜನ ಹೊಂದಿದೆ. ಅದೊಂದೇ ಅಲ್ಲ, ಕೀಲುಗಳನ್ನು ನೋವು ಮುಕ್ತಗೊಳಿಸಲು, ಉದುರುವ ಕೂದಲುಗಳನ್ನು ಸೊಂಪಾಗಿಸಲು, ಕಣ್ತುಂಬಾ ನಿದ್ದೆ ಬರಿಸಲು, ರಕ್ತ ಪರಿಚಲನೆಯನ್ನು ಉತ್ತೇಜಿಸಲು, ಜಡವಾದ ಹಸಿವನ್ನು ಕೆರಳಿಸಲು- ಹೀಗೆ ಬಹಳಷ್ಟು ಉಪಕಾರಗಳನ್ನು ಮಾಡಲು ಎಣ್ಣೆಸ್ನಾನಕ್ಕೆ ಸಾಧ್ಯವಿದೆ. ಉಗುರು ಬಿಸಿಯ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹದವಾಗಿ ಮೈಗೆಲ್ಲ ಒತ್ತಿ ಉಜ್ಜಿಕೊಳ್ಳುವುದು ಬಹಳಷ್ಟು ಬಗೆಯಲ್ಲಿ ದೇಹ-ಮನಸ್ಸುಗಳನ್ನು ಪೋಷಿಸಬಲ್ಲದು.

ಚಳಿಗಾಲದ ಕೀಲುನೋವಿಗೆ ಅಡುಗೆ ಮನೆಯಲ್ಲಿದ್ದ ಈ ಮದ್ದುಗಳೇ ಪರಿಹಾರ!

ವ್ಯಾಯಾಮ: ಚಳಿಗಾಲವೆಂದರೆ ಆಲಸ್ಯದ ಕಾಲವೆಂದು ನಂಬಿದವರು ಬಹಳ ಮಂದಿಯಿದ್ದಾರೆ. ಆದರೆ ಈ ಕಾಲದಲ್ಲಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಲೇಬೇಕಾದ್ದು ಕಡ್ಡಾಯ. ಹೃದಯವನ್ನು ಬಡಿದೆಬ್ಬಿಸುವ ಕಾರ್ಡಿಯೊ ವ್ಯಾಯಾಮಗಳನ್ನೇ ಮಾಡಬೇಕೆಂದಿಲ್ಲ. ಸರಳವಾದ ನಡಿಗೆ, ಸೂರ್ಯನಮಸ್ಕಾರ, ಯೋಗದಂಥ ಲಘುವ್ಯಾಯಾಮಗಳೇ ಸಾಕಾಗುತ್ತವೆ. ಶ್ವಾಸಕೋಶಗಳ ಬಲವರ್ಧನೆಗೆ ಕಪಾಲಭಾತಿ, ಭಸ್ತ್ರಿಕಾದಂಥ ಪ್ರಾಣಾಯಾಮಗಳು ನೆರವಾಗುತ್ತವೆ.

ಪೋಷಣೆ: ಈವರೆಗೆ ಹೇಳಿದ್ದೆಲ್ಲವೂ ದೇಹ-ಮನಸ್ಸುಗಳ ಪೋಷಣೆಗೆ ಸಂಬಂಧಿಸಿದ್ದು ಹೌದಾದರೂ, ಇದಕ್ಕೆ ಇನ್ನೊಂದಿಷ್ಟು ಸೇರಿಸಿಕೊಳ್ಳಬಹುದು. ಉದಾ, ಪ್ರಿಯರನ್ನು ಭೇಟಿ ಮಾಡಿ ಬೇಯಿಸಿದ ಬಿಸಿಯಾದ ಶೇಂಗಾ ಮೆಲ್ಲುತ್ತಾ ಹರಟುವುದು, ಬಿಸಿ ಕಾಫಿಯೊಂದಿಗೆ ಬೆಚ್ಚಗೆ ಕುಳಿತು ಇಷ್ಟದ ಪುಸ್ತಕ ಓದುವುದು ಇಂಥವೆಲ್ಲ ಮನಸ್ಸಿನ ಪೋಷಣೆಗೆ ಅಗತ್ಯವಾದವು. ಆರೋಗ್ಯಕರ ಕೊಬ್ಬಿನಿಂದ ಕೂಡಿದ ಬಾದಾಮಿ, ವಾಲ್‌ನಟ್‌ನಂಥ ಕಾಯಿ ಬೀಜಗಳನ್ನು ಜೊತೆಗೆ ಮೆಲ್ಲಬಹುದು. ಬರಲಿರುವ ಚೈತ್ರಮಾಸಕ್ಕೆ ನಮ್ಮ ಬದುಕೂ ಚಿಗುರುವಂತೆ ಮಾಡುವುದಕ್ಕೆ, ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಪೋಷಿಸಿಕೊಳ್ಳೋಣ.