ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶ ವಿರೋಧಿ ಕಾರ್ಯಕ್ರಮ ಆರೋಪ; ಅಜೀಂ ಪ್ರೇಮ್‌ಜಿ‌ ವಿಶ್ವವಿದ್ಯಾಲಯ ನಾಮಫಲಕಕ್ಕೆ ‌ಮಸಿ ‌ಬಳಿದು ಎಬಿವಿಪಿ ಕಾರ್ಯಕರ್ತರ ಆಕ್ರೋಶ

ದೇಶ ವಿರೋಧಿ ಕಾರ್ಯಕ್ರಮ ಆಯೋಜಿಸಿರುವ ಅಜೀಂ ಪ್ರೇಮ್‌ಜಿ‌ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿನ ವಿವಿ ಆವರಣಕ್ಕೆ ನುಗ್ಗಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಾಮಫಲಕಕ್ಕೆ ಮಸಿ ‌ಬಳಿದ ಕಾರ್ಯಕರ್ತರನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಜೀಂ ಪ್ರೇಮ್‌ಜಿ‌ ವಿವಿ ನಾಮಫಲಕಕ್ಕೆ ‌ಮಸಿ ‌ಬಳಿದು ಎಬಿವಿಪಿ ಆಕ್ರೋಶ

ಬೆಂಗಳೂರಿನ ಅಜೀಂ ಪ್ರೇಮ್‌ಜಿ‌ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ. -

Prabhakara R
Prabhakara R Feb 24, 2026 10:59 PM

ಬೆಂಗಳೂರು: ದೇಶವಿರೋಧಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರೋಪಿಸಿ ನಗರದ ಹೊರವಲಯದ ಸರ್ಜಾಪುರದಲ್ಲಿನ‌ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ‌ ವಿಶ್ವವಿದ್ಯಾಲಯದ (Azim Premji University) ಆವರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ ಸಂಜೆ ಪ್ರತಿಭಟನೆ (ABVP Protest) ನಡೆಸಿ, ವಿವಿ ನಾಮಫಲಕಕ್ಕೆ ಮಸಿ ‌ಬಳಿದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ದೇಶ ವಿರೋಧಿ ಕಾರ್ಯಕ್ರಮ ಆಯೋಜಿಸಿರುವ ವಿವಿಯ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ವಿವಿ ಆವರಣಕ್ಕೆ ನುಗ್ಗಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾಸಂಸ್ಥೆಗಳು ಜ್ಞಾನಾರ್ಜನೆಯ ಕೇಂದ್ರವಾಗಬೇಕು. ಆದರೆ, ಇಂದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳೇ ದೇಶವಿರೋಧಿ ಚಟುವಟಿಕೆಗಳ ತಾಣವಾಗಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) ಎನ್ನುವ ವಿದ್ಯಾರ್ಥಿ ಸಂಘಟನೆ ಕಳೆದ ಅನೇಕ ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಎಬಿವಿಪಿ ಆರೋಪಿಸಿದೆ.



AISA ಪ್ರಾಯೋಜಿತ SPARK ಎಂಬ ಸಂಸ್ಥೆಯ ಮೂಲಕ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಿಂತನೆಗಳ ಕೂಟಗಳನ್ನು ನಡೆಸುತ್ತಾ, ದೇಶದ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳು, ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ‌ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಾಶ್ಮೀರವು ಭಾರತದ ಭಾಗವಲ್ಲ. ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ. ಯುವ ಮನಸುಗಳಲ್ಲಿ ದೇಶವಿರೋಧಿ ಚಿಂತನೆಯನ್ನು ಬಿತ್ತಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

Dharwad Protest: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ; ಧಾರವಾಡದಲ್ಲಿ ಭುಗಿಲೆದ್ದ ಉದ್ಯೋಗಾಕಾಂಕ್ಷಿಗಳ ಆಕ್ರೋಶ

ನಾಮಫಲಕಕ್ಕೆ ಮಸಿ ‌ಬಳಿದು ವಿವಿಯ ಒಳಗೆ ನುಗ್ಗಿದ ಕಾರ್ಯಕರ್ತರನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದರು. ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ವಿವಿಯನ್ನು ನಿಷೇಧಿಸಬೇಕು ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.