ಭಾರತದ ಬೇರುಗಳು ಆಧ್ಯಾತ್ಮಿಕತೆಯಲ್ಲಿ ಗಟ್ಟಿಯಾಗಿವೆ; ದೇಶ ಎಂದಿಗೂ ನಾಶವಾಗದು: ಸದ್ಗುರು ಮಧುಸೂದನ ಸಾಯಿ
ಭಾರತ ನಾಶವಾಗಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ, ದೇಶದ ಆಧ್ಯಾತ್ಮಿಕ ಶಕ್ತಿಯೇ ಅದರ ಅಸ್ತಿತ್ವಕ್ಕೆ ಭದ್ರ ಬುನಾದಿಯಾಗಿದೆ. ಇತಿಹಾಸದಲ್ಲಿ ಅನೇಕ ಬಾರಿ ದೇಶದ ಮೇಲೆ ದಾಳಿಗಳು ನಡೆದಿದ್ದರೂ, ಭಾರತದ ಮೂಲ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಉಳಿಸಿರುವುದು ಆಧ್ಯಾತ್ಮಿಕತೆಯೇ ಎಂದು ಹೇಳಿದರು.
-
ಚಿಕ್ಕಬಳ್ಳಾಪುರ: ಭಾರತದ ಬೇರುಗಳು ಆಧ್ಯಾತ್ಮಿಕತೆಯಲ್ಲಿ ಗಟ್ಟಿಯಾಗಿ ನೆಲೆಗೊಂಡಿರುವುದರಿಂದ ದೇಶವನ್ನು ಎಂದಿಗೂ ನಾಶಪಡಿಸಲು ಸಾಧ್ಯವಿಲ್ಲ. ಅನೇಕ ಆಕ್ರಮಣಗಳನ್ನು ಎದುರಿಸಿದರೂ ಭಾರತದ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಉಳಿಸಿರುವುದು ಆಧ್ಯಾತ್ಮಿಕ ಶಕ್ತಿ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Sri Madhusudan Sai, Founder of the One World One Family Mission) ಅಭಿಪ್ರಾಯಪಟ್ಟರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ನಡೆದ ಲಕ್ಷ್ಮೀ ನಾರಾಯಣ ಹೃದಯ ಹೋಮ, ಕುಬೇರ ಹೋಮ ಹಾಗೂ ಮಹಾ ರುದ್ರ ಯಾಗದ ಪೂರ್ಣಾಹುತಿ ಬಳಿಕ ಆಶೀರ್ವಚನ ನೀಡಿದರು.
ಭಾರತ ನಾಶವಾಗಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ, ದೇಶದ ಆಧ್ಯಾತ್ಮಿಕ ಶಕ್ತಿಯೇ ಅದರ ಅಸ್ತಿತ್ವಕ್ಕೆ ಭದ್ರ ಬುನಾದಿಯಾಗಿದೆ. ಇತಿಹಾಸದಲ್ಲಿ ಅನೇಕ ಬಾರಿ ದೇಶದ ಮೇಲೆ ದಾಳಿಗಳು ನಡೆದಿದ್ದರೂ, ಭಾರತದ ಮೂಲ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಉಳಿಸಿರುವುದು ಆಧ್ಯಾತ್ಮಿಕತೆಯೇ ಎಂದು ಹೇಳಿದರು.
ಇದನ್ನೂ ಓದಿ: Sadguru Shri Madhusudhan Sai: ರಾಮನಾಮ ಸ್ಮರಣೆಯಿಂದ ದುರ್ಗುಣಗಳ ನಿವಾರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ
ಭಾರತೀಯ ಸಂಸ್ಕೃತಿಯನ್ನು ದುರ್ಬಲಗೊಳಿಸಿದರೆ ದೇಶವನ್ನೇ ದುರ್ಬಲಗೊಳಿಸಬಹುದು ಎಂಬ ಉದ್ದೇಶದಿಂದ ಪರಕೀಯರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಲು ಪ್ರಯತ್ನಿಸಿದರು. ದುರದೃಷ್ಟವಶಾತ್, ಈ ಪ್ರಯತ್ನಗಳು ಒಂದು ಹಂತದವರೆಗೆ ಯಶಸ್ವಿಯೂ ಆದವು ಎಂದು ವಿಷಾದಿಸಿದರು.
ಆದರೆ, ಈಗ ಕಾಲ ಬದಲಾಗುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಪುನಃಸ್ಥಾಪನೆಗಾಗಿ ಹಲವು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಧರ್ಮದ ಮಾರ್ಗವೇ ದೇಶದ ಪ್ರಗತಿಗೆ ಮೂಲಾಧಾರವಾಗಿದೆ. ಧರ್ಮದ ಮಾರ್ಗದರ್ಶನವಿಲ್ಲದ ಅರ್ಥ ಮತ್ತು ಕಾಮಗಳಿಗೆ ನಿಜವಾದ ಮೌಲ್ಯವಿಲ್ಲ. ಮಾನವನ ಬದುಕು ಅಂತಿಮವಾಗಿ ಮೋಕ್ಷದತ್ತ ಸಾಗಬೇಕು ಎಂಬುದು ಭಾರತೀಯ ಜೀವನದರ್ಶನದ ಆಶಯವಾಗಿದೆ ಎಂದು ವಿವರಿಸಿದರು.
ಹಿಂದಿನ ಕಾಲದಲ್ಲಿ ಜನರು ಯಾವುದೇ ದುರಾಸೆ ಅಥವಾ ಸ್ವಾರ್ಥವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಅರಿತು ಪಾಲಿಸಿದಾಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸಾಧ್ಯ. ವೈಯಕ್ತಿಕ ಜೀವನದಲ್ಲಿ ಧರ್ಮ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಸಮಾಜದ ಸುಸ್ಥಿರ ಬೆಳವಣಿಗೆಗೆ ಅಗತ್ಯ ಎಂದು ತಿಳಿಸಿದರು.
ಮಳೆ-ಬೆಳೆಗಾಗಿ ಪ್ರಾರ್ಥನೆ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಜಯದಶಮಿಯಂದು ಸಂಪನ್ನಗೊಂಡ ಮಹಾ ರುದ್ರ ಯಾಗದಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.