ಐತಿಹಾಸಿಕ ಎಲ್ಲೋಡು ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಜ್ಜು: ಫೆ.8 ರಂದು ಬ್ರಹ್ಮರಥೋತ್ಸವ, 9 ರಂದು ಹೂವಿನ ಪಲ್ಲಕಿ
ಹದಿನಾಲ್ಕು ದಿನಗಳ ಕಾಲ ನಡೆಯುವ ಈ ವೈಭವದ ಉತ್ಸವದ ಅಂಗವಾಗಿ ಫೆ.8 ರಂದು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದ್ದು, ಮರುದಿನ ಫೆ.9 ರಂದು ಹೂವಿನ ಪಲ್ಲಕಿ ಕಾರ್ಯಕ್ರಮ ಹಾಗೂ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸಾಮೂಹಿಕ ಧರ್ಮೋ ಪನಯನ ನಡೆಯಲಿದೆ
-
ಗುಡಿಬಂಡೆ: ತಾಲ್ಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಭಕ್ತರ ಪಾಲಿನ ಆರಾಧ್ಯ ದೈವ ಶ್ರೀ ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಹದಿನಾಲ್ಕು ದಿನಗಳ ಕಾಲ ನಡೆಯುವ ಈ ವೈಭವದ ಉತ್ಸವದ ಅಂಗವಾಗಿ ಫೆ.8 ರಂದು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದ್ದು, ಮರುದಿನ ಫೆ.9 ರಂದು ಹೂವಿನ ಪಲ್ಲಕಿ ಕಾರ್ಯಕ್ರಮ ಹಾಗೂ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸಾಮೂಹಿಕ ಧರ್ಮೋ ಪನಯನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನವು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ.
ಇದನ್ನೂ ಓದಿ: Gudibande News: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ: ಬಿಇಒ ಕೃಷ್ಣಕುಮಾರಿ
ಕೂರ್ಮಗಿರಿ ಎಂದೇ ಪ್ರಸಿದ್ಧವಾಗಿರುವ ಈ ಬೆಟ್ಟವು ಸಂಪೂರ್ಣವಾಗಿ ಆಮೆಯ ಆಕಾರದಲ್ಲಿದ್ದು, ಉತ್ತರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ಹಾಗೂ ಕೈವಾರದ ಅಮರನಾರಾಯಣಸ್ವಾಮಿ ಸನ್ನಿಧಿಗಳ ಸಾಲಿಗೆ ಈ ದಿವ್ಯ ಕ್ಷೇತ್ರವೂ ಸೇರುತ್ತದೆ. ವಿಶೇಷವಾಗಿ ಆಂಧ್ರ ಮತ್ತು ತಮಿಳುನಾಡಿನ ಗಡಿ ಭಾಗದ ಜನರಿಗೆ ಇದು ಪರಮ ಪವಿತ್ರವಾದ ಯಾತ್ರಾಸ್ಥಳವಾಗಿದೆ.
ಕ್ಷೇತ್ರದ ಇತಿಹಾಸದ ಪ್ರಕಾರ, ಸುಮಾರು 450 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ವಲಸೆ ಬಂದ ರೆಡ್ಡಿ ಮನೆತನದ ಯರ್ರಪ್ಪರೆಡ್ಡಿ ಮತ್ತು ಚಿನ್ನಪ್ಪ ರೆಡ್ಡಿ ಎಂಬ ಸಹೋದರರಿಂದ ಈ ತಾಣ ಸ್ಥಾಪಿತ ವಾಯಿತು ಎಂಬ ಐತಿಹ್ಯವಿದೆ. ಹಿಂದೆ ಈ ಗ್ರಾಮವನ್ನು 'ಯಲುವಲಲೋಡು' ಎಂದು ಕರೆಯ ಲಾಗುತ್ತಿದ್ದು, ಕಾಲಕ್ರಮೇಣ ಅದು 'ಯಲ್ಲೋಡು' ಎಂದು ಬದಲಾಗಿದೆ.
ತಮಿಳುನಾಡು ಮೂಲದ ದಂಪತಿಗಳಾದ ಸುಂದರಶರ್ಮ ಮತ್ತು ಜ್ಞಾನಾಂಭ ಅವರು ಪವಿತ್ರ ಮಾಘ ಮಾಸದ ಮೂರನೇ ಭಾನುವಾರದಂದು ಇಲ್ಲಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸಿಕೊಂಡ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಅದೇ ಸುಮುಹೂರ್ತದಲ್ಲಿ ಬ್ರಹ್ಮ ರಥೋತ್ಸವವನ್ನು ಆಚರಿಸ ಲಾಗುತ್ತಿದೆ.
ಜಾತ್ರೆಯ ಅಂಗವಾಗಿ ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯುತ್ತಿದ್ದು, ಆಂಧ್ರಪ್ರದೇಶದ ಹಿಂದೂಪುರ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಿಂದ ಸುಲಭವಾಗಿ ತಲುಪಬಹುದಾದ ಈ ಕ್ಷೇತ್ರಕ್ಕೆ ಭಕ್ತರ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.