ಅಂಗನವಾಡಿಗಳು ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕು: ಜಿಲ್ಲಾಧಿಕಾರಿ ಜಿ.ಪ್ರಭು
ಜಿಲ್ಲೆಯಲ್ಲಿರುವ 2014 ಅಂಗನವಾಡಿಗಳು ಸಹ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಗರಾಡಳಿತ ಪ್ರದೇಶದಲ್ಲಿ ಹಾಗೂ ಗ್ರಾಮಾಂತರ ಪ್ರದೇಶ ದಲ್ಲಿ ಯಾವ ಯಾವ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆಯೋ ಅದರ ಮಾಹಿತಿಯನ್ನು ನಿಖರವಾಗಿ ಒಂದೆರಡು ದಿನಗಳಲ್ಲಿ ಮಂಡಿಸಬೇಕು
-
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ 320 ಅಂಗನವಾಡಿ ಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ನಿವೇಶನ ಗುರ್ತಿಸಿ ನೀಡುವಂತಹ ಕೆಲಸ ಆಗಬೇಕು,ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಏಕೀಕೃತ ಜಿಲ್ಲಾ ಮಟ್ಟದ ಸಮಿತಿ ಸಭೆ”ಯ ಅಧ್ಯಕ್ಷತೆ ವಹಿಸಿ, ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲೆಯಲ್ಲಿರುವ 2014 ಅಂಗನವಾಡಿಗಳು ಸಹ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಗರಾಡಳಿತ ಪ್ರದೇಶದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಯಾವ ಯಾವ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆಯೋ ಅದರ ಮಾಹಿತಿಯನ್ನು ನಿಖರವಾಗಿ ಒಂದೆರಡು ದಿನಗಳಲ್ಲಿ ಮಂಡಿಸಬೇಕು ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲೆಯಲ್ಲಿ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ
ಸಂಬಂಧಪಟ್ಟ ತಹಸೀಲ್ದಾರ್ ಗಳು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿ ಕಾರಿಗಳು ಹಾಗೂ ನಗರ ಸ್ಥಳೀಯಾಡಳಿತದ ಮುಖ್ಯಸ್ಥ ಅಧಿಕಾರಿಗಳಿಗೆ ಲಿಖಿತವಾಗಿ ಸೂಚನೆ ನೀಡಿ ಒಂದು ತಿಂಗಳ ಒಳಗಾಗಿ ನಿವೇಶನ ಗುರ್ತಿಸುವ ಕೆಲಸ ಆಗಬೇಕು. ಅಂಗನ ವಾಡಿಗಳಲ್ಲಿ ಮಕ್ಕಳು ಬರದಿದ್ದರೂ ಹಾಜರಾತಿ ಕೊಡುವಂತದ್ದು ಆಗಬಾರದು. ಶಿಸ್ತು, ಸಮಯ ಪಾಲನೆ ಕಡ್ಡಾಯವಾಗಿ ಆಗಬೇಕು ಎಂದರು.
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಪೌಷ್ಠಿಕ ಆಹಾರ ಸಮರ್ಪಕ ವಿತರಣೆ ಬಗ್ಗೆ ಮೇಲಧಿಕಾರಿಗಳು ದಿನ ನಿತ್ಯ ಮೇಲುಸ್ತುವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಜಾರಿ ಯಲ್ಲಿರುವ “ಪೋಷಣ್ ಟ್ರಾಕ್ ತಂತ್ರಾಂಶವನ್ನು ಸರಿಯಾದ ರೀತಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
2014 ಅಂಗನವಾಡಿಗಳ ಪೈಕಿ 20 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 129 ಸಹಾಯಕಿಯರ ಹುದ್ದೆಗಳು ಖಾಲಿ ಇವೆ.ಎಲ್ಲೆಲ್ಲಿ ಈ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಅವೆಲ್ಲವನ್ನು ಮುಂದಿನ 3 ತಿಂಗಳಲ್ಲಿ ಭರ್ತಿ ಮಾಡಲು ಕ್ರಮ ವಹಿಸಬೇಕು ಎಂದರು.
ಒಟ್ಟಾರೆ ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ದೊರಕುವ ಎಲ್ಲಾ ಸೌಲಭ್ಯಗಳು ಕರಾರುವಕ್ಕಾಗಿ ತಲುಪುವ ನಿಟ್ಟಿನಲ್ಲಿ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಆರೋಗ್ಯ ತಪಾಸಣೆ ಕಡ್ಡಾಯ
ಸರ್ಕಾರಿ ಅಂಗನವಾಡಿಗಳಲ್ಲಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಆಗಬೇಕು. ಸಾವಿರಾರು ಮಕ್ಕಳಿಗೆ ದೃಷ್ಠಿದೋಷದಿಂದ ಕಲಿಕೆಗೆ ಫಲಕವೇ ಕಾಣಿಸುವುದಿಲ್ಲ. ಅಂತಹ ಮಕ್ಕಳ ಕಲಿಕೆ ಬಹಳ ತೊಡಕಾಗುತ್ತದೆ. ಅಲ್ಲದೆ ನೂರಾರು ಮಕ್ಕಳಿಗೆ ಗಂಭೀರ ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ಆರೋಗ್ಯ ತಪಾಸಣೆಯನ್ನು ಸಮರ್ಪಕವಾಗಿ ಹಾಗೂ ಕಾಲೋಚಿತವಾಗಿ ಮಾಡುವುದರಿಂದ ಪರಿಹರಿಸಬಹುದು ಎಂದರು .
ಅಗತ್ಯವಿರುವ ಮಕ್ಕಳಿಗೆ ಕನ್ನಡಕ ವಿತರಣೆ ಆಗಬೇಕು. ಅಗತ್ಯವಿರುವರಿಗೆ ಶಸ್ತ್ರ ಚಿಕಿತ್ಸೆಗಳು ಆಗಲೇಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಹಕಾರ ಪಡೆದು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಭಿಯಾನದ ರೀತಿಯಲ್ಲಿ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಕಳೆದ ನವೆಂಬರ್ ಮಾಹೆಯವರೆಗೆ 1423.29 ಕೋಟಿ ಹಣ ಜಿಲ್ಲೆಯ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ತಲುಪಿದೆ. ಅದೇ ರೀತಿ ಸುಕನ್ಯ ಸಂವೃದ್ಧಿ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಮಾತೃ ವಂದನಾ ಯೋಜನೆ ಹಾಗೂ ಪೋಷಣ್ ಅಭಿಯಾನ ಯೋಜನೆಗಳು ಜಿಲ್ಲೆಯ ಮಹಿಳೆಯರಿಗೆ, ಮಕ್ಕಳಿಗೆ ಪರಿಣಾಮಕಾರಿ ಯಾಗಿ ತಲುಪಲು ಅಗತ್ಯ ಕ್ರಮವಹಿಸಲು ತಿಳಿಸಿದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಹೊಸ ಸಮಿತಿ ರಚನೆ ಮಾಡಲು ಅಗತ್ಯ ಕ್ರಮವಹಿಸಬೇಕು ಜೊತೆಗೆ ಕಚೇರಿ ಹಂತದಲ್ಲಿರುವ ಆಂತರಿಕ ದೂರು ನಿವಾರಣಾ ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಫೋಕ್ಸೋ(POCSO Act, 2012) ಪ್ರಕರಣಗಳನ್ನು ನಿಯಂತ್ರಿಸಲು 27 ಹೋಬಳಿಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಚರಣೆ ಮಾಡಬೇಕು.
ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಕೇಂದ್ರಗಳ ಕಾರ್ಯನಿರ್ವಹಣೆಯ ಮೇಲೆ ನಿರಂತರ ನಿಗಾ ಇಡಬೇಕು. ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ನಡೆಯದಿರುವ ಕೇಂದ್ರಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬಾಲ್ಯವಿವಾಹ ಪ್ರಕರಣಗಳು ನಿಯಂತ್ರಣ ಆಗಬೇಕು. ಆ ಮೂಲಕ ಲಿಂಗಾನುಪಾತ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಪೂರಕ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳು, ಸ್ವಾಧಾರ, ಸಾಂತ್ವಾನ, ಸಖಿ ಕೇಂದ್ರಗಳ ಮುಖ್ಯಸ್ಥರು, ಮಹಿಳಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.