Chikkaballapur News: ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದ ಜಿಲ್ಲಾಡಳಿತ: ಆ.27ರಂದು ಸಾಗುವಳಿ ಭೂ ಪ್ರವೇಶ ಹೋರಾಟಕ್ಕೆ ರೈತ–ದಲಿತ ಸಂಘಟನೆಗಳ ಕರೆ
ಶಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67 ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್-4ರಡಿ ಅರಣ್ಯ ಪ್ರದೇಶವಾಗಿದ್ದು, ಕಂದಾಯ ದಾಖಲೆಗಳ ಪಹಣಿಯಲ್ಲಿಯೂ ಅರಣ್ಯವೆಂದು ನಮೂದಾಗಿದೆ. ಅನುಮತಿಯಿಲ್ಲದೆ ಪ್ರದೇಶ ಪ್ರವೇಶಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಅಥವಾ ಅತಿಕ್ರಮಿಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.
ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟದ ಚಿತ್ರ -
ಚಿಕ್ಕಬಳ್ಳಾಪುರ: ತಾಲೂಕಿನ ಶಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67ರ ಅರಣ್ಯ ಭೂಮಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಅರಣ್ಯ ಇಲಾಖೆ ಹಾಗೂ ರೈತ–ದಲಿತ ಸಂಘಟನೆಗಳ ನಡುವಿನ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ.
ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಸ್ಪಷ್ಟಪಡಿಸಿರುವ ಬೆನ್ನಲ್ಲೇ, ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಆ.27ರಂದು ಭೂಮಿ ಪ್ರವೇಶ ಹೋರಾಟ ನಡೆಸಲು ದಲಿತ, ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆ ಕರೆ ನೀಡಿದೆ.
ಶಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67 ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್-4ರಡಿ ಅರಣ್ಯ ಪ್ರದೇಶವಾಗಿದ್ದು, ಕಂದಾಯ ದಾಖಲೆಗಳ ಪಹಣಿಯಲ್ಲಿಯೂ ಅರಣ್ಯವೆಂದು ನಮೂದಾ ಗಿದೆ. ಅನುಮತಿಯಿಲ್ಲದೆ ಪ್ರದೇಶ ಪ್ರವೇಶಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಅಥವಾ ಅತಿಕ್ರಮಿಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.
ಆ.27ರಂದು ಗ್ರಾಮ ಪ್ರವೇಶ ಹೋರಾಟ
ಇನ್ನೊಂದೆಡೆ, ಅರಣ್ಯ ಇಲಾಖೆ ದಲಿತ ಹಾಗೂ ಬಡ ರೈತರನ್ನು ಕೃಷಿ ಜಮೀನಿನಿಂದ ಒಕ್ಕಲೆಬ್ಬಿ ಸುತ್ತಿದೆ ಎಂದು ಆರೋಪಿಸಿರುವ ದಲಿತ, ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆ, ಕಂದಾಯ ಇಲಾಖೆಯ ತಟಸ್ಥ ನೀತಿಯನ್ನು ಖಂಡಿಸಿ ಆ.27ರಂದು ತಿರ್ನಹಳ್ಳಿಯಿಂದ ಸಿಂಗಾಟಕದಿರೇನಹಳ್ಳಿ ಗ್ರಾಮ ಪ್ರವೇಶ ಹೋರಾಟ ಹಮ್ಮಿಕೊಂಡಿದೆ.
ದಶಕಗಳಿಂದ ರೈತರು ಕೃಷಿ ಮಾಡುತ್ತಿದ್ದು, ಜಿಲ್ಲಾಡಳಿತವೇ ಸಾಗುವಳಿ ಚೀಟಿ ಸೇರಿ ಭೂಮಿಯ ಒಡೆತನಕ್ಕೆ ಬೇಕಾದ ಎಲ್ಲಾ ದಾಖಲಾತಿಗಳನ್ನು ನೀಡಿದೆ. ಆದರೆ ಇದೀಗ ‘ಡೀಮ್ಡ್ ಫಾರೆಸ್ಟ್’ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನೂರು ದಿನ ಪೂರೈಸಿದ್ದರೂ ಆಡಳಿತ ಯಂತ್ರಾAಗ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡ ರೈತರಿಗೇ ಕಿರುಕುಳ
ಸಿಂಗಾಡಿ ಕದಿರೇನಹಳ್ಳಿ ಗ್ರಾಮದ ಸರ್ವೆನಂಬರ್ 67ರಲ್ಲಿ 7 ಮಂದಿ ರೈತರಿಗೆ ತಲಾ 3 ಎಕರೆಯಂತೆ 1972-73ರಲ್ಲಿ ಭೂ ಮಂಜೂರಾತಿ ಆಗಿದ್ದು ಈ ಸಂಬಂಧ ಸಾಗುವಳಿ ಚೀಟಿ ಸಹಿತ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ರೈತರಿಗೆ ನೀಡಿದೆ. 1991-92ರಲ್ಲಿ ಸಿಂಗಾಡಿ ಕದಿರೇನಹಳ್ಳಿ ಸರ್ವೆ-53ರಲ್ಲಿ ಅರಣ್ಯ ಇಲಾಖೆಗೆ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಯಂತೆ ಅರಣ್ಯ ಇಲಾಖೆ 2015ರಲ್ಲಿ ಖಾತೆ ಕಂದಾಯ ಇಲಾಖೆಯಿಂದ ಖಾತೆ ಮಾಡಿಸಿಕೊಳ್ಳುವಾಗ ಸರ್ವೆ 53ರ ಬದಲಿಗೆ 67ರ ಭೂಮಿಯನ್ನು ಖಾತೆ ಮಾಡಿಸಿಕೊಳ್ಳುತ್ತದೆ.
ಹೀಗಾಗುವಾಗ ಸರ್ವೆ.ನಂ.67ರಲ್ಲಿ 200ಕ್ಕೂ ಹೆಚ್ಚು ಎಕರೆ ಭೂಮಿಯಿದ್ದು ಈ ಪೈಕಿ 165.30 ಗುಂಟೆ ಖಾತೆ ಮಾಡಿಸಿಕೊಳ್ಳುತ್ತಾರೆ. ಉಳಿಕೆ ಭೂಮಿ ಕಂದಾಯ ಇಲಾಖೆ ಬಳಿಯೇ ಇದೆ. ಹೀಗಿದ್ದರೂ ಕೂಡ ಗೂಗಲ್ ಮ್ಯಾಪ್‌ನಂತೆ 200 ಎಕರೆ ಪೂರ್ಣ ಪ್ರದೇಶವನ್ನು ತನ್ನದೆಂದು ಗೊತ್ತುವಳಿ ಮಾಡಿಕೊಂಡು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಆಗ ರೈತರು ಮತ್ತು ಅರಣ್ಯ ಇಲಾಖೆ ನಡುವೆ ಘರ್ಷಣೆ ಆಗುತ್ತದೆ. ಆಗ ಇದನ್ನು ಪರಿಹರಿಸಲು ಎಫ್‌ಎಸ್‌ಒ ಅಧಿಕಾರಿ ನೇಮಕವಾಗು ತ್ತಾರೆ. ಅವರ ವಿಚಾರಣೆಯಲ್ಲಿ ರೈತರಿಗೆ ಭೂಮಿ ಮಂಜೂರು ಸಿಂಧುವಾಗಿದೆ ಎಂದು ಆದೇಶ ಮಾಡುತ್ತಾರೆ.
ಫಾರೆಸ್ಟ್ ಸೆಟಲ್‌ಮೆಂಟ್ ಅಧಿಕಾರಿ ಹೀಗೆ ಆದೇಶ ಮಾಡಿದ್ದರೂ ಅರಣ್ಯ ಇಲಾಖೆ ರೈತರಿಗೆ ಭೂಮಿ ಬಿಟ್ಟುಕೊಡದೆ ತೊಂದರೆ ನೀಡುತ್ತಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಎಡವಟ್ಟಿನಿಂದ ಭೂವಂಚಿತ ರೈತರು ಪರಿತಪಿಸುವಂತಾಗಿತ್ತು. ಇದರ ವಿರುದ್ಧ ಧರಣಿ ಪ್ರಾರಂಭಿಸಲಾಯಿತು. ಸದರಿ ಧರಣಿಗೆ 74 ದಿನಗಳಾಗಿವೆ.ಇನ್ನಷ್ಟು ದಿನಗಳಾದರೂ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವು ದಿಲ್ಲ ಎನ್ನುವುದು ಐಕ್ಯ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕೆ.ಸಿ.ರಾಜಾಕಾಂತ್ ಅಭಿಪ್ರಾಯವಾಗಿದೆ.
ಸಿಂಗಾಡಿಕದಿರೇನಹಳ್ಳಿ ಗ್ರಾಮದ ಭೂ ಹೋರಾಟ 27ರಂದು ಯಾವ ಹಂತ ಮುಟ್ಟುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
![]()
ಕೃಷಿಕರನ್ನು ಬೀದಿಪಾಲು ಮಾಡಲಾಗುತ್ತಿದೆ’: ಹಲವು ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರನ್ನು ಏನೇನೋ ಕಾರಣ ಹೇಳಿ ಒಕ್ಕಲೆಬ್ಬಿಸಲಾಗುತ್ತಿದೆ. ಈ ಮೂಲಕ ಕೃಷಿಕರನ್ನು ಬೀದಿಪಾಲು ಮಾಡಲಾಗುತ್ತಿದೆ.”
ಎಂ.ಪಿ.ಮುನಿವೆಂಕಟಪ್ಪ, ರಾಜ್ಯ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ