ಪಕ್ಷದ್ರೋಹ ಮಾಡದೆ, ನಿಷ್ಠಾವಂತ ಕಾರ್ಯಕರ್ತ ಶಶಿ ಹುಲಿಕುಂಟೆಮಠ ಗೆಲುವಿಗೆ ಶ್ರಮಿಸೋಣ
ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಯಕರ ಜವಾಬ್ದಾರಿ. ಪಕ್ಷದ ಗೌರವ ಹಾಗೂ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಪಕ್ಷದ್ರೋಹದ ಚಟುವಟಿಕೆಗಳಿಗೆ ಅವಕಾಶ ನೀಡದೆ, ಸಂಘಟನೆಯ ಹಿತದೃಷ್ಟಿ ಯಿಂದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
-
ಶಿಡ್ಲಘಟ್ಟ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ(Shashi Hulikunthemath) ಅವರನ್ನು ಗೆಲ್ಲಿಸಲು ಪಂಚಾಯಿತಿಗೊಂದು ಹತ್ತು ಮಂದಿಯ ತಂಡ ರಚಿಸಿ, ಮತದಾರರನ್ನು ತಲುಪುವ ಮೂಲಕ ಸಂಘಟಿತವಾಗಿ ಕಾರ್ಯ ನಿರ್ವಹಿಸೋಣ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶಿಡ್ಲಘಟ್ಟ ತಾಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಚುನಾ ವಣಾ ಸಭೆಯಲ್ಲಿ ಮಾತನಾಡಿದ ಅವರು, ನಗರದ 31 ವಾರ್ಡ್ಗಳ ಕೌನ್ಸಿಲರ್ಗಳು, ಕೌನ್ಸಿಲರ್ ಆಕಾಂಕ್ಷಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಬೂತ್ ಮಟ್ಟದಿಂದಲೇ ಪ್ರಚಾರ ಕೈಗೊಂಡು, ಪದವೀಧರ ಮತದಾರರನ್ನು ಸಂಪರ್ಕಿಸಿ ಯಾವುದೇ ಮತ ಕೈತಪ್ಪದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಯಕರ ಜವಾಬ್ದಾರಿ. ಪಕ್ಷದ ಗೌರವ ಹಾಗೂ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಪಕ್ಷದ್ರೋಹದ ಚಟುವಟಿಕೆಗಳಿಗೆ ಅವಕಾಶ ನೀಡದೆ, ಸಂಘಟನೆಯ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಇದನ್ನೂ ಓದಿ: Shidlaghatta News: ಜೆ.ವೆಂಕಟಾಪುರ ಗ್ರಾ.ಪಂ. ಹಣಕಾಸು ಅವ್ಯವಹಾರ ಆರೋಪ: ಪಿಡಿಒ ಅಮಾನತಿಗೆ ಆಗ್ರಹ
2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಕೊನೆಯ ಹಂತದವರೆಗೂ ಶ್ರಮಿಸಿದ ಕಾರ್ಯಕರ್ತರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಪಕ್ಷದ ಸಂಘಟನೆಯಲ್ಲಿ ಕಾರ್ಯ ಕರ್ತರ ಪಾತ್ರ ಮಹತ್ವದ್ದಾಗಿದ್ದು, ಅವರ ಪರಿಶ್ರಮಕ್ಕೆ ಸೂಕ್ತ ಗೌರವ ದೊರೆಯಬೇಕು ಎಂದು ಹೇಳಿದರು.
ಸಹನಾ ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಬೆಳೆಯಲು ಹಿರಿಯ ನಾಯಕರ ಪರಿಶ್ರಮವೇ ಕಾರಣ. ಮಾಜಿ ಸಚಿವ ವಿ. ಮುನಿಯಪ್ಪ ಅವರು ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿದ್ದಾರೆ. ಶ್ರೀನಿವಾಸ ರಾಮಯ್ಯ ಅವರು ಕಾಂಗ್ರೆಸ್ ಭವನಕ್ಕೆ ಜಾಗ ನೀಡಿದ್ದು, ಇಂದು ಅದು ಕಾರ್ಯಕರ್ತರಿಗೆ ಆಸರೆಯಾಗಿದೆ. ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಹಿರಿಯ ನಾಯಕರು ನೀಡಿರುವ ಕೊಡುಗೆಯನ್ನು ಮರೆಯಬಾರದು ಎಂದು ತಿಳಿಸಿದರು.
ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ
ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. ದೇಶದ ಜನರು ಬದಲಾವಣೆ ಬಯಸುತ್ತಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದಾರೆ ಎಂದು ರಾಜೀವ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಶಶಿ ಹುಲಿಕುಂಟೆಮಠರಿಂದ ಮತಯಾಚನೆ
ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರು ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಪದವೀಧರ ಮತದಾರರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ, ಅಪ್ಸರ ಪಾಷ, ಗುಡಗಹಳ್ಳಿ ನಾರಾಯಣಸ್ವಾಮಿ, ಡಾಲ್ಫಿನ್ ನಾಗರಾಜ್, ಗುಡಿಯಪ್ಪ, ನರೇಂದ್ರ, ಮುನಿರಾಜು ಕುಟ್ಟಿ, ಗೌಸ್, ಯಾಸ್ಮಿನ್ ತಾಜ್, ಗಾಯಿತ್ರಿ, ಚುನಾವಣಾ ಪ್ರಚಾರದ ರಾಘವೇಂದ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕೌನ್ಸಿಲರ್ ಆಕಾಂಕ್ಷಿಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.