ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr L Hanumanthaiah: ಜಾತಿ–ಧರ್ಮದ ಗೋಡೆಗಳನ್ನು ಕೆಡವಿ ಮಾನವೀಯತೆ ಬೆಸೆಯುವ ಶಕ್ತಿ ಸಾಹಿತ್ಯಕ್ಕಿದೆ: ಎಲ್. ಹನುಮಂತಯ್ಯ

ಸಮಾಜದಲ್ಲಿ ದೇವಾಲಯಗಳನ್ನು ನಿರ್ಮಿಸುವ ಉತ್ಸಾಹ ಮತ್ತು ಆಸಕ್ತಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲೂ ತೋರಿದರೆ, ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಮೂಲಸೌಕರ್ಯ ಹೊಂದಿರುವ ಸುಸಜ್ಜಿತ ವಿದ್ಯಾಕೇಂದ್ರಗಳಾಗಲಿವೆ. ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.

ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

-

Profile
Ashok Nayak Nov 19, 2026 9:50 PM

ಚಿಂತಾಮಣಿ: ಸಾಹಿತ್ಯ ಕೇವಲ ಕಲ್ಪನಾ ಲೋಕವಲ್ಲ; ಅದು ಸಮಾಜದ ಬದುಕಿನ ಕನ್ನಡಿಯಾಗಿ, ಜಾತಿ–ಧರ್ಮಗಳ ಗೋಡೆಗಳನ್ನು ಕೆಡವಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯ ಗಳನ್ನು ಬೆಸೆಯುವ ಶಕ್ತಿಯಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ(Dr L Hanumanthaiah) ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು(Kannada Sahithya Parishad), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahithya Sammelana) ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ದೇವಾಲಯಗಳನ್ನು ನಿರ್ಮಿಸುವ ಉತ್ಸಾಹ ಮತ್ತು ಆಸಕ್ತಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲೂ ತೋರಿದರೆ, ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಮೂಲಸೌಕರ್ಯ ಹೊಂದಿರುವ ಸುಸಜ್ಜಿತ ವಿದ್ಯಾಕೇಂದ್ರಗಳಾಗಲಿವೆ. ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Chinthamani News: ಕಾಸಾಪ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ಆಯೋಜನೆ ಆರೋಪ

ಸಾಹಿತ್ಯವು ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಮನುಷ್ಯರ ನಡುವಿನ ಭೇದಭಾವ ಮತ್ತು ಅಸಮಾನತೆಯನ್ನು ಹೋಗಲಾಡಿಸಿ ಓದುಗರಲ್ಲಿ ವೈಚಾರಿಕ ಚಿಂತನೆ ಬೆಳೆಸಬೇಕು. ಪಂಪನ 'ಮನುಷ್ಯ ಜಾತಿ ತಾನೊಂದೇ ವಲಂ' ಎಂಬ ಆಶಯ, ಬಸವಣ್ಣನವರ ವಚನಗಳು ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಿವೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಕ್ಷಣ, ಮಾನವ ಸಂಪನ್ಮೂಲ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಗದ್ದಲ, ಗಲಾಟೆಗಳಿಲ್ಲದೆ ಶಿಸ್ತುಬದ್ಧವಾಗಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆಗಳ ಜತೆಗೆ ಗ್ರಾಮೀಣ ಸಂಸ್ಕೃತಿಯನ್ನೂ ಉಳಿಸಬೇಕು: ಗೊಲ್ಲಹಳ್ಳಿ ಶಿವಪ್ರಸಾದ್

ಸಮ್ಮೇಳನದ ಸರ್ವಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahally Shivaprasad) ಮಾತನಾಡಿ, ಕೆರೆಗಳು ಬತ್ತಿದರೆ ಕೇವಲ ನೀರು ಮಾತ್ರವಲ್ಲ, ರೈತರ ಬದುಕು, ಸಾಮಾಜಿಕ ಸಂಬಂಧಗಳು ಮತ್ತು ಗ್ರಾಮೀಣ ಸಂಸ್ಕೃತಿಯೂ ಬತ್ತಿಹೋಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ಕೆರೆಗಳ ಅಚ್ಚುಕಟ್ಟಿನಲ್ಲಿ ಎರಡು ಬೆಳೆ ಬೆಳೆಯುತ್ತಿದ್ದ ರೈತರು ಇಂದು ಮಳೆಗಾಗಿ ಆಕಾಶ ನೋಡು ವಂತಾಗಿದೆ. ಹೊಲಗಳಲ್ಲಿ ಹಾಡುತ್ತಾ ದುಡಿಯುತ್ತಿದ್ದ ಮಹಿಳೆಯರು ಕಟ್ಟಡ ನಿರ್ಮಾಣದ ಕೆಲಸಕ್ಕೆ ತೆರಳುತ್ತಿದ್ದಾರೆ. ಹಳ್ಳಿಗಳಲ್ಲಿ ಆಟವಾಡುತ್ತಿದ್ದ ಮಕ್ಕಳು ನಗರಗಳ ವಸತಿಗೃಹಗಳಲ್ಲಿ ಬೆಳೆಯುತ್ತಿದ್ದಾರೆ. ಹಬ್ಬ, ಜಾತ್ರೆ, ಸುಗ್ಗಿ ಮತ್ತು ಕೊಯ್ಲಿನ ಸಂಭ್ರಮವೂ ಕಣ್ಮರೆಯಾಗುತ್ತಿದೆ. ಇದು ಆರ್ಥಿಕ ನಷ್ಟ ಮಾತ್ರವಲ್ಲ, ದೊಡ್ಡ ಸಾಂಸ್ಕೃತಿಕ ನಷ್ಟವೂ ಹೌದು ಎಂದರು.

cbpm1lh

ಕೆರೆಗಳ ಪುನರುಜ್ಜೀವನಕ್ಕೆ ಹೂಳು ತೆಗೆಯುವುದು, ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವುದು, ಒತ್ತುವರಿ ತೆರವುಗೊಳಿಸುವುದು ಹಾಗೂ ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಕೆರೆಗಳನ್ನು ಉಳಿಸುವುದೆಂದರೆ ಕೃಷಿ, ರೈತ, ಹಳ್ಳಿ, ಭಾಷೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿದಂತೆ. ಸಾಹಿತ್ಯವು ಕೇವಲ ಕವಿತೆ, ಕಥೆಗಳಿಗೆ ಸೀಮಿತವಾಗದೆ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಧ್ವನಿಯಾಗಬೇಕು ಎಂದು ಕರೆ ನೀಡಿದರು.

ಪ್ರಕೃತಿಯೇ ಧರ್ಮವಾಗಲಿ, ನೆಲವೇ ಕುಲವಾಗಲಿ, ಜೀವಪ್ರೀತಿಯೇ ಸಂಸ್ಕೃತಿಯಾಗಲಿ ಎಂಬ ಮಾನವೀಯ ಸಂದೇಶವನ್ನು ಸಮಾಜ ಅಳವಡಿಸಿಕೊಳ್ಳಬೇಕು. ಬಸವಣ್ಣ, ಬುದ್ಧ, ಕನಕದಾಸರು, ಸೂಫಿ ಸಂತರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಕುವೆಂಪು ಅವರ ಸಮಾನತೆ, ಕರುಣೆ ಹಾಗೂ ವಿಶ್ವಮಾನವ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ತುರ್ತು ಅಗತ್ಯ ವಾಗಿದೆ ಎಂದರು.

ಕನ್ನಡ ನಮ್ಮ ಬದುಕು, ಅಸ್ಮಿತೆಯ ಪ್ರತೀಕ: ಜಿಲ್ಲಾಧಿಕಾರಿ ಜಿ. ಪ್ರಭು

ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, ಕನ್ನಡ ಭಾಷೆ ನಮ್ಮ ಇತಿಹಾಸ, ಪರಂಪರೆ, ಆಹಾರ ಪದ್ಧತಿ, ಹಬ್ಬ–ಜಾತ್ರೆ ಸೇರಿದಂತೆ ಇಡೀ ಜೀವನ ಮತ್ತು ಅಸ್ಮಿತೆಯನ್ನು ರೂಪಿಸಿದೆ. ಪರಿಸರ, ವಾಸ್ತುಶಿಲ್ಪ, ಶಾಸನಗಳು, ಜನಪದ ಹಾಗೂ ಲಲಿತಕಲೆಗಳ ಮೂಲಕ ಕನ್ನಡ ಸಂಸ್ಕೃತಿ ವಿಶ್ವಕ್ಕೆ ಪರಿಚಯ ವಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಮತ್ತು ಸುದೀರ್ಘ ಇತಿಹಾಸವಿದ್ದು, ಅದನ್ನು ಮನೆಮನೆಗಳಲ್ಲಿ ಜೀವಂತವಾಗಿಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದರು.

'ಗೋವಿನ ಹಾಡು'ನಂತಹ ಜನಪದ ನೀತಿಪ್ರಧಾನ ಕಥೆಗಳಲ್ಲಿರುವ ಸತ್ಯ, ನಿಷ್ಠೆ, ಪ್ರೀತಿ, ವಾತ್ಸಲ್ಯ, ಕರುಣೆ ಮತ್ತು ತ್ಯಾಗದ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮುಂದಿನ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಲು ಸಾಧ್ಯ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಮಾತೃಭಾಷೆಯ ಮಹತ್ವ ತಿಳಿಸಬೇಕು ಎಂದು ಹೇಳಿದರು.

ಅದ್ಧೂರಿ ಧ್ವಜಾರೋಹಣ, ಮೆರವಣಿಗೆ

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿತು. ಬಳಿಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಎಸ್‌ಸಿಸಿ, ಎನ್‌ಎಸ್‌ಎಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕ ದಳ ಹಾಗೂ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಾದಸ್ವರ, ಬ್ಯಾಂಡ್‌ಸೆಟ್ ಮತ್ತು ಇರಗ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕನ್ನಡದ ಕಹಳೆ ಮೊಳಗಿಸಿ ಸಾರ್ವಜನಿಕರ ಗಮನ ಸೆಳೆದರು.

ಶಾಸಕ ಡಾ. ಎಂ.ಸಿ. ಸುಧಾಕರ್(MLA Dr M C Sudhakar), ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೂಜ್ಯ ಶ್ರೀ ಮಂಗಳನಾಥಸ್ವಾಮೀಜಿ, ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಕೊಡಿರಂಗಪ್ಪ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ. ರಮೇಶ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಮುನಿನಾರಾಯಣಪ್ಪ, ಶ್ರೀನಾಥ್, ಮಲ್ಲಿಕಾರ್ಜುನ ಕೆಂಕೆರೆ, ತಹಶೀಲ್ದಾರ್ ಸುದರ್ಶನ್ ಯಾದವ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ನಗರಸಭೆ ಪೌರಾಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ರೈತರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.