Kannada Sahithya Sammelana: ತೆಲುಗು ಆಡುಭಾಷೆಯಾಗಿದ್ದರೂ ಕನ್ನಡವೇ ಹೃದಯದ ಭಾಷೆ; ನೆಲವೇ ಕುಲವಾಗಲಿ: ಗಣ್ಯರ ಆಶಯ
ಬೆಂಗಳೂರಿನಲ್ಲಿ ಸುಮಾರು 120 ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ. ಕನ್ನಡಿಗರು ಎಂದಿಗೂ ಇತರ ಭಾಷಿಕರಿಗೆ ತೊಂದರೆ ಕೊಟ್ಟವರಲ್ಲ. ಆದರೆ ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ದೊರೆಯಬೇಕು. ಕನ್ನಡ ಮಾತನಾಡುವ ಸಂದರ್ಭಗಳಲ್ಲಿ ಕನ್ನಡವನ್ನೇ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು
-
ಚಿಂತಾಮಣಿ: ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಕೇವಲ ಸರ್ಕಾರದ ಆದೇಶಗಳಿಂದ ಸಾಧ್ಯವಿಲ್ಲ. ಕನ್ನಡಿಗರ ಮನೋಭಾವದಲ್ಲಿಯೂ ಬದಲಾವಣೆಯಾಗಬೇಕು. ದೈನಂದಿನ ಬದುಕಿ ನಲ್ಲಿ ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಅನ್ಯಭಾಷೆ ಗಳೊಂದಿಗೂ ಸೌಹಾರ್ದ ಸಂಬಂಧ ಹೊಂದಿಯೂ ಕೂಡ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬ ಆಶಯ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahithya Sammelana)ದ ಸಮಾರೋಪ ಸಮಾರಂಭದಲ್ಲಿ ಅನಾವರಣ ಗೊಂಡಿತು.
ನಗರದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಸಂತೋಷ ಹಾನಗಲ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳ ಮುಖ್ಯ ಉದ್ದೇಶ ಕನ್ನಡ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವು ದಾಗಿದೆ.
ಬೆಂಗಳೂರಿನಲ್ಲಿ ಸುಮಾರು 120 ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ. ಕನ್ನಡಿಗರು ಎಂದಿಗೂ ಇತರ ಭಾಷಿಕರಿಗೆ ತೊಂದರೆ ಕೊಟ್ಟವರಲ್ಲ. ಆದರೆ ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ದೊರೆಯಬೇಕು. ಕನ್ನಡ ಮಾತನಾಡುವ ಸಂದರ್ಭಗಳಲ್ಲಿ ಕನ್ನಡವನ್ನೇ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ 3,500ಕ್ಕೂ ಹೆಚ್ಚು ಆದೇಶಗಳಿದ್ದರೂ ಅವುಗಳ ಅನುಷ್ಠಾನದ ಜತೆಗೆ ಜನರ ಮನಸ್ಥಿತಿಯಲ್ಲೂ ಬದಲಾವಣೆಯಾಗಬೇಕು. ಪುಸ್ತಕ ಸಂತೆಗಳು ಹಾಗೂ ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆದರೆ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ.
ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಪೀಠಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಕನ್ನಡ ಭಾಷೆಯ ಮೂಲಕ ಸಾಧನೆ ಮಾಡುವ ಆತ್ಮವಿಶ್ವಾಸ ಬೆಳೆಸಬೇಕು. ಜಾನಪದ ಸಾಹಿತ್ಯ ಮತ್ತು ಲಾವಣಿಗಳು ಕನ್ನಡದ ಜೀವಂತಿಕೆಯ ಪ್ರತೀಕಗಳಾಗಿವೆ. ತೆಲುಗು ಮತ್ತು ಕನ್ನಡದ ಅನುಬಂಧ ಮುಂದುವರಿಯಲಿ, ಆದರೆ ಕನ್ನಡವೇ ನಮ್ಮ ಉಸಿರಾಗಿರಲಿ ಎಂದು ಆಶಿಸಿದರು.
ಕೈವಾರ ಧರ್ಮಾಧಿಕಾರಿ ಎಂ.ಆರ್.ಜಯರಾಂ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಪ, ರನ್ನ, ಪುರಂದರದಾಸರು, ಕನಕದಾಸರು ಕನ್ನಡ ಸಾಹಿತ್ಯ ಮತ್ತು ದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕೈವಾರ ತಾತಯ್ಯ, ಬಸವಣ್ಣ ಸೇರಿದಂತೆ ಅನೇಕ ಸಂತರು ತಮ್ಮ ಸಾಹಿತ್ಯ ಮತ್ತು ತತ್ವಗಳ ಮೂಲಕ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ. ಭಾಷೆ ಬೆಳೆದಾಗ ಸಮಾಜ ಮತ್ತು ಸಂಸ್ಕೃತಿಯೂ ಬೆಳೆಯುತ್ತದೆ. ಜಾತಿ-ಭೇದ ಮರೆತು ಸೌಹಾರ್ದ ಸಮಾಜ ನಿರ್ಮಿಸಬೇಕು. ಸರ್ವಧರ್ಮ ಸಮನ್ವಯತೆ ಕರ್ನಾಟಕದ ವಿಶೇಷತೆ ಯಾಗಿದ್ದು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸರ್ಕಾರ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಸಾಹಿತಿ ಬಿ.ಆರ್.ಲಕ್ಷ್ಮಣರಾವ್(B R Laxman Rao) ಮಾತನಾಡಿ, ಚಿಂತಾಮಣಿಯಲ್ಲಿ ಸುಮಾರು 40 ವರ್ಷಗಳ ಕಾಲ ಜೀವನ ನಡೆಸಿದ್ದೇನೆ. ಈ ಊರು ಬಿಟ್ಟು ಹೋಗುವ ಸಂದರ್ಭದಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್(MLA Dr M C Sudhakar) ಅವರು ಹೋಗಬೇಡಿ ಎಂದು ಹೇಳಿದ್ದರು. ಚಿಂತಾಮಣಿಯಲ್ಲಿ ಒಂದು ಕಾಲದಲ್ಲಿ ತೆಲುಗು ಭಾಷೆಯ ಪ್ರಾಬಲ್ಯ ಹೆಚ್ಚಾಗಿತ್ತು. ಈಗ ಅದು ಕಡಿಮೆಯಾಗಿದ್ದು, ಆಡುಭಾಷೆ ತೆಲುಗಾಗಿದ್ದರೂ ಹೃದಯದ ಭಾಷೆ ಕನ್ನಡವಾಗಿದೆ. ಈ ಭಾಗದಲ್ಲಿ ಹೆಚ್ಚೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು. ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಗೆ ಸಮ್ಮೇಳ ನಾಧ್ಯಕ್ಷ ಸ್ಥಾನ ದೊರೆತಿರುವುದು ಸಂತೋಷ ತಂದಿದೆ. ಈ ಭವನದಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಆಶಿಸಿದರು.
ಆದಿಮದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಒಂದು ಕಾಲದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಕನ್ನಡ ಮಾತನಾಡುವುದೇ ಕಷ್ಟದ ಕೆಲಸವಾಗಿತ್ತು. ವಿದ್ಯಾರ್ಥಿಗಳಿಗೂ ಕನ್ನಡ ಕಲಿಯಲು ಸವಾಲುಗಳಿದ್ದವು. ಸರ್ಕಾರಗಳು ಕನ್ನಡ ಭಾಷೆಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹದಿಂದ ಇಂದು ಭಾಷೆ ಗಡಿಗಳನ್ನು ದಾಟಿ ಬೆಳೆದಿದೆ. ತೆಲುಗಿನೊಂದಿಗೂ ಕನ್ನಡವನ್ನು ಬೆಳೆಸಿಕೊಂಡು ಸಾಗುವ ಸುಸಂಸ್ಕೃತ ನಾಡು ನಮ್ಮದು. ಇಂತಹ ಸಾಹಿತ್ಯ ಸಮ್ಮೇಳನ ನಮ್ಮ ಭಾಗದಲ್ಲಿ ನಡೆದಿರುವುದು ಸಂತೋಷ ತಂದಿದೆ ಎಂದರು.
ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivaprasad) ಮಾತನಾಡಿ, ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರಣರಾದ ಎಲ್ಲರಿಗೂ ಹೃದಯಪೂರ್ವಕ ಶರಣು ಸಲ್ಲಿಸುತ್ತೇನೆ. ಕೂಡಲ ಸಂಗಮದಿಂದ ಕಾವ್ಯದ ಧ್ವನಿ ಮೊಳಗುತ್ತಿದೆ. ನೆಲವೇ ಕುಲವಾಗಲಿ ಎಂಬ ಆಶಯದೊಂದಿಗೆ ಸಮಾಜದಲ್ಲಿ ಮಾನವೀಯತೆ ಮತ್ತು ಸಮಾನತೆಯ ಮೌಲ್ಯಗಳು ಬೆಳೆಯಬೇಕು. ನನ್ನ ಯಶಸ್ಸಿನ ತಾಯಿಬೇರಾಗಿರುವ ಶಾಸಕ ಡಾ.ಎಂ.ಸಿ.ಸುಧಾಕರ್ ಅವರನ್ನು ತುಂಬು ಹೃದಯ ದಿಂದ ಸ್ಮರಿಸುತ್ತೇನೆ. ನನಗೆ ದೊರೆತಿರುವ ಅವಕಾಶ ಮತ್ತು ಜವಾಬ್ದಾರಿಗೆ ಯಾವುದೇ ಕಪ್ಪುಚುಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಅವರು ಎರಡು ವರ್ಷಗಳ ಹಿಂದೆ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಂತಾಮಣಿಯಲ್ಲಿಯೇ ಆಯೋಜಿಸುವಂತೆ ಮನವಿ ಮಾಡಿದ್ದರು. ಅವರಿಗೆ ನೀಡಿದ್ದ ಭರವಸೆಯಂತೆ ಇಲ್ಲಿ ಸಮ್ಮೇಳನ ನಡೆಸಲಾಗಿದೆ. ಎರಡು ದಿನಗಳ ಕಾಲ ನಡೆದ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಹಾಗೂ ಮಂಗಳನಾಥ ಸ್ವಾಮೀಜಿ ಆಗಮಿಸಿ ಶುಭ ಹಾರೈಸಿದ್ದಾರೆ ಎಂದರು.
ವಿಷಯ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಾಯಕರ ಕಲರವ ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿವೆ. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಭವನವನ್ನು ನಮ್ಮ ಮನೆಯೆಂದು ಭಾವಿಸಿ ಎಲ್ಲರೂ ಕಾಪಾಡಿಕೊಂಡು ಹೋಗಬೇಕು. ಇಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಮಾತನಾಡಿ, ಶಾಸಕ ಡಾ.ಎಂ.ಸಿ. ಸುಧಾಕರ್ ಅವರ ನಿರೀಕ್ಷೆಗೆ ತಕ್ಕಂತೆ ಸಮ್ಮೇಳನ ಆಯೋಜಿಸಲು ಸಾಧ್ಯವಾಗದಿದ್ದರೂ, ಲಭ್ಯವಿದ್ದ ಇತಿಮಿತಿಗಳಲ್ಲಿಯೇ ಉತ್ತಮವಾಗಿ ನಡೆಸಲು ಪ್ರಯತ್ನಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸುವ ವಿಶ್ವಾಸವಿದೆ. ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಸಹಕಾರವನ್ನು ಸ್ಮರಿಸುತ್ತೇನೆ. ಮಾಧ್ಯಮ ಮಿತ್ರರು ಸಮ್ಮೇಳನಕ್ಕೆ ಉತ್ತಮ ಪ್ರಚಾರ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ಶಿಕ್ಷಕರು ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಆರ್.ಲಕ್ಷ್ಮಣರಾವ್, ಸಂತೋಷ ಹಾನಗಲ್, ಸಮ್ಮೇಳನಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಕೈವಾರ ಧರ್ಮಾಧಿಕಾರಿ ಎಂ.ಆರ್.ಜಯರಾಂ, ಆದಿಮದ ಅಧ್ಯಕ್ಷ ಎನ್.ಮುನಿಸ್ವಾಮಿ, ಮುಖವೀಣೆ ಆಂಜಿನಪ್ಪ, ಪೌರಾಯುಕ್ತ ಚಲಪತಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.