ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜ.31ರಿಂದ ಮೂರು ದಿನ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ

Sirsi Fruit and flower Show: ಜ.31ರಿಂದ ಮೂರು ದಿನಗಳ ಕಾಲ 2025-26ನೇ ಸಾಲಿನ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳವನ್ನು ಶಿರಸಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಪಿ. ಸತೀಶ ಅವರು ಮಾಹಿತಿ ನೀಡಿದ್ದಾರೆ.

ಜ.31ರಿಂದ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ

ಶಿರಸಿ ಫಲಪುಷ್ಪ ಪ್ರದರ್ಶನದ ಕರಪತ್ರವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿದರು. -

Prabhakara R
Prabhakara R Jan 16, 2026 4:06 PM

ಶಿರಸಿ, ಜ.16: ಜಿಲ್ಲೆಯ ರೈತರಿಗೆ ಪುಷ್ಪ ಕೃಷಿ ಬಗ್ಗೆ ಮಾಹಿತಿ ನೀಡಿ, ಪುಷ್ಪ ಕೃಷಿ ಉತ್ತೇಜಿಸುವ ಉದ್ದೇಶದೊಂದಿಗೆ ಕಳೆದ ಹಲವು ವರ್ಷಗಳಿಂದ ಆಯೋಜಿಸಲಾಗುತ್ತಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳವನ್ನು (Sirsi Fruit and flower Show) ಈ ಬಾರಿ ಜ.31ರಿಂದ ಮೂರು ದಿನಗಳ ಕಾಲ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಪಿ. ಸತೀಶ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪುಷ್ಪ ಕೃಷಿಗೆ ಉತ್ತಮ ಅವಕಾಶವಿದೆ. ಇಷ್ಟು ವರ್ಷಗಳ ಫಲಪುಷ್ಪ ಪ್ರದರ್ಶನದ ಪರಿಣಾಮವಾಗಿ ಜಿಲ್ಲೆಯ ಅಲ್ಲಲ್ಲಿ ರೈತರು ಪುಷ್ಪ ಕೃಷಿ ಮಾಡುತ್ತಿದ್ದಾರಾದರೂ ದೊಡ್ಡ ಪ್ರಮಾಣದಲ್ಲಿ ಬೆಳೆದರಷ್ಟೇ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿದೆ. ಭಟ್ಕಳದ ರೈತರು ಮಲ್ಲಿಗೆ ಬೆಳೆದು ಮಾರುಕಟ್ಟೆ ಕಂಡುಕೊಂಡ ರೀತಿಯಲ್ಲಿಯೇ, ಉಳಿದವರನ್ನೂ ಉತ್ತೇಜಿಸುವ ಸಲುವಾಗಿ ವೈವಿಧ್ಯಮದ ಪುಷ್ಪಗಳನ್ನು ಇಲ್ಲಿಯ ರೈತರಿಗೆ ಪರಿಚಯಿಸುವ ಕಾರ್ಯವನ್ನು ಈ ಪ್ರದರ್ಶನದ ಮೂಲಕ ಮಾಡುತ್ತಿದ್ದೇವೆ ಎಂದರು.

ಈ ವರ್ಷದ ಪ್ರದರ್ಶನಕ್ಕೆ 14.3 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಈ ಬಾರಿ ವಿಶೇಷವಾಗಿ ಎಂಟಿರಿನಮ್, ಡಯಾಂತಸ್, ವಿವಿಧ ಬಣ್ಣದ ಚೆಂಡು ಹೂವು, ಸೇವಂತಿಗೆ, ಇಂಕಾ, ವರ್ಬೆನಾ, ಟೊರೇನಿಯಾ ಸೇರಿದಂತೆ ವಿವಿಧ ಜಾತಿಯ 13 ಸಾವಿರ ಹೂವಿನ ಗಿಡಗಳನ್ನು ಈಗಾಗಲೇ ತಂದು ಬೆಳೆಸಲಾಗುತ್ತಿದೆ. 1600ಕ್ಕೂ ಅಧಿಕ ಹೂವಿನ ಕುಂಡಗಳನ್ನು ಸಿದ್ಧಪಡಿಸಲಾಗಿದೆ. ಈ ವರ್ಷ ಪುಷ್ಪಗಳಿಂದ ತಯಾರಿಸುವ ಆಪರೇಷನ್ ಸಿಂದೂರ್ ಬಿಂಬಿಸುವ ರಫೇಲ್ ಯುದ್ಧ ವಿಮಾನ ಮಾದರಿ, ಎಸ್ 400, ಬ್ರಹ್ಮೋಸ್ ಕ್ಷಿಪಣಿ ಮಾದರಿ, 2025 ಮಹಿಳಾ ವಿಶ್ವ ಕಪ್ ಆಕರ್ಷನೆಯ ಕೇಂದ್ರ ಬಿಂದುಗಳಾಗಲಿವೆ. ಇದರ ಜತೆ ಸಿರಿಧಾನ್ಯ ಕಲಾಕೃತಿ, ಸಿರಿಧಾನ್ಯ ರಾಶಿ ರಂಗೋಲಿ, ಕಾಳು ಮೆಣಸು ರಾಣಿ ಚೆನ್ನಭೈರಾದೇವಿ ಅವರ ರಂಗೋಲಿ ಹಾಗೂ ಕಾಳು ಮೆಣಸು ತಳಿಗಳ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುಷ್ಪ ರಂಗೋಲಿ ಸ್ಪರ್ಧೆ, ಕಾಳು ಮೆಣಸು ಬಳಸಿ ತಯಾರಿಸಿದ ಆರತಿ ತಾಟಿನ ಸ್ಪರ್ಧೆ, ಕಾಳು ಮೆಣಸಿನ ಖಾದ್ಯಗಳ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ತಯಾರಾದ ಉತ್ಪನ್ನಗಳ ಪ್ರದರ್ಶನ, ರೈತರು ಬೆಳೆದ ವಿಶೇಷ ಬೆಳೆಗಳ ಪ್ರದರ್ಶನ, ಕೀಟ ಹಾಗೂ ರೋಗಗಳ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಬಳಕೆ ಕುರಿತು ಮಾಹಿತಿ ನಡೆಯಲಿವೆ. 80ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದರು.

ತೋಟಗಾರಿಕೆ ಕಾಲೇಜಿನ ಡೀನ್ ಡಾ. ಎಂ. ಎಚ್. ತಟಗಾರ ಮಾಹಿತಿ ನೀಡಿ, ಜ.31ರಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ವಿವಿಧ ಮಂಡಳಿಗಳ ಅಧ್ಯಕ್ಷರು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದರು. ಕೃಷಿ ಇಲಾಖೆ ಉಪನಿರ್ದೇಶಕ ಪಾಂಡು ಕೆ. ಎಚ್., ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಗಣೇಶ ಹೆಗಡೆ, ಪ್ರೀತಂ ಇತರರಿದ್ದರು.

ನಮ್ಮ ಸಸಿ ನಿಮ್ಮ ಮನೆಯಂಗಳದಲ್ಲಿ...

ರೈತರಲ್ಲಿ ಹೂವಿನ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಅಂಗವಾಗಿ ನಮ್ಮ ಸಸಿ ನಿಮ್ಮ ಮನೆಯಂಗಳದಲ್ಲಿ ಎಂಬ ಹೊಸ ಪ್ರಯತ್ನ ನಡೆಸಲಾಗುತ್ತಿದೆ. ರೈತರಿಗೆ ಹೂವಿನ ಗಿಡಗಳು, ಸಸ್ಯ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಈಗಿನಿಂದಲೇ ಆರಂಭಿಸಲಾಗಿದೆ. ಜ.೩೧ರಂದು ಪುಷ್ಪ ರಂಗೋಲಿ, ಆರತಿ ತಟ್ಟೆ ಸ್ಪರ್ಧೆಗಳು, ಫೆ.1ರಂದು ಕಾಳು ಮೆಣಸಿನ ಖಾದ್ಯ ತಯಾರಿಕೆ ಸ್ಪರ್ಧೆ ನಡೆಯಲಿದೆ.

Amazing Pet Planet: ಅಮೇಜಿಂಗ್ ಪೆಟ್ ಪ್ಲಾನೆಟ್; ಶಿರಸಿಯಲ್ಲಿದೆ ಒಂದು ಪುಟ್ಟ ಪ್ರಾಣಿ ಸಾಮ್ರಾಜ್ಯ!

ಬೆಳೆ ಕೊರತೆಯ ಅಂದಾಜು ನಡೆಸುತ್ತಿದ್ದೇವೆ

ಜಿಲ್ಲೆಯಲ್ಲಿ ಈ ವರ್ಷದ ಅಡಕೆ ಬೆಳೆ ಕೊರತೆಯ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಡಾ. ಬಿ.ಪಿ. ಸತೀಶ ಅವರು, ಈ ವರ್ಷ ಕೊಳೆ ರೋಗ ಮತ್ತು ಅಡಕೆಗೆ ಎಲೆಚುಕ್ಕಿ ರೋಗದ ಕಾರಣದಿಂದಾಗಿ ಇಳಿವರಿ ಕಡಿಮೆ ಆಗಿದೆ. ಬೆಳೆ ಹಾನಿ ಆದ ಪ್ರಮಾಣ ಎಷ್ಟು ಎಂಬುದನ್ನು ಮಾರುಕಟ್ಟೆಗಳಲ್ಲಿ ಆವಕವಾದ ಅಡಕೆ ಆಧರಿಸಿ ಮಾಹಿತಿ ಪಡೆದಿದ್ದೆವು. ಆದರೆ, ಮಾರುಕಟ್ಟೆಗೆ ಜಿಲ್ಲೆಯ ಹೊರತಾಗಿ ಬೇರೆ ಕಡೆಯಿಂದ ಅಡಕೆ ಆಗಮಿಸುವ ಸಾಧ್ಯತೆ ಇದೆ. ಅಲ್ಲದೇ ಕಳೆದ ವರ್ಷದ ಅಡಕೆಯನ್ನೂ ಸಹ ರೈತರು ದಾಸ್ತಾನಿಟ್ಟುಕೊಂಡು ಮಾರುಕಟ್ಟೆಗೆ ತರುವ ಕಾರಣ ಈ ಮಾರ್ಗವನ್ನು ಕೈ ಬಿಟ್ಟಿದ್ದೇವೆ. ಇದರ ಬದಲು ಪ್ರತಿ ರೈತರಿಂದಲೂ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದೇವೆ. ಶೀಘ್ರವೇ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು.