'ರಾಕಿ ಭಾಯ್' ಮನೆಗೆ ಲಗ್ನಪತ್ರಿಕೆ ಹಿಡಿದು ಹೋದ ನಟ ಚಿಕ್ಕಣ್ಣ; ಯಶ್ - ರಾಧಿಕಾ ಪಂಡಿತ್‌ಗೆ ತಲುಪಿತು ಮದುವೆ ಆಹ್ವಾನ
ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ಮತ್ತು ಪಾವನಾ ಅವರ ಮದುವೆಯನ್ನು ಆಗಸ್ಟ್ 29 ಮತ್ತು 30ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಹಿರಿಯರು ನಿಶ್ಚಯಿಸಿದ್ದಾರೆ. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು 'ರಾಕಿಂಗ್ ಸ್ಟಾರ್' ಯಶ್-ರಾಧಿಕಾ ದಂಪತಿಯನ್ನು ಖುದ್ದಾಗಿ ಭೇಟಿಯಾಗಿ ತಲುಪಿಸಿ ಹಾರೈಕೆ ಪಡೆದಿದ್ದಾರೆ ಚಿಕ್ಕಣ್ಣ.
-
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಚಿಕ್ಕಣ್ಣ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಚಿತ್ರರಂಗದ ಮಿತ್ರರಿಗೆ ಹಾಗೂ ರಾಜಕೀಯ ಗಣ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ 'ರಾಕಿಂಗ್ ಸ್ಟಾರ್' ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮದುವೆಯ ಲಗ್ನಪತ್ರಿಕೆಯನ್ನು ನೀಡಿದ್ದಾರೆ.
ಚಿತ್ರರಂಗಕ್ಕೆ ಬಂದು ಸ್ವಪ್ರಯತ್ನದಿಂದ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಚಿಕ್ಕಣ್ಣ, ಯಶ್ ಜೊತೆ ‘ಕಿರಾತಕ’, ‘ರಾಜಾಹುಲಿ’, ‘ಮಾಸ್ಟರ್ ಪೀಸ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಳ್ಳಿಪರದೆಯ ಮೇಲಿದ್ದ ಇವರ ಜೋಡಿಯ ಬಾಂಧವ್ಯ ಹಾಗೂ ಆಪ್ತ ಸ್ನೇಹ ಈಗಲೂ ಮುಂದುವರಿದಿದ್ದು, ಚಿಕ್ಕಣ್ಣ ವೈಯಕ್ತಿಕವಾಗಿ ತೆರಳಿ ʻರಾಕಿಂಗ್ ಸ್ಟಾರ್ʼ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ.
Chikkanna Marriage: ಕಾಮಿಡಿ ಕಿಂಗ್ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್! ಇಲ್ಲಿದೆ ಡಿಟೇಲ್ಸ್
ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್ʼ ರಿಲೀಸ್ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ. ಹಾಗಾಗಿ, ಯಶ್ ಈ ಮದುವೆಗೆ ಹೋಗುತ್ತಾರಾ ಎಂಬ ಪ್ರಶ್ನೆ ಕೇಳಿಬಂದಿದೆ.
ಶ್ರೀರಂಗಪಟ್ಟಣದ ಹುಡುಗಿ ಪಾವನಾ ಜೊತೆ ವಿವಾಹ
ಚಿಕ್ಕಣ್ಣ ಅವರ ಕೈಹಿಡಿಯಲಿರುವ ಹುಡುಗಿಯ ಹೆಸರು ಪಾವನಾ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರಾಗಿದ್ದು, ಇದು ಸಂಪೂರ್ಣವಾಗಿ ಹಿರಿಯರು ನಿಶ್ಚಯಿಸಿರುವ ಮದುವೆಯಾಗಿದೆ. ಈ ಹಿಂದೆಯೇ ಕುಟುಂಬಸ್ಥರು ಸರಳವಾಗಿ ನಿಶ್ಚಯ ಕಾರ್ಯಕ್ರಮ ಹಾಗೂ ಹೂ ಮುಡಿಸುವ ಶಾಸ್ತ್ರವನ್ನು ಪೂರ್ಣಗೊಳಿಸಿದ್ದರು.
ಹಿಂದೆ ನಾನಾ ಟಾಕ್ ಶೋಗಳು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಮದುವೆಯ ಪ್ರಸ್ತಾಪ ಬಂದಾಗಲೆಲ್ಲಾ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದ ಚಿಕ್ಕಣ್ಣ, ಕೊನೆಗೂ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಸಂತಸ ಮೂಡಿಸಿದೆ.
ಮೈಸೂರಿನಲ್ಲಿ ಅದ್ದೂರಿ ಕಲ್ಯಾಣ; ಗಣ್ಯರಿಗೆ ಆಹ್ವಾನ
ಚಿಕ್ಕಣ್ಣ ಅವರ ವಿವಾಹ ಮಹೋತ್ಸವವು ಆಗಸ್ಟ್ 29 ಮತ್ತು 30 ರಂದು ಸಾಂಸ್ಕೃತಿಕ ನಗರಿ ಮೈಸೂರಿನ 'ಸ್ಪೆಕ್ಟ್ರಮ್ ಹಾಲ್'ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಮದುವೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರು ಸಿದ್ಧತೆಯಲ್ಲಿ ತೊಡಗಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಜಮೀರ್ ಅಹಮದ್ ಖಾನ್, 'ನವರಸ ನಾಯಕ' ಜಗ್ಗೇಶ್ ಸೇರಿದಂತೆ ನಾಡಿನ ಪ್ರಮುಖ ರಾಜಕೀಯ ಧುರೀಣರು ಹಾಗೂ ಸಿನಿಮಾರಂಗದ ಅನೇಕ ಸೆಲೆಬ್ರಿಟಿಗಳನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ನವಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.