ʻತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು, ಅಡುಗೆ ಮಾಡೋದು ಗೊತ್ತಿರಬೇಕುʼ; ನಟಿ ಸಾಯಿ ಪಲ್ಲವಿ ಮದುವೆಯಾಗೋ ಹುಡುಗನಿಗೆ ಈ ಗುಣಗಳು ಇರಲೇಬೇಕು!
Sai Pallavi Husband Qualities: ‘ಕೌನ್ ಬನೇಗಾ ಕರೋಡ್ಪತಿ 18’ ಶೋನಲ್ಲಿ ಅಮಿತಾಭ್ ಬಚ್ಚನ್ ಎದುರು ಖ್ಯಾತ ನಟಿ ಸಾಯಿ ಪಲ್ಲವಿ ಅವರು ತಾವು ಮದುವೆ ಆಗುವ ಹುಡುಗನಿಗೆ ಏನೆಲ್ಲಾ ಗುಣಗಳು ಇರಬೇಕು ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸ್ವಾರ್ಥವಿಲ್ಲದ, ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಮನಸ್ಸು ಇರುವ ಹುಡುಗ ತಮಗೆ ಜೀವನ ಸಂಗಾತಿಯಾಗಬೇಕು ಎಂದು ಹೇಳಿದ್ದಾರೆ.
-
ನಟಿ ಸಾಯಿ ಪಲ್ಲವಿ ಅವರು ತಾವು ಮದುವೆಯಾಗುವ ಹುಡುಗನಲ್ಲಿ ಏನೆಲ್ಲಾ ಗುಣಗಳಿರಬೇಕು ಎಂಬ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ಕೌನ್ ಬನೇಗಾ ಕರೋಡ್ಪತಿ 18' ರಿಯಾಲಿಟಿ ಶೋನ ವಿಶೇಷ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೇಳೆ, ನಿರೂಪಕ ಅಮಿತಾಭ್ ಬಚ್ಚನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ, ತಮ್ಮ ಜೀವನ ಸಂಗಾತಿ ಮೇಲಿನ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ.
ತಪ್ಪುಗಳನ್ನು ತಿದ್ದಿಕೊಳ್ಳುವ ಗುಣ ಇರಬೇಕು
"ನನ್ನನ್ನು ಮದುವೆಯಾಗುವ ವ್ಯಕ್ತಿ ಮೊದಲನೆಯದಾಗಿ ಒಬ್ಬ ಒಳ್ಳೆಯ ಮನುಷ್ಯನಾಗಿರಬೇಕು. ಸ್ವಾರ್ಥಿಯಾಗಿ ಯೋಚಿಸದೆ, ತನ್ನ ನಡವಳಿಕೆಯನ್ನು ತಾನೇ ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಆತನಲ್ಲಿರಬೇಕು. ಮನುಷ್ಯ ಎಂದಮೇಲೆ ತಪ್ಪುಗಳನ್ನು ಮಾಡೋದು ಸಹಜ, ಆದರೆ ಆ ತಪ್ಪನ್ನು ಸರಿಪಡಿಸಿಕೊಳ್ಳುವ ವಿಶಾಲ ಮನೋಭಾವವನ್ನು ಆತ ಹೊಂದಿರಬೇಕು. ಯಾವುದೇ ಕಾರಣಕ್ಕೂ ತನ್ನ ತಪ್ಪಿಗೆ ಬೇರೆಯವರನ್ನು ದೂಷಿಸುವ, ಹೊಣೆ ಮಾಡುವ ಸ್ವಭಾವ ಇರಬಾರದು" ಎಂದು ಸಾಯಿ ಪಲ್ಲವಿ ನಗುತ್ತಾ ಹೇಳಿಕೊಂಡಿದ್ದಾರೆ.
Sai Pallavi: ಪ್ರಭಾಸ್ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?
ವೇಳೆ ತಮಾಷೆಯ ಧಾಟಿಯಲ್ಲಿ ಮತ್ತೊಂದು ಆಸೆಯನ್ನೂ ವ್ಯಕ್ತಪಡಿಸಿದ ಅವರು, "ಒಳ್ಳೆಯ ವ್ಯಕ್ತಿತ್ವದ ಜೊತೆಗೆ ಆತನಿಗೆ ಅಡುಗೆ ಮಾಡಲು ಕೂಡ ಬಂದರೆ ಇನ್ನೂ ಚೆನ್ನಾಗಿರುತ್ತದೆ" ಎಂದು ಹೇಳಿ ಕಾರ್ಯಕ್ರಮದಲ್ಲಿ ಇದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಡಾಕ್ಟರ್ ಓದಿ, ಆಕ್ಟರ್ ಆಗಿದ್ದೇಕೆ?
ಇದೇ ಸಂಚಿಕೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಮ್ಮ ಜರ್ನಿಯನ್ನು ಸಾಯಿ ಪಲ್ಲವಿ ಮೆಲುಕು ಹಾಕಿದರು. "ವೈದ್ಯಕೀಯ ರಂಗದಿಂದ ನಟನೆಗೆ ಬಂದಿದ್ದು ಹೇಗೆ?" ಎಂದು ಅಮಿತಾಭ್ ಕೇಳಿದಾಗ, "ನೀನು ನಟಿಯಾಗಬೇಕು ಎಂದೇ ದೇವರು ಬರೆದಿದ್ದ.." ಎಂದು ಸಾಯಿ ಪಲ್ಲವಿ ಉತ್ತರಿಸಿದರು. ಇದಕ್ಕೆ ತಕ್ಷಣವೇ ಕಾಲೆಳೆದ ನಟ ರಣಬೀರ್ ಕಪೂರ್, "ಅದು ದೇವರು ಬರೆದ ಪ್ರಿಸ್ಕ್ರಿಪ್ಷನ್ ಸರ್!" ಎಂದು ಚಟಾಕಿ ಹಾರಿಸಿದ್ದು ಇಡೀ ವೇದಿಕೆಯಲ್ಲಿ ನಗುವಿನ ಅಲೆ ಎಬ್ಬಿಸಿತು.
ನವೆಂಬರ್ 5ರಂದು ರಾಮಾಯಣ ತೆರೆಗೆ
ಸದ್ಯ 'ರಾಮಾಯಣ: ಪಾರ್ಟ್ 1' ಚಿತ್ರದ ಪ್ರಚಾರದಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಸೀತೆಮಾತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದರೆ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಲಿದ್ದಾರೆ. ರವಿ ದುಬೆ ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ಅರುಣ್ ಗೋವಿಲ್ ದಶರಥನಾಗಿ ನಟಿಸಿರುವ ಈ ಚಿತ್ರವು ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬಂದಿದ್ದು, ನವೆಂಬರ್ 5 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.