ಸ್ಯಾಂಡಲ್ವುಡ್ಗೆ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಎಂಟ್ರಿ; ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ಗಾಯನ
Singer Sivasri Skandaprasad: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ನಟ ರಮೇಶ್ ಅರವಿಂದ್ ಅಭಿನಯದ ‘ದೈಜಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಈ ಹಾರರ್-ಸಸ್ಪೆನ್ಸ್ ಚಿತ್ರದಲ್ಲಿ ಅವರು ಜುಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಅದ್ಭುತ ಶಾಸ್ತ್ರೀಯ ಗೀತೆಯನ್ನು ಹಾಡಿದ್ದಾರೆ.
-
ನಟ ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರ ‘ದೈಜಿ’ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಚಿತ್ರದ ಕಥಾವಸ್ತು ಮೆಚ್ಚಿ ಹಾಡಲು ಒಪ್ಪಿಕೊಂಡಿರುವ ಅವರು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಶಾಸ್ತ್ರೀಯ ಶೈಲಿಯ ವಿಶೇಷ ಗೀತೆಯೊಂದಕ್ಕೆ ಧ್ವನಿ ನೀಡಿದ್ದು, ಇದು ಸಿನಿಮಾಗೆ ವಿಶೇಷ ಮೆರುಗು ತಂದುಕೊಟ್ಟಿದೆ.
ರವಿ ಕಶ್ಯಪ್ ಹಾಗೂ ಸುಧಾ ಕಶ್ಯಪ್ ನಿರ್ಮಾಣದ ಈ ಚಿತ್ರಕ್ಕೆ ನಿರ್ಮಾಪಕ ರವಿ ಕಶ್ಯಪ್ ಅವರೇ ಹಂಚಿಕೊಂಡ ನೈಜ ಘಟನೆಗಳನ್ನು ಆಧರಿಸಿ ಕಥೆ ಸಿದ್ಧಪಡಿಸಲಾಗಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಹಾಗೂ ಅಭಿಜಿತ್ ವೈ.ಆರ್. ಜಂಟಿಯಾಗಿ ಚಿತ್ರಕಥೆ ಹೆಣೆದಿದ್ದು, ವಿಭಿನ್ನ ಹಾರರ್ ಮತ್ತು ಸಸ್ಪೆನ್ಸ್ ನಿರೂಪಣೆಯನ್ನು ಸಿನಿಮಾ ಒಳಗೊಂಡಿದೆ. ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ದಿಗಂತ್, ಅವಿನಾಶ್, ಬಿ.ಎಂ. ಗಿರಿರಾಜ್ ಹಾಗೂ ವಿದೇಶಿ ಕಲಾವಿದರಾದ ಅಲೆಕ್ಸಾಂಡರ್ ಟೈಲರ್ ಮತ್ತು ಸ್ಯಾಂಡಿ ಹಿಗಿನ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಾಗರಿಕ ಪ್ರಜ್ಞೆಯ ಕೊರತೆ; ರೈಲಿನಲ್ಲಿ ಸಹ ಪ್ರಯಾಣಿಕರ ರಂಪಾಟದ ಕಹಿ ಅನುಭವ ಬಿಚ್ಚಿಟ್ಟ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್
ʻದೈಜಿʼ ಚಿತ್ರಕ್ಕೆ ʻಕಾಂತಾರʼ ಅಬಿ ವಿ. ಎಂಟ್ರಿ
ಈ ಚಿತ್ರದ ಬಹುಮುಖ್ಯ ಆಕರ್ಷಣೆ ಸಂಗೀತ ವಿಭಾಗವಾಗಿದ್ದು, ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಮತ್ತು ಸಚಿನ್ ಬಸ್ರೂರ್ ಅವರಂತಹ ಮೂವರು ಪ್ರತಿಭಾವಂತ ಸಂಗೀತ ನಿರ್ದೇಶಕರು ಸಾಥ್ ನೀಡಿದ್ದಾರೆ. ಹಾಲಿವುಡ್ ಹಾರರ್ ಸಿನಿಮಾಗಳ ಮಾದರಿಯಲ್ಲಿ ಸೌಂಡ್ ಟ್ರೀಟ್ಮೆಂಟ್ ಅಳವಡಿಸಿಕೊಂಡಿರುವ ಜುಡಾ ಸ್ಯಾಂಡಿ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಸೌಂಡ್ ಎಕ್ಸ್ಪೀರಿಯನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇವರ ಸಂಯೋಜನೆಯ ಇಂಗ್ಲಿಷ್ ಹಾಡಿನ ಮೂಲಕ ನಿರ್ಮಾಪಕರ ಪುತ್ರಿ, ವೆಸ್ಟರ್ನ್ ಕ್ಲಾಸಿಕಲ್ ಗಾಯಕಿ ವಿಭಾ ಕಶ್ಯಪ್ ಚಿತ್ರರಂಗ ಪ್ರವೇಶಿಸಿದ್ದಾರೆ. ಇದರ ಜೊತೆಗೆ ‘ಕಾಂತಾರ’ ಖ್ಯಾತಿಯ ಅಬಿ ವಿ. ಧ್ವನಿ ಕೂಡ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಹಾಡು ಬರೆದ ʻಡಾಲಿʼ ಧನಂಜಯ್
ಚಿತ್ರದ ಮತ್ತೊಂದು ಹೈಲೈಟ್ ಎಂದರೆ ‘ಆಕ್ಸಿಡೆಂಟ್’ ಚಿತ್ರದ ಜನಪ್ರಿಯ ‘ಬಾ ಮಳೆಯೇ ಬಾ’ ಹಾಡಿನ ನಂತರ ರಮೇಶ್ ಅರವಿಂದ್ ಹಾಗೂ ಖ್ಯಾತ ಗಾಯಕ ಸೋನು ನಿಗಮ್ ಕಾಂಬಿನೇಷನ್ ಮತ್ತೆ ಈ ಚಿತ್ರದ ಮೂಲಕ ಮರುಕಳಿಸಿದೆ. ನಟ ʻಡಾಲಿʼ ಧನಂಜಯ್ ಸಾಹಿತ್ಯ ರಚಿಸಿರುವ 2 ಹಾಡುಗಳಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಅದರಲ್ಲಿ ಒಂದು ಗೀತೆಯನ್ನು ಸೋನು ನಿಗಮ್ ಹಾಡಿದ್ದಾರೆ. ಮತ್ತೊಂದು ಹಾಡಿಗೆ ಸಚಿನ್ ಬಸ್ರೂರ್ ಅವರೇ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ.
ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಮಾಡಿದ್ದು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಸದ್ಯ ಅಂತಿಮ ಹಂತದ ಸೌಂಡ್ ಮಿಕ್ಸಿಂಗ್ ಹಾಗೂ ವಿಎಫ್ಎಕ್ಸ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ‘ದೈಜಿ’ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.