ಶಾರುಖ್ ಖಾನ್‌ಗೆ ʻಬಾಯಿ ಮುಚ್ಕೊಂಡು ಸುಮ್ನಿರುʼ ಅಂತ ಸಿಗ್ನಲ್ ಕೊಟ್ರಾ ಅನಂತ್ ಅಂಬಾನಿ? ಸದ್ಗುರು ಎದುರು ಆಗಿದ್ದೇನು?
ಸಾರ್ವಜನಿಕ ಸಮಾರಂಭದಲ್ಲಿ ಶಾರುಖ್ ಖಾನ್ ಮತ್ತು ಉದ್ಯಮಿ ಅನಂತ್ ಅಂಬಾನಿ ಇರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಮುಂಬೈನ ‘ಗ್ಲೋಬಲ್ ಪೀಸ್ ಹಾನರ್ಸ್ 2026’ ಕಾರ್ಯಕ್ರಮದಲ್ಲಿ ಸದ್ಗುರು ಅವರೊಂದಿಗೆ ಮಾತನಾಡುತ್ತಿದ್ದ ಅನಂತ್, ಮಧ್ಯೆ ಮಾತನಾಡಲು ಬಂದ ಶಾರುಖ್‌ಗೆ ಬೆರಳು ತೋರಿಸಿ ಸುಮ್ಮನಿರುವಂತೆ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.
-
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತು ಖ್ಯಾತ ಉದ್ಯಮಿ ಅನಂತ್ ಅಂಬಾನಿ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ 'ಗ್ಲೋಬಲ್ ಪೀಸ್ ಹಾನರ್ಸ್ 2026' ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರು ಶಾರುಖ್ ಖಾನ್ ಅವರಿಗೆ ಬೆರಳು ತೋರಿಸಿ 'ಸುಮ್ಮನಿರು' ಎಂಬಂತೆ ಸನ್ನೆ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಡಿಯೋ ಇಲ್ಲದ ಈ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದ್ದು, ಅನಂತ್ ಅಂಬಾನಿ ಅವರ ವರ್ತನೆ ಹಾಗೂ ಶಾರುಖ್ ಖಾನ್ ಅವರ ರಿಯಾಕ್ಷನ್ ಕುರಿತು ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ.
'ಗ್ಲೋಬಲ್ ಪೀಸ್ ಹಾನರ್ಸ್ 2026' ಕಾರ್ಯಕ್ರಮ
ನವೆಂಬರ್ 21ರಂದು ಮುಂಬೈನ ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಮುಂಭಾಗದಲ್ಲಿ ಅಮೃತಾ ಫಡ್ನವಿಸ್ ಅವರ 'ದಿವ್ಯಜ್ ಫೌಂಡೇಶನ್' ವತಿಯಿಂದ 'ಗ್ಲೋಬಲ್ ಪೀಸ್ ಹಾನರ್ಸ್ 2026' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 26/11 ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರು, ವೀರ ಯೋಧರು, ಭದ್ರತಾ ಸಿಬ್ಬಂದಿ ಹಾಗೂ ಸಂಕಷ್ಟದ ಸಮಯದಲ್ಲಿ ಧೈರ್ಯ ಮೆರೆದ ಸಾಮಾನ್ಯ ಹೀರೋಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಿನಿಮಾ, ಕ್ರೀಡೆ, ಉದ್ಯಮ, ಆಧ್ಯಾತ್ಮಿಕ ಮತ್ತು ರಾಜಕೀಯ ಕ್ಷೇತ್ರದ ದಿಗ್ಗಜರು ಒಂದೇ ವೇದಿಕೆಯಲ್ಲಿ ಸೇರಿದ್ದ ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ವಿಕ್ರಾಂತ್ ಮಸ್ಸೆ, ಉದ್ಯಮಿ ಅನಂತ್ ಅಂಬಾನಿ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಭಾಗವಹಿಸಿದ್ದರು.
ಸುಮ್ಮನಿರುವಂತೆ ಸೂಚಿಸಿದ್ರಾ ಅನಂತ್?
ವೈರಲ್ ಆಗಿರುವ ಈ ವಿಡಿಯೋ ಕ್ಲಿಪ್‌ನಲ್ಲಿ, ವೇದಿಕೆಯ ಮೇಲೆ ಅನಂತ್ ಅಂಬಾನಿ ಅವರು ಸದ್ಗುರು ಅವರೊಂದಿಗೆ ಏನೋ ಗಂಭೀರವಾಗಿ ಅಥವಾ ತಮಾಷೆಯಾಗಿ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪಕ್ಕದಲ್ಲೇ ಇದ್ದ ಶಾರುಖ್ ಖಾನ್ ಅವರು ಆ ಮಾತುಕತೆಯಲ್ಲಿ ಭಾಗಿಯಾಗಲು ಮುಂದಾಗಿ ಏನೋ ಹೇಳಲು ಪ್ರಯತ್ನಿಸುತ್ತಾರೆ. ಆದರೆ, ಶಾರುಖ್ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಅನಂತ್ ಅಂಬಾನಿ, ತಮ್ಮ ಕೈಬೆರಳನ್ನು ತೋರಿಸಿ ಮಾತು ನಿಲ್ಲಿಸುವಂತೆ ಸನ್ನೆ ಮಾಡುತ್ತಾರೆ. ಅನಂತ್ ಅವರ ಈ ಹಠಾತ್ ನಡೆಗೆ ಶಾರುಖ್ ಖಾನ್ ಕ್ಷಣಕಾಲ ಮುಜುಗರಕ್ಕೊಳಗಾದಂತೆ ಕಂಡುಬಂದರೂ, ತಕ್ಷಣವೇ ಸಾವರಿಸಿಕೊಂಡು ತಮ್ಮ ಭಾವನೆಯನ್ನು ಬದಲಾಯಿಸಿಕೊಂಡು ವೇದಿಕೆಯಲ್ಲಿದ್ದ ಇತರ ಅತಿಥಿಗಳತ್ತ ತಿರುಗಿ ಮಾತನಾಡಲು ಆರಂಭಿಸುತ್ತಾರೆ.
ಶಾರುಖ್‌ಗೆ ಹಾಗೇ ಹೇಳಬಾರದಿತ್ತು!
"ಹಣದಿಂದ ಐಷಾರಾಮಿ ಬದುಕನ್ನು ಖರೀದಿಸಬಹುದು, ಆದರೆ ವಿನಯ ಮತ್ತು ಘನತೆಯನ್ನಲ್ಲ" ಎಂಬ ಮಾತುಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ವರ್ಗ ಅನಂತ್ ಅಂಬಾನಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದರೆ, ಮತ್ತೊಂದು ವರ್ಗ ಬಾಲಿವುಡ್ ನಟರ ಅಸಹಾಯಕತೆಯನ್ನು ವ್ಯಂಗ್ಯವಾಡುತ್ತಿದೆ.
"ಅನಂತ್ ಅವರು ಶಾರುಖ್ ಖಾನ್ ಅವರಿಗೆ ಆ ರೀತಿ ಬೆರಳು ತೋರಿಸಿ ಮಾತನಾಡಬಾರದಿತ್ತು. ಪರಿಸ್ಥಿತಿ ಏನೇ ಇರಲಿ, ವಯಸ್ಸು ಮತ್ತು ಸಾಧನೆಗೆ ತಕ್ಕ ಗೌರವ ನೀಡಬೇಕು. ಶಾರುಖ್ ಯಾವುದೇ ದೊಡ್ಡ ಉದ್ಯಮ ಸಾಮ್ರಾಜ್ಯದ ಬೆಂಬಲವಿಲ್ಲದೆ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ಬೆಳೆದವರು ಎಂಬುದನ್ನು ಮರೆಯಬಾರದು" ಎಂದು ಅಭಿಮಾನಿಯೊಬ್ಬರು ಕಿಡಿಕಾರಿದ್ದಾರೆ.
ಇದು ತಮಾಷೆ ಕೂಡ ಇರಬಹುದು!
ಮತ್ತೊಂದೆಡೆ, ಇನ್ನೂ ಕೆಲವು ನೆಟ್ಟಿಗರು ಶಾರುಖ್ ಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದು, "ಬಾಲಿವುಡ್ ಸಂಪೂರ್ಣವಾಗಿ ಅಂಬಾನಿ ಕುಟುಂಬದ ಕೈಯಲ್ಲಿದೆ, ನಿಜವಾದ ಹಣ ಮತ್ತು ಅಧಿಕಾರದ ಮುಂದೆ ಈ ಸ್ಟಾರ್‌ಗಳೆಲ್ಲಾ ಏನೂ ಅಲ್ಲ" ಎಂದು ಬರೆದುಕೊಂಡಿದ್ದಾರೆ. "ಕಿಂಗ್ ಅಥವಾ ವೇಟರ್...? ಪಾಪ ಅವರಿಗೆ ಬೈದು ಸುಮ್ಮನಾಗಿಸಿದರು", "ಏ ನೀನು ಸುಮ್ಮನಿರು ಅಂತಲೇ ಅನಂತ್ ಹೇಳಿರಬೇಕು" ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಆದರೆ, ವಿಡಿಯೋದಲ್ಲಿ ಆಡಿಯೋ ಇಲ್ಲದ ಕಾರಣ ಅವರ ನಡುವೆ ನಿಜವಾಗಿಯೂ ನಡೆದ ಸಂಭಾಷಣೆ ಏನು ಎಂಬುದು ಸ್ಪಷ್ಟವಾಗಿಲ್ಲ. ಅಂಬಾನಿ ಕುಟುಂಬದೊಂದಿಗೆ ಶಾರುಖ್ ಅತ್ಯಂತ ಆತ್ಮೀಯ ಸಂಬಂಧ ಹೊಂದಿರುವುದರಿಂದ ಇದೊಂದು ಸ್ನೇಹಪರ ತಮಾಷೆಯ ಸನ್ನೆಯೂ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.