ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ರಾಮಾಯಣ’ ಚಿತ್ರಕ್ಕಾಗಿ 10-12 ದೊಡ್ಡ ಸಿನಿಮಾಗಳನ್ನು ಕೈಬಿಟ್ಟಿದ್ದ ಎ.ಆರ್‌. ರೆಹಮಾನ್: ʻಆ ಬಗ್ಗೆ ನಂಗೆ ಹೆಮ್ಮೆ ಇದೆʼ ಎಂದ ಸಂಗೀತ ಮಾಂತ್ರಿಕ!

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಕ್ಕೆ ಸಂಗೀತ ನೀಡಲು ಬರೋಬ್ಬರಿ 10-12 ದೊಡ್ಡ ಸಿನಿಮಾಗಳನ್ನು ರಿಜೆಕ್ಟ್‌ ಮಾಡಿದ್ದೆ ಎಂದು ಎ ಆರ್‌ ರೆಹಮಾನ್‌ ತಿಳಿಸಿದ್ದಾರೆ. ಗೋವಾ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಹ್ಯಾನ್ಸ್ ಜಿಮ್ಮರ್ ಜೊತೆಗೂಡಿ ಮೂರು ವರ್ಷ ಈ ಚಿತ್ರಕ್ಕಾಗಿ ಶ್ರಮಿಸಿರುವುದಾಗಿ ಹೇಳಿದರು.

ʻರಾಮಾಯಣʼಕ್ಕಾಗಿ 10-12 ದೊಡ್ಡ ಸಿನಿಮಾಗಳನ್ನು ಕೈಬಿಟ್ಟಿದ್ದ A.R. Rahman

-

Avinash GR
Avinash GR Nov 23, 2026 1:34 PM

ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಸಂಗೀತ ಸಂಯೋಜಿಸಲು ತಾವು ಬರೋಬ್ಬರಿ 10 ರಿಂದ 12 ದೊಡ್ಡ ಸಿನಿಮಾಗಳನ್ನು ನಿರಾಕರಿಸಿದ್ದಾಗಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಬಹಿರಂಗಪಡಿಸಿದ್ದಾರೆ. ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರೊಂದಿಗೆ ಕೈಜೋಡಿಸಿ, ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಬೃಹತ್ ಚಿತ್ರಕ್ಕಾಗಿ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಸಮಯವನ್ನು ಮೀಸಲಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ಭಾನುವಾರ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರೆಹಮಾನ್, ಈ ಸಿನಿಮಾದ ಸಂಗೀತದ ಹಿಂದಿನ ಸುದೀರ್ಘ ಪರಿಶ್ರಮ ಹಾಗೂ ತೆರೆಮರೆಯ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ರಾಮಾಯಣ' ಚಿತ್ರದ ಹಾಡುಗಳಿಗೆ ಕೇಳುಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಜೋಡಿಯ ಸಂಗೀತ ನಿರೀಕ್ಷೆಯ ಮಟ್ಟ ತಲುಪಿದೆಯೇ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರೆಹಮಾನ್ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

Ramayana Movie: ಸ್ವೀಡನ್‌ನಲ್ಲೂ ಸದ್ದು ಮಾಡಿದ 'ರಾಮಾಯಣ': ಅನುಪಮ್ ಖೇರ್‌ ಭಾವುಕ ಪೋಸ್ಟ್‌!

ಸಿನಿಮಾಗಳನ್ನು ರಿಜೆಕ್ಟ್‌ ಮಾಡಿದ್ದಕ್ಕೆ ಹೆಮ್ಮ ಇದೆ

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಪ್ರಮುಖ ತಾರಾಗಣದಲ್ಲಿರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ನಡುವೆ ಚಿತ್ರದ ಸಂಗೀತ ಪ್ರಯಾಣದ ಕುರಿತು ಮಾತನಾಡಿದ ರೆಹಮಾನ್, "ಈ ಚಿತ್ರಕ್ಕೆ ಸಂಗೀತ ನೀಡುವ ಪ್ರಕ್ರಿಯೆ ನನ್ನ ಪಾಲಿಗೆ ಅತ್ಯಂತ ಸುಂದರವಾಗಿತ್ತು. ಕೇವಲ 'ರಾಮಾಯಣ'ದ ಮೂಡ್ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿಯೇ ಸಂಪೂರ್ಣವಾಗಿ ತಲ್ಲೀನರಾಗಿರಲು ನಾನು 10-12 ಸಿನಿಮಾಗಳನ್ನು ಕೈಬಿಟ್ಟೆ. ಹಲವು ಖ್ಯಾತ ನಿರ್ದೇಶಕರ ದೊಡ್ಡ ಪ್ರಾಜೆಕ್ಟ್‌ಗಳನ್ನು ನಿರಾಕರಿಸಿದೆ. ಆದರೆ, ಆ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ನಾನದನ್ನು ಆನಂದಿಸಿದ್ದೇನೆ" ಎಂದರು.

3 ವರ್ಷಗಳಿಂದ ರಾಮಾಯಣ ಚಿತ್ರಕ್ಕಾಗಿ ಕೆಲಸ

ತಮ್ಮ ಕೆಲಸದ ಶೈಲಿಯ ಬಗ್ಗೆಯೂ ವಿವರಿಸಿದ ರೆಹಮಾನ್, "ನನಗೆ ನಿಜವಾಗಿಯೂ ಮನಸ್ಸಿಗೆ ಹತ್ತಿರವಾಗುವ ಮತ್ತು ನಾನು ಆನಂದಿಸುವ ಪ್ರಾಜೆಕ್ಟ್‌ಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಅಂತಹ ಕೆಲಸಗಳು ನನ್ನೊಳಗಿನ ಕಲಾತ್ಮಕ ಪ್ರಜ್ಞೆಯನ್ನು ಪೋಷಿಸುತ್ತವೆ ಹಾಗೂ ನನ್ನ ಇಡೀ ತಂಡವೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸುತ್ತವೆ" ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ಚಿತ್ರದ ಸಂಗೀತ ಮತ್ತು ವಿವಿಧ ಥೀಮ್‌ಗಳ ಮೇಲೆ ನಿರಂತರವಾಗಿ ಕೆಲಸ ಮಾಡಲಾಗಿದ್ದು, ಅಂತಿಮ ರೂಪ ನೀಡುವ ಮುನ್ನ ಹಲವಾರು ಬಾರಿ ಚೆಕ್‌ ಮಾಡಿದ್ದೇವೆ ಎಂಬುದನ್ನು ರೆಹಮಾನ್‌ ತಿಳಿಸಿದರು.

ರಾವಣ ತಾಂಡವ ಹಾಡಿಗಾಗಿ 12-13 ಟ್ಯೂನ್

ಈ ಸುದೀರ್ಘ ಸಂಗೀತ ಸಂಯೋಜನೆಯ ಪ್ರಕ್ರಿಯೆಗೆ ‘ರಾವಣ ತಾಂಡವ’ ಹಾಡನ್ನು ಉದಾಹರಣೆಯಾಗಿ ನೀಡಿದ ರೆಹಮಾನ್, "ನಾವು ಈ ಚಿತ್ರದ ಸಂಗೀತಕ್ಕಾಗಿ 3 ವರ್ಷಗಳನ್ನು ತೆಗೆದುಕೊಂಡಿದ್ದೇವೆ. ಇದರಲ್ಲಿ ಕೆಲವು ಥೀಮ್‌ಗಳು ಮತ್ತು ಹಾಡುಗಳನ್ನು 12 ರಿಂದ 13 ಬಾರಿ ವಿಭಿನ್ನ ಆವೃತ್ತಿಗಳಲ್ಲಿ ಸಿದ್ಧಪಡಿಸಲಾಗಿತ್ತು. ವಿಶೇಷವಾಗಿ 'ರಾವಣ ತಾಂಡವ' ಹಾಡಿಗಾಗಿಯೇ ಬರೋಬ್ಬರಿ 12-13 ಆವೃತ್ತಿಗಳನ್ನು ಮಾಡಿದ್ದೆವು. ಅಂತಿಮವಾಗಿ ಎಲ್ಲರಿಗೂ ಇಷ್ಟವಾಗುವಂತಹ ಅತ್ಯುತ್ತಮ ಆವೃತ್ತಿಯನ್ನು ಆಯ್ಕೆ ಮಾಡಿ ಚಿತ್ರದಲ್ಲಿ ಬಳಸಿಕೊಂಡೆವು" ಎಂದು ಹಾಡಿನ ಹಿಂದಿನ ಶ್ರಮವನ್ನು ಬಿಚ್ಚಿಟ್ಟರು.‌