Padma Award: ಹಿರಿಯ ನಟ ಅನಂತ್ ನಾಗ್ ಸೇರಿ 68 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ
Ananta Nag: ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ (ಮೇ 27) 2ನೇ ಸುತ್ತಿನ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಸೇರಿದಂತೆ ವಿವಿಧ ವಿಭಾಗಗಳು ಮತ್ತು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ಕರ್ನಾಟಕದ ವಯಲಿನ್ ವಾದಕ ಎಲ್. ಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ, ಕರ್ನಾಟಕ ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲಾಯಿತು.



ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್, ಕೇಂದ್ರ ಸಚಿವರಾದ ಅಮಿತ್ ಶಾ, ಎಸ್.ಜೈಶಂಕರ್, ಪ್ರಹ್ಲಾದ್ ಜೋಶಿ, ಜಿತೇಂದ್ರ ಸಿಂಗ್, ಜಿ. ಕಿಶನ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳವಾರದ ಸಮಾರಂಭದಲ್ಲಿ 3 ಪದ್ಮ ವಿಭೂಷಣ, 9 ಪದ್ಮ ಭೂಷಣ ಮತ್ತು 56 ಪದ್ಮ ಶ್ರೀ ಪ್ರದಾನ ಮಾಡಲಾಯಿತು. ಈ ಬಾರಿ ಒಟ್ಟು 139 ಮಂದಿ ಪದ್ಮ ಪ್ರಶಸ್ತಿ ಘೋಷಿಸಲಾಗಿತ್ತು. ಇದನ್ನು 2 ಹಂತಗಳಲ್ಲಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಏ. 28ರಂದು 71 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು.

ಇನ್ನು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ (ನಿವೃತ್ತ) ಜಗದೀಶ್ ಸಿಂಗ್ ಖೇಹರ್, ಜಾನಪದ ಗಾಯಕಿ ಶಾರದಾ ಸಿನ್ಹಾ ಪರ ಅವರ ಪುತ್ರ ಅಂಶುಮಾನ್ ಸಿನ್ಹಾ, ಡಾ. ಶೋಭನಾ ಚಂದ್ರಕುಮಾರ್, ಕುಮುದಿನಿ ರಜನಿಕಾಂತ್ ಲಖಿಯಾ, ತೆಲುಗು ನಟ ನಂದಮೂರಿ ಬಾಲಕೃಷ್ಣ,ಅರ್ಥ ಶಾಸ್ತ್ರಜ್ಞ ಬಿಬೇಕ್ ದೇಬ್ರಾಯ್ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.

2025ರ ಸಾಲಿಗೆ ರಾಷ್ಟ್ರಪತಿ 139 ಪದ್ಮ ಪ್ರಶಸ್ತಿಗಳನ್ನು ನೀಡಲು ಅನುಮೋದನೆ ನೀಡಿದ್ದರು. ಪಟ್ಟಿಯಲ್ಲಿ 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳಿದ್ದವು.

ಪ್ರಶಸ್ತಿ ಪುರಸ್ಕೃತರಲ್ಲಿ 23 ಮಂದಿ ಮಹಿಳೆಯರು, 10 ಮಂದಿ ವಿದೇಶಿಯರು/ಎನ್ಆರ್ಐ/ಪಿಐಒ/ಒಸಿಐ ಸಾಧಕರು ಸೇರಿದ್ದಾರೆ. ಜತೆಗೆ 13 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರಕಟಿಸಲಾಯಿತು.