ನಂದಗಡದ ವೀರಭೂಮಿ ಮ್ಯೂಸಿಯಂನಲ್ಲಿ ಸಂಗೊಳ್ಳಿ ರಾಯಣ್ಣನ ಶೌರ್ಯಗಾಥೆ; ತೆರೆಯ ಮೇಲೆ ಮರುಜೀವ ಪಡೆದ ಕ್ರಾಂತಿಕಾರಿ ಇತಿಹಾಸ
Sangolli Rayanna Museum: ಬೆಳಗಾವಿ ಜಿಲ್ಲೆಯ ನಂದಗಡದ ವೀರಭೂಮಿ ಮ್ಯೂಸಿಯಂನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನಾಧಾರಿತ ಚಿತ್ರಗಳ ಪ್ರದರ್ಶನ ಜನಮನ ಗೆದ್ದಿದೆ. ಅನಿಲ್ ಅಣ್ಣಯ್ಯ ನಿರ್ದೇಶನದ ಈ ದೃಶ್ಯಕಾವ್ಯಕ್ಕೆ ಸಂದರ್ಶಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
-
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಗುಡುಗಿ ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಅಪ್ರತಿಮ ತ್ಯಾಗ ಮತ್ತು ಸಾಹಸಗಾಥೆ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ 'ವೀರಭೂಮಿ ಮ್ಯೂಸಿಯಂ'ನಲ್ಲಿ ಅದ್ಭುತ ದೃಶ್ಯರೂಪ ಪಡೆದುಕೊಂಡಿದೆ.
ಸಿನಿಮಾ ನಿರ್ಮಾಪಕ, ಛಾಯಾಗ್ರಾಹಕ ಹಾಗೂ ಕಥೆಗಾರ ಅನಿಲ್ ಅಣ್ಣಯ್ಯ ನಿರ್ದೇಶನದ ಬಯೋಪಿಕ್ ಚಿತ್ರಗಳು ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿ ಪ್ರದರ್ಶನಗೊಳ್ಳುತ್ತಿವೆ. ಇತ್ತೀಚೆಗೆ 13 ಎಕರೆ ವಿಸ್ತೀರ್ಣದ ಈ ಪವಿತ್ರ ತಾಣಕ್ಕೆ ಭೇಟಿ ನೀಡಿದ ಅನಿಲ್ ಅಣ್ಣಯ್ಯ ಅವರು, ಒಬ್ಬ ಸಾಮಾನ್ಯ ವೀಕ್ಷಕನಂತೆ ನಿಂತು ತಮ್ಮ ನಿರ್ದೇಶನದ ಚಿತ್ರಗಳಿಗೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆಯನ್ನು ಕಣ್ಣಾರೆ ಕಂಡು ರೋಮಾಂಚನಗೊಂಡರು.
ಸುಂದರ ಶಿಲ್ಪಗಳು, ಪುರಾತನ ಕಲಾಕೃತಿಗಳು ಹಾಗೂ ಹಚ್ಚ ಹಸಿರಿನ ಪರಿಸರದ ನಡುವೆ ಕಂಗೊಳಿಸುತ್ತಿರುವ ಈ ಮ್ಯೂಸಿಯಂ ಪ್ರವಾಸಿಗರನ್ನು ನೇರವಾಗಿ ರಾಯಣ್ಣನ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಇಲ್ಲಿನ ಹೆರಿಟೇಜ್ ರಚನೆಯೊಳಗೆ ಅತ್ಯಾಧುನಿಕ ಡಿಜಿಟಲ್ ವಿಡಿಯೋ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ರಾಯಣ್ಣನ ಜೀವನದ ರೋಚಕ ಘಟನೆಗಳನ್ನು ಸಿನಿಮ್ಯಾಟಿಕ್ ಶೈಲಿಯಲ್ಲಿ ಮರುಸೃಷ್ಟಿಸಲಾಗಿದೆ.
ವಿಶೇಷವಾಗಿ ಸಂಪಗಾವಿಯ ಕಚೇರಿ ಹಾಗೂ ಸುರಪುರ ಅರಮನೆಯಂತಹ ಐತಿಹಾಸಿಕ ಸನ್ನಿವೇಶಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. 2026ರ ಜನವರಿ 19ರಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡ ಈ ಬೃಹತ್ ಸ್ಮಾರಕವು, ಇಂದು ನಾಡಿನ ಮೂಲೆ ಮೂಲೆಗಳಿಂದ ಬರುವ ಸಾವಿರಾರು ದೇಶಪ್ರೇಮಿಗಳಿಗೆ ಹಾಗೂ ಪ್ರವಾಸಿಗರಿಗೆ ಸ್ಪೂರ್ತಿಯ ತಾಣವಾಗಿ ರಾಯಣ್ಣನ ಇತಿಹಾಸವನ್ನು ಜೀವಂತವಾಗಿಡುತ್ತಿದೆ.
ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸಂಗೊಳ್ಳಿ ರಾಯಣ್ಣ
ಮ್ಯೂಸಿಯಂ ಸಿಬ್ಬಂದಿ ಹಾಗೂ ಸಿನಿಮಾ ವೀಕ್ಷಿಸಿ ಹೊರಬರುತ್ತಿದ್ದ ಸಾರ್ವಜನಿಕರೊಂದಿಗೆ ಅನಿಲ್ ಅಣ್ಣಯ್ಯ ನೇರ ಸಂವಾದ ನಡೆಸಿದರು. ಜನರ ಮೆಚ್ಚುಗೆಯಿಂದ ಭಾವುಕರಾದ ಅವರು, "ಕೆಲವು ಚಿತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ಆ ಜವಾಬ್ದಾರಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ರಾಯಣ್ಣನಂತಹ ಯುಗಪುರುಷನ ಕಥೆಯನ್ನು ತೆರೆಗೆ ತರುವುದು ಪ್ರತಿಯೊಬ್ಬ ಕನ್ನಡಿಗನ ಪರಂಪರೆಗೆ ಸಲ್ಲಿಸುವ ಗೌರವವಾಗಿತ್ತು.
ಇದಕ್ಕಾಗಿ ನೂರಾರು ಗಂಟೆಗಳ ಸಂಶೋಧನೆ, ನಟರ ತರಬೇತಿ ಹಾಗೂ ಆ ಕಾಲಘಟ್ಟವನ್ನು ಮರುಸೃಷ್ಟಿಸಲು ಹಗಲಿರುಳು ಶ್ರಮಿಸಿದ್ದೇವೆ. ಇಂದು ಪ್ರೇಕ್ಷಕರು ತೋರುತ್ತಿರುವ ಪ್ರೀತಿ ಮತ್ತು ಕಣ್ಣಂಚಿನ ಭಾವನೆಗಳನ್ನು ನೋಡಿ ಆ ಎಲ್ಲಾ ಶ್ರಮ ಸಾರ್ಥಕವೆನಿಸಿದೆ" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
'ಆನ್‌ಲೀಲಾ ಫಿಲ್ಮ್ಸ್' ಮತ್ತು 'ಆನ್‌ಲೀಲಾ ವಿಶುವಲ್ ಸೊಲ್ಯೂಷನ್ಸ್' ಮೂಲಕ ದಶಕಗಳ ತಮ್ಮ ಅನುಭವವನ್ನು ಧಾರೆ ಎರೆದು ಈ ಪ್ರಾಜೆಕ್ಟ್ ಸಾಕಾರಗೊಳಿಸಿರುವ ಅನಿಲ್ ಅಣ್ಣಯ್ಯ, ಈ ಕಾರ್ಯಕ್ಕೆ ಕೈಜೋಡಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಸಚಿವರು, ಗಣ್ಯರು, 'ಡಿಸೈನ್ ಕೋರ್' ಹಾಗೂ ಇಡೀ ತಾಂತ್ರಿಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೀರಭೂಮಿಯ ಈ ಯಶಸ್ಸು ತಮಗೆ ಹೊಸ ಉತ್ಸಾಹ ನೀಡಿದ್ದು, ಮುಂದಿನ ದಿನಗಳಲ್ಲಿ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುವ ಮ್ಯೂಸಿಯಂ ಸಿನಿಮಾಗಳು ಮತ್ತು ಪರಂಪರೆಯನ್ನು ಸಾರುವ 'ಲಿಗಸಿ ಫಿಲ್ಮ್ಸ್' ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಂದಗಡದ ಈ ಅದ್ಭುತ ಮ್ಯೂಸಿಯಂಗೆ ಭೇಟಿ ನೀಡಿ ಕ್ರಾಂತಿವೀರನ ನೈಜ ಇತಿಹಾಸವನ್ನು ಕಣ್ತುಂಬಿಕೊಳ್ಳುವಂತೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.