ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ವಿಮಾನ ಏರಿದ ಕಿರಣ್‌ ಶಾಸ್ತ್ರಿ; ʻಕಾಮನ್‌ ಮ್ಯಾನ್‌ʼ ಕ್ಯಾಂಪ್‌ನಿಂದ ದೊಡ್ಮನೆಗೆ ಬಂದ ಮೊದಲ ಸ್ಪರ್ಧಿ!

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಸಾಮಾನ್ಯ ವರ್ಗದ ಪ್ರತಿನಿಧಿಯಾಗಿ ಕಿರಣ್ ಶಾಸ್ತ್ರಿ ಒಂಬತ್ತನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳನ್ನು ಹಿಂದಿಕ್ಕಿ, ಎದುರಾಳಿಗಳ ಕುತಂತ್ರಗಳ ನಡುವೆಯೂ ಜನತೆಯ ಅತೀವ ಪ್ರೀತಿ ಮತ್ತು ಮತಗಳಿಂದ ಮುಖ್ಯ ಮನೆಗೆ ಆಯ್ಕೆಯಾಗಿದ್ದಾರೆ.

ಅಗ್ನಿಪರೀಕ್ಷೆ ಗೆದ್ದು ಬಿಗ್‌ ಬಾಸ್‌ಗೆ ಬಂದ ಕಾಮನ್ ಮ್ಯಾನ್ ಕಿರಣ್ ಶಾಸ್ತ್ರಿ

-

Avinash GR
Avinash GR Sep 6, 2026 10:26 PM

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ವೇದಿಕೆ ರಂಗೇರಿದ್ದು, ಸಾಮಾನ್ಯ ಜನರ ವಿಭಾಗದಿಂದ ಆಯ್ಕೆಯಾಗಿ ಬಂದಿದ್ದ ಕಿರಣ್ ಶಾಸ್ತ್ರಿ ಅಧಿಕೃತವಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಬಿಗ್‌ ಬಾಸ್‌ ಆರಂಭಕ್ಕೂ ಮುನ್ನ ಸಾಮಾನ್ಯ ಸ್ಪರ್ಧಿಗಳ ಆಯ್ಕೆಗಾಗಿ ನಡೆದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಲಕ್ಷಾಂತರ ಆಕಾಂಕ್ಷಿಗಳನ್ನು ಹಿಂದಿಕ್ಕಿ ಟಾಪ್ 10 ಹಂತ ತಲುಪಿದ್ದ ಕಿರಣ್, ಇದೀಗ ವೀಕ್ಷಕರ ಭರ್ಜರಿ ಮತಗಳ ಆಧಾರದ ಮೇಲೆ ಮೇನ್‌ ಮನೆಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದ ಕಿರಣ್

‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ಆರಂಭದಿಂದಲೂ ತಮ್ಮ ಚುರುಕಾದ ಮಾತುಗಾರಿಕೆಯಿಂದ ‘ಮಾತಿನ ಮಲ್ಲ’ ಎಂದೇ ಕರೆಸಿಕೊಂಡಿದ್ದ ಕಿರಣ್ ಶಾಸ್ತ್ರಿ, ಟಾಸ್ಕ್‌ ಮಾತ್ರವಲ್ಲದೆ ವಾದ-ವಿವಾದಗಳಲ್ಲೂ ಎದುರಾಳಿಗಳಿಗೆ ದಿಟ್ಟ ಟಕ್ಕರ್ ಕೊಟ್ಟು ಗಮನ ಸೆಳೆದಿದ್ದರು. ಕೈಯಲ್ಲಿ ಸದಾ ನಿಂಬೆಹಣ್ಣು ಹಿಡಿದುಕೊಂಡೇ ಟಾಸ್ಕ್ ಆಡುತ್ತಿದ್ದ ಇವರ ವಿಭಿನ್ನ ಶೈಲಿಗೆ ವೇದಿಕೆಯಲ್ಲಿ ‘ನಿಂಬೆ ಶಾಸ್ತ್ರಿ’ ಹಾಗೂ ‘ಕಾಯಿ ಶಾಸ್ತ್ರಿ’ ಎಂಬ ಅಡ್ಡಹೆಸರುಗಳೂ ಸಿಕ್ಕಿದ್ದವು. ತಮ್ಮದೇ ಆದ ತಂತ್ರಗಾರಿಕೆ ಮತ್ತು ಮನರಂಜನೆಯಿಂದ ವೀಕ್ಷಕರ ಮನಗೆದ್ದು, ಅಗ್ನಿಪರೀಕ್ಷೆಯಲ್ಲಿದ್ದ ಸ್ಪರ್ಧಿಗಳ ಪ್ರಬಲ ಸ್ಪರ್ಧೆಯ ನಡುವೆಯೂ ಶೋಗೆ ಕಾಲಿಡುವ ಅವಕಾಶ ಪಡೆದುಕೊಂಡಿದ್ದಾರೆ.

ನಂಬಿಕೆಯನ್ನೇ ಕಳೆದುಕೊಂಡಿದ್ದೆ

ಬಿಗ್‌ ಬಾಸ್‌ ಕನ್ನಡ 13ರ ಮನೆಗೆ ಪ್ರವೇಶ ಪಡೆದ ನಂತರ ಅತ್ಯಂತ ಭಾವುಕರಾಗಿ ಮಾತನಾಡಿದ ಕಿರಣ್ ಶಾಸ್ತ್ರಿ, "ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಒಂದು ಹಂತದಲ್ಲಿ ನಾನು ಸಂಪೂರ್ಣವಾಗಿ ನಂಬಿಕೆಯನ್ನೇ ಕಳೆದುಕೊಂಡಿದ್ದೆ. ಮನೆಯಲ್ಲಿದ್ದವರೆಲ್ಲರೂ ನನ್ನನ್ನು ಹೊರಗೆ ಕಳಿಸಲು ಸಿದ್ಧವಾಗಿದ್ದರು. ಆದರೆ ಪ್ರೇಕ್ಷಕರು ನನ್ನ ಕೈಹಿಡಿದಿದ್ದಾರೆ. ಇಲ್ಲಿಯ ತನಕ ನನ್ನನ್ನು ಕರೆತಂದಿದ್ದೀರಿ, ಇನ್ನು ಮುಂದೆಯೂ ನನ್ನ ಭವಿಷ್ಯ ಜನರ ಕೈಯಲ್ಲೇ ಇದೆ. ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯಿಂದ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕಿರಣ್ ಶಾಸ್ತ್ರಿ ಅವರ ಎಂಟ್ರಿಯಿಂದ ‘ಬಿಗ್ ಬಾಸ್ ಕನ್ನಡ 13’ರ ಮನೆಯಲ್ಲಿ ರಣತಂತ್ರಗಳು ಹಾಗೂ ಮನರಂಜನೆ ಮತ್ತಷ್ಟು ರಂಗೇರುವುದು ಖಚಿತವಾಗಿದೆ. ಇವರು 9ನೇ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ.