ಕಿರುತೆರೆಯಿಂದ ʻಬಿಗ್ ಬಾಸ್ʼ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್ ಎಂಟ್ರಿ: ನೆಗೆಟಿವ್ ರೋಲ್‌ಗೆ ಆಡಿಷನ್ ಕೊಟ್ಟು ನಾಯಕಿಯಾದ ಛಲಗಾತಿಯ ರೋಚಕ ಪಯಣ!
BBK 13: ಬಿಗ್ ಬಾಸ್ ಕನ್ನಡದ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್ಥೊಡಾಕ್ಸ್ ಕುಟುಂಬದ ವಿರೋಧದ ನಡುವೆಯೂ ತಾಯಿಯ ಬೆಂಬಲದಿಂದ ನಟನಾ ರಂಗಕ್ಕೆ ಕಾಲಿಟ್ಟ ದಾವಣಗೆರೆಯ ಈ ಪ್ರತಿಭೆ, ನೂರಾರು ತಿರಸ್ಕಾರಗಳನ್ನು ಎದುರಿಸಿದ್ದರು.
-
ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಪ್ರತಿಭಾವಂತ ನಟಿ ಆಸಿಯಾ ಫಿರ್ದೋಸ್, ಇದೀಗ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ರ ಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದಾರೆ. ಕಲರ್ಸ್ ಕನ್ನಡದ ‘ಕನ್ಯಾಕುಮಾರಿ’ ಹಾಗೂ ಜೀ ಕನ್ನಡದ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಆಸಿಯಾ ಫಿರ್ದೋಸ್, ಸತತ ಪರಿಶ್ರಮ ಹಾಗೂ ಕಷ್ಟದ ಹಾದಿಯನ್ನು ದಾಟಿ ಈ ಬೃಹತ್ ವೇದಿಕೆ ಬಂದಿದ್ದಾರೆ.
ದಾವಣಗೆರೆ ಹುಡುಗಿ ಆಸಿಯಾ ಫಿರ್ದೋಸ್
ಮೂಲತಃ ದಾವಣಗೆರೆಯವರಾದ 26 ವರ್ಷದ ಆಸಿಯಾ ಫಿರ್ದೋಸ್ ಬೆಳೆದದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲಿ. ನಗರದ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ 2020ರಲ್ಲಿ ಬಿಬಿಎ ಪದವಿ ಮುಗಿಸಿದ ಇವರು, ಆರಂಭದಲ್ಲಿ ನ್ಯೂಸ್ ಆ್ಯಂಕರ್ ಹಾಗೂ ಮಾಡೆಲ್ ಆಗಿ ಕಾರ್ಯನಿರ್ವಹಿಸಿದ್ದರು. ನಟನೆಯಲ್ಲಿ ಆಸಕ್ತಿ ಮೂಡಿದ ನಂತರ ಖ್ಯಾತ ನಟಿ ಉಷಾ ಭಂಡಾರಿ ಅವರಿಂದ ನಟನಾ ತರಬೇತಿ ಪಡೆದರು. ನೂರಾರು ಆಡಿಷನ್‌ಗಳಲ್ಲಿ ಎದುರಾದ ತಿರಸ್ಕಾರದ ನಂತರ ಉದಯ ಟಿವಿಯ ‘ನಾನು ನನ್ನ ಕನಸು’ ಪ್ರಾಜೆಕ್ಟ್ ಮೂಲಕ ಇವರ ಅಭಿನಯ ಯಾನ ಆರಂಭವಾಯಿತು. ನಟ ಕೋಮಲ್ ಕುಮಾರ್ ಅಭಿನಯದ ‘ಕಾಲಾಯ ನಮಃ’ ಸಿನಿಮಾದಲ್ಲೂ ಆಸಿಯಾ ಬಣ್ಣಹಚ್ಚಿದ್ದಾರೆ.
ಖಳ ಪಾತ್ರಕ್ಕೆ ಆಡಿಷನ್ ಕೊಟ್ಟು ನಾಯಕಿಯಾಗಿದ್ದ ಆಸಿಯಾ
ಆಸಿಯಾ ಬದುಕಿಗೆ ದೊಡ್ಡ ತಿರುವು ತಂದುಕೊಟ್ಟಿದ್ದು ಕಲರ್ಸ್ ಕನ್ನಡದ ‘ಕನ್ಯಾಕುಮಾರಿ’ ಧಾರಾವಾಹಿ. ಆರಂಭದಲ್ಲಿ ಈ ಸೀರಿಯಲ್‌ನ ಖಳನಾಯಕಿ ‘ಯಾಮಿನಿ’ ಪಾತ್ರಕ್ಕಾಗಿ ಆಡಿಷನ್ ನೀಡಿ ತಿರಸ್ಕೃತಗೊಂಡಿದ್ದ ಇವರು, ನಂತರದ ಸತತ ಪ್ರಯತ್ನದಿಂದ ಅದೇ ಧಾರಾವಾಹಿಯ ಪ್ರಮುಖ ನಾಯಕಿ ‘ಕನ್ನಿಕಾ’ ಪಾತ್ರಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು. ತದನಂತರ ಜೀ ಕನ್ನಡದ ಜನಪ್ರಿಯ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯಲ್ಲಿ ‘ಶ್ರಾವಣಿ’ಯಾಗಿ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಈ ಯಶಸ್ವಿ ಧಾರಾವಾಹಿ ಮುಕ್ತಾಯಗೊಂಡ ಬೆನ್ನಲ್ಲೇ ನೇರವಾಗಿ ‘ಬಿಗ್ ಬಾಸ್’ ಮನೆಗೆ ಪ್ರವೇಶ ಪಡೆದಿದ್ದಾರೆ.
ನಮ್ಮದು ಆರ್ಥೊಡಾಕ್ಸ್ ಫ್ಯಾಮಿಲಿ
ಆರ್ಥೋಡಕ್ಸ್ ಕುಟುಂಬದಿಂದ ಬಂದ ಆಸಿಯಾ ಅವರ ಬಣ್ಣದ ಪಯಣ ಅಷ್ಟು ಸುಲಭವಾಗಿರಲಿಲ್ಲ. "ನಮ್ಮದು ಆರ್ಥೊಡಾಕ್ಸ್ ಫ್ಯಾಮಿಲಿ ಆಗಿದ್ದರಿಂದ ಕುಟುಂಬದಲ್ಲಿ ಯಾರೂ ನನ್ನ ಕನಸಿಗೆ ಬೆಂಬಲ ನೀಡಲಿಲ್ಲ. ಆದರೆ ಅಮ್ಮ ಮಾತ್ರ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು, ನನ್ನ ಕನಸನ್ನು ನನಸು ಮಾಡಿದರು" ಎಂದು ವೇದಿಕೆಯಲ್ಲಿ ಭಾವುಕರಾಗಿ ಅಮ್ಮನಿಗೆ ಆಸಿಯಾ ಕೃತಜ್ಞತೆ ಸಲ್ಲಿಸಿದ್ದಾರೆ.
ಹಠ, ತಲೆಹರಟೆ ಇರಲಿ
"ಬಿಗ್ ಬಾಸ್ ಮನೆಯಲ್ಲಿ ಕಿತಾಪತಿ, ಹಠ, ತಲೆಹರಟೆ ಮತ್ತು ಕುತಂತ್ರಗಳು ಇರಲಿ; ಆದರೆ ದುರಹಂಕಾರ, ಗಾಂಚಾಲಿ ಹಾಗೂ ನಯವಂಚನೆ ಮಾತ್ರ ಬೇಡ" ಎಂದು ಆಸಿಯಾ ಹೇಳಿದ್ದಾರೆ. ಕಿರುತೆರೆಯಲ್ಲಿ ಮಿಂಚಿರುವ ಈ ಛಲಗಾತಿ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.