ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇತ್ತ ಧನ್ವೀರ್ ವಿರುದ್ಧ ಪ್ರತಿಬಂಧಕಾಜ್ಞೆ ಜಾರಿ, ಅತ್ತ ಮಾಫಿ ಸಾಕ್ಷಿ ಪ್ರದೋಷ್‌ ಜಾಮೀನು ಅರ್ಜಿ ವಜಾ; ನಟ ದರ್ಶನ್‌ಗೆ ಕೋರ್ಟ್‌ನಲ್ಲಿ ಕೊಂಚ ರಿಲೀಫ್

Actor Darshan Thoogudeepa: ನಟ ದರ್ಶನ್‌ ಅವರಿಗೆ ಬೆಂಗಳೂರು ನ್ಯಾಯಾಲಯದಲ್ಲಿ ಎರಡು ಪ್ರಮುಖ ಕಾನೂನು ಹೋರಾಟಗಳಲ್ಲಿ ಮಹತ್ವದ ಗೆಲುವು ಸಿಕ್ಕಿದೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದ ವಿರುದ್ಧ ಅವಹೇಳನಕಾರಿ ಸಾರ್ವಜನಿಕ ಹೇಳಿಕೆ ನೀಡದಂತೆ ನಟ ಧನ್ವೀರ್ ಗೌಡ ವಿರುದ್ಧ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ. ಮತ್ತೊಂದೆಡೆ, ಮಾಫಿ ಸಾಕ್ಷಿ ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿದೆ.

ಧನ್ವೀರ್‌ ಮಾತಿಗೆ ಬ್ರೇಕ್, ಪ್ರದೋಷ್‌ಗೆ ನಿರಾಸೆ; ದರ್ಶನ್‌ಗೆ ಸಣ್ಣ ರಿಲೀಫ್!

-

Avinash GR
Avinash GR Oct 30, 2026 5:50 PM

ನಟ ದರ್ಶನ್ ತೂಗುದೀಪ ಅವರಿಗೆ ಕಾನೂನು ಹೋರಾಟದ ನಡುವೆ ಕೋರ್ಟ್‌ನಿಂದ ಸಣ್ಣ ರಿಲೀಫ್ ಸಿಕ್ಕಿದೆ. ಒಂದೆಡೆ ತಮ್ಮ ಹಾಗೂ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ನಟ ಧನ್ವೀರ್ ಗೌಡ ವಿರುದ್ಧ ನಿರ್ಬಂಧಕಾಜ್ಞೆ ತರುವಲ್ಲಿ ದರ್ಶನ್ ಯಶಸ್ವಿಯಾಗಿದ್ದರೆ, ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಧನ್ವೀರ್ ವಿರುದ್ಧ ಜೈಲಿನಿಂದಲೇ ಕ್ರಮ ಕೈಗೊಂಡ ದರ್ಶನ್

ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಇಬ್ಬರ ನಡುವಿನ ಹಣಕಾಸು ವ್ಯವಹಾರವೇ ಈ ವಿವಾದಕ್ಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಈ ಪ್ರಕರಣ ಈಗಾಗಲೇ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ವಿಜಯಲಕ್ಷ್ಮಿ ಆಪ್ತರು ನೀಡಿದ ದೂರಿನ ಮೇರೆಗೆ ಧನ್ವೀರ್ ವಿರುದ್ಧ ಆರ್.ಆರ್. ನಗರ ಹಾಗೂ ಬಸವೇಶ್ವರ ನಗರ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬ್ಯಾಟರಾಯನಪುರ, ಚಾಮರಾಜಪೇಟೆ ಠಾಣೆಗಳಲ್ಲೂ ದೂರು ದಾಖಲಾಗಿದೆ. ಈ ಮಧ್ಯೆ ವಿಜಯಲಕ್ಷ್ಮೀ ಅವರ ಬಗ್ಗೆ ಧನ್ವೀರ್‌ ಒಂದಷ್ಟು ಹೇಳಿಕೆ ನೀಡಿದ್ದರು.

ಇದರಿಂದ ಎಚ್ಚೆತ್ತ ನಟ ದರ್ಶನ್, ಜೈಲಿನಲ್ಲಿದ್ದುಕೊಂಡೇ ವಕೀಲರ ಮೂಲಕ ಬೆಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಬಹಿರಂಗ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ಧನ್ವೀರ್ ನೀಡದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ದರ್ಶನ್ ಕುಟುಂಬದ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಧನ್ವೀರ್ ಗೌಡಗೆ ನಿರ್ಬಂಧ ಹೇರಿ ಸ್ಪಷ್ಟ ಆದೇಶ ಹೊರಡಿಸಿದೆ.

ಮಾಫಿ ಸಾಕ್ಷಿ ಪ್ರದೋಷ್ ಜಾಮೀನು ಅರ್ಜಿ ವಜಾ

ಇನ್ನೊಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದು, ಇತ್ತೀಚೆಗಷ್ಟೇ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ತಂದೆಯ ಶ್ರಾದ್ಧ ಕಾರ್ಯ ನೆರವೇರಿಸುವ ಉದ್ದೇಶದಿಂದ ತನಗೆ ಮೂರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಬೇಕು ಎಂದು ಪ್ರದೋಷ್ ಪರ ವಕೀಲರು ಕೋರಿದ್ದರು. ಅಲ್ಲದೆ, ಪ್ರದೋಷ್ ಜೀವಕ್ಕೆ ಬೆದರಿಕೆ ಇರುವುದರಿಂದ ಸ್ಥಳೀಯ ಠಾಣೆಯ ಬದಲು ಬೇರೆ ಪೊಲೀಸ್ ಠಾಣೆಯಲ್ಲಿ ಹಾಜರಾತಿ ನೀಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.

ಆದರೆ, ಈ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಎಸ್‌ಪಿಪಿ ಕೂಡ ಸಹ ಜಾಮೀನು ಮಂಜೂರು ಮಾಡುವುದರಿಂದ ಉಂಟಾಗಬಹುದಾದ ಕಾನೂನು ತೊಡಕುಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದರು. ಪೊಲೀಸರ ಒತ್ತಡಕ್ಕೆ ಮಣಿದು ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರದೋಷ್ ಜಾಮೀನು ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಒಟ್ಟಿನಲ್ಲಿ, ಕುಟುಂಬದ ವಿರುದ್ಧದ ಬಹಿರಂಗ ಆರೋಪಗಳಿಗೆ ನ್ಯಾಯಾಲಯದ ಮೂಲಕ ಬ್ರೇಕ್ ಹಾಕಿರುವ ಜತೆಗೆ, ತಮ್ಮ ವಿರುದ್ಧವೇ ತಿರುಗಿಬಿದ್ದಿರುವ ಮಾಫಿ ಸಾಕ್ಷಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವಲ್ಲಿ ದರ್ಶನ್ ಪರ ಕಾನೂನು ತಂಡ ಯಶಸ್ವಿಯಾಗಿದ್ದು, ಜೈಲಿನಲ್ಲಿರುವ ದಾಸನಿಗೆ ಕೊಂಚ ನಿರಾಳತೆ ತಂದಿದೆ.