ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼ'ಇಲ್ಲಿಂದ ಟ್ರಾಫಿಕ್ ತೆರವುಗೊಳಿಸಿʼ': ಮುಂಬೈ ರಸ್ತೆಯಲ್ಲಿ ಸಚಿವ ಗಿರೀಶ್ ಮಹಾಜನ್ ವಿರುದ್ಧ ಗುಡುಗಿದ ಮಹಿಳೆ

Viral Video: ಮಹಾರಾಷ್ಟ್ರದ ಮುಂಬೈಯ ವರ್ಲಿಯಲ್ಲಿ ರಾಜಕೀಯ ರ‍್ಯಾಲಿಯಿಂದ ಉಂಟಾದ ಭೀಕರ ಟ್ರಾಫಿಕ್ ಜಾಮ್‌ನಿಂದ ಬೇಸತ್ತ ಮಹಿಳೆಯೊಬ್ಬರು ಸಚಿವ ಗಿರೀಶ್ ಮಹಾಜನ್ ಅವರನ್ನು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ವಿಡಿಯೊ ವೈರಲ್ ಆಗಿದೆ. ಸಾಮಾನ್ಯ ನಾಗರಿಕರ ಪರವಾಗಿ ಧ್ವನಿ ಎತ್ತಿದ ಮಹಿಳೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

“ಮೊದಲು ಟ್ರಾಫಿಕ್ ಕ್ಲಿಯರ್ ಮಾಡಿ”: ಸಚಿವರ ವಿರುದ್ಧ ಮಹಿಳೆಯ ಆಕ್ರೋಶ

ಸಚಿವರ ವಿರುದ್ಧ ಕೂಗಾಡಿದ ಮಹಿಳೆ -

Profile
Sushmitha Jain Apr 22, 2026 9:32 PM

ಮುಂಬೈ, ಏ. 22: ರಾಜಕೀಯ ರ‍್ಯಾಲಿಯಿಂದಾಗಿ ಉಂಟಾದ ಗಂಟೆಗಟ್ಟಲೆ ಸಂಚಾರ ದಟ್ಟಣೆಯಿಂದ ಆಕ್ರೋಶಗೊಂಡ ಮುಂಬೈಯ ಮಹಿಳೆಯೊಬ್ಬರು ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ (Girish Mahajan) ಅವರನ್ನು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ವರ್ಲಿಯಲ್ಲಿ ನಡೆದ ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾಮಾನ್ಯ ನಾಗರಿಕರ ಪರವಾಗಿ ಧ್ವನಿ ಎತ್ತಿದ ಮಹಿಳೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಿಳಾ ಮೀಸಲಾತಿ ಬಿಲ್ ವಿಚಾರವಾಗಿ ಬಿಜೆಪಿ ಮತ್ತು ಮಹಾಯುತಿ ಮೈತ್ರಿಕೂಟವು ಮಹಾ ವಿಕಾಸ್ ಅಘಾಡಿ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ವರ್ಲಿಯ ಜಂಭೋರಿ ಮೈದಾನದಿಂದ ಮೆರವಣಿಗೆ ಆರಂಭವಾಗಿದ್ದರಿಂದ ಆ ಭಾಗದ ಚಿಕ್ಕದಾದ ರಸ್ತೆಗಳಲ್ಲಿ ಭೀಕರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಸಚಿವ ಗಿರೀಶ್ ಮಹಾಜನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಅದೇ ದಾರಿಯಲ್ಲಿ ಶಾಲೆಯಿಂದ ಮಗನನ್ನು ಕರೆತರಲು ಹೋಗುತ್ತಿದ್ದ ಮಹಿಳೆಯೊಬ್ಬರು ವಾಹನಗಳ ಸಾಲಿನಲ್ಲಿ ಸಿಲುಕಿ ಹೈರಾಣಾಗಿದ್ದರು.

ವೈರಲ್‌ ವಿಡಿಯೊ ಇಲ್ಲಿದೆ:



ಸಚಿವರಿಗೆ ಮಹಿಳೆಯ ನೇರ ಎಚ್ಚರಿಕೆ

ಕೊನೆಗೆ ತಾಳ್ಮೆ ಕಳೆದುಕೊಂಡ ಮಹಿಳೆ, ಕಾರಿನಿಂದ ಇಳಿದು ನೇರವಾಗಿ ಸಚಿವರ ಬಳಿ ತೆರಳಿ, "ನಿಮಗೆ ಏನಾಗಿದೆ? ನೂರಾರು ಜನರು ಇಲ್ಲಿ ಕಾಯುತ್ತಿದ್ದಾರೆ. ಮೊದಲು ಇಲ್ಲಿಂದ ಈ ಟ್ರಾಫಿಕ್ ತೆರವುಗೊಳಿಸಿ, ಸುಮ್ಮನಿರಿ" ಎಂದು ಗದರಿಸಿದ್ದಾರೆ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇ ಏಕೆ ಸಭೆ ನಡೆಸುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಲು ಯತ್ನಿಸಿದಾಗಲೂ ಜಗ್ಗದ ಅವರು, ʼʼಸಾಮಾನ್ಯ ಜನರ ಸಮಯವನ್ನು ವ್ಯರ್ಥ ಮಾಡುವ ನಿಮ್ಮ ರಾಜಕೀಯ ನಮಗೆ ಬೇಡʼʼ ಎಂದು ಆಕ್ರೋಶ ಹೊರಹಾಕಿದ್ದಾರೆ. ʼʼಪೊಲೀಸರು ಸಚಿವರ ಕಾನ್ವಾಯ್ ನಿರ್ವಹಣೆ ಮಾಡುವುದಕ್ಕಿಂತ ಜನಸಾಮಾನ್ಯರಿಗೆ ದಾರಿ ಮಾಡಿಕೊಡುವುದಕ್ಕೆ ಆದ್ಯತೆ ನೀಡಲಿʼʼ ಎಂದು ಅವರು ಕಿಡಿಕಾರಿದ್ದಾರೆ.

ಶೇ. 48.8 ಅಂಕ ಪಡೆದ SSLC ವಿದ್ಯಾರ್ಥಿ! ಪೋಸ್ಟ್ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಕಿಡಿಕಾರಿದ ನೆಟ್ಟಿಗರು

ಸಾರ್ವಜನಿಕರಿಂದ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ಮಹಿಳೆಯನ್ನು 'ರಿಯಲ್ ಹೀರೋ' ಎಂದು ಬಣ್ಣಿಸಿದ್ದಾರೆ. ರಾಜಕಾರಣಿಗಳ ವಿಐಪಿ ಸಂಸ್ಕೃತಿ ಮತ್ತು ಅನಗತ್ಯ ರ‍್ಯಾಲಿಗಳಿಂದಾಗಿ ಪ್ರತಿದಿನ ಸಂಕಷ್ಟ ಅನುಭವಿಸುವ ಸಾಮಾನ್ಯ ಜನರ ನೋವಿಗೆ ಈ ಮಹಿಳೆ ನೇರ ಧ್ವನಿಯಾಗಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರಾಜಕೀಯ ಕಾರ್ಯಕ್ರಮಗಳ ಹೆಸರಿನಲ್ಲಿ ನಾಗರಿಕರಿಗೆ ತೊಂದರೆ ಕೊಡುವ ಪ್ರವೃತ್ತಿಗೆ ಈ ಘಟನೆಯು ಕನ್ನಡಿ ಹಿಡಿದಿದ್ದು, ಸಚಿವರು ಜನಸಾಮಾನ್ಯರ ಆಕ್ರೋಶಕ್ಕೆ ಮುಖಾಮುಖಿಯಾಗಬೇಕಾಯಿತು. ಈ ವಿಡಿಯೊ ಸದ್ಯ ಮುಂಬೈ ನಾಗರಿಕರ ಸ್ವಾಭಿಮಾನದ ಸಂಕೇತವಾಗಿ ಹೊರಹೊಮ್ಮಿದೆ.