ಸದ್ದಿಲ್ಲದೇ ಬಾಯ್‌ಫ್ರೆಂಡ್ ಜೊತೆ ಸಪ್ತಪದಿ ತುಳಿದ ಬ್ಲಾಕ್‌ಬಸ್ಟರ್ ʻಇರುಮುಡಿʼ ಸಿನಿಮಾ ನಟಿ ಪ್ರಿಯಾ ಭವಾನಿ ಶಂಕರ್!
ಈಚೆಗಷ್ಟೇ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ರವಿತೇಜ ನಟನೆಯ ʻಇರುಮುಡಿʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದವರು ಪ್ರಿಯಾ ಭವಾನಿ ಶಂಕರ್. ಸದ್ಯ ಈ ನಟಿಯು ಸದ್ದಿಲ್ಲದೇ ಮದುವೆ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ. ರಾಜ್‌ವೇಲ್ ರಾಜ್ ಜತೆ ಪ್ರಿಯಾ ಭವಾನಿ ಶಂಕರ್ ಮದುವೆ ನೆರವೇರಿದೆ.
-
ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ, ಇತ್ತೀಚಿನ ‘ಇರುಮುಡಿ’ ಚಿತ್ರದ ಮೂಲಕ ಸದ್ದು ಮಾಡಿದ್ದ ಪ್ರಿಯಾ ಭವಾನಿ ಶಂಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ರಾಜ್‌ವೇಲ್ ರಾಜ್ ಅವರೊಂದಿಗೆ ಅತ್ಯಂತ ಸರಳವಾಗಿ ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.
ನಿನ್ನೆಯಷ್ಟೇ ಸುಳಿವು ನೀಡಿದ್ದ ಜೋಡಿ
ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಪ್ರಿಯಾ ಮತ್ತು ರಾಜ್‌ವೇಲ್, ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಪ್ರೀತಿಯಲ್ಲಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರೂ, ಮದುವೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿರಲಿಲ್ಲ. ಆದರೆ, ಮಂಗಳವಾರದಂದು (ನ.10) ವಿವಾಹಪೂರ್ವ ಸಮಾರಂಭದ ಸುಳಿವು ನೀಡುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಹಸಿರು ಬಣ್ಣದ ಸೀರೆಯುಟ್ಟು, ಮುಡಿಯಲ್ಲಿ ಮಲ್ಲಿಗೆ ಹೂ ಮುಡಿದು ನಗುಮುಖದೊಂದಿಗೆ ರಾಜ್‌ವೇಲ್ ಜೊತೆಗಿದ್ದ ಆ ಫೋಟೋಗೆ ಅವರು ಬಳಸಿದ್ದ ಹಿನ್ನೆಲೆ ಸಂಗೀತವೇ ಮದುವೆಯ ವದಂತಿಗೆ ಪುಷ್ಟಿ ನೀಡಿತ್ತು.
ಸಿಂಪಲ್ ಆಗಿ ನಡೆದ ಕಲ್ಯಾಣ
ಇದೀಗ ಅವರ ವಿವಾಹ ಸಮಾರಂಭದ ವಿಡಿಯೋ ಹೊರಬಿದ್ದಿದ್ದು, ಮದುವೆಯ ಸುಂದರ ಕ್ಷಣಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಸಮಾರಂಭದಲ್ಲಿ ರಾಜ್‌ವೇಲ್ ಬಿಳಿ ಬಣ್ಣದ ಸಾಂಪ್ರದಾಯಿಕ ಕುರ್ತಾ ಧರಿಸಿ, ಕುಟುಂಬದ ಮಹಿಳೆಯರು ಹೂಗುಚ್ಛ ಹಿಡಿದು ಸಾಥ್ ನೀಡಲು ಮಂಟಪಕ್ಕೆ ಆಗಮಿಸಿದರು. ನಂತರ ಕೆಂಪು ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಪ್ರಿಯಾ ಅವರನ್ನು ಹೂವಿನ ಛತ್ರಿಯಡಿ ಮಂಟಪಕ್ಕೆ ಕರೆತರಲಾಯಿತು. ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಮಂಟಪದಲ್ಲಿ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡ ದಂಪತಿ, ಪುರೋಹಿತರ ಮಂತ್ರಘೋಷಗಳ ನಡುವೆ ನಗುನಗುತ್ತಲೇ ವಿಧಿವಿಧಾನಗಳನ್ನು ಪೂರೈಸಿದರು. ಬಂಧು-ಮಿತ್ರರ ಸಮ್ಮುಖದಲ್ಲಿ ರಾಜ್‌ವೇಲ್ ಪ್ರಿಯಾಗೆ ಮಾಂಗಲ್ಯ ಧಾರಣೆ ಮಾಡಿದ್ದು, ವಿವಾಹದ ಅಧಿಕೃತ ಚಿತ್ರಗಳನ್ನು ದಂಪತಿ ಇನ್ನಷ್ಟೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕಿದೆ.
Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್ ಯಾವಾಗ?
ವಾರ್ತಾವಾಚಕಿಯಾಗಿದ್ದ ಪ್ರಿಯಾ
ಸುದ್ದಿ ವಾಚಕಿಯಾಗಿ ವೃತ್ತಿಜೀವನ ಆರಂಭಿಸಿದ್ದ ಪ್ರಿಯಾ ಭವಾನಿ ಶಂಕರ್, ತಮಿಳಿನ 'ಪುದಿಯ ತಲೈಮುರೈ' ವಾಹಿನಿಯಲ್ಲಿ ಗುರುತಿಸಿಕೊಂಡಿದ್ದರು. ನಂತರ ಕಿರುತೆರೆಗೆ ಕಾಲಿಟ್ಟು 'ಕಲ್ಯಾಣಂ ಮುದಲ್ ಕಾದಲ್ ವರೈ' ಧಾರಾವಾಹಿ ಹಾಗೂ 'ಜೋಡಿ ನಂ. 1', 'ಸೂಪರ್ ಸಿಂಗರ್' ರಿಯಾಲಿಟಿ ಶೋಗಳ ನಿರೂಪಣೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. 2017 ರಲ್ಲಿ 'ಮೇಯಾದ ಮಾನ್' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು, 'ಮಾನ್‌ಸ್ಟರ್', 'ಮಾಫಿಯಾ: ಚಾಪ್ಟರ್ 1', 'ಓ ಮಣಪೆಣ್ಣೆ!' ಹಾಗೂ ಧನುಷ್ ನಟನೆಯ ಸೂಪರ್ ಹಿಟ್ 'ತಿರುಚಿತ್ರಾಂಬಲಂ' ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2023ರಲ್ಲಿ 'ಕಲ್ಯಾಣಂ ಕಮನೀಯಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಪ್ರಿಯಾ ಭವಾನಿ ಶಂಕರ್ ಮದುವೆ
PriyaBhavani Shankar got married today 💍 https://t.co/lilOHQESbl
— Kolly Censor (@KollyCensor) November 11, 2026
ʻಇರುಮುಡಿʼ ಭರ್ಜರಿ ಗೆಲುವು
ಬೆಳ್ಳಿತೆರೆಯಷ್ಟೇ ಅಲ್ಲದೆ ಒಟಿಟಿ ವೇದಿಕೆಯಲ್ಲೂ ಸಕ್ರಿಯರಾಗಿರುವ ಪ್ರಿಯಾ, 'ಟೈಮ್ ಎನ್ನ ಬಾಸ್!?', 'ವಿಕ್ಟಿಮ್' ಹಾಗೂ ನಾಗಚೈತನ್ಯ ನಟನೆಯ 'ಧೂತ' ವೆಬ್ ಸರಣಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ 'ಇರುಮುಡಿ' ಮತ್ತು ತಮಿಳಿನ 'ಹಾಟ್ ಸ್ಪಾಟ್ 2 ಮಚ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರ ನಟನೆಯ 'ಡಿಮಾಂಟೆ ಕಾಲೋನಿ 3', 'ಮರಗದ ನಾಣಯಂ 2' ಹಾಗೂ ಕಮಲ್ ಹಾಸನ್ ನಟನೆಯ 'ಇಂಡಿಯನ್ 3' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ವೈವಾಹಿಕ ಜೀವನಕ್ಕೆ ಅಡಿಯಿಟ್ಟಿರುವ ತಾರಾ ಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.