‘ರಾಮಾಯಣ’ ಚಿತ್ರತಂಡದಿಂದ ಆಸ್ಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ; ವಿಎಫ್‌ಎಕ್ಸ್ ವಿಭಾಗದಲ್ಲಿ ಸ್ಪರ್ಧೆಗೆ ಸಜ್ಜಾದ ರಣಬೀರ್ - ಯಶ್ ಸಿನಿಮಾ
ʻರಾಮಾಯಣ: ಪಾರ್ಟ್ 1ʼ ಚಿತ್ರವು ಜಾಗತಿಕ ಮಟ್ಟದ 99ನೇ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧಾ ಕಣಕ್ಕೆ ಸ್ವತಂತ್ರವಾಗಿ ಎಂಟ್ರಿ ನೀಡಿದೆ. ಭಾರತದ ಅಧಿಕೃತ ಆಯ್ಕೆಯಾಗಿ ಮರಾಠಿಯ ‘ಗೊಂಡ್ಹಳ್’ ಕಣದಲ್ಲಿದ್ದರೂ, ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾವು ಮುಖ್ಯವಾಗಿ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ಸ್ಪರ್ಧಿಸಲು ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ.
-
ಭಾರತೀಯ ಚಿತ್ರರಂಗದ ಮಟ್ಟಿಗೆ ಜಾಗತಿಕ ವೇದಿಕೆಯಾದ ಆಸ್ಕರ್ ಪ್ರಶಸ್ತಿ ರೇಸ್ ಇದೀಗ ಮತ್ತಷ್ಟು ರೋಚಕ ಹಂತ ತಲುಪಿದೆ. 99ನೇ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧಾ ಕಣಕ್ಕೆ ಭರ್ಜರಿ ಎಂಟ್ರಿ ನೀಡಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಸಿನಿಮಾ, ಪ್ರಶಸ್ತಿಯ ಪರಿಗಣನೆಗಾಗಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ. ಮರಾಠಿ ಚಿತ್ರ ‘ಗೊಂಡ್ಹಳ್’ ಈಗಾಗಲೇ ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿರುವ ಸಂದರ್ಭದಲ್ಲೇ, ‘ರಾಮಾಯಣ’ ಚಿತ್ರತಂಡ ಸ್ವತಂತ್ರವಾಗಿ ಆಸ್ಕರ್ ರೇಸ್‌ಗೆ ಧುಮುಕಿರುವುದು ಭಾರೀ ಕುತೂಹಲ ಮೂಡಿಸಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ‘ರಾಮಾಯಣ’ ಚಿತ್ರವನ್ನು ಸದ್ಯಕ್ಕೆ ಪ್ರಮುಖವಾಗಿ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್ (VFX) ವಿಭಾಗದ ಪರಿಗಣನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದ್ದು, ಚಿತ್ರತಂಡ ಇನ್ನಿತರ ಪ್ರಮುಖ ವಿಭಾಗಗಳಿಗೂ ಅರ್ಜಿ ಸಲ್ಲಿಸಿದೆಯೇ ಎಂಬ ಬಗ್ಗೆ ನಿಖರ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಭಾರತದಿಂದ ಒಂದು ಚಿತ್ರ ಅಧಿಕೃತವಾಗಿ ಆಯ್ಕೆಯಾದ ಮಾತ್ರಕ್ಕೆ ಇತರ ಭಾರತೀಯ ಚಿತ್ರಗಳಿಗೆ ಆಸ್ಕರ್ ಬಾಗಿಲು ಮುಚ್ಚಿರುತ್ತದೆ ಎಂದರ್ಥವಲ್ಲ. ಅಕಾಡೆಮಿಯ ನಿಯಮಾವಳಿಗಳ ಪ್ರಕಾರ, ಯಾವುದೇ ಸಿನಿಮಾವು ಅಮೆರಿಕದ ಪ್ರಮುಖ ಮಹಾನಗರ ಪ್ರದೇಶಗಳಾದ ಲಾಸ್ ಏಂಜಲೀಸ್ ಕೌಂಟಿ, ನ್ಯೂಯಾರ್ಕ್ ಸಿಟಿ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ, ಚಿಕಾಗೊ, ಡಲ್ಲಾಸ್-ಫೋರ್ಟ್ ವರ್ತ್ ಅಥವಾ ಅಟ್ಲಾಂಟಾದ ಚಿತ್ರಮಂದಿರಗಳಲ್ಲಿ ನಿಗದಿತ ಪ್ರದರ್ಶನಗಳೊಂದಿಗೆ ಸತತ ಕನಿಷ್ಠ ಏಳು ದಿನಗಳ ಕಾಲ ಪ್ರದರ್ಶನ ಕಂಡರೆ, ಆ ಚಿತ್ರವು ಸಾಮಾನ್ಯ ವಿಭಾಗಗಳ ಅಡಿಯಲ್ಲಿ ‘ಆಸ್ಕರ್ಸ್ ಜನರಲ್ ಎಂಟ್ರಿ ಫಾರ್ಮ್’ ಮೂಲಕ ಸ್ವತಂತ್ರವಾಗಿ ಸ್ಪರ್ಧಿಸಲು ಸಂಪೂರ್ಣ ಅರ್ಹತೆ ಪಡೆಯುತ್ತದೆ.
Ramayana Movie: ಸ್ವೀಡನ್‌ನಲ್ಲೂ ಸದ್ದು ಮಾಡಿದ 'ರಾಮಾಯಣ': ಅನುಪಮ್ ಖೇರ್ ಭಾವುಕ ಪೋಸ್ಟ್!
ಆದರೆ, ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗಕ್ಕೆ ‘ಒಂದು ದೇಶ, ಒಂದು ಚಿತ್ರ’ ಎಂಬ ಸಾಂಪ್ರದಾಯಿಕ ನಿಯಮ ಅನ್ವಯವಾಗುವುದರಿಂದ, ಭಾರತ ಸರ್ಕಾರದ ಮಾನ್ಯತೆ ಪಡೆದ ಸಮಿತಿಯು ಆ ವಿಭಾಗಕ್ಕೆ ‘ಗೊಂಡ್ಹಳ್’ ಚಿತ್ರವನ್ನು ಮಾತ್ರ ಕಳುಹಿಸಲು ಸಾಧ್ಯವಾಗಿತ್ತು.
ಆದಾಗ್ಯೂ, ಅಕಾಡೆಮಿಯು ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಜಾಗತಿಕವಾಗಿ ಮನ್ನಣೆ ಪಡೆದ ನಿರ್ದಿಷ್ಟ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವ ಚಿತ್ರಗಳು ತಮ್ಮ ದೇಶದ ಸಮಿತಿಯ ಶಿಫಾರಸಿಲ್ಲದೆಯೇ ನೇರವಾಗಿ ಸ್ಪರ್ಧೆಗೆ ಇಳಿಯಬಹುದಾಗಿದೆ. ಇನ್ನೊಂದೆಡೆ, ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬಂದಿರುವ ‘ರಾಮಾಯಣ: ಭಾಗ ೧’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡುತ್ತಿದೆ. ಪ್ರಭು ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದಾರೆ.