ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದರ್ಶನ್‌ ಅಭಿನಯದ ‘ಸುಂಟರಗಾಳಿ’ ಖ್ಯಾತಿಯ ಪೋಷಕ ನಟಿ ಲಲಿತಮ್ಮ ನಿಧನ; ವೃದ್ಧಾಶ್ರಮದಲ್ಲಿ ಕಣ್ಮುಚ್ಚಿದ ಹಿರಿಯ ಕಲಾವಿದೆ!

Actress Lalithamma Death: ಹಿರಿಯ ಪೋಷಕ ನಟಿ ಲಲಿತಮ್ಮ ಅವರು ನಿಧನರಾಗಿದ್ದಾರೆ. ಕನ್ನಡ ಕಲಾ ಜಗತ್ತನ್ನು ಮೂರೂವರೆ ದಶಕಗಳ ಕಾಲ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯ ಮೂಲಕ ರಂಜಿಸಿದ್ದ ಅವರು ಈಚೆಗೆ ಪಾರ್ಶ್ವವಾಯು ಪೀಡಿತರಾಗಿದ್ದರು. 65 ವರ್ಷದ ಲಲಿತಮ್ಮರನ್ನು ಕೊನೆಗಾಲದಲ್ಲಿ ಆಸರೆಯಿಲ್ಲದೆ ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು.

ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದ ‘ಸುಂಟರಗಾಳಿ’ ಖ್ಯಾತಿಯ ನಟಿ ಲಲಿತಮ್ಮ!

-

Avinash GR
Avinash GR Oct 4, 2026 12:34 PM

ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿದ್ದ ಹಿರಿಯ ಪೋಷಕ ನಟಿ ಲಲಿತಮ್ಮ (65) ಅವರು ಭಾನುವಾರ (ಅಕ್ಟೋಬರ್ 4) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ವೃದ್ಧಾಶ್ರಮದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಎರಡೂವರೆ ತಿಂಗಳ ಹಿಂದೆ ಲಲಿತಮ್ಮ ಅವರಿಗೆ ಪಾರ್ಶ್ವವಾಯು ಆಗಿತ್ತು. ವೃದ್ಧಾಪ್ಯ ಹಾಗೂ ಅನಾರೋಗ್ಯದ ನಡುವೆ ಅವರನ್ನು ಆರೈಕೆ ಮಾಡಲು ಯಾರೂ ಇಲ್ಲದ ಕಾರಣ, ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.

ಈ ಹಂತದಲ್ಲಿ ನೆರವಿಗೆ ಬಂದ ‘ಅಮ್ಮನ ಮಡಿಲು ಟ್ರಸ್ಟ್’, ಲಲಿತಮ್ಮ ಅವರನ್ನು ಆಶ್ರಮಕ್ಕೆ ಸೇರಿಸಿಕೊಂಡು ಚಿಕಿತ್ಸೆ ಮತ್ತು ಅಗತ್ಯ ಆರೈಕೆಯ ವ್ಯವಸ್ಥೆ ಮಾಡಿತ್ತು. ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿತ್ತು. ವೀಲ್‌ಚೇರ್‌ನಲ್ಲೇ ಕಾಲ ಕಳೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಅವರು ವಿಧಿವಶರಾಗಿದ್ದಾರೆ ಎಂದು ಆಶ್ರಮದ ಸಂಸ್ಥಾಪಕಿ ಶಶಿಕಲಾ ಅವರು ಮಾಹಿತಿ ನೀಡಿದ್ದಾರೆ.

ಸುಮಾರು ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಲಲಿತಮ್ಮ, ರಂಗಭೂಮಿ ಮೂಲಕ ತಮ್ಮ ನಟನಾ ಪಯಣ ಆರಂಭಿಸಿದ್ದರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದ ಅವರು, ಬಳಿಕ ಕಿರುತೆರೆ ಮತ್ತು ಬೆಳ್ಳಿತೆರೆಗೆ ಕಾಲಿಟ್ಟರು. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಸುಂಟರಗಾಳಿ’ ಚಿತ್ರದಲ್ಲಿ ಖಳನಾಯಕಿ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಚಿತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಬಳಿಕ ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ’, ‘ಲೈಫ್ ಇಷ್ಟೇನೆ’, ‘ಪುತ್ರ’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬೆಳ್ಳಿತೆರೆಯಷ್ಟೇ ಅಲ್ಲದೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ಅವರು, ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಮುಂತಾದ ಮೆಗಾ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ʻಪದ್ಮಶ್ರೀʼ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ನಿಧನ; ಕಂಬನಿ ಮಿಡಿದ ಚಿತ್ರರಂಗ

ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಕಲಾವಿದೆಯೊಬ್ಬರು ಕೊನೆಗಾಲದಲ್ಲಿ ಆಸರೆಯಿಲ್ಲದೆ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿರುವುದು ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ರಂಗಕರ್ಮಿಗಳಲ್ಲಿ ತೀವ್ರ ನೋವು ಮೂಡಿಸಿದೆ. ಲಲಿತಮ್ಮ ಅವರ ನಿಧನಕ್ಕೆ ಚಂದನವನದ ಹಲವು ಕಲಾವಿದರು ಹಾಗೂ ರಂಗಭೂಮಿ ಗಣ್ಯರು ಕಂಬನಿ ಮಿಡಿದಿದ್ದಾರೆ.