ʻಅಂದು ನಮಗೆ ಸ್ಕ್ರಿಪ್ಟ್ ಇರುತ್ತಿರಲಿಲ್ಲ, ರಿಹರ್ಸಲ್‌ಗಳು ಕೂಡ ನಡೆಯುತ್ತಿರಲಿಲ್ಲʼ; 90ರ ದಶಕದ ಚಿತ್ರರಂಗ ನೆನೆದು ಕರಿಷ್ಮಾ ಕಪೂರ್ ಭಾವುಕ
ಬಾಲಿವುಡ್‌ನ 90ರ ದಶಕದ ಸ್ಟಾರ್ ನಟಿ ಕರಿಷ್ಮಾ ಕಪೂರ್ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಅಂದು ಸ್ಕ್ರಿಪ್ಟ್ ಇಲ್ಲದಿದ್ದರೂ ಕೇವಲ ಕಠಿಣ ಪರಿಶ್ರಮ, ಚಿತ್ರರಂಗದ ಮೇಲಿನ ಹುಚ್ಚು ಹಾಗೂ ದಿಗ್ಗಜ ಕಲಾವಿದರ ಒಡನಾಟದಿಂದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು ಎಂದು ಶ್ಲಾಘಿಸಿದ್ದಾರೆ.
-
90ರ ದಶಕದ ಸಖತ್ ಬೇಡಿಕೆಯ ನಟಿಯರಲ್ಲಿ ಕರಿಷ್ಮಾ ಕಪೂರ್ ಕೂಡ ಒಬ್ಬರು. ಕೂಲಿ ನಂ. 1, ಹೀರೋ ನಂ. 1, ರಾಜಾ ಬಾಬು, ಸಾಜನ್ ಚಲೆ ಸಸುರಾಲ್, ರಾಜಾ ಹಿಂದೂಸ್ತಾನಿ, ದಿಲ್ ತೋ ಪಾಗಲ್ ಹೈ ಮುಂತಾದ ಸಿನಿಮಾಗಳಿಂದ ಕರಿಷ್ಮಾ ಕಪೂರ್ ಸ್ಟಾರ್ ಆಗಿದ್ದರು. ಇದೀಗ ಅವರು ತಮ್ಮ 90ರ ದಶಕದ ದಿನಗಳನ್ನು ನೆನಪು ಮಾಡಿಕೊಂಡಿದ್ಧಾರೆ. ಆ ಕಾಲದ ಹಿಂದಿ ಚಿತ್ರರಂಗದ ಕೆಲಸ ಮಾಡುತ್ತಿದ್ದ ರೀತಿಯನ್ನು ನೆನೆದು ಭಾವುಕರಾಗಿದ್ದಾರೆ.
"90ರ ದಶಕದಲ್ಲಿ ಬಾಲಿವುಡ್‌ನಲ್ಲಿದ್ದ ಪರಸ್ಪರ ಬಾಂಧವ್ಯ ಮತ್ತು ಅದ್ಧೂರಿ ಸಿನಿಮಾ ನಿರ್ಮಾಣದ ಶೈಲಿ ಉತ್ತಮವಾಗಿತ್ತು. ಆ ಅವಧಿಯು ತಮ್ಮ ವೃತ್ತಿಜೀವನದ ಅತ್ಯಂತ ಸ್ಮರಣೀಯ ವರ್ಷಗಳಾಗಿದ್ದರೂ, ತಾವು ಕೇವಲ ಹಳೆಯ ನೆನಪುಗಳಲ್ಲೇ ಬದುಕಲು ಇಷ್ಟಪಡುವುದಿಲ್ಲ" ಎಂದು ಕರಿಷ್ಮಾ ಕಪೂರ್ ಹೇಳಿದ್ದಾರೆ.
Sunjay Kapur Death: ಪೋಲೋ ಆಡುತ್ತಿದ್ದಾಗಲೇ ಹೃದಯಾಘಾತ- ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ
90ರ ಆ ದಶಕ ನನಗೆ ತುಂಬಾ ಇಷ್ಟ
ಈಚೆಗೆ ಒಂದು ವಿಶೇಷ ಸಂದರ್ಶನದಲ್ಲಿ, "ನೀವು 90ರ ದಶಕವನ್ನು ಮತ್ತು ಆ ಸಮಯದ ನಿಮ್ಮ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತೀರಾ?" ಎಂದು ಕರಿಷ್ಮಾಗೆ ಪ್ರಶ್ನೆಯನ್ನು ಕೇಳಲಾಯ್ತು. ಅದಕ್ಕೆ ಕರಿಷ್ಮಾ ಕಪೂರ್, "ನನಗೆ 90ರ ಆ ದಶಕ ತುಂಬಾ ಇಷ್ಟ. ಆದರೆ ನಾನು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲರೂ ಕಾಲಕ್ಕೆ ತಕ್ಕಂತೆ ಮುನ್ನಡೆಯಬೇಕು. ಕೇವಲ ಅಲ್ಲೇ ನಾನು ಸಿಲುಕಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಯಾವುದೇ ರಿಹರ್ಸಲ್‌ಗಳು ಇರುತ್ತಿರಲಿಲ್ಲ
"ನಾವು ಆ ಕ್ಷಣಗಳನ್ನು ಪ್ರೀತಿಸುತ್ತೇನೆ, ಅವು ನಮ್ಮ ಹೃದಯಕ್ಕೆ ಹತ್ತಿರವಾದ, ವಿಶಿಷ್ಟವಾದ ದಿನಗಳು. ಆಗ ತಯಾರಾಗುತ್ತಿದ್ದ ಸಿನಿಮಾಗಳ ಶೈಲಿಯೇ ತೀರಾ ಭಿನ್ನವಾಗಿತ್ತು. ನಾವು ಸೆಟ್‌ಗೆ ಹೋಗಿ ಎಷ್ಟೋ ಕಾಮಿಡಿ ಸೀನ್‌ಗಳನ್ನು ಶೂಟ್ ಮಾಡುತ್ತಿದ್ದೆವು. ಅಷ್ಟೇ ಅಲ್ಲ, ಅಂದು ನಾವು ಮಾಡುತ್ತಿದ್ದ ಡ್ಯಾನ್ಸ್ ಇವತ್ತಿನ ದಿನಗಳಲ್ಲಿ ಇರುವುದೇ ಇಲ್ಲ. ಆಗ ನಮಗೆ ಯಾವುದೇ ರಿಹರ್ಸಲ್‌ಗಳು ಇರುತ್ತಿರಲಿಲ್ಲ. ಹಿಂದಿ ಚಿತ್ರರಂಗದ ಅತ್ಯಂತ ಪ್ರಸಿದ್ಧ ಹಾಸ್ಯ ಕಲಾವಿದರು ಮತ್ತು ಪೋಷಕ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವುದು ಒಂದು ಕಡೆ ರೋಮಾಂಚನ ತರುತ್ತಿದ್ದರೆ, ಮತ್ತೊಂದೆಡೆ ಒಳಗೊಳಗೆ ಭಯ ಹುಟ್ಟಿಸುತ್ತಿತ್ತು" ಎಂದು ಕರಿಷ್ಮಾ ಕಪೂರ್ ಹೇಳಿದ್ದಾರೆ.
Sanjay Kapur: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಹಿನ್ನೆಲೆ ಏನು?
ಕಲಾವಿದರ ನಡುವೆ ಅದ್ಭುತವಾದ ಒಡನಾಟ
"ನಾನು ಪರೇಶ್ ರಾವಲ್‌ಜಿ, ಚೀಚಿ ಭೈಯ್ಯಾ (ಗೋವಿಂದಾ), ಕಾದರ್ ಖಾನ್ ಭಾಯ್, ಶಕ್ತಿ ಕಪೂರ್ ಅವರಂತಹ ದಿಗ್ಗಜರೊಂದಿಗೆ ಒಂದೇ ಸೀನ್‌ನಲ್ಲಿ ನಟಿಸಬೇಕಾದಾಗ, 'ಓ ದೇವರೇ, ನಾನು ಇವರ ಮುಂದೆ ನಟಿಸಬೇಕಲ್ಲ ಎಂದು ಭಯಪಡುತ್ತಿದ್ದೆ. ನಮ್ಮ ನಡುವೆ ಅದ್ಭುತವಾದ ಒಡನಾಟ ಇರುತ್ತಿತ್ತು. ಏಕೆಂದರೆ ನಾವು ಅದೇ ಕಲಾವಿದರ ಜೊತೆ, ಬೇರೆ ಬೇರೆ ನಿರ್ಮಾಪಕರ ವಿಭಿನ್ನ ಸಿನಿಮಾಗಳಿಗಾಗಿ ಒಂದು ಸೆಟ್‌ನಿಂದ ಮತ್ತೊಂದು ಸೆಟ್‌ಗೆ ಓಡಾಡುತ್ತಿದ್ದೆವು. ಮುಂಬೈನ ಒಂದು ಸೆಟ್‌ನಿಂದ ಹೈದರಾಬಾದ್, ಅಲ್ಲಿಂದ ಚೆನ್ನೈ, ಕೊನೆಗೆ ಸ್ವಿಟ್ಜರ್ಲೆಂಡ್‌ವರೆಗೂ ಜೊತೆಯಾಗಿಯೇ ಪ್ರಯಾಣಿಸುತ್ತಿದ್ದೆವು. ಹಾಗಾಗಿ, ಅದು ತೀರಾ ವಿಭಿನ್ನವಾದ ಕಾಲವಾಗಿತ್ತು" ಎಂದು ಕರಿಷ್ಮಾ ಹೇಳಿದ್ದಾರೆ.
ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು
"ನಿಜ ಹೇಳಬೇಕೆಂದರೆ, ಆಗ ನಮಗೆ ಸಿನಿಮಾದ ಸ್ಕ್ರಿಪ್ಟ್‌ಗಳೇ ಎಷ್ಟೋ ಬಾರಿ ಗೊತ್ತಿರುತ್ತಿರಲಿಲ್ಲ. ಅಲ್ಲಿ ಕೇವಲ ಒಂದು ಆಲೋಚನೆ, ಸಿನಿಮಾದ ಮೇಲಿನ ಹುಚ್ಚು ಹಾಗೂ ಕಠಿಣ ಪರಿಶ್ರಮ ಮಾತ್ರ ಇರುತ್ತಿತ್ತು. ಜೊತೆಗೆ ಅದ್ಭುತ ಕಲಾವಿದರು, ಒಬ್ಬ ಶ್ರೇಷ್ಠ ನಿರ್ದೇಶಕರು ಸೇರಿ ಕೆಲಸ ಮಾಡುತ್ತಿದ್ದರು. ಅದಾದ ಬಳಿಕ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗುತ್ತಿದ್ದವು" ಎಂದು ಕರಿಷ್ಮಾ ಕಪೂರ್ ಹೇಳಿಕೊಂಡಿದ್ದಾರೆ.