ಓಂ ಸಾಯಿಪ್ರಕಾಶ್ 106ನೇ ಸಿನಿಮಾಗೆ ʻಕೆರೆಬೇಟೆʼ ಗೌರಿಶಂಕರ್ ಹೀರೋ; ಕುತೂಹಲ ಮೂಡಿಸಿದ ʻಕಾಮನ್ ಮ್ಯಾನ್ʼ!
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ 106ನೇ ಚಿತ್ರವಾಗಿ 'ಕಾಮನ್ ಮ್ಯಾನ್' ಮೂಡಿಬರುತ್ತಿದೆ. 'ಕೆರೆಬೇಟೆ' ಚಿತ್ರದ ಮೂಲಕ ಗಮನ ಸೆಳೆದಿದ್ದ ಗೌರಿಶಂಕರ್ ಇದರಲ್ಲಿ ನಾಯಕನಾಗಿ ನಟಿಸಿದ್ದು, ಲಾಯರ್ ಒಬ್ಬ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾಗುವ ರೋಚಕ ಕಥೆ ಈ ಸಿನಿಮಾದಲ್ಲಿ ಇದೆಯಂತೆ.
-
ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ? ಇಂಥದ್ದೇ ಎಳೆ ಇಟ್ಟುಕೊಂಡು ಕಥೆ ಬರೆದು, ಅದನ್ನು ಸುರಭಿ ಫಿಲಂಸ್ ಅಡಿಯಲ್ಲಿ 'ಕಾಮನ್ ಮ್ಯಾನ್' ಸಿನಿಮಾ ಮಾಡಿದ್ದಾರೆ ಎನ್. ನರಸಿಂಹಮೂರ್ತಿ. ಓಂ ಸಾಯಿಪ್ರಕಾಶ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಇವರ ನಿರ್ದೇಶನದ 106ನೇ ಸಿನಿಮಾ ಎಂಬುದು ವಿಶೇಷ. ʻಕೆರೆಬೇಟೆʼ ಖ್ಯಾತಿಯ ಗೌರಿಶಂಕರ್ ಈ ಚಿತ್ರದ ಹೀರೋ. ಈಚೆಗೆ ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ.
ನನಗೆ ಲಾಯರ್ ಆಗುವ ಆಸೆ ಇತ್ತು
"ರಾಜಹಂಸ, ಕೆರೆಬೇಟೆ ನಂತರ ನನ್ನ ಮೂರನೇ ಸಿನಿಮಾ. ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ ನಿರ್ದೇಶಕರು. ಕೆರೆಬೇಟೆ ನಂತರ ಒಂದೊಳ್ಳೆ ಕಥೆಗಾಗಿ ಕಾಯುತ್ತಿದ್ದಾಗ ನನಗೆ ಈ ಸಿನಿಮಾದ ಆಫರ್ ಬಂತು. ನಾನು ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿದ್ದು ಖುಷಿ ನೀಡಿತು. ನಿರ್ದೇಶಕರು ನನ್ನಂಥ ಚಿಕ್ಕ ಕಲಾವಿದನಿಗೆ ಗಂಟೆಯವರೆಗೆ ತಾಳ್ಮೆಯಿಂದ ಕಥೆ ಹೇಳಿದರು. ಪಾತ್ರಗಳು, ದೃಶ್ಯಗಳನ್ನು ಆರಂಭದಿಂದ ಎಂಡ್‌ವರೆಗೆ ನೀಟಾಗಿ ತೆಗೆದುಕೊಂಡು ಹೋಗಿದ್ದರು. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡಿದ್ದಾರೆ, ನಮಗೆಲ್ಲ ಅವರು ದೊಡ್ಡ ಪಾಠವಾಗಿದ್ದಾರೆ. ಯಾವ ಸಿನಿಮಾನೂ ಕಥೆಗಿಂತ ದೊಡ್ಡದಲ್ಲ ಎಂಬ ನಿರ್ದೇಶಕರ ಮಾತು ಖಂಡಿತ ನಿಜ. ನನಗೂ ಲಾಯರ್ ಆಗಬೇಕೆಂಬ ಆಸೆ ಇತ್ತು" ಎಂದು ಹೇಳುತ್ತಾರೆ ಗೌರಿಶಂಕರ್.
ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ...
"ಇದು ನನ್ನ ನಿರ್ದೇಶನದ 106ನೇ ಸಿನಿಮಾ. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ. ನಾಯಕ ಒಬ್ಬ ಲಾಯರ್, ಆತ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗ್ತಾನೆ. ನಂತರ ಆತ ಏನೇನು ಮಾಡಬಹುದು, ಸಮಾಜದಲ್ಲಿ ಏನಾದರೂ ಸುಧಾರಣೆ ಮಾಡಲು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಓಂ ಸಾಯಿಪ್ರಕಾಶ್.
ಇದು ಜಾತ್ರೆ ಸಿನಿಮಾ ಅಲ್ಲ
"ಹೀರೋ ತಂದೆ ಒಬ್ಬ ಕಲಾವಿದ. ತನ್ನ ಮಗ ಲಾಯರ್ ಆಗಿ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ಆತನ ಆಸೆಯಾಗಿರುತ್ತೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಅದೇ ರೀತಿ ನಾಯಕನಿಗೂ ಅದು ಬಂದಾಗ ಅದನ್ನು ಆತ ಹೇಗೆ ಬಳಸಿಕೊಳ್ತಾನೆ, ಅಲ್ಲದೆ ಆತ ಹೇಗೆ ಸಿಎಂ ಆಗುತ್ತಾನೆ ಎಂಬುದೇ ಕಥೆ. ಕಥೆ ಕೇಳಿದ ಕೂಡಲೇ ಇದು 100% ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ನಾಯಕಿ ಸೋನಾ ಲಾದ್ವಾ ಕೂಡ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ. ಪಾತ್ರಕ್ಕೆ ಏನು ಬೇಕೋ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಮುಂಬೈ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ" ಎಂದು ಹೇಳುತ್ತಾರೆ ಓಂ ಸಾಯಿಪ್ರಕಾಶ್.
"ನನಗೆ ಚಿಕ್ಕ ವಯಸಿನಿಂದಲೂ ರಂಗಭೂಮಿಯ ನಂಟಿದೆ. ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ, ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು 3 ನೇ ಚಿತ್ರ. ಇಂಥ ನಿರ್ದೇಶಕರ ಜೊತೆ ಎಷ್ಟು ಸಿನಿಮಾ ಬೇಕಾದರೂ ಮಾಡಬಹುದು. ಮಾತಿನ ಭಾಗಕ್ಕಾಗಿ 40 ದಿನ ಶೂಟಿಂಗ್ ಮಾಡಬೇಕು ಎಂದು ಹೇಳಿದ್ದರು. ಆದರೆ 32 ದಿನಕ್ಕೇ ಶೂಟಿಂಗ್ ಮುಗಿಸಿದರು. ಚಿತ್ರದಲ್ಲಿ ನಾನು ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಟೀಸರ್, ಆಡಿಯೋ, ಟ್ರೈಲರ್ ರಿಲೀಸ್ ಮಾಡುತ್ತೇನೆ" ಎನ್ನುತ್ತಾರೆ ನಿರ್ಮಾಪಕ ಎನ್. ನರಸಿಂಹಮೂರ್ತಿ.
ಈ ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಜೆ. ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಕೆಲಸ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಫೈಟ್ ಮಾಸ್ಟರ್ ಆಗಿದ್ದರೆ, ಸಂಗೀತ ನಿರ್ದೇಶನವನ್ನು ವಿನಯಚಂದ್ರ ಮಾಡಿದ್ದಾರೆ. ಶೈಲೇಶ್ ಸಂಭಾಷಣೆ ಬರೆದಿದ್ದಾರೆ.